ವಾಟ್ಸಾಪ್ ಗ್ರಾಹಕರಿಗೆ ಖಾಸಗಿತನದ ಭೀತಿ! | ಈ ನಿಯಮ ಒಪ್ಪಿಕೊಳ್ಳಲೇ ಬೇಕು ಎಂದ ವಾಟ್ಸಾಪ್
ನವದೆಹಲಿ: ವಾಟ್ಸಾಪ್ ತೊರೆದು ಜನರು ಸಿಗ್ನಲ್, ಟೆಲಿಗ್ರಾಮ್ ಕಡೆಗೆ ವಾಲುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಏನೆಂದರೆ, ವಾಟ್ಸಾಪ್ ಗ್ರಾಹಕರಿಗೆ ನೇರವಾಗಿ ವಾರ್ನಿಂಗ್ ನೀಡಿದ್ದು, ನಮ್ಮ ಖಾಸಗಿ ನಿಯಮಗಳನ್ನು ನೀವು ಒಪ್ಪಿಕೊಳ್ಳಬೇಕು ಇಲ್ಲದಿದ್ದರೆ, ನೀವು ವಾಟ್ಸಾಪ್ ಬಿಟ್ಟು ಹೋಗಿ ಎಂದು ಸಂದೇಶ ರವಾನಿಸಿದೆ.
ವಾಟ್ಸಾಪ್ ತನ್ನ ಹೊಸ ಷರತ್ತುಗಳಲ್ಲಿ, ಬಳಕೆದಾರರ ಖಾಸಗಿ ಮಾಹಿತಿಗಳನ್ನು ಫೇಸ್ ಬುಕ್ ಪೇಮೆಂಟ್ಸ್ ಇಂಕ್, ಫೇಸ್ ಬುಕ್ ಪೇಮೆಂಟ್ಸ್ ಇಂಟರ್ ನ್ಯಾಷನಲ್ ಇ., ಒನಾವೋ, ಫೇಸ್ ಬುಕ್ ಟೆಕ್ನಾಲಜಿಸ್, ಎಲ್ ಎಲ್ ಸಿ ಆ್ಯಂಡ್ ಫೇಸ್ ಬುಕ್ ಟೆಕ್ನಾಲಜಿಸ್ ಐರ್ಲೆಂಡ್ ಲಿ., ವಾಟ್ಸಾಪ್ ಇಂಕ್ ಮತ್ತು ಕ್ರೌಡ್ ಟ್ತಾಂಗಲ್ ನೊಂದಿಗೆ ಹಂಚಿಕೊಳ್ಳಬೇಕು ಎಂದು ಹೇಳಿದೆ.
ವಾಟ್ಸಾಪ್ ತನ್ನ ಬಳಕೆದಾರರ ಖಾಸಗಿ ಮಾಹಿತಿಯನ್ನು ಪಡೆಯಲು ಮುಂದಾಗಿದೆ. ಜೊತೆಗೆ ನಿಮಗೆ ಬೇಕಿದ್ದರೆ ವಾಟ್ಸಾಪ್ ಬಳಸಿ ಇಲ್ಲವಾದರೆ ಹೊರ ನಡೆಯಿರಿ ಎಂದು ನೇರವಾಗಿ ಹೇಳಿದೆ. ಇದರಿಂದ ಗ್ರಾಹಕರು ತೀವ್ರವಾಗಿ ಆಕ್ರೋಶಗೊಂಡಿದ್ದಾರೆ.
ವಾಟ್ಸಾಪ್ ನ ಈ ಹೊಸ ನೀತಿ 2021 ಫೆ.8ರಿಂದ ಜಾರಿಗೆ ಬರಲಿದೆ. ಅಲ್ಲಿಯವರೆಗೆ ಗ್ರಾಹಕರಿಗೆ ಅಪ್ ಡೇಟ್ ನೀಡುವ ಮೂಲಕ ತನ್ನ ಹೊಸ ಷರತ್ತುಗಳಿಗೆ ಒಪ್ಪಿಗೆ ಪಡೆಯುವ ಕೆಲಸಕ್ಕೆ ವಾಟ್ಸಾಪ್ ಕೈ ಹಾಕಿದೆ. ಗ್ರಾಹಕರು ವಾಟ್ಸಾಪ್ ಗೆ ತಮ್ಮ ಖಾಸಗಿ ಮಾಹಿತಿಗಳು ನೀಡಿದರೆ, ಹಲವಾರು ಸಮಸ್ಯೆಗಳಿಗೆ ಸಿಲುಕಿಕೊಳ್ಳುವ ಹಾಗೂ ತಮ್ಮ ಗೌಪ್ಯತೆಗೆ ಧಕ್ಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳುತ್ತಿದ್ದಾರೆ.
ವಾಟ್ಸಾಪ್ ನ ಹೊಸ ನೀತಿಯಿಂದ ಬೇಸತ್ತು ಇದೀಗ ವಾಟ್ಸಾಪ್ ಬಳಕೆದಾರರು ಟೆಲಿಗ್ರಾಮ್ ಹಾಗೂ ಸಿಗ್ನಲ್ ಎಂಬ ಹೊಸ ಸಾಮಾಜಿಕ ಜಾಲತಾಣಗಳತ್ತ ಸಾಗಿದ್ದಾರೆ. ಸಿಗ್ನಲ್ ಹಾಗೂ ಟೆಲಿಗ್ರಾಮ್ ವಾಟ್ಸಾಪ್ ಗಿಂತ ಹೆಚ್ಚು ಸಹಕಾರಿಯಾಗಿದೆ ಮತ್ತು ಬಳಕೆದಾರರ ಖಾಸಗಿತನವನ್ನುಕಾಪಾಡುತ್ತದೆ ಎಂದು ಗ್ರಾಹಕರು ಅಭಿಪ್ರಾಯಪಟ್ಟಿದ್ದಾರೆ.