ಯಾವುದು ನಿಜವಾದ ವಾಕ್ ಸ್ವಾತಂತ್ರ್ಯ?
- ಧಮ್ಮಪ್ರಿಯಾ, ಬೆಂಗಳೂರು
ಇತ್ತೀಚಿಗೆ ಜೈನ್ ಕಾಲೇಜೊಂದರಲ್ಲಿ ನಡೆದ ಬಾಬಾಸಾಹೇಬರ ಮತ್ತು ದಲಿತರ ಬಗೆಗಿನ ಅವಹೇಳನಕಾರಿಯಾದ ಮಾತುಗಳಿಗೆ ಕೆಲವು ಕಡೆ ಧರಣಿಗಳು, ಪೊಲೀಸ್ FIR ಗಳು ಆಗಿರುವುದು ಬಹಳ ನ್ಯಾಯಸಮ್ಮತವಾದದ್ದು ಎನ್ನುವುದು ನನ್ನ ಭಾವನೆ. ಆದರೆ ಇಂತಹ ಸಂದರ್ಭದಲ್ಲಿ ನಾವು ಬುದ್ದಿಜೀವಿಗಳೆಂದು ಹೇಳಿಕೊಂಡು ಪ್ರಚಾರಗಿಟ್ಟಿಸಿಕೊಳ್ಳುವ ಕೆಲವರಿಗೆ ಬಾಬಾಸಾಹೇಬರ ಬಗ್ಗೆ ನಿಜವಾಗಿಯೂ ಪರಿಜ್ಞಾನವಿಲ್ಲಾ ಎಂದರೆ ತಪ್ಪಾಗಲಾರದು. ಆದರೆ ಇವರುಗಳೆಲ್ಲಾ ಇದು ಪ್ರಜಾಪ್ರಭುತ್ವ ವ್ಯವಸ್ಥೆ ಎಲ್ಲರಿಗೂ ಎಲ್ಲರ ಬಗ್ಗೆ ಮಾತನಾಡಲು ವಾಕ್ ಸ್ವಾತಂತ್ರ್ಯವಿದೆ ಎಂದು ಬಡಬಡಿಸುತ್ತಿದ್ದಾರೆ.
ಇದರ ಜೊತೆಗೆ ಬಾಬಾಸಾಹೇಬರನ್ನು ಹಾಗು ಶೋಷಿತ ಸಮುದಾಯವನ್ನು ಹೀಯ್ಯಾಳಿಸುತ್ತಾ ಅವರ ಭಾವನೆಗಳಿಗೆ ದಕ್ಕೆ ತಂದವರನ್ನು ರಕ್ಷಿಸುವ ಹುನ್ನಾರಗಳು ನಡೆಯುತ್ತಿವೆ. ಕೆಲವು ಪೀತಮನಸ್ಸುಗಳು ಸಮಾಜಮುಖಿ ಚಿಂತಕರೆನ್ನುವ ಮುಖವಾಡ ಹಾಕಿಕೊಂಡು ಜಾತಿವಾದಿಗಳ ರಕ್ಷಣೆಗೆ ನಿಂತಿದ್ದಾರೆ. ಎಲ್ಲರಿಗೂ ಎಲ್ಲವನ್ನು ಮಾತನಾಡುವ ವಾಕ್ ಸ್ವಾತಂತ್ರ್ಯವನ್ನು ಕೊಟ್ಟಿದ್ದು ಭಾರತದ ಸಂವಿಧಾನವೇ ! ಅದನ್ನು ರೂಪಿಸಿದ್ದು ಬಾಬಾಸಾಹೇಬರೇ ಅನ್ನುವುದನ್ನು ಮರೆತಿದ್ದಾರೆ. ನಿಮಗೆ ವಾಕ್ ಸ್ವಾತಂತ್ರ್ಯವಿದೆ ಎಂದಾಕ್ಷಣಕ್ಕೆ ನಿಮ್ಮ ವಂಶಸ್ಥರ ಬಗ್ಗೆ ಹೀಗೆಯೇ ಮಾತನಾಡಬಹುದಲ್ಲವೇ ? ನಿಮ್ಮ ಅಪ್ಪ ಅಮ್ಮನ ಬಗ್ಗೆ ಬೇರೆಯವರು ಹೀಗೆ ಮಾತನಾಡಬಹುದಲ್ಲವೇ ? ನೀವು ನಂಬಿರುವ ನಿಮ್ಮ ಆರಾಧನ ಸಂಸ್ಕೃತಿ, ಸಂಪ್ರದಾಯದ ಬಗ್ಗೆ ಹೀಗೆ ಮಾತನಾಡಬಹುದಲ್ಲವೇ ? ಅಂದು ನಿಮ್ಮ ಭಾವನೆಗಳಿಗೆ ಧಕ್ಕೆಯಾಗುತ್ತದೆಯೇ ? ನೀವು ತಿನ್ನುವ ಆಹಾರದ ಬಗ್ಗೆ ಅವಹೇಳನದ ಮಾತುಗಳನ್ನಾಡಬಹುದಲ್ಲವೇ, ಹಾಗಾದರೆ ನಿಮಗೆ ಜೀವ-ಜೀವನ ಕೊಟ್ಟವರ ಬಗ್ಗೆಯೂ ಯಾರಾದರೂ ಕೆಟ್ಟದಾಗಿ ಮಾತನಾಡಿದಾಗ ನೀವು ಸುಮ್ಮನಿರಬೇಕಲ್ಲವೇ ? ಯಾಕೆಂದರೆ ಅವರಿಗೂ ಹಾಗೆ ಮಾತನಾಡುವ ವಾಕ್ ಸ್ವಾತಂತ್ರ್ಯವಿದೆ. ನೀವು ಹಾಗೆ ಮಾತನಾಡಿದವರ ವಿರುದ್ಧ ಬಂಡೇಳಲೇಬಾರದಲ್ಲವೇ ! ಹೌದಲ್ಲವೇ ?
ವಾಕ್ ಸ್ವತಂತ್ರ್ಯ ಅಂದರೆ ಒಳ್ಳೆಯ ಆಶಯ, ಒಳ್ಳೆಯ ನುಡಿ, ಒಳ್ಳೆಯ ವಿಚಾರಗಳ ವಿನಿಮಯ, ಒಳ್ಳೆಯ ವಿಷಯಗಳ ಮಂಡನಾ ಕ್ರಮ, ಒಳ್ಳೆಯ ಆದರ್ಶಗಳ ಪರಿಪಾಲನೆಯ ಬೋಧನೆ, ಒಳ್ಳೆಯ ಹೊಗಳಿಕೆಯ ತತ್ವ ಸಿದ್ದಾಂತಗಳ ಉಪದೇಶ, ಒಳ್ಳೆಯ ಮಾರ್ಗದರ್ಶನಕ್ಕೆ ಇರುವುದೇ ವಾಕ್ ಸ್ವಾತಂತ್ರ್ಯ ಎನ್ನಬಹುದು.
ಬಸವಣ್ಣನವರು ಮಾತೆಂಬುದು ಜ್ಯೋತಿರ್ಲಿಂಗ ಎಂದಿದ್ದಾರೆ. ಮಾತು ಬದುಕನ್ನು, ಸಮಾಜವನ್ನು ಜ್ಯೋತಿಯಂತೆ ಬೆಳಗುವಂತಿರಬೇಕು. ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಲಿಂಗಮೆಚ್ಚಿ ಅಹುದಹುದೆನಬೇಕು. ಇದು ನಿಜವಾದ ವಾಕ್ ಸ್ವಾತಂತ್ರ್ಯ. ಬಾಬಾಸಾಹೇಬರು ಸಹ ಬುದ್ಧನ ಅಷ್ಟಾಂಗ ಮಾರ್ಗವನ್ನು ಅನುಸರಿಸಿ ಸಂವಿಧಾನದಲ್ಲಿ ಎಲ್ಲರಿಗೂ ವಾಕ್ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಕಟ್ಟಿಕೊಟ್ಟರು. ಅದರಿಂದ ಎಲ್ಲರಿಗೂ ಸಮಾನತೆ ಎನ್ನುವುದನ್ನು ತೋರಿಸಿಕೊಟ್ಟರು. ಅದುವೇ ಪ್ರಭುದ್ದ ಭಾರತದ ಪ್ರಜಾಪಭುತ್ವ ವ್ಯವಸ್ಥೆ ಎಂದು ಅರ್ಥ ಮಾಡಿಸಿಕೊಟ್ಟರು ಎನ್ನಬಹುದು.
ಇದೆಲ್ಲವನ್ನು ಬಿಟ್ಟು ಸಮಾಜದೊಳಗೆ ಕೋಮುಗಲಭೆ ಎಬ್ಬಿಸುವ ಮಾತುಗಳನ್ನಾಡುವುದು, ಇನ್ನೊಬ್ಬರ ವ್ಯಕ್ತಿತ್ವವನ್ನು ಅಲ್ಲಗಳೆಯುವುದೇ ವಾಕ್ ಸ್ವಾತಂತ್ರ್ಯ ಎಂದರೆ, ನಿಮ್ಮಂತಹ ವಿವೇಕಹೀನರಿಗೆ ಹೇಗೆ ಅರ್ಥ ಮಾಡಿಸಬೇಕೋ ತಿಳಿಯದಾಗಿದೆ. ಅಂತಹ ನಡತೆಯುಳ್ಳವರು ಅಪ್ಪಟ ಜಾತಿವಾದಿಗಳು, ಅಸಭ್ಯ ಕೋಮುವಾದಿಗಳು, ಹೀನ ನಡತೆಯ ಸಮಾಜ ಘಾತುಕರಾಗಿ, ಸಮಾಜದ ಅಭಿವೃದ್ಧಿಯ ವ್ಯವಸ್ಥೆಗೆ ಕಂಟಕರಾಗುತ್ತಾರೆ. ವಾಕ್ ಸ್ವಾತಂತ್ರ್ಯದಿಂದ ಯಾವುದೇ ಜಾತಿಯನ್ನು ನಿಂದಿಸಬೇಕೆಂತಲ್ಲಾ. ವಾಕ್ ಸ್ವಾತಂತ್ರ್ಯದಿಂದ ಯಾರ ವ್ಯಕ್ತಿತ್ವಕ್ಕೆ ದಕ್ಕೆ ತಂದು ಜಾತಿ ನಿಂದನೆ ಮಾಡುತ್ತಾ ಮಾತನಾಡುವ ಹಕ್ಕಿಲ್ಲ. ಒಂದು ವೇಳೆ ಎಲ್ಲರಿಗೂ ಎಲ್ಲಾ ಜನರ, ಅವರ ನಡವಳಿಕೆಯ ಬಗ್ಗೆ ಮಾತನಾಡಿದಾಗ ಯಾವ ಪ್ರತಿಕ್ರಿಯೆ ನೀಡದೆ ಸುಮ್ಮನೆ ಇರಬಹುದಿತ್ತಲ್ಲವೇ ? ಅಂದು ನಿಮಗೆ ಅದು ವಾಕ್ ಸ್ವಾತಂತ್ರ್ಯ ಎನಿಸುವುದಿಲ್ಲವೇನೋ !!
ಯಾಕೆಂದರೆ ಅವರು ನಿಮ್ಮವರು. ನಿಮಗೆ ಜೀವನ ಕೊಟ್ಟವರು ಅದಕ್ಕಾಗಿ ನಿಮಗೆ ಸಹಿಸಿಕೊಳ್ಳಲು ಅಸಾಧ್ಯ. ಒಮ್ಮೆ ಈ ವಿದ್ಯಾರ್ಥಿಗಳು ಮಾತನಾಡಿದ್ದು ವಾಕ್ ಸ್ವಾತಂತ್ರ್ಯ ಎನ್ನುವುದೇ ಆದರೆ ಅವರ ಮನೆಯವರ ಬಗ್ಗೆ ಬೇರೆಯವರು ಮಾತನಾಡುವುದು ವಾಕ್ ಸ್ವಾತಂತ್ರ್ಯ ಎಂದು ಅರ್ಥಮಾಡಿಕೊಳ್ಳಬೇಕಿದೆ.
ಮಾನ್ಯ ಸತೀಶ್ ಜಾರಕಿಹೋಳಿಯವರು ಮೇಲ್ ವರ್ಗದ ಶ್ರೇಷ್ಠತೆಯ ಆಚರಣೆಗಳ ಬಗ್ಗೆ ಮತ್ತು ಧರ್ಮದ ಅರ್ಥವು ಬೇರೆ ಭಾಷೆಯಲ್ಲಿ ಕೆಟ್ಟದಾಗಿದೆ ಎಂದು ತಿಳಿಸಲು ಬಯಸಿದಾಗ ಇಲ್ಲದ ವಾಕ್ ಸ್ವಾತಂತ್ರ್ಯದ ಪರಿಕಲ್ಪನೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಹಕ್ಕು , ನಿಮ್ಮಲ್ಲಿ ಈಗ ಎಚ್ಚರವಾಯಿತೇ ? ಅದು ಒಬ್ಬ ಜಗತ್ತಿನ ಜ್ಞಾನಿ, ಅರ್ಥತಜ್ಞರ ಬಗ್ಗೆ ಹೀನವಾಗಿ ಮಾತನಾಡುವಾಗ ವಾಕ್ ಸ್ವಾತಂತ್ರ್ಯ ಎನಿಸಿತೆ.
ನಾದಬ್ರಹ್ಮ ಹಂಸಲೇಖ ಹೇಳಿದ ಒಂದು ಸತ್ಯವನ್ನು ಅರಗಿಸಿಕೊಳ್ಳಲು ನಿಮಗೆ ಕಷ್ಟವಾಗಿ ನೀವು ಅವರ ವಿರುದ್ಧ FIR ಮಾಡಿಸಿದಾಗ, ಅದು ಅವರ ವಾಕ್ ಸ್ವಾತಂತ್ರ್ಯ ಎಂದು ನಿಮಗೆ ಏಕೆ ಅನಿಸಲಿಲ್ಲಾ.? ನಿಮ್ಮನ್ನು ಬೇರೆಯವರು ಪ್ರಶ್ನಿಸಿದರೆ ಅಪವಿತ್ರ, ಬಾಬಾಸಾಹೇಬರನ್ನು ತೆಗಳಿದರೆ ಅಥವಾ ಜಾತಿಯನ್ನು ನಿಂದಿಸಿದರೆ ವಾಕ್ ಸ್ವಾತಂತ್ರ್ಯ ಆಲ್ವಾ ? ಬಹಳ ಜ್ಞಾನಿಗಳು ಸ್ವಾಮಿ ನೀವುಗಳೆಲ್ಲಾ.
ಆದರೆ ಇತ್ತೀಚೆಗೆ ಈ ಜೈನ್ ಕಾಲೇಜಿನ ಘಟನೆಯ ವಿಚಾರವಾಗಿ ಕೆಲವು ಮೀಸಲು ಕ್ಷೇತ್ರದ ನಾಯಕರು ಸದನದಲ್ಲಿ ಮಾತನಾಡುತ್ತಿರುವುದು ನಿಜವಾಗಿಯೂ ಹೆಮ್ಮೆಯ ವಿಚಾರವಾಗಿದೆ. ಇವರ ಮಾತುಗಳಿಗೆ ಅಂಬೇಡ್ಕರ್ ಅನುಯಾಯಿಗಳೆಲ್ಲರ ಸಹಮತವೂ ಇದೆ. ನೀವು ಮೀಸಲು ಕ್ಷೇತ್ರದಿಂದ ಆಯ್ಕೆ ಆಗಿದ್ದಕ್ಕೆ ಸಾರ್ಥಕವಾಯಿತು ಎನಿಸುತ್ತಿದೆ. ಆದರೆ ಈ ಸಾರ್ಥಕತೆಯ ಹಿಂದಿರುವ ಹುನ್ನಾರವಾದರೂ ಏನು ಎಂದು ಯೋಚಿಸಬೇಕಾಗಿದೆ. ಏನಿದರ ಹಿಂದಿರುವ ಮೀಸಲು ಕ್ಷೇತ್ರದ ನಾಯಕರ ಮರ್ಮ ಎನ್ನುವುದನ್ನು ಅರಿಯಬೇಕಿದೆ.
ಮಾನ್ಯ ಶಾಸಕರು ವಿಧಾನಸೌಧ ಮೆಟ್ಟಿಲೇರಿದ ಮೇಲೆ ಕಳೆದ 5 ವರ್ಷಗಳಲ್ಲಿ ಮೇಲ್ಜಾತಿಯ ನಾಯಕರೊಬ್ಬರು ನಾವು ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದಾಗ ಇವರ ಕಿವಿಗೆ ಕೇಳಲೇ ಇಲ್ಲಾ, ರಾಯಚೂರಿನಲ್ಲಿ ಮಲ್ಲಿಕಾರ್ಜುನ ಗೌಡ ಎಂಬ ನ್ಯಾಯಾಧೀಶರೇ ಬಾಬಾಸಾಹೇಬರ ಫೋಟೋ ತೆಗೆಸಿ ಗಣರಾಜ್ಯೋತ್ಸವ ಮಾಡಿಸಿದಾಗ ಇವರ ನಾಲಿಗೆ ಮಾತನಾಡಲು ತಿರುಗಲಿಲ್ಲಾ, ಕೋಲಾರದಲ್ಲಿ ದಲಿತ ಹುಡುಗ ದೇವರ ಕೋಲು ಮುಟ್ಟಿದ್ದಕ್ಕೆ 50 ಸಾವಿರ ದಂಡ ವಿಧಿಸಿದಾಗ ಇವರ ಜೇಬಿಗೆ ಕತ್ತರಿ ಬೀಳಲಿಲ್ಲಾ ಮತ್ತು ಯಾವುದೇ ಚಕಾರವೆತ್ತಲಿಲ್ಲಾ. ತುಮಕೂರಿನಲ್ಲಿ ದಲಿತ ಕೇರಿಗೆ ದೇವರ ಮೆರವಣಿಗೆ ನಿರಾಕರಿಸಿದಾಗ ಇವರಿಗೆ ಬಾಬಾಸಾಹೇಬರ ಸ್ವಾಭಿಮಾನದ ಕಿಚ್ಚು ಇವರ ಎದೆಯಲ್ಲಿ ಹತ್ತಿ ಉರಿಯಲಿಲ್ಲಾ. ಭಾರತದ ಸ್ವಾತಂತ್ರ್ಯ ದಿನದಂದೇ ಕುಡಿಯುವ ನೀರಿನ ಗಡಿಗೆ ಮುಟ್ಟಿದ ಎನ್ನುವ ಕಾರಣಕ್ಕೆ ದಲಿತ ವಿದ್ಯಾರ್ಥಿಯನ್ನು ಥಳಿಸಿ ಕೊಂದ ಶಿಕ್ಷಕರ ವಿರುದ್ಧ ಜನರನ್ನು ಹೋರಾಟಕ್ಕೆ ಸಜ್ಜುಗೊಳಿಸಲಿಲ್ಲ. ಮಲಮೂತ್ರ ವಿಸರ್ಜನೆಯ ಕೊಠಡಿಗಳನ್ನು ತೊಳೆಯಲು ಶಿಕ್ಷಕರು ದಲಿತ ವಿದ್ಯಾರ್ಥಿಗಳನ್ನು ನೇಮಿಸಿದ್ದು ಜಗದ್ಜಾಹಿರವಾಯಿತು. ಆಗಲು ಇವರಿಗೆ ದಲಿತ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇರಲಿಲ್ಲಾ.
ಮೇಲ್ಜಾತಿಯವರ ಬೀದಿಯ ಕೊಳಾಯಿಯಲ್ಲಿ ನೀರು ಕುಡಿದರು ಎನ್ನುವ ಕಾರಣಕ್ಕೆ ಕಂಬಕ್ಕೆ ಕಟ್ಟಿ ಮಹಿಳೆಗೆ ಹೊಡೆದಾಗ ಇವರಿಗೆ ಆಕೆ ದಲಿತ ಹೆಣ್ಣುಮಗಳು ಎನಿಸಲಿಲ್ಲಾ. ದಲಿತ ವಿದ್ಯಾರ್ಥಿಯು ದೇವಸ್ಥಾನ ಪ್ರವೇಶಿಸಿದ ಎಂಬ ಕಾರಣಕ್ಕೆ ಪಂಜಿನಿಂದ ಸವರ್ಣೀಯರು ಇಡೀರಾತ್ರಿ ಸುಡುತ್ತಾ ಸಾಯಿಸಿದ್ದು ಇವರ ಗಮನಕ್ಕೆ ಬಂದಿರಲಿಲ್ಲವಾ ? ಪೇರಲೆ ಹಣ್ಣು ಕಿತ್ತು ತಿಂದರು ಎನ್ನುವ ಕಾರಣಕ್ಕೆ ಇಡೀ ಕುಟುಂಬಕ್ಕೆ ಬಿದಿರು ಪೈಪಿನ ಮೂಲಕ ಮೂತ್ರ ಕುಡಿಸಿದರಲ್ಲಾ ಅಂದು ಇವರಿಗೆ ಬೇಜಾರಾಗಲೇ ಇಲ್ಲಾ, RSS ಕಾರ್ಯಕರ್ತನೊಬ್ಬ ಗೂಡ್ಸೆ ಗಾಂಧಿಯನ್ನು ಕೊಂದರು, ಇವಗೆನಾದರೂ ಅಂಬೇಡ್ಕರ್ ಇದ್ದಿದ್ದರೆ ಅವರನ್ನು ನಾನೇ ಮುಗಿಸಿಬಿಡುತ್ತಿದ್ದೆ ಎಂದಾಗ ಇವರು ಮೈ ಕೊಡವಿಕೊಂಡು ಮೇಲೇಳಲಿಲ್ಲಾ. ಉತ್ತರ ಕರ್ನಾಟಕದ ಸ್ವಾಮೀಜಿಯೊಬ್ಬರು ನಿಮ್ಮ ಸಂವಿಧಾನವನ್ನು ನನ್ನ ಕಾಲ ಕೆಳಗೆ ಹಾಕಿಕೊಳ್ಳುತ್ತೇನೆ ಎಂದಾಗ ಯಾರೂ ಮಾತನಾಡಲಿಲ್ಲಾ. ಆದರೆ ಜೈನ್ ಕಾಲೇಜಿನ ವಿದ್ಯಾರ್ಥಿಗಳು ಮಾಡಿರುವ ತಪ್ಪನ್ನು ಬಂಡವಾಳ ಮಾಡಿಕೊಂಡು ಸದನದಲ್ಲಿ ಕಿರುಚಾಡುತ್ತಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಮಾಡಿ ಮತ್ತೆ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಿ ದಲಿತರ ಓಟು ಪಡೆಯಬಹುದು ಎನ್ನುವ ಭ್ರಮೆಯಲ್ಲಿದ್ದಾರೆ. ಇಂತಹ ನಿಮ್ಮ ಹುನ್ನಾರಕ್ಕೆ ಹ್ಯಾಟ್ಸ್ ಆಪ್ ನಾಯಕರೇ. ಇವತ್ತು ನೀವು ಘರ್ಜಿಸುತ್ತಿರುವ ಕೆಲಸ ಕಳೆದ ಹಿಂದಿನ ಘಟನೆಗಳು ನಡೆದಾಗ ಯಾಕೆ ಆಗಲಿಲ್ಲಾ. ಹಾಗೆ ಕೇಳಿದಿದ್ದೆ ಹಾಗಿದ್ದರೆ ಅವುಗಳು ಯಾಕೆ ವೈರಲ್ ಆಗಿಲ್ಲಾ. ಯಾಕೆಂದರೆ ಆ ಘಟನೆಗಳು ನಡೆದಾಗ ಯಾವ ಚುನಾವಣೆಯು ಇರಲಿಲ್ಲಾ ಅದಕ್ಕಾಗಿ ಸಿಂಹ ಘರ್ಜಿಸಿಲ್ಲಾ ಎನ್ನುವುದು ಇಂದಿನ ಮತದಾರರ ಅಭಿಪ್ರಾಯ ಎಂದು ತಿಳಿಯಬಹುದೇ ? !!!
ಯಾರಾದರೂ ಬಾಬಾಸಾಹೇಬರಿಗೆ ಅವಮಾನಿಸುವ, ಜಾತಿ ನಿಂದನೆ ಮಾಡುವ ಸಂದರ್ಭದಲ್ಲಿ ಎಲ್ಲಾ ನಾಯಕರು ಒಂದಾಗಿ ಸದನದಲ್ಲಿ ಧ್ವನಿ ಎತ್ತುತ್ತಿದ್ದಾರೆ ಎಂದಾದರೆ ಅದುವೇ ಶೋಷಿತರಿಗೆ ಭದ್ರತೆ ರಕ್ಷಣೆ ಎನ್ನಬಹುದು.ಎಲ್ಲರೂ ಪಕ್ಷಭೇದ ಮರೆತು ಬಾಬಾಸಾಹೇಬರ ವಿಚಾರಗಳು ಬಂದಾಗ ಭಾರತೀಯ ಪ್ರಜೆಗಳಾದ ನಾವುಗಳು ಒಂದಾಗಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಒಳಗಿರುವ ನಾವು ಇಂತಹ ಘಟನೆಗಳ ಬಗ್ಗೆ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆಗ ಮಾತ್ರ ಸದನದಲ್ಲಿ ನಡೆಯುವ ಚರ್ಚೆಗಳಿಗೆ ಅರ್ಥ ಬರುತ್ತದೆ. ಬಾಬಾಸಾಹೇಬ್ ಡಾ. ಅಂಬೇಡ್ಕರ್ ರವರಿಗೆ ಅವರ ವ್ಯಕ್ತಿತ್ವಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ ಎನ್ನಬಹುದು. ಇಲ್ಲದಿದ್ದಲ್ಲಿ ಇದು ಸ್ವಾರ್ಥದ ರಾಜಕಾರಣವಾಗಿ ಮುಂದೊಂದು ದಿನ ನಿಮ್ಮನ್ನು ಜನರೆಲ್ಲರು ಮರೆತುಹೋಗುವ ಪರಿಸ್ಥಿತಿ ತಲೆದೋರುತ್ತದೆ. ನಿಮ್ಮ ಹೋರಾಟ ಸದಾ ಹೀಗೆ ಮುಂದುವರೆಯಲಿ ಎಂದು ಹಾರೈಸುತ್ತೇವೆ.
ಜನಾಂಗವನ್ನು ಮರೆತ ನಾಯಕನನ್ನು ಜನಾಂಗವು ಮರೆತುಬಿಡುತ್ತದೆ. || ಡಾ. ಬಾಬಾಸಾಹೇಬ್ ||
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw