ಧರ್ಮಸ್ಥಳದ ಪಾದಯಾತ್ರಿಗಳಿಂದ ಪಶ್ಚಿಮ ಘಟ್ಟಗಳ ಸಾಲು ಚಾರ್ಮಾಡಿ ಘಾಟಿಯಲ್ಲಿ ರಾಶಿ–ರಾಶಿ ಕಸ
ಚಿಕ್ಕಮಗಳೂರು: ಶಿವರಾತ್ರಿ ಹಬ್ಬದ ಹಿನ್ನೆಲೆ ಜಿಲ್ಲೆಯ ಚಾರ್ಮಾಡಿ ಘಾಟಿ ಮೂಲಕ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟ ಸಾವಿರಾರು ಭಕ್ತರಿಂದ ಚಾರ್ಮಾಡಿ ಘಾಟಿಯ ಅಪರೂಪದ ಸಸ್ಯಸಂಪತ್ತಿನ ಸಾಲು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ರಾಶಿ–ರಾಶಿ ಕಸ ಸಂಗ್ರಹವಾಗಿದ್ದು, ಸ್ಥಳಿಯರು ಸರ್ಕಾರ ಹಾಗೂ ಪಾದಯಾತ್ರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಶಿವರಾತ್ರಿಯಂದು ಧರ್ಮಸ್ಥಳ ತಲುಪಬೇಕು ಅಂತ ಕಳೆದೊಂದು ತಿಂಗಳಿನಿಂದಲೂ ರಾಜ್ಯದ ಮೂಲೆ-ಮೂಲೆಗಳಿಂದ ಸಾವಿರಾರು ಭಕ್ತರು ಪಾದಯಾತ್ರೆ ಆರಂಭಿಸಿದ್ದರು. ಕಳೆದೊಂದು ವಾರದಿಂದ ಅವರೆಲ್ಲರೂ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಗೆ ಬಂದು ಧರ್ಮಸ್ಥಳ ಸೇರಿದ್ದಾರೆ.
ನಿತ್ಯ ಸಾವಿರಾರು ಜನ ಪಾದಯಾತ್ರಿಗಳು ಕೊಟ್ಟಿಗೆಹಾರ, ಚಾರ್ಮಾಡಿ ಘಾಟಿಯಲ್ಲಿ ಸಂದಿಸುತ್ತಿದ್ದರು. ಆದರೆ, ಪಾದಯಾತ್ರಿಗಳು ಬರುತ್ತಾರೆ ಎಂದು ಸ್ಥಳಿಯರು ಹಾಗೂ ದಾನಿಗಳು ಅವರಿಗೆ ಮೂಲಭೂತ ಸೌಲಭ್ಯಗಳನ್ನ ಕಲ್ಪಿಸುತ್ತಿದ್ದರು. ಊಟ, ತಿಂಡಿ, ನೀರು, ಎಲ್ಲಾ ರೀತಿ ವ್ಯವಸ್ಥೆ ಮಾಡುತ್ತಿದ್ದರು. ಪಾದಯಾತ್ರಿಗಳು ಕೂಡ ಊಟ-ತಿಂಡಿ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಸೌಲಭ್ಯ ಕಲ್ಪಿಸುವರು ಹಾಗೂ ಪಾದಯಾತ್ರಿಗಳು ಎಲ್ಲೆಂದರಲ್ಲಿ ಸಿಲ್ವರ್ ತಟ್ಟೆ, ಪ್ಲಾಸ್ಟಿಕ್ ಲೋಟ, ನೀರಿನ ಬಾಟಲಿ ಎಸೆದಿರೋದ್ರಿಂದ ಚಾರ್ಮಾಡಿ ಘಾಟಿಯಲ್ಲಿ ಟನ್ ಗಟ್ಟಲೇ ಕಸ ಸಂಗ್ರಹವಾಗಿದೆ.
ಇದನ್ನೆಲ್ಲಾ ಕಂಡು ಸ್ಥಳಿಯರು ಪಾದಯಾತ್ರಿಗಳು ದೇವರು ನೋಡಲೆಂದು ಹೋಗುತ್ತಿದ್ದಾರೆ. ಆದರೆ, ಸೂಕ್ಷ್ಮ ಪ್ರದೇಶದಲ್ಲಿ ಈ ರೀತಿ ರಸ್ತೆಯುದ್ಧಕ್ಕೂ ಗಲೀಜು ಮಾಡಿಕೊಂಡು ಹೋದರೆ ಹೇಗೆಂದು ಪ್ರಶ್ನಿಸಿದ್ದಾರೆ. ಸ್ಥಳೀಯ ಪಂಚಾಯತಿ, ತಾಲೂಕು ಆಡಳಿತ, ಜಿಲ್ಲಾಡಳಿತ ಕೂಡ ಇತ್ತ ಗಮನ ಹರಿಸದಿರೋದು ದುರಂತ. ಇದು ಪ್ರತಿ ವರ್ಷದ ಕಥೆ. ಕಳೆದ ಹಲವು ವರ್ಷಗಳಿಂದಲೂ ಸರ್ಕಾರಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ, ಸರ್ಕಾರ ಇನ್ನಾದರೂ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಪಾದಯಾತ್ರಿಗಳು ಕಸವನ್ನ ಎಲ್ಲೆಂದರಲ್ಲಿ ಎಸೆಯಬಾರದು. ಊಟ-ತಿಂಡಿಯ ಸೌಲಭ್ಯ ಕಲ್ಪಿಸುವವರು ಕೂಡ ಕಸವನ್ನ ಎಸೆಯಲು ಸೂಕ್ತ ವ್ಯವಸ್ಥೆ ಮಾಡಬೇಕು. ಆಗ, ಈ ರೀತಿಯ ವಾತಾವರಣ ನಿರ್ಮಾಣವಾಗುವುದಿಲ್ಲ ಎಂದು ಮನವಿ ಮಾಡಿದ್ದಾರೆ.
ಧರ್ಮಸ್ಥಳದ ಧರ್ಮಾಧಿಕಾರಿ ರಾಜ್ಯಸಭೆ ಸದಸ್ಯರಾಗಿದ್ದಾರೆ. ಸರ್ಕಾರದ ಗಮನಕ್ಕೆ ತಂದು ಪಾದಯಾತ್ರಿಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಮನವಿ ಮಾಡಿದ್ದಾರೆ. ಜೊತೆಗೆ, ಅರಣ್ಯ ಇಲಾಖೆ, ಪೊಲೀಸ್ ಹೆದ್ದಾರಿ ಪ್ರಾಧಿಕಾರವೂ ಹೀಗೆ ಎಲ್ಲೆಂದರಲ್ಲಿ ಕಸ ಸುರಿಯುವುದನ್ನ ತಪ್ಪಿಸಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಆದರೆ, ಭಕ್ತರ ಮನಸ್ಸಿನಲ್ಲಿಯೇ ಒಳ್ಳೆಯ ಭಾವನೆ ಮೂಡದಿದ್ದರೆ. ಯಾರು ಏನೇ ಮಾಡಿದರೂ ಕಸವನ್ನ ತಡೆಯಲು ಆಗುವುದಿಲ್ಲ. ಪಾದಯಾತ್ರಿ ಭಕ್ತರ ಮನಸ್ಸಲ್ಲೇ ಬದಲಾವಣೆಯಾಗಬೇಕು ಅಷ್ಟೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw