"ಕೊರೊನಾ ವೇಳೆ ಪರೀಕ್ಷೆ ಬರೆಯಲು ಆಗದ ಅಭ್ಯರ್ಥಿಗಳಿಗೆ ಮತ್ತೊಮ್ಮೆ ನಾಗರಿಕ ಸೇವಾ ಆಯೋಗದ ಪರೀಕ್ಷೆ ನಡೆಸಲು ಸಾಧ್ಯವಿಲ್ಲ" - Mahanayaka
3:08 PM Thursday 12 - December 2024

“ಕೊರೊನಾ ವೇಳೆ ಪರೀಕ್ಷೆ ಬರೆಯಲು ಆಗದ ಅಭ್ಯರ್ಥಿಗಳಿಗೆ ಮತ್ತೊಮ್ಮೆ ನಾಗರಿಕ ಸೇವಾ ಆಯೋಗದ ಪರೀಕ್ಷೆ ನಡೆಸಲು ಸಾಧ್ಯವಿಲ್ಲ”

22/01/2021

ನವದೆಹಲಿ: ಕೊರೊನಾ ಸಂದರ್ಭದಲ್ಲಿ ನಾಗರಿಕ ಸೇವಾ ಆಯೋಗದ ಪರೀಕ್ಷೆ ಬರೆಯಲು ಸಾಧ್ಯವಾಗದೇ ಇರುವವರಿಗೆ ಹೆಚ್ಚುವರಿಯಾಗಿ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಮ್ ಕೋರ್ಟ್ ಗೆ ತಿಳಿಸಿದೆ.

ಕೊರೊನಾ ಸಂದರ್ಭದಲ್ಲಿ ಅನಿವಾರ್ಯವಾಗಿ ಯುಪಿಎಸ್ ಸಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ.  ದೇಶ ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸುತ್ತಿದ್ದ ಸಂದರ್ಭದಲ್ಲಿ ಪರೀಕ್ಷೆ ಬರೆಯಲು ಸಾಧ್ಯವಾಗದೇ ಇದ್ದವರು ತಮಗೆ ನ್ಯಾಯಯುತವಾಗಿ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಬೇಡಿಕೆ ಇರಿಸಿದ್ದರು.

ಸಾರ್ವಜನಿಕರ ಬೇಡಿಕೆಯ ಹಿನ್ನೆಲೆಯಲ್ಲಿ  ಸುಪ್ರೀಮ್ ಕೋರ್ಟ್ ಕೇಂದ್ರದ ಪ್ರತಿಕ್ರಿಯೆ ಕೇಳಿತ್ತು. ಈ ಪ್ರತಿಕ್ರಿಯೆಗೆ ಉತ್ತರಿಸಿರುವ ಕೇಂದ್ರ ಸರ್ಕಾರ, ನಾವು ಮತ್ತೊಂದು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಕೇಂದ್ರ ದ ಪ್ರತಿಕ್ರಿಯೆ ಪಡೆದ ನಂತರ ಅರ್ಜಿ ವಿಚಾರಣೆಯನ್ನು ಸುಪ್ರೀಮ್ ಕೋರ್ಟ್  ಜನವರಿ 25ಕ್ಕೆ ಮುಂದೂಡಿದೆ. ಅಲ್ಲದೇ ಈ ಅವಧಿಯಲ್ಲಿ ಅಫಿಡವಿಟ್ ಸಲ್ಲಿಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಿದೆ.

ಅಕ್ಟೋಬರ್ 4ರಂದು ನಡೆಯಬೇಕಿದ್ದ ಯಪಿಎಸ್ ಸಿ ನಾಗರಿಕ ಸೇವೆಯ ಪ್ರಿಲಿಮಿನರಿ ಪರೀಕ್ಷೆ ಮುಂದೂಡುವಂತೆ ಮನವಿ ಮಾಡಿದ್ದರೂ ಕೇಂದ್ರ ಸರ್ಕಾರ ಕ್ಯಾರೇ ಅಂದಿರಲಿಲ್ಲ. ಈ ಸಂದರ್ಭದಲ್ಲಿ ದೇಶದ ನಾನಾ ಕಡೆಗಳಲ್ಲಿ ಪ್ರವಾಹ, ಕೊರೊನಾ ವೈರಸ್ ಆರೋಗ್ಯ  ತುರ್ತುಪರಿಸ್ಥಿತಿ ನಿರ್ಮಾಣವಾಗಿತ್ತು. ಜನರ ತೀವ್ರ  ಮನವಿಯ ನಡುವೆಯೇ ಕೇಂದ್ರ ಸರ್ಕಾರ ಜನರ ಮನವಿಯನ್ನು ತಿರಸ್ಕರಿಸಿತ್ತು. ಇದರಿಂದಾಗಿ ಯುವಜನತೆಯ ಭವಿಷ್ಯ ಅಪಾಯದಲ್ಲಿದೆ.

ಇತ್ತೀಚಿನ ಸುದ್ದಿ