ಸಾವಿನ ಮನೆಯಾಯ್ತು ವಯನಾಡ್: 243ಕ್ಕೆ ಏರಿದ ಸಾವಿನ ಸಂಖ್ಯೆ
ವಯನಾಡ್: ಭೂಕುಸಿತದಿಂದಾಗಿ ವಯನಾಡ್ ನಲ್ಲಿ ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದ್ದು, 243ಮಂದಿ ಸಾವನ್ನಪ್ಪಿರುವುದಾಗಿ ಸದ್ಯದ ವರದಿಗಳಿಂದ ತಿಳಿದು ಬಂದಿದೆ. ಒಟ್ಟು 225 ಮಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ.
ಇನ್ನೂ ಕೂಡ 218 ಮಂದಿ ಪತ್ತೆಯಾಗಬೇಕಿದೆ ಎಂದು ದುರಂತ ಸ್ಥಳದಿಂದ ಮಾಹಿತಿ ಲಭ್ಯವಾಗಿದೆ. ಮುಂಡಕೈ ಮತ್ತು ಚುರಲ್ಮಲಾ ಪ್ರದೇಶ ಅಕ್ಷರಶಃ ಸ್ಮಶಾನದಂತಾಗಿದೆ. ಸಾವಿನ ಮನೆಯಂತೆ ಎದ್ದು ಕಾಣುತ್ತಿದೆ.
ಬುಧವಾರ ಭೂಕುಸಿತ ಸಂಭವಿಸಿದ ಚುರಲ್ಮಲಾ ಮತ್ತು ಮುಂಡಕೈ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಸೇನೆ, ವಾಯುಪಡೆ, ಎನ್ ಡಿಆರ್‌ಎಫ್, ಎಸ್ ಡಿಆರ್ ಎಫ್, ಪೊಲೀಸ್, ಅಗ್ನಿಶಾಮಕ ಸೇವೆ ಮತ್ತು ಅನೇಕ ಸ್ವಯಂಸೇವಕರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಈ ಪ್ರದೇಶಕ್ಕೆ ಹೆಚ್ಚಿನ ಮಣ್ಣು ತೆಗೆಯುವ ಯಂತ್ರಗಳು ಮತ್ತು ಇತರ ವ್ಯವಸ್ಥೆಗಳನ್ನು ತರುವ ಮೂಲಕ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಸೇನೆಯ ನೇತೃತ್ವದಲ್ಲಿ ಬೈಲಿ ಸೇತುವೆ ನಿರ್ಮಾಣಕ್ಕೂ ಕ್ರಮಕೈಗೊಳ್ಳಲಾಗುತ್ತಿದೆ.
ಬೃಹತ್ ಬಂಡೆಗಳ ಕೆಳಗೆ, ಕಟ್ಟಡದ ಅವಶೇಷಗಳ ನಡುವೆ ಮತ್ತು ಮಣ್ಣಿನಲ್ಲಿ ಅನೇಕ ಮೃತ ದೇಹಗಳು ಪತ್ತೆಯಾಗಿವೆ. ಕಾಂಕ್ರಿಟ್ ಗಳನ್ನು ಕತ್ತರಿಸುವ ಯಂತ್ರಗಳು ಲಭ್ಯವಿರದ ಕಾರಣ ಕಾರ್ಯಾಚರಣೆಗೆ ತೊಂದರೆಯಾಗುತ್ತಿರುವುದು ಕೂಡ ಕಂಡು ಬಂದಿದೆ.
ದುರಂತ ಪೀಡಿತ ಪ್ರದೇಶಗಳಿಂದ ರಕ್ಷಿಸಲ್ಪಟ್ಟವರನ್ನು ವಿವಿಧ ಪರಿಹಾರ ಶಿಬಿರಗಳಲ್ಲಿ ಇರಿಸಲಾಗಿದೆ. ಸುಮಾರು ಏಳು ಸಾವಿರ ಮಂದಿ ವಿವಿಧ ಶಿಬಿರಗಳಲ್ಲಿ ತಂಗಿದ್ದಾರೆ. ಮೆಪ್ಪಾಡಿ ಒಂದರಲ್ಲೇ ಎಂಟು ಶಿಬಿರಗಳಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಇದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth