ಹಿರಿಯರು ಹಾಕಿಕೊಟ್ಟ ಮಾರ್ಗದಂತೆ ಸೌಹಾರ್ದತೆಯಿಂದ ಬದುಕು ಕಟ್ಟಿಕೊಳ್ಳಬೇಕು: ‘ಸೌಹಾರ್ದ ಸಿರಿ’ ಪ್ರಶಸ್ತಿ ಸ್ವೀಕರಿಸಿ ಡಾ.ಎಂ.ಮೋಹನ್ ಆಳ್ವಾ ಮಾತುಗಳು
![moodubidare](https://www.mahanayaka.in/wp-content/uploads/2025/02/moodubidare.jpg)
ಮೂಡುಬಿದಿರೆ: ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕದ ವತಿಯಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮುಖ್ಯಸ್ಥರಾದ ಡಾ. ಎಂ ಮೋಹನ್ ಆಳ್ವಾ ಅವರಿಗೆ ಸೌಹಾರ್ದ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕುವೆಂಪು ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಗತಿಸಿ ಹೋದ ಕಾಲಕ್ಕೂ ಈಗಿನ ಕಾಲಕ್ಕೂ ಬಹಳಷ್ಟು ಸೂಕ್ಷ್ಮತೆಗಳಿವೆ, ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದಂತೆ ಸಹಿಷ್ಣುತೆಯಿಂದ, ಸೌಹಾರ್ದತೆಯಿಂದ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು.
ನಮ್ಮನ್ನು ಆಳುವ ಸರ್ಕಾರಗಳು ಅವರ ಓಟಿಗಾಗಿ, ಅಧಿಕಾರಕ್ಕಾಗಿ ನಮ್ಮ ಮಧ್ಯೆ ಭಿನ್ನಾಭಿಪ್ರಾಯವನ್ನು ಸೃಷ್ಟಿಸುವುದನ್ನು ನಾವು ಗಮನಿಸಿದ್ದೇವೆ. ಇದರಿಂದಾಗಿ ನಮ್ಮ ಇಡೀ ಸಮಾಜದ ನಡುವೆ ಕಂದಕ ಉಂಟಾಗುತ್ತಿದೆ. ಧರ್ಮಗಳ ಮಧ್ಯೆ ಮಾತ್ರವಲ್ಲದೆ, ಜಾತಿ ಮತಗಳ ನಡುವೆಯು ಕೆಲವೊಮ್ಮೆ ಕಂದಕ ಸೃಷ್ಟಿ ಮಾಡಿ ಬೇರ್ಪಡಿಸಿ ಮಾನವ ಕುಲದ ಕೋಟೆಯನ್ನೇ ಛಿದ್ರ ಛಿದ್ರ ಮಾಡುವಂತಹ ಇಂತಹ ಸಂದರ್ಭದಲ್ಲಿ ನಾವು ಬಹಳಷ್ಟು ಜಾಗೃತರಾಗಿರಬೇಕು ಎಂದು ಅವರು ಇದೇ ವೇಳೆ ತಿಳಿಸಿದರು.
ಮುಸ್ಲಿಂ ಬಾಂಧವ್ಯ ವೇದಿಕೆಯವರು ಸೌಹಾರ್ದ ಸಿರಿ ಎಂಬ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದ್ದೀರಿ ಖಂಡಿತ ಇದು ನನ್ನ ಬದುಕಿನಲ್ಲಿ ಸುದೀರ್ಘ ಎಪ್ಪತ್ತ ಮೂರು ವರ್ಷದ ಹೋರಾಟದಲ್ಲಿ ನಾನು ಬದುಕಿದ ರೀತಿ, ಪಾರದರ್ಶಕತೆ, ಮಾದರಿಯನ್ನು ನೋಡಿಕೊಂಡು ನನಗೆ ಸನ್ಮಾನಿಸಿದ್ದೀರಿ ಈ ಸಂದರ್ಭದಲ್ಲಿ ನನ್ನ ತಂದೆ ತಾಯಿಯನ್ನು ಸ್ಮರಿಸಿಕೊಳ್ಳಲೇ ಬೇಕು ಅವರ ಜೀವನವನ್ನು ನೋಡಿ ಬಾಳಿನುದ್ದಕ್ಕೂ ಅದನ್ನು ಅಳವಡಿಸಿಕೊಂಡಿದ್ದೇನೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಸ್ಲಿಂ ಬಾಂಧವ್ಯ ವೇದಿಕೆಯ ಅಧ್ಯಕ್ಷ ಸುಹೈಲ್ ಅಹ್ಮದ್ ಮರೂರ್, ಈ ಜಗತ್ತು ಕಂಡ ಮಹಾನ್ ಸಾಮ್ರಾಜ್ಯಗಳು ಪತನವಾಗಿದೆ, ವೈಭವದ ಭವ್ಯ ಅರಮನೆಗಳು ಪಾಳು ಬಿದ್ದಿವೆ, ದೊಡ್ಡ ದೊಡ್ಡ ತಿಜೋರಿಗಳು ಇಂದು ಬರಿದಾಗಿವೆ, ಸಾಮ್ರಾಜ್ಯವನ್ನು ಆಳಿದ ಚಕ್ರವರ್ತಿಗಳೆಲ್ಲಾ ಮಣ್ಣಾಗಿದ್ದಾರೆ. ಆದರೆ ಇಂದಿಗೂ ಸಮಾಜ ಮಾತ್ರ ಜೀವವಿದೆ, ಅಸ್ತಿತ್ವದಲ್ಲಿದೆ ಮುಂದು ಕೂಡ ಇರುತ್ತದೆ ಅದಕ್ಕಾಗಿ ಬೇಕಾಗಿರುವುದು ಯುದ್ಧದ ನಂತರ ಹೇಗೆ ಮರು ಸಂಧಾನವೋ ಹಾಗೇಯೇ ಅವರು ಎಷ್ಟೇ ದ್ವೇಷ ಎಂಬ ರೋಗವನ್ನು ಹರಡಲಿ ನಾವು ಸೌಹಾರ್ದತೆಯೆಂಬ ಮದ್ದನ್ನು ನೀಡಬೇಕು ಎಂದು ಹೇಳಿದರು.
ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಇದರ ಮಾಧ್ಯಮ ವಕ್ತಾರ ಮುಸ್ತಾಕ್ ಹೆನ್ನಾಬೈಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೌರಾಣಿಕ ಅರ್ಥದಾರಿಗಳಾದ ಜಬ್ಬಾರ್ ಸಮೋ ಸಂಪಾಜೆ ಸಿರಿ ನುಡಿ ನುಡಿದರು, ನಿವೃತ್ತ ನ್ಯಾಯಮೂರ್ತಿಗಳಾದ ನಬಿರಸೂಲ್ ಮಹಮದಾಪುರ್, ವೇದಿಕೆಯ ಗೌರವಾಧ್ಯಕ್ಷರಾದ ಕೋಟ ಇಬ್ರಾಹಿಂ ಸಾಹೇಬ್, ಅನುಪಮ ಮಾಸಿಕ ಸಂಪಾದಕಿ ಶಹನಾಝ್ ಎಂ, ಮಾತನಾಡಿದರು. ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಇದರ ಮಾಜಿ ಅಧ್ಯಕ್ಷರಾದ ಅನೀಸ್ ಪಾಷ ಸ್ವಾಗತಿಸಿದರು. ವೇದಿಕೆಯ ಕಾರ್ಯದರ್ಶಿ ಡಾ. ಹಕೀಮ್ ತೀರ್ಥಹಳ್ಳಿ ವಂದಿಸಿದರು. ಡಾ ನಿಝಾಮುದ್ದೀನ್ ಕಾರ್ಯಕ್ರಮ ನಿರೂಪಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BR3b3qhWZWaCzpD1m6N5uu