ವಾರದ ಲಾಕ್ ಡೌನ್ ಏನೆಲ್ಲ ಇದೆ? ಏನೆಲ್ಲ ಇಲ್ಲ? | ಇಲ್ಲಿದೆ ವಿವರ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹಾಗೂ ಸಾವುಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿಯಿಂದಲೇ ವಾರಾಂತ್ಯ ಲಾಕ್ ಡೌನ್ ಜಾರಿಯಾಗುತ್ತಿದ್ದು, ಶನಿವಾರ ಮತ್ತು ಭಾನುವಾರ ಕರ್ನಾಟಕದಲ್ಲಿ ಸಂಪೂರ್ಣ ಬಂದ್ ವಾತಾವರಣ ಇರಲಿದೆ.
ಮನೆ ಸುತ್ತ ಮುತ್ತಲಿನ ದಿನಸಿ, ಹಣ್ಣು-ತರಕಾರಿ, ಹಾಲು-ಡೈರಿ ಉತ್ಪನ್ನಗಳ ಅಂಗಡಿಗಳು ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಮಾತ್ರ ತರೆದಿರಲಿವೆ. ನಂತರ ಇರುವುದಿಲ್ಲ. ಅಗತ್ಯ ವಸ್ತುಗಳ ಹೋಂ ಡೆಲಿವರಿಗೆ ಅವಕಾಶವಿದೆ. ರೆಸ್ಟೋರೆಂಟ್, ಉಪಹಾರ ಗೃಹಗಳಲ್ಲಿ ಪಾರ್ಸೆಲ್ ಸೇವೆಗೆ ಮಾತ್ರ ಅವಕಾಶ. ಅಲ್ಲೇ ಹೋಗಿ ಕುಳಿತೋ, ನಿಂತೋ ತಿನ್ನುವಂತಿಲ್ಲ.
ದೂರದ ಊರಿಗೆ ತೆರಳುವ ಬಸ್‌ಗಳು, ರೈಲು, ವಿಮಾನಗಳು ಮಾತ್ರ ಇರಲಿದೆ; ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣದಿಂದ ಜನರನ್ನು ಕರೆದುಕೊಂಡು ಬರಲು ಮತ್ತು ಕರೆದುಕೊಂಡು ಹೋಗಲು ಮಾತ್ರ ಟ್ಯಾಕ್ಸಿ, ಬಸ್, ಖಾಸಗಿ ವಾಹನಗಳಿಗೆ ಅವಕಾಶವಿದೆ. ಇದಕ್ಕೆ ಟಿಕೆಟ್ ಅಥವಾ ದಾಖಲೆಗಳನ್ನು ನೀಡಬೇಕು.
ಸಿನಿಮಾ ಮಂದಿರ, ಶಾಪಿಂಗ್ ಮಾಲ್, ಜಿಮ್, ಕ್ರೀಡಾ ಸಂಕೀರ್ಣ, ಸ್ಟೇಡಿಯಂ, ಈಜುಕೊಳ, ಮನೋರಂಜನಾ ಪಾರ್ಕ್, ಬಾರ್, ಆಡಿಟೋರಿಯಂ ಯಾವುದನ್ನೂ ತೆರೆಯುವಂತಿಲ್ಲ. ಧಾರ್ಮಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮ ಸೇರಿ ಜನಸೇರುವ ಯಾವುದೇ ಕಾರ್ಯಕ್ರಮಗಳಿಗೂ ಅವಕಾಶವಿಲ್ಲ. ಎಂದಿನಂತೆ ಧಾರ್ಮಿಕ ಕೇಂದ್ರಗಳು ಸಾರ್ವಜನಿಕರಿಗೆ ಮುಚ್ಚಿರಲಿವೆ. ದೈನಂದಿನ ಪೂಜೆ-ಪುನಸ್ಕಾರಗಳನ್ನು ನಡೆಸಲು ಅರ್ಚಕರಿಗೆ ಮಾತ್ರ ಅವಕಾಶ. ಸಾಮಾನ್ಯ ಲಾಕ್‌ಡೌನ್‌ನಲ್ಲಿ ನಿರ್ಮಾಣ ಚಟುವಟಿಕೆಗಳಿಗೆ ನೀಡಲಾದ ಅನುಮತಿಯೂ ವಾರಾಂತ್ಯದಲ್ಲಿ ಇಲ್ಲ. ಈ ಅವಧಿಯಲ್ಲಿ ನಿರ್ಮಾಣ ಚಟುವಟಿಕೆಗಳನ್ನು ನಡೆಸುವಂತಿಲ್ಲ.
ಯಾವೆಲ್ಲ ಸೇವೆಗಳು ಇವೆ?
ತುರ್ತು, ಅಗತ್ಯ ಸೇವೆಗಳು ಹಾಗೂ ಕೊರೊನಾ ನಿಯಂತ್ರಣದಲ್ಲಿ ಪಾಲ್ಗೊಂಡಿರುವ ಎಲ್ಲಾ ರಾಜ್ಯ ಮತ್ತು ಕೇಂದ್ರ ಸರಕಾರಿ ಕಚೇರಿ, ನಿಗಮಗಳ ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿವೆ. ಇವುಗಳ ಸಿಬ್ಬಂದಿ ಮುಕ್ತವಾಗಿ ಓಡಾಡಬಹುದು. ತುರ್ತು ಮತ್ತು ಅಗತ್ಯ ಸೇವೆಗಳ ಅಡಿಯಲ್ಲಿ ಬರುವ ಎಲ್ಲಾ ಕೈಗಾರಿಕೆ, ಕಂಪನಿ, ಸಂಸ್ಥೆಗಳಿಗೆ 24/7 ಕಾರ್ಯಚರಿಸಲು ಅವಕಾಶವಿದೆ. ಈ ಸಂಸ್ಥೆಗಳ ನೌಕರರು ತಮ್ಮ ಗುರುತಿನ ಚೀಟಿ ತೋರಿಸಿ ಪ್ರಯಾಣಿಸಬಹುದು. ಇಂಟರ್‌ನೆಟ್, ಟೆಲಿಕಾಂ ಸೇವೆ ನೀಡುವ ಸಂಸ್ಥೆಗಳ ವಾಹನಗಳು, ನೌಕರರ ಪ್ರಯಾಣಕ್ಕೆ ಯಾವುದೇ ನಿರ್ಬಂಧ ಇಲ್ಲ. ಇವರೂ ಐಡಿ ಕಾರ್ಡ್ ಇಟ್ಟುಕೊಳ್ಳುವುದು ಕಡ್ಡಾಯ.
ಮದುವೆ 50 ಜನ, ಅಂತ್ಯ ಸಂಸ್ಕಾರಕ್ಕೆ 20 ಜನ ಭಾಗವಹಿಸಲು ಮಾತ್ರ ಅವಕಾಶವಿದೆ. ಕೋವಿಡ್ ನಿಯಮ ಪಾಲನೆ ಕಡ್ಡಾಯ. ಐಟಿ ಕಂಪನಿಗಳ ಅಗತ್ಯ ಸಿಬ್ಬಂದಿಗಳು ಮಾತ್ರ ಕಚೇರಿಗೆ ತೆರಳಬೇಕು, ಉಳಿದವರು ವರ್ಕ್ ಫ್ರಂ ಹೋಂ ಮುಂದುವರಿಸಬೇಕು. ರೋಗಿಗಳು, ಅವರ ಸಹಾಯಕರು, ಲಸಿಕೆ ತೆಗೆದುಕೊಳ್ಳಲು ಹೋಗುವವರ ಪ್ರಯಾಣಕ್ಕೆ ನಿರ್ಬಂಧವಿಲ್ಲ. ಇದಕ್ಕೂ ದಾಖಲೆಗಳನ್ನು ತೋರಿಸಬೇಕಾಗುತ್ತದೆ. ರೆಸ್ಟೋರೆಂಟ್, ಉಪಹಾರ ಗೃಹಗಳು ತೆರೆದಿರಲಿವೆ. ಆದರೆ ಪಾರ್ಸೆಲ್ ಸೇವೆಗಳಿಗೆ ಮಾತ್ರ ಅವಕಾಶ. ಮನೆಯ ಅಕ್ಕ ಪಕ್ಕದ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು (ದಿನಸಿ, ಹಾಲು, ಹಣ್ಣು, ತರಕಾರಿ) ತೆರೆದಿರಲಿವೆ. ಆದರೆ ಬೆಳಿಗ್ಗೆ 6 6 – 10 ಗಂಟೆವರೆಗೆ ಮಾತ್ರ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಂದು ರಾತ್ರಿ 9ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯಿಂದ ಬಿಎಂಟಿಸಿ ಬಸ್ ಗಳು ಸಂಚರಿಸುವುದಿಲ್ಲ. ತುರ್ತು ಸೇವೆಗಾಗಿ ಮಾತ್ರ 500 ಬಸ್ ಗಳು ಸಂಚರಿಸಲಿವೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ ಸಿಖಾ ತಿಳಿಸಿದ್ದಾರೆ.
ಬಿಎಂಟಿಸಿ-ಮೆಟ್ರೋ ಸಂಚಾರ ಸ್ಥಗಿತ
ನಗರದಲ್ಲಿ ನಮ್ಮ ಮೆಟ್ರೋ ಸಂಚಾರ ಸಹ ಸಂಪೂರ್ಣ ಬಂದ್ ಆಗಲಿದ್ದು, ಇಂದು ಸಂಜೆ 7.30 ರಿಂದ ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ ಯಾವುದೇ ಮೆಟ್ರೋ ರೈಲು ಸಂಚರಿಸುವುದಿಲ್ಲ. ಇಂದು ಸಂಜೆ 7.30ಕ್ಕೆ ಮೈಸೂರು ರಸ್ತೆ, ಬೈಯಪ್ಪನಹಳ್ಳಿ, ನಾಗಸಂದ್ರ ಮತ್ತು ಸಿಲ್ಕ್ ಸಂಸ್ಥೆಯಿಂದ ಕೊನೆಯ ರೈಲು ಹೊರಡಲಿದೆ ಎಂದು ಬಿಎಂಆರ್ ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ. ಸೋಮವಾರ ಬೆಳಗ್ಗೆ 7ರಿಂದ ಎಂದಿನಂತೆ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ ಎಂದು ಬಿಎಂಆರ್ ಸಿಎಲ್ ತಿಳಿಸಿದೆ.