ದಳ-ಕಮಲ ಮೈತ್ರಿ: ಬಿಜೆಪಿಯನ್ನು ಬೆಂಬಲಿಸಿದ್ದ ಸುಮಲತಾ ಅವರ ಕಥೆ ಏನು? - Mahanayaka

ದಳ–ಕಮಲ ಮೈತ್ರಿ: ಬಿಜೆಪಿಯನ್ನು ಬೆಂಬಲಿಸಿದ್ದ ಸುಮಲತಾ ಅವರ ಕಥೆ ಏನು?

sumalatha
19/09/2023

ಮಂಡ್ಯ: ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ರಾಜ್ಯಾದ್ಯಂತ ಭಾರೀ ರಾಜಕೀಯ ಜಿದ್ದಾಜಿದ್ದಿನ ಹೋರಾಟ ಕಣವಾಗಿತ್ತು. ರೆಬೆಲ್ ಸ್ಟಾರ್ ಅಂಬರಿಷ್ ಅವರ ಪತ್ನಿ ಸುಮಲತಾ ಅವರು ಚುನಾವಣಾ ಕಣಕ್ಕಿಳಿದ ಬೆನ್ನಲ್ಲೇ ಜೆಡಿಎಸ್ ಹಾಗೂ ಸುಮಲತಾ ನಡುವೆ ಬಿಗ್ ಫೈಟ್ ನಡೆದಿತ್ತು. ಅಂತಿಮವಾಗಿ ಸುಮಲತಾ ಭರ್ಜರಿ ಗೆಲುವು ಸಾಧಿಸಿದ್ದರು. ಇದೀಗ ಮತ್ತೆ ಲೋಕಸಭಾ ಚುನಾವಣೆ ಸಮೀಪಿಸಿದ್ದು, ಈ ಬಾರಿಯೂ ಮಂಡ್ಯ ಲೋಕಸಭಾ ಕ್ಷೇತ್ರ ಮತ್ತೆ ಕುತೂಹಲಕ್ಕೆ ಕಾರಣವಾಗಿದೆ.

ಹೌದು..! ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಮಲತಾ ಅವರಿಗೆ ಜೆಡಿಎಸ್—ಬಿಜೆಪಿ ಮೈತ್ರಿ ಸಂಕಷ್ಟ ತಂದಿಟ್ಟಿದೆ. ಕಳೆದ ಚುನಾವಣೆಯಲ್ಲಿ ಸ್ವಾಭಿಮಾನದ ಹೆಸರಿನಲ್ಲಿ ಸೆರಗೊಡ್ಡಿ ಮತಭಿಕ್ಷೆ ಬೇಡಿದ್ದ ಸುಮಲತಾ ಅವರನ್ನು ಜನರು ಗೆಲ್ಲಿಸಿದ್ದರು. ಆದ್ರೆ ಇದಾದ ಬಳಿಕ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸುಮಲತಾ ಅವರು ಬಿಜೆಪಿಗೆ ಬೆಂಬಲ ನೀಡಿದ್ದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಬೆಂಬಲದ ನಿರೀಕ್ಷೆಯಲ್ಲಿರುವ ಸುಮಲತಾ ಅವರಿಗೆ ಬಿಜೆಪಿ–ಜೆಡಿಎಸ್ ಮೈತ್ರಿ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾದರೆ, ಸುಮಲತಾ ಅವರು ಅತ್ತ ಕಾಂಗ್ರೆಸ್ ನ ಬೆಂಬಲವೂ ಸಿಗದೇ ಅತಂತ್ರರಾಗಬೇಕಾದ ಪರಿಸ್ಥಿತಿ ಸೃಷ್ಟಿಯಾಗಲಿದೆ ಎನ್ನಲಾಗುತ್ತಿದೆ.

ಈ ಗೊಂದಲಗಳ ನಡುವೆಯೇ ಸುಮಲತಾ ಅವರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದು, G20 ಶೃಂಗಸಭೆಯ ಯಶಸ್ಸಿಗೆ ಅಭಿನಂದನೆ ಸಲ್ಲಿಸುವುದರ ಜೊತೆಗೆ ಮಂಡ್ಯ ಕ್ಷೇತ್ರದ ಕುರಿತು ಅವರು ಮಾತು ಕತೆ ನಡೆಸಿದ್ದಾರೆ ಎನ್ನಲಾಗಿದೆ.

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಲು, ಹೆಚ್.ಡಿ.ಕುಮಾರಸ್ವಾಮಿ ಸಾಕಷ್ಟು ಸರ್ಕಸ್ ನಡೆಸಿದ್ದರು, ಸುಮಲತಾ ಅವರಿಗೆ ಬಿದ್ದ ಅನುಕಂಪದ ಮತಗಳು, ನಿಖಿಲ್ ಕುಮಾರಸ್ವಾಮಿಗೆ ಸೋಲಿನ ಹಾದಿ ತೋರಿಸಿತ್ತು. ಆದ್ರೆ, ಇದೀಗ 2024ರ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಮಂಡ್ಯದಲ್ಲಿ ಈ ಬಾರಿ ಗೆಲ್ಲುವ ಕನಸನ್ನು ಹೊತ್ತಿದೆ. ಕಳೆದ ಬಾರಿ ದೊರಕಿದ ಅದೇ ಜನಪ್ರಿಯತೆ ಈ ಬಾರಿ ಸುಮಲತಾ ಅವರಿಗೆ ಸಿಗುವುದೇ ಎನ್ನುವುದನ್ನು ಕಾದುನೋಡಬೇಕಿದೆ.

ಇತ್ತೀಚಿನ ಸುದ್ದಿ