ನೀರು ಬರದಿದ್ದರೆ ಖಾಲಿ ಕೊಡ ಹಿಡಿದು ಪಾಲಿಕೆ ಆಯುಕ್ತರ ಕಚೇರಿಗೆ ನಾವೇ ಬರುತ್ತೇವೆ : ಸಂತೋಷ್ ಬಜಾಲ್

ಮಂಗಳೂರು: ನೇತ್ರಾವತಿ ನದಿ ತೀರದಲ್ಲೇ ಇರುವ ಬಜಾಲ್ ಕಟ್ಟಪುನಿ ಪ್ರದೇಶಕ್ಕೆ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದ ಶಾಸಕರು, ಪಾಲಿಕೆ ಸದಸ್ಯರು ಯಾಕಿರಬೇಕು. ಈ ಕೂಡಲೇ ನೀರು ವಿತರಿಸುವಲ್ಲಿ ವಿಳಂಬವಾದರೆ ಇದೇ ಖಾಲಿ ಕೊಡಗಳನ್ನು ಹಿಡಿದು ಪಾಲಿಕೆ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ ಎಂದು ಬಜಾಲ್ ವಾರ್ಡ್ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯದರ್ಶಿ, ಡಿವೈಎಫ್ ಐ ಮುಖಂಡ ಸಂತೋಷ್ ಬಜಾಲ್ ಎಚ್ಚರಿಕೆ ನೀಡಿದರು.
ಬಜಾಲ್ ಕಟ್ಟಪುನಿ ಪ್ರದೇಶದ ನಿವಾಸಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲು ಆಗ್ರಹಿಸಿ ಶುಕ್ರವಾರ ಖಾಲಿ ಕೊಡಗಳನ್ನು ಹಿಡಿದು ನಡೆಸಿದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶಾಸಕ ವೇದವ್ಯಾಸ ಕಾಮತ್ ಕೋಟಿ ಕೋಟಿ ಅನುದಾನ ಬಜಾಲ್ ವಾರ್ಡಿಗೆ ತಂದಿದ್ದೇನೆಂದು ಅಲ್ಲಲ್ಲಿ ಬ್ಯಾನರ್ ಹಾಕಿಸಿದರೆ ಸಾಲದು, ಜನ ಅನುಭವಿಸುವ ಸಮಸ್ಯೆಗಳನ್ನು ಮೊದಲು ಆಲಿಸಲು ಮತ್ತದನ್ನು ಬಗೆಹರಿಸಲು ಮುಂದಾಗಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ಕಾರ್ಪೊರೇಟರ್ ಕೂಡ ಈ ಸಮಸ್ಯೆಯನ್ನು ಸರಿಪಡಿಸಲು ಸ್ಪಂದಿಸುತ್ತಿಲ್ಲ ಎಂಬ ಆಕ್ರೋಶ ಸ್ಥಳೀಯರಲ್ಲಿ ಮನೆ ಮಾಡಿದೆ. ಜಲಸಿರಿ ಯೋಜನೆಗೆ, ಸ್ಮಾರ್ಟ್ ಸಿಟಿಗೆ ಸಾವಿರಾರೂ ಕೋಟಿ ಹರಿದು ಬಂದರೂ ಕನಿಷ್ಟ ನಮಗೆ ನೀರು ಹರಿದು ತರಲು ಇವರಿಂದ ಸಾಧ್ಯವಾಗದಿರೋದು ನಾಚೀಕೆಗೇಡಿನ ಸಂಗತಿಯಾಗಿದೆ, ಕೂಡಲೇ ಸಮಸ್ಯೆ ಬಗೆಹರಿಸಬೇಕು ಅಲ್ಲಿಯವರೆಗೆ ಟ್ಯಾಂಕರ್ ಮೂಲಕವಾದರೂ ನೀರು ವಿತರಿಸುವ ಕೆಲಸ ನಡೆಯಲಿ ಎಂದು ಪಾಲಿಕೆ ಆಡಳಿತವನ್ನು ಒತ್ತಾಯಿಸಿದರು.
ಹೋರಾಟಗಾರ ಸುನೀಲ್ ಕುಮಾರ್ ಬಜಾಲ್ ಮಾತನಾಡುತ್ತಾ, ಸ್ಥಳೀಯ ಅಂಗನವಾಡಿ ಮಕ್ಕಳಿಗೂ ಕುಡಿಯಲು ನೀರಿಲ್ಲ. ನೀರಿನ ಸಮಸ್ಯೆ ಇದ್ದ ಕಡೆಗಳಿಗೆ ಹೇಗಾದರೂ ನೀರು ಒದಗಿಸುವುದು ಜಿಲ್ಲಾಡಳಿತದ ಜವಾಬ್ದಾರಿ ಆದರೆ ಈ ಊರಿನ ಜನ ಮನವಿಯನ್ನು ನೀಡಿದರೂ ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗದಿರುವುದು ದುರಂತ. ರಂಜಾನ್ , ಯುಗಾದಿ ಹಬ್ಬಗಳು ನಮ್ಮ ಮುಂದೆ ಇದೆ ಕುಡಿಯಲು ಯೋಗ್ಯ ನೀರಿನ ವಿತರಣೆಗೆ ಕ್ರಮಕೈಗೊಳ್ಳಬೇಕು ಇಲ್ಲದೇ ಹೋದಲ್ಲಿ ಈ ಹೋರಾಟ ಪಾಲಿಕೆ ಅಧಿಕಾರಿಗಳ, ಶಾಸಕರ ಕಚೇರಿವರೆಗೂ ಕೊಂಡೊಯ್ಯಲಿದ್ದೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬಜಾಲ್ ವಾರ್ಡ್ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷರಾದ ಅಯಾಝ್, ದೀಪಕ್ ಬಜಾಲ್, ಜಯಪ್ರಕಾಶ್ ಜಲ್ಲಿಗುಡ್ಡೆ, ಇಕ್ಬಾಲ್ ಕಟ್ಟಪುನಿ, ಅಶೋಕ್ ಸಾಲ್ಯಾನ್, ವರಪ್ರಸಾದ್, ಸ್ಥಳೀಯರಾದ ಫಿಲೀಫ್ ಡಿಸೋಜ, ಅಬ್ದುಲ್ ಖಾದರ್, ಪುರಂದರ, ಅಬ್ದುಲ್ ರೆಹಮಾನ್ ,ಇಮ್ರಾನ್ ಕಟ್ಟಪುನಿ, ಗಿರಿಜ, ಶಪಿಯಾ, ನಸೀಮಾ, ಝುಲೈಕಾ, ವಸಂತಿ, ಸಮದ್, ಅಸ್ರಫ್, ನವೀನ್ ಡಿಸೋಜ, ಸಂದೀಪ್, ನಿಸಾರ್, ಕೇಶವ ಚೌಟ, ಮೋಹನ್ ಜಲ್ಲಿಗುಡ್ಡೆ ಮುಂತಾದವರು ಉಪಸ್ಥಿತರಿದ್ದರು.
ಪ್ರತಿಭಟನೆಯನ್ನು ಬಜಾಲ್ ವಾರ್ಡ್ ಅಭಿವೃದ್ಧಿ ಹೋರಾಟ ಸಮಿತಿಯ ಕೋಶಾಧಿಕಾರಿ ಕಮಲಾಕ್ಷ ಬಜಾಲ್ ಸ್ವಾಗತಿಸಿ ನಿರೂಪಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: