ಅಬ್ದುಲ್ ರಜಾಕ್ ತರಿಸಿದ್ದು ಯಾವ ಮಾಂಸ?: ಲ್ಯಾಬ್ ರಿಪೋರ್ಟ್ ನಲ್ಲಿ ಬಯಲು!

ಬೆಂಗಳೂರು: ಕುರಿ ಮಾಂಸವನ್ನು ನಾಯಿ ಮಾಂಸ ಎಂದು ವದಂತಿ ಹಬ್ಬಿಸಿದ್ದ ಪ್ರಕರಣದ ಹಿಂದಿನ ಸತ್ಯಾಂಶ ಇದೀಗ ಬೆಳಕಿಗೆ ಬಂದಿದ್ದು, ಲ್ಯಾಬ್ ರಿಪೋರ್ಟ್ ನಲ್ಲಿ ಮಾಂಸದ ರಹಸ್ಯ ಬಯಲಾಗಿದೆ.
ಮಾಂಸದ ಸ್ಯಾಂಪಲ್ ಟೆಸ್ಟಿಂಗ್ ವರದಿಯನ್ನು ಆಹಾರ ಇಲಾಖೆ ಪ್ರಕಟಿಸಿದೆ. ಇದು ನಾಯಿ ಮಾಂಸ ಅಲ್ಲ, ಶಿರೋಹಿ ತಳಿಯ ಕುರಿ ಮಾಂಸ ಎಂದು ವರದಿ ತಿಳಿಸಿದೆ.
ನಾಯಿ ಮಾಂಸವನ್ನು ತರಿಸಲಾಗುತ್ತಿದೆ ಎಂದು ಪುನೀತ್ ಕೆರೆಹಳ್ಳಿ ಆ್ಯಂಡ್ ಟೀಮ್ ಹಬ್ಬಿಸಿದ್ದ ಸುಳ್ಳು ವ್ಯಾಪಕವಾಗಿ ಹರಡಿತ್ತು. ಇದರಿಂದಾಗಿ ಮಟನ್ ಅಂಗಡಿ ಹೊಟೇಲ್ ಗಳಿಗೆ ಹೋಗಲು ಸಾರ್ವಜನಿಕರು ಹಿಂದೇಟು ಹಾಕುವಂತಾಗಿತ್ತು.
ಕುರಿ ಮಾಂಸದ ಜತೆ ನಾಯಿ ಮಾಂಸ ಬೆರೆಸಲಾಗಿದೆ ಎಂಬ ಆರೋಪ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ರಾಷ್ಟ್ರೀಯ ಮಟ್ಟದಲ್ಲೂ ಇದು ಸುದ್ದಿಯಾಗಿತ್ತು. ಸದ್ಯ ಲ್ಯಾಬ್ ರಿಪೋರ್ಟ್ನಲ್ಲಿ ಕುರಿ ಮಾಂಸ ಅನ್ನೋದು ದೃಢವಾಗಿದ್ದು, ಮಾಂಸದ ಬಗ್ಗೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಸ್ಪಷ್ಟನೆ ನೀಡಿದೆ.
ಪುನೀತ್ ಕೆರೆಹಳ್ಳಿ ವಿರುದ್ಧ ಕ್ರಮ ಸಾಧ್ಯತೆ!
ಕುರಿ ಮಾಂಸವನ್ನು ನಾಯಿಯ ಮಾಂಸ ಅಂತ ಅಪಪ್ರಚಾರ ನಡೆಸಿ ವ್ಯಾಪಾರಿಗಳಿಗೆ ನಷ್ಟ ಉಂಟು ಮಾಡಿರುವ ಪುನೀತ್ ಕೆರೆಹಳ್ಳಿ ಹಾಗೂ ತಂಡದ ವಿರುದ್ಧ ಕ್ರಮಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಸುಳ್ಳು ವದಂತಿಗಳನ್ನು ಹಬ್ಬಿಸಿ ಸಾರ್ವಜನಿಕ ಸ್ಥಳದಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಸಿದ್ದಲ್ಲದೇ, ಸಂಶಯದ ವಾತಾವರಣ ಸೃಷ್ಟಿಸಲಾಗಿತ್ತು. ಮಾಂಸ ವ್ಯಾಪಾರಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಕಂಡು ಬಂದಿದೆ.
ಹೈದರಾಬಾದ್ನ ನ್ಯಾಷನಲ್ ಮೀಟ್ ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ಪರೀಕ್ಷೆ ಮಾಡಲಾಗಿದೆ. ಲ್ಯಾಬ್ ನಲ್ಲಿ S Ovis Aries ಎಂದು ಕುರಿಯ ವೈಜ್ಞಾನಿಕ ಹೆಸರನ್ನು ನೀಡಲಾಗಿದೆ. ಈ ಮೂಲಕ ಇದು ಕುರಿ ಮಾಂಸವೇ ಎನ್ನುವುದು ಸಾಬೀತಾಗಿರುವುದಾಗಿ ಇಲಾಖೆ ಆಯುಕ್ತ ಶ್ರೀನಿವಾಸ್ ಅಧಿಕೃತವಾಗಿ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth