PUC ನಂತರ ಮುಂದೇನು? | ಔಷಧ ವಿಜ್ಞಾನ ಕೈ ಚಾಚಿ ಕರೆಯುತ್ತಿದೆ - Mahanayaka

PUC ನಂತರ ಮುಂದೇನು? | ಔಷಧ ವಿಜ್ಞಾನ ಕೈ ಚಾಚಿ ಕರೆಯುತ್ತಿದೆ

what next after puc
27/06/2023

  • ರವಿನಂದನ್ ಎ.ಪಿ.

Pharm, MBA, FSASS, (Ph.D.)

“ವೈದ್ಯರು ಔಷಧಿಯ ಮೂಲಕ ರೋಗಿಗೆ ಜೀವ ನೀಡುತ್ತಾರೆ. ಆದರೆ, ಒಬ್ಬ ಫಾರ್ಮಸಿಸ್ಟ್ ಔಷಧಿಗಳಿಗೆ ಜೀವ ಕೊಡುತ್ತಾನೆ, ಹಾಗಾಗಿ, ಔಷಧಿಕಾರನಾಗಿ ಹೆಮ್ಮೆ ಪಡಬೇಕು”


ಈಗಷ್ಟೇ ದ್ವಿತೀಯ ವರ್ಷದ ವಿದ್ಯಾರ್ಥಿಗಳು ತಮ್ಮ ವಾರ್ಷಿಕ ಪರೀಕ್ಷೆಯನ್ನು ಸಾಕಷ್ಟು ಶ್ರಮಪಟ್ಟು, ಓದಿ, ಬರೆದು ಉತ್ತಮ ಪಾಲಿತಾಂಶವನ್ನುಪಡೆದ್ದಿದ್ದೀರ. ಹೀಗಾಗಿ ನಿಮಗೆ ಅಭಿನಂದನೆಗಳು. ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಮುಂದಿನ ವಿದ್ಯಾಭ್ಯಾಸದ ಬಗ್ಗೆ ಗೊಂದಲದಲ್ಲಿ ಇರುತ್ತಾರೆ. ಶ್ರಮಪಟ್ಟು ಗಮನವಿಟ್ಟು ಓದುವ ವಿದ್ಯಾರ್ಥಿಗಳಿಗೆ ಯಾವುದೇ ಕೋರ್ಸ್ ಗಳು ಕೈ ಹಿಡಿಯುತ್ತವೆ. ಕೋವಿಡ್ –- 19 ಎಂಬ ಹೆಮ್ಮಾರಿ ರೋಗ ಬಂದ ನಂತರ ವೈದ್ಯಕೀಯ ಮತ್ತು ಆರೋಗ್ಯ ಸಂಭಂದಿತ ಕೋರ್ಸ್ ಗಳಿಗೆ ಸಾಕಷ್ಟು ಬೇಡಿಕೆ ಬಂದಿದೆ.

ಸಾಮಾನ್ಯವಾಗಿ ಆರೋಗ್ಯ ಎಂದ ತಕ್ಷಣ ಜನರಿಗೆ ಮನಸ್ಸಿನಲ್ಲಿ ಬರುವುದು ವೈದ್ಯಕೀಯ ಕೋರ್ಸಗಳು ಮಾತ್ರ. ಬಹಳಷ್ಟು ಜನರಿಗೆ ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಫಾರ್ಮಸಿ, ನರ್ಸಿಂಗ್ ಕೋರ್ಸಗಳು ಮತ್ತು ಅದರ ಉದ್ಯೋಗ ಅವಕಾಶಗಳ ಬಗ್ಗೆ ಕಡಿಮೆ ತಿಳಿದಿರುತ್ತಾರೆ. ಈ ಲೇಖನದಲ್ಲಿ ಫಾರ್ಮಸಿ ಅಥವಾ ಔಷಧ ವಿಜ್ಞಾನದ ಬಗ್ಗೆ ಮಾಹಿತಿಯನ್ನು ಒದಗಿಸಿರುತ್ತದೆ.

ನಮ್ಮ ಭಾರತ ದೇಶದಲ್ಲಿ ಪ್ರಸ್ತುತ ಈ ಕೆಳಕಂಡ ಫಾರ್ಮಸಿ ಕೋರ್ಸಗಳು ಲಭ್ಯವಿರುತ್ತವೆ.

1) ಎರಡು ವರ್ಷಗಳ ಡಿಪ್ಲೋಮ ಇನ್ ಫಾರ್ಮಸಿ (ಡಿ. ಫಾರ್ಮ)

2) ನಾಲ್ಕು ವರ್ಷಗಳ ಪದವಿ ಕೋರ್ಸ – ಬ್ಯಾಚುಲರ್ ಆಪ್ ಫಾರ್ಮಸಿ (ಬಿ.ಫಾರ್ಮ)

3)  ಆರು ವರ್ಷಗಳ ಡಾಕ್ಟರ್ ಆಫ್ ಫಾರ್ಮಸಿ (ಫಾರ್ಮ.ಡಿ)

4) ಇನ್ನು ಸ್ನಾತಕೋತ್ತರ ಪದವಿಗಳಾದರೆ ಎರಡು ವರ್ಷಗಳ ಮಾಸ್ಟರ್ ಆಫ್ ಫಾರ್ಮಸಿ (ಎಂ.ಫಾರ್ಮ)ಮತ್ತು ಉನ್ನತ ವಿದ್ಯಾಭ್ಯಾಸದ ಡಾಕ್ಟರ್ ಆಫ್ ಫಿಲಾಸಫಿ (ಪಿ.ಎಚ್.ಡಿ)

ಈ ಮೇಲ್ಕಂಡ ಕೋರ್ಸಗಳನ್ನು ಸೇರಲು ಪಿಯುಸಿಯಲ್ಲಿ ವಿಜ್ಞಾನ ವಿಷಯದ ಬಗ್ಗೆ ಓದಿರಬೇಕು.

ಯಾವುದೇ ಫಾರ್ಮಸಿ ಕೋರ್ಸ್ ಗೆ ಸರ್ಕಾರಿ ಅಥವಾ ಖಾಸಗಿ ಕಾಲೇಜುಗಳಲ್ಲಿ ಅಥವಾ ವಿಶ್ವವಿದ್ಯಾನಿಲಯಗಳಲ್ಲಿ ದಾಖಲಾಗಬಹುದು. ಪ್ರವೇಶಕ್ಕಾಗಿ ಎರಡು ರೀತಿಯ ಆಯ್ಕೆಗಳು ಇವೆ. ಮೊದಲನೆಯದ್ದು ಪ್ರವೇಶ ಪರೀಕ್ಷೆಯ ಮೂಲಕ (ಸಿಇಟಿ). ಎರಡನೆಯದ್ದು, ನೇರ ಪ್ರವೇಶ ಅಂದರೆ ನಿರ್ವಹಣಾ ಕೋಟದ (ಮ್ಯಾನೇಜ್ಮೆಂಟ್) ಮೂಲಕ ಪ್ರವೇಶ ಪಡೆಯಬಹುದು.

ಈ ಫಾರ್ಮಸಿ ಕೋರ್ಸಗಳಿಗಾಗಿ ನಮ್ಮ ದೇಶದಲ್ಲಿ ಸಾಕಷ್ಟು ಉತ್ತಮ ಕಾಲೇಜುಗಳಿವೆ. ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಪ್ರವೇಶ ಪಡೆಯುವುದಕ್ಕಿಂತ ಮುಂಚೆ ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ಮತ್ತು ವಿಶ್ವವಿದ್ಯಾನಿಲಯದ ಮಾನ್ಯತೆ ಬಗ್ಗೆ ಪರಿಶೀಲಿಸಬೇಕು ಮತ್ತು ಕಾಲೇಜಿನಲ್ಲಿರುವ ಶಿಕ್ಷಕರ ಸಂಖ್ಯೆ, ಪ್ರಯೋಗಾಲಯ ಮತ್ತು ಇತರೆ ಸೌಲಭ್ಯಗಳನ್ನು ಖುದ್ದು ಭೇಟಿ ನೀಡಿ ಖಾತ್ರಿ ಪಡಿಸಿ ಕೊಳ್ಳಬೇಕೆಂಬುದು ನಮ್ಮ ಸಲಹೆ.

ಬಹಳಷ್ಟು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಫಾರ್ಮಡಿ ಕೋರ್ಸ್ ನ ಬಗ್ಗೆ ತಿಳಿದುಕೊಳ್ಳಲು ಕಾತುರದಲ್ಲಿರುತ್ತಾರೆ. ಭಾರತ ಸರ್ಕಾರ ಮತ್ತು ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ ಸಹಭಾಗಿತ್ವದಲ್ಲಿ 2008 ನೇ ಇಸವಿಯಲ್ಲಿ ಫಾರ್ಮಡಿ ಕೋರ್ಸ ಅನ್ನು ಪ್ರಾರಂಭಿಸಲಾಯಿತು. ಈ ಕೋರ್ಸ 6 ಶೈಕ್ಷಣಿಕ ವರ್ಷಗಳ ಅವಧಿಯಾಗಿದ್ದು ಅದರಲ್ಲಿ 5 ವರ್ಷಗಳು (ಹಂತ 1) ಶೈಕ್ಷಣಿಕ ಕಾರ್ಯಕ್ರಮ ಮತ್ತು 1 ವರ್ಷ (ಹಂತ 2 ) ಇಂಟರ್ನ್ ಶಿಫ್ ಕಾರ್ಯಕ್ರಮದಿಂದ ಕೂಡಿರುತ್ತದೆ. ಈ ಕೋರ್ಸ ಮುಗಿದ ನಂತರ ವಿದ್ಯಾರ್ಥಿಗಳು ತಮ್ಮ ಹೆಸರಿಗೆ ಡಾಕ್ಟರ್ (ಡಾ.) ಪೂರ್ವಪದ ಸೇರಿಸಬಹುದು. ಆದರೆ ಅವರು ರೋಗ ನಿರ್ಣಯ ಮತ್ತು ಔಷಧಿಗಳನ್ನು ಬರೆಯುವ ಅಥವಾ ಸೂಚಿಸುವ ಹಕ್ಕುಗಳು ಇರುವುದಿಲ್ಲ.

ಬಿ.ಫಾರ್ಮ ಕೈಗಾರಿಕಾ ಆಧಾರಿತ ಪಠ್ಯಕ್ರಮದಿಂದ ರಚಿಸಲ್ಪಟ್ಟಿರುತ್ತದೆ. ಫಾರ್ಮ ಡಿ ವೈದ್ಯಕೀಯ ಆಧಾರಿತ ವಿಷಯಗಳಿಂದ ರಚಿಸಲ್ಪಟ್ಟಿರುತ್ತದೆ. ಈ ಎರಡು ಕೋರ್ಸಗಳು ಉತ್ತಮ ವೃತ್ತಿಪರ ಕೋರ್ಸಗಳಾಗಿ ಗುರುತಿಸಲ್ಪಟ್ಟಿದೆ.

ಈ ಮೇಲ್ಕಂಡ ಯಾವುದೇ ಕೋರ್ಸ ಮುಗಿದ ನಂತರ ಆಯಾ ಪದವೀಧರರು ಆಯಾ ರಾಜ್ಯಗಳ ಔಷಧ ಪರಿಷತ್ ನಲ್ಲಿ (ಫಾರ್ಮಸಿ ಕೌನ್ಸಿಲ್)ಔಷಧೀಕಾರರರಾಗಿ ನೋಂದಾಯಿಸಬೇಕು. ಉದಾಹರಣೆಗೆ ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಔಷಧ ಪರಿಷತ್ (ಕೆ ಎಸ್ ಪಿ ಸಿ).

ಡಿ ಫಾರ್ಮ ವಿದ್ಯಾರ್ಥಿಗಳು ಸ್ವಂತ ಔಷಧದ ಅಂಗಡಿ (ಮೆಡಿಕಲ್ ಸ್ಟೋರ್ ) ತೆರೆಯಬಹುದು. ಸರಣಿ ಫಾರ್ಮಸಿಗಳಾದ ಅಪ್ಪೋಲೋ ಅಥವಾ ಮೆಡ್ ಪ್ಲಸ್ ಔಷಧದ ಅಂಗಡಿಗಳಲ್ಲಿ ಮುಖ್ಯ ಔಷಧೀಕಾರರಾಗಿ (ಫಾರ್ಮಸಿಸ್ಟ್) ಕನಿಷ್ಠ 15 ರಿಂದ 25 ಸಾವಿರದ ವರೆಗೆ ತಿಂಗಳಿಗೆ ಸಂಪಾದಿಸಬಹುದು.

ಬಿ ಫಾರ್ಮ ಪದವೀಧರರಿಗೆ ಔಷಧ ಉತ್ಪಾದನೆ (ಪ್ರೊಡಕ್ಷನ್) ಘಟಕ ಔಷಧ ಸೂತ್ರೀಕರಣ ಮತ್ತು ಅಭಿವೃದ್ಧಿ (ಎಪ್ & ಡಿ) ಔಷಧ ಗುಣಮಟ್ಟದ ನಿಯಂತ್ರಣ ಮತ್ತು ಭರವಸೆ (ಕ್ಯೂ ಎ & ಸಿ ) ವಿಭಾಗದಲ್ಲಿ ಹೇರಳವಾದ ಅವಕಾಶವಿದೆ. ಬಿ ಫಾರ್ಮ ಮತ್ತು ಡಿ ಫಾರ್ಮ ಪದವೀಧರರು ಔಷಧಗಳ ತಯಾರಿಕಾ ಕಂಪನಿಯ ವೈದ್ಯಕೀಯ ಪ್ರತಿನಿಧಿಗಳಾಗಿ (ಎಂ ಆರ್) ಸಹ ಉತ್ತಮ ಸಂಬಳ ಪಡೆಯಬಹುದು.

ಇನ್ನು ಸರ್ಕಾರಿ ಕೆಲಸಗಳಾದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಫಾರ್ಮಸಿ ಅಧಿಕಾರಿಗಳಾಗಿ, ಫಾರ್ಮಸಿಸ್ಟ್ ಔಷಧ ಪರೀಕ್ಷಾಧಿಕಾರಿ (ಡ್ರಗ್ ಇನ್ಸ್ಪೆಕ್ಟರ್) ಸಹಾಯಕ ಔಷಧ ನಿಯಂತ್ರಕ (ಅಸಿಸ್ಟಂಟ್ ಡ್ರಗ್ ಕಂಟ್ರೋಲರ್) ವಿಭಾಗ ಮತ್ತು ಸಂಶೋಧಕರಾಗಿ ಕೆಲಸ ನಿರ್ವಹಿಸಬಹುದು.

ಬಿ ಫಾರ್ಮ ಮತ್ತು ಫಾರ್ಮ ಡಿ ಪದವೀಧರರು ಫಾರ್ಮಸಿ ಕಾಲೇಜುಗಳಲ್ಲಿ ಶಿಕ್ಷಕ ಅಥವಾ ಉಪನ್ಯಾಸಕ ಅಥವಾ ಸಹಾಯಕ ಪ್ರಾದ್ಯಾಪಕ,  ಪ್ರಾದ್ಯಾಪಕ, ಪ್ರಾಚಾರ್ಯರಾಗಿ (ಪ್ರಿನ್ಸಿಪಾಲ್) ಕಾರ್ಯ ನಿರ್ವಹಿಸಬಹುದು.

ತತ್ವ ಶಾಸ್ತ್ರದ ವೈದ್ಯರು (ಪಿ ಎಚ್ ಡಿ) ಸ್ನಾತಕೋತ್ತರ ಪದವೀಧರರು (ಎಂ ಫಾರ್ಮ್) ಮತ್ತು ಫಾರ್ಮಡಿ ಪದವೀಧರರು ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ ಫಾರ್ಮಕೋವಿಜಿಲೆನ್ಸ್ ಅಥವಾ ಔಷಧ ಉಪಚಾರ ಕ್ಲಿನಿಕಲ್ ಡೇಟಾ ಮ್ಯಾನೇಜ್ಮೆಂಟ್ ಮತ್ತು ಔಷಧ ನಿಯಂತ್ರಕ ವ್ಯವಹಾರಗಳಲ್ಲಿ ಉನ್ನತ ಶ್ರೇಣಿ ಅಧಿಕಾರಿಗಳಾಗಿ ಕೆಲಸ ಮಾಡಬಹುದು.

ಇದಲ್ಲದೆ ಫಾರ್ಮಸಿ ವಿದ್ಯಾರ್ಥಿಗಳು ಅಭಿವೃದ್ಧಿ ಹೊಂದಿದ ರಾಷ್ತ್ರಗಳಲ್ಲಿ ಹೆಚ್ಚಿನ ಉನ್ನತ ವ್ಯಾಸಂಗವನ್ನು ಸಹ ಮಾಡಬಹುದು ಮತ್ತು ಆ ದೇಶಗಳಲ್ಲಿ ಫಾರ್ಮಸಿ ವಿದ್ಯಾರ್ಥಿಗಳಿಗೆ ಬಹಳಷ್ಟು ಬೇಡಿಕೆ ಇದ್ದು, ಹೆಚ್ಚಿನ ಉದ್ಯೋಗಾವಕಾಶಗಳು ಇವೆ.

ಕೊನೆಯದಾಗಿ ಫಾರ್ಮಸಿ ಕೋರ್ಸ್ ಓದಿದ ಯಾವುದೇ ಪದವೀಧರರು ಸ್ವತಂತ್ರವಾಗಿ ಉದ್ಯೋಗ ಮಾಡಲು ಇಚ್ಛಿಸುವವರು ಸಮುದಾಯ ಫಾರ್ಮಸಿಸ್ಟ್ ಅಂದರೆ ಮೆಡಿಕಲ್ ಸ್ಟೋರ್ ಮತ್ತು ಸಗಟು ವ್ಯಾಪಾರ ಮತ್ತು ವಿತರಕರಾಗಿ ತಮ್ಮ ಜೀವನವನ್ನು ಸ್ವತಂತ್ರವಾಗಿ ನಡೆಸಬಹುದು.

ಕೊನೆಯದಾಗಿ ನಿಮಗೆ ಧನ್ಯವಾದಗಳು ಮತ್ತು ಮುಂಚಿತವಾಗಿ ನಿಮ್ಮ ಭವಿಷ್ಯಕ್ಕಾಗಿ ಶುಭಾಶಯಗಳು.


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ