ಮುಸ್ಲಿಮರು, ದಲಿತರ ಸ್ವಾಭಿಮಾನದ ವಿಚಾರ ಬಂದಾಗ ಕಾಂಗ್ರೆಸ್ ನಾಯಕರು “ಕೈಕಟ್ ಬಾಯ್ ಮುಚ್ಚ್”! - Mahanayaka
6:27 PM Thursday 21 - November 2024

ಮುಸ್ಲಿಮರು, ದಲಿತರ ಸ್ವಾಭಿಮಾನದ ವಿಚಾರ ಬಂದಾಗ ಕಾಂಗ್ರೆಸ್ ನಾಯಕರು “ಕೈಕಟ್ ಬಾಯ್ ಮುಚ್ಚ್”!

congress
26/12/2023

ಬಿಜೆಪಿಯ ಸಾಮಾಜಿಕ ಅಸಮಾನತೆಯ ನೀತಿಯನ್ನು ವಿರೋಧಿಸಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮುಸಲ್ಮಾನರು, ದಲಿತರು ಕಾಂಗ್ರೆಸ್ ಗೆ ಮತ ಚಲಾಯಿಸಿದ್ದರು. ಆದ್ರೆ ಅಧಿಕಾರಕ್ಕೇರಿದ ಬಳಿಕ ದಲಿತರು ಮತ್ತು ಮುಸ್ಲಿಮರ ಸ್ವಾಭಿಮಾನಕ್ಕೆ ಧಕ್ಕೆ ಬರುವಂತಹ ವಿಚಾರಗಳು ಬಂದಾಗ ಕಾಂಗ್ರೆಸ್ ನ ನಾಯಕರು ಅಕ್ಷರಶಃ “ಕೈಕಟ್ ಬಾಯ್ ಮುಚ್ಚ್” ಎಂಬಂತೆ ವರ್ತಿಸುತ್ತಿದ್ದಾರೆ.

ಇತ್ತೀಚೆಗೆ ಚಿತ್ರ ನಟ ಉಪೇಂದ್ರ ದಲಿತ ಸಮುದಾಯದ ಬಗ್ಗೆ ನೀಡಿದ ಅವಹೇಳನಾಕಾರಿ ಹೇಳಿಕೆಯ ವಿಚಾರ ಬಂದಾಗ ಕಾಂಗ್ರೆಸ್ ನಾಯಕರಲ್ಲೂ ಕೆಲವರು ಇದೊಂದು ಗಾದೆ ಮಾತು ಎಂದು ವಾದಿಸಿದ್ದರು. ಜೊತೆಗೆ ಉಪೇಂದ್ರ ವಿರುದ್ಧ ಕ್ರಮಕೈಗೊಳ್ಳಲು ಉದ್ದೇಶಪೂರ್ವಕ ಎಂಬಂತ ತಡಮಾಡಿದ್ದರು. ಈ ಕಾಲಾವಕಾಶವನ್ನು ಬಳಸಿಕೊಂಡ ಉಪೇಂದ್ರ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ, ಬಂಧನದ ತೂಗಗತ್ತಿಯಿಂದ ಪಾರಾದರು.

ಇದೀಗ ಮುಸ್ಲಿಮ್ ಮಹಿಳೆಯರ ಬಗ್ಗೆ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಅವಹೇಳನಾಕಾರಿಯಾಗಿ ಹೇಳಿಕೆ ನೀಡಿದ್ದಾರೆ. ಈ ವಿಚಾರದಲ್ಲೂ ಕಾಂಗ್ರೆಸ್ ನ ಘಟಾನುಘಟಿ ನಾಯಕರು “ಕೈಕಟ್ ಬಾಯ್ ಮುಚ್ಚ್” ಎಂಬಂತೆ ವರ್ತಿಸುತ್ತಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಮಂಡ್ಯದಲ್ಲಿ ಹನುಮ ಶೋಭಾ ಯಾತ್ರೆಯಲ್ಲಿ ಮಾತನಾಡಿದ್ದ ಕಲ್ಲಡ್ಕ ಪ್ರಭಾಕರ್ ಭಟ್, ಹಿಂದೆ ತಲಾಕ್ ತಲಾಕ್ ಎಂದು ಹೇಳಿ ಕೈತೊಳೆದುಕೊಳ್ಳುತ್ತಿದ್ದರು. ದಿನಕ್ಕೊಬ್ಬ ಗಂಡ ಬದಲಾಗ್ತಿದ್ದ, ನಿಮಗೆ ಪರ್ಮನೆಂಟ್ ಗಂಡನನ್ನು ಕೊಟ್ಟಿದ್ದು ಮೋದಿ ಸರ್ಕಾರ. ತಲಾಕ್ ರದ್ದು ಮಾಡಿ ನಿಮಗೆ ಗೌರವಕೊಟ್ಟಿದ್ದು ಹಿಂದೂ ಧರ್ಮ “ ಎಂದು ಮುಸ್ಲಿಮ್ ಮಹಿಳೆಯರ ಬಗ್ಗೆ ಪ್ರಭಾಕರ್ ಭಟ್ ಅವಹೇಳನಾಕಾರಿ ಹೇಳಿಕೆ ನೀಡಿದ್ದಾರೆ.




ಕಾಂಗ್ರೆಸ್ ಸರ್ಕಾರವು ಪುನೀತ್ ಕೆರೆಹಳ್ಳಿ ಮುಂತಾದ ಸಣ್ಣಪುಟ್ಟ ಕೇಸ್ ಗಳನ್ನು ಹಿಡಿದು ದೊಡ್ಡ ಮೊಸಳೆ ಹಿಡಿದಂತೆ ಪೋಸು ಕೊಡುತ್ತಿದ್ದಾರೆ. ಕಲ್ಲಡ್ಕ ಪ್ರಭಾಕರ್ ಭಟ್ ವಿಚಾರಕ್ಕೆ ಕೈ ಹಾಕುವ ಧೈರ್ಯ, ಕಾಂಗ್ರೆಸ್ ಸರ್ಕಾರಕ್ಕಿಲ್ಲ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಕಲ್ಲಡ್ಕ ಪ್ರಭಾಕರ್ ಭಟ್ ಅವರು ನಾನಾ ರೀತಿಯ ಹೇಳಿಕೆಗಳನ್ನು ನೀಡಿದ್ದರು. ಆದ್ರೆ ಅವರನ್ನು ಬಂಧಿಸುವ ಶಕ್ತಿ ಸರ್ಕಾರಕ್ಕೆ ಇರಲಿಲ್ಲ. ಇನ್ನು ಮುಂದೆಯೂ ಇದು ಹೀಗೆ ಮುಂದುವರಿಯಲಿದೆ. ಇದು ಕಾಂಗ್ರೆಸ್ ನಾಯಕರು ಹಾಗೂ ಆರೆಸ್ಸೆಸ್, ಬಿಜೆಪಿಯ ನಡುವಿನ ಮ್ಯಾಚ್ ಫಿಕ್ಸಿಂಗ್ ಎನ್ನುವ ಆಕ್ರೋಶದ ಮಾತುಗಳಿಗೆ ಕಾರಣವಾಗಿದೆ.

ಇತ್ತೀಚಿನ ಸುದ್ದಿ