ನೀನು ಬಾಂಬರಾ?: ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿಸಿದ ವಾಟ್ಸಾಪ್ ಚಾಟ್!
ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯುವಕ- ಯುವತಿಯಬ್ಬರ ನಡುವೆ ನಡೆದ ವಾಟ್ಸಾಪ್ ಚಾಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಾಗಿದೆ.
ಯುವತಿ ಸಿಮ್ರಾನ್ ಟಾಮ್ (23) ಹಾಗೂ ಯುವಕ ದೀಪಯನ್ ಮಾಜಿ(23) ಎಂಬುವವರ ವಿರುದ್ಧ ಐಪಿಸಿ ಸೆಕ್ಷನ್ 505, 1ಬಿ ಮತ್ತು ಸಿಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉತ್ತರ ಪ್ರದೇಶದ ಗಾಝಿಯಾಬಾದ್ ನಿವಾಸಿಗಳಾದ ಸಿಮ್ರಾನ್ ಹಾಗೂ ದೀಪಯನ್ ಕಳೆದ ಮೂರು ದಿನಗಳ ಹಿಂದೆ ಉಡುಪಿಯ ಮಣಿಪಾಲಕ್ಕೆ ಬಂದಿದ್ದರು. ಮಣಿಪಾಲದಲ್ಲಿ ಈ ಹಿಂದೆ ವಿದ್ಯಾಭ್ಯಾಸ ಮಾಡಿದ್ದ ದೀಪಯನ್ ತನ್ನ ಸ್ನೇಹಿತೆ ಎಂದು ಹೇಳಿಕೊಂಡಿರುವ ಸಿಮ್ರಾನ್‌ರನ್ನು ಕಾಲೇಜು ತೋರಿಸುವ ಸಲುವಾಗಿ ಮಣಿಪಾಲಕ್ಕೆ ಕರೆತಂದಿದ್ದ.
ಕೆಲ ದಿನ ಮಣಿಪಾಲದ ಆಸುಪಾಸಿನಲ್ಲಿ ಇವರಿಬ್ಬರು ಸುತ್ತಾಡಿದ್ದು, ನಿನ್ನೆ ಬೆಳಗ್ಗೆ ಬೆಂಗಳೂರು ಮೂಲಕ ಚೆನ್ನೈಗೆ ಸಿಮ್ರಾನ್ ಹೊರಟಿದ್ದರೆ, ದೀಪಯನ್ ಮುಂಬೈ ಮೂಲಕ ವಡೋದರಕ್ಕೆ ತೆರಳಲು ಮಂಗಳೂರು ಏರ್‌ಪೋರ್ಟ್‌ಗೆ ಆಗಮಿಸಿದ್ದರು. ದೀಪಯನ್ ಹತ್ತಿದ್ದ ವಿಮಾನ ಇನ್ನೇನು ಟೇಕ್ ಆಫ್‌ಗೆ ರೆಡಿ ಆಗಿದ್ದಾಗ, ಬೋರ್ಡಿಂಗ್ ನಲ್ಲಿದ್ದ ಸಿಮ್ರಾನ್ ಮೆಸೇಜ್ ಕಳುಹಿಸಿದ್ದು ‘ಇಷ್ಟೊಂದು ಜನ ಮುಸ್ಲಿಮರ ಜೊತೆ ಹೋಗುತ್ತಿದ್ದೀಯ, ನೀನು ಬಾಂಬರಾ’ ಅಂತಾ ಮೆಸೇಜ್ ನಲ್ಲಿ ಕೇಳಿದ್ದಳು.
ಸಿಮ್ರಾನ್ ಮೆಸೇಜ್ ನೋಡಿದ ಪಕ್ಕದಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ಗಾಬರಿಗೊಂಡು ಏರ್ ಪೋರ್ಟ್ ಅಥಾರಿಟಿಗೆ ಅಲರಾಮ್ ನೀಡಿದ್ದರು. ತಕ್ಷಣ ಮುಂಬೈಗೆ ಹೊರಟಿದ್ದ ವಿಮಾನವನ್ನು ಐಸೋಲೇಷನ್ ಮಾಡಲಾಗಿತ್ತು. ಎಲ್ಲಾ ಪ್ರಯಾಣಿಕರನ್ನು ಇಳಿಸಿ ತಪಾಸಣೆ ಮಾಡಿ, ಬಳಿಕ ಮೂರು ಗಂಟೆ ತಡವಾಗಿ ವಿಮಾನ ಹೊರಟಿತ್ತು.
ಈ ಬಗ್ಗೆ ಇಂಡಿಯೋ ವಿಮಾನ ಸಂಸ್ಥೆಯ ಮ್ಯಾನೇಜರ್ ಬಜ್ಪೆ ಠಾಣೆಯಲ್ಲಿ ದೂರು ನೀಡಿದ್ದು, ದೂರಿನಲ್ಲಿ ಸಂದೇಶದಲ್ಲಿ ರವಾನೆಯಾಗಿರುವ ಅಂಶವನ್ನು ಉಲ್ಲೇಖಿಸಲಾಗಿದೆ. ಅದರಂತೆ ಪೊಲೀಸರು ಯುವಕ ಹಾಗೂ ಯುವತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka