ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಯಾವಾಗ?: ಡಿ.ಕೆ.ಶಿವಕುಮಾರ್ ಕೊಟ್ರು ಸುಳಿವು
ಬೆಂಗಳೂರು: ಸ್ಥಳೀಯ ನಾಯಕರ ಅಭಿಪ್ರಾಯ ಪಡೆದು ಎಲ್ಲ ಸಮಾಜದವರಿಗೆ ನ್ಯಾಯ ಒದಗಿಸಲು ಟಿಕೆಟ್ ಆಕಾಂಕ್ಷಿಗಳ ಹೆಸರನ್ನು ಶಿಫಾರಸ್ಸು ಮಾಡಿದ್ದೇವೆ. ಕೇಂದ್ರ ಚುನಾವಣಾ ಸಮಿತಿ ದಿನಾಂಕ ನಿಗದಿ ಮಾಡಿದ ನಂತರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ದಿನಗಳಿಂದ ಕಾಂಗ್ರೆಸ್ ಪಕ್ಷ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಸಿದ್ದು, ಈ ಸಭೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿನ ಟಿಕೆಟ್ ಆಕಾಂಕ್ಷಿಗಳ ಅರ್ಜಿಗಳನ್ನು ಪರಿಶೀಲನೆ ಮಾಡಲಾಗಿದೆ. ಈ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲಾಗುವುದು ಎಂದರು.
ಬಿಜೆಪಿಯ ಹಾಲಿ ಎಂಎಲ್ ಸಿ ಪುಟ್ಟಣ್ಣ ಅವರು ಇಂದು ತಮ್ಮ ಎಂ ಎಲ್ಸಿ ಸ್ಥಾನಕ್ಕೆ ಹಾಗೂ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ಪಕ್ಷ ಸೇರಲು ಇಚ್ಛಿಸಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಪುಟ್ಟಣ್ಣ ಅವರ ಕೊಡುಗೆ ಅಪಾರವಾಗಿದೆ. ಬಿಜೆಪಿ ಆಡಳಿತಕ್ಕೆ ಬೇಸತ್ತು, ತಮ್ಮ ಕ್ಷೇತ್ರದ ಜನರಿಗೆ ನ್ಯಾಯ ಒದಗಿಸಲು ಸಾಧ್ಯವಾಗದೇ ಈ ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಅವರ ಈ ತೀರ್ಮಾನಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಯಾವುದೇ ಟಿಕೆಟ್, ಅಧಿಕಾರದ ಆಕಾಂಕ್ಷೆ ಇಲ್ಲದೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದಿದ್ದಾರೆ. ಅವರು ಇನ್ನು ಪಕ್ಷದ ಸದಸ್ಯತ್ವ ಸ್ಥಾನ ಪಡೆದಿಲ್ಲ. ಹೀಗಾಗಿ ಟಿಕೆಟ್ ನೀಡುವ ವಿಚಾರ ಈಗ ಪ್ರಸ್ತುತವಲ್ಲ ಎಂದು ತಿಳಿಸಿದರು.
ಪುಟ್ಟಣ್ಣ ಅವರ ಸೇರ್ಪಡೆಯಿಂದ ಪಕ್ಷದಲ್ಲಿ ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಕೇಳಿದ ಪ್ರಶ್ನೆಗೆ, ಪುಟ್ಟಣ್ಣ ಅವರು ಬಿಜೆಪಿಯ ವಿಧಾನ ಪರಿಷತ್ ಸದಸ್ಯರು. ಚುನಾವಣೆಯಲ್ಲಿ ಅವರ ವಿರುದ್ಧ ನಮ್ಮ ಅಭ್ಯರ್ಥಿ ಕಣಕ್ಕಿಳಿಸಿದ್ದರೂ ಸಾವಿರ ಮತಗಳನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂಬುದು ವಾಸ್ತವ. ಇವರ ಸೇರ್ಪಡೆಯಿಂದ ತಮಗೆ ಸಮಸ್ಯೆ ಆಗಬಹುದು ಎಂಬ ಕಾರಣಕ್ಕೆ ಆಕ್ರೋಶ ಸಹಜ. ಅವರು ಬೇಷರತ್ತಾಗಿ ಪಕ್ಷ ಸೇರಲು ಅರ್ಜಿ ಸಲ್ಲಿಸಲಿದ್ದಾರೆ. ಅವರ ರಾಜೀನಾಮೆ ಸ್ವೀಕೃತವಾದ ನಂತರ ಪಕ್ಷದ ಸದಸ್ಯತ್ವ ನೀಡುತ್ತೇವೆ ಎಂದು ಉತ್ತರಿಸಿದರು.
ಸುಮಲತಾ ಅವರ ಬಿಜೆಪಿ ಸೇರ್ಪಡೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅವರಿಗೆ ಒಳ್ಳೆಯದಾಗಲಿ’ ಎಂದರು.
ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಕ್ಷೇತ್ರಗಳಲ್ಲಿನ ಭಿನ್ನಾಭಿಪ್ರಾಯದ ಬಗ್ಗೆ ಪ್ರತಿಕ್ರಿಯಿಸಿ, ಎಲ್ಲಾ 224 ಕ್ಷೇತ್ರಗಳ ಕುರಿತು ಚರ್ಚೆ ಮಾಡಲಾಗಿದ್ದು, ಎಲ್ಲ ಕ್ಷೇತ್ರಗಳಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗುವುದು. ಅಂತಿಮ ತೀರ್ಮಾನವನ್ನು ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ತೆಗೆದುಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸದಸ್ಯತ್ವ ಮತ್ತು ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪುಟ್ಟಣ್ಣ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಮ್ ಅಹ್ಮದ್, ಸಂಸದ ಡಿ ಕೆ ಸುರೇಶ್, ಕೆಪಿಸಿಸಿ ಸಂವಹನ ಮತ್ತು ಜಾಲತಾಣ ವಿಭಾಗದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ, ಎಂಎಲ್ಸಿ ಎಸ್ ರವಿ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw