ಉಡುಪಿಯಲ್ಲಿ ನಾಲ್ವರ ಹತ್ಯೆಯ ನಂತರ ಆರೋಪಿ ತಪ್ಪಿಸಿಕೊಂಡು ಹೋಗಿದ್ದು ಎಲ್ಲಿಗೆ? | ರಕ್ತದ ಕಲೆ ಇದ್ದ ಬಟ್ಟೆಯಲ್ಲೇ ಎಸ್ಕೇಪ್‌ ಆಗಿದ್ದ! - Mahanayaka

ಉಡುಪಿಯಲ್ಲಿ ನಾಲ್ವರ ಹತ್ಯೆಯ ನಂತರ ಆರೋಪಿ ತಪ್ಪಿಸಿಕೊಂಡು ಹೋಗಿದ್ದು ಎಲ್ಲಿಗೆ? | ರಕ್ತದ ಕಲೆ ಇದ್ದ ಬಟ್ಟೆಯಲ್ಲೇ ಎಸ್ಕೇಪ್‌ ಆಗಿದ್ದ!

praveen arun chowgale
18/11/2023

ಉಡುಪಿ ಜಿಲ್ಲೆಯ ನೇಜಾರಿನ ತೃಪ್ತಿ ಲೇಔಟ್‌ ನಲ್ಲಿ ತಾಯಿ ಮತ್ತು ಮೂವರು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯ ಶಾಕ್‌ ನಿಂದ ಜನ ಇನ್ನೂ ಎಚ್ಚೆತ್ತುಕೊಂಡಿಲ್ಲ. ಆರೋಪಿ ಮಂಗಳೂರು ಏರ್ ಇಂಡಿಯಾ ಎಕ್ಸ್ಪ್ರೆಸ್ ಉದ್ಯೋಗಿ ಪ್ರವೀಣ್ ಅರುಣ್ ಚೌಗುಲೆ  ಈ ಬರ್ಬರ ಹತ್ಯೆಗೆ ಮಾಡಿದ್ದ ಪ್ಲಾನ್‌ ಅಂತೂ ಬೆಚ್ಚಿಬೀಳಿಸುವಂತಿದೆ.

ಮಾಜಿ ಪೊಲೀಸ್‌ ಅಧಿಕಾರಿಯೂ ಆಗಿದ್ದ ಪ್ರವೀಣ್ ಅರುಣ್ ಚೌಗುಲೆ, ಕೊಲೆ ನಡೆಸಿದರೆ ಸಾಕ್ಷ್ಯಾಧಾರಗಳಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎನ್ನುವುದನ್ನು ಮೊದಲೇ ಯೋಜನೆ ರೂಪಿಸಿಕೊಂಡಿದ್ದ ಎನ್ನುವುದು ತನಿಖೆ ವೇಳೆ ಬಯಲಾಗಿದೆ.

ತನ್ನ ಮುಖ ಪರಿಚಯ ಸಿಗದ ಬಾರದೆಂಬ ಉದ್ದೇಶದಿಂದ ಪ್ರವೀಣ್ ಚೌಗುಲೆ ಈ ಪೂರ್ವ ಯೋಜಿತ ಕೊಲೆಗಾಗಿ ತನ್ನ ಕಾರು, ಮಾಸ್ಕ್, ಹಲವು ರಿಕ್ಷಾ, ಬೈಕು, ಬಸ್‌ ಗಳನ್ನು ಬಳಸಿದ್ದನು. ಅದೇ ರೀತಿ ಬ್ಯಾಗ್ ಮತ್ತು ಬ್ಯಾಗ್ ಒಳಗೆ ಹರಿತವಾದ ಚೂರಿ ಹಾಗೂ ಬಟ್ಟೆಗಳನ್ನು ಇಟ್ಟು ಕೊಂಡಿದ್ದನು.

ಮಹಾರಾಷ್ಟ್ರ ಪೊಲೀಸ್ ಇಲಾಖೆಯಲ್ಲಿ ಕೆಲವು ತಿಂಗಳ ಕಾಲ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿದ್ದ ಪ್ರವೀಣ್‌, ಪೊಲೀಸ್‌ ತಂತ್ರಗಾರಿಕೆಯನ್ನು ಕೊಲೆ ಕೃತ್ಯಕ್ಕೆ ಬಳಸಿಕೊಂಡಿದ್ದ. ಪೊಲೀಸರಿಂದ ತಪ್ಪಿಸಿಕೊಳ್ಳುವ ಯೋಜನೆಯನ್ನು ಮೊದಲೇ ಹಾಕಿಕೊಂಡು ತನ್ನ ಮಂಗಳೂರಿನ ಮನೆಯಿಂದ ಕಾರಿನಲ್ಲಿ ಹೊರಟಿದ್ದನು.

ಮಂಗಳೂರು -ಉಡುಪಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಿಗುವ ಟೋಲ್‌ ಗೇಟ್‌  ಹಾದು ಹೋದರೆ, ಸಿಸಿ ಕ್ಯಾಮರಾದಲ್ಲಿ ತನ್ನ ಕಾರಿನ ಗುರುತು ಸಿಗುತ್ತದೆ ಎನ್ನುವ ಕಾರಣಕ್ಕೆ  ಹೆಜಮಾಡಿ ಟೋಲ್‌ ಗೇಟ್‌ ನಿಂತ ಸ್ವಲ್ಪ ದೂರದಲ್ಲೇ ತನ್ನ ಕಾರು ಪಾರ್ಕ್‌ ಮಾಡಿದ್ದನು. ಅಲ್ಲಿಂದ ಬೈಕ್‌ ಹಾಗೂ ಬಸ್‌ ಹಿಡಿದು ಉಡುಪಿಗೆ ಬಂದಿದ್ದ. ಸಂತೆಕಟ್ಟೆಯಿಂದ ರಿಕ್ಷಾದಲ್ಲಿ ನೇಜಾರಿನ ತೃಪ್ತಿ ಲೇಔಟ್‌ ಗೆ ಬಂದಿದ್ದಾನೆ. ಬಳಿಕ ಮನೆಗೆ ನುಗ್ಗಿ ನಾಲ್ವರನ್ನು ಮನಬಂದಂತೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.

ನಂತರ ತೃಪ್ತಿ ಲೇಔಟ್‌ ನಿಂದ ಬೈಕ್‌ ನಲ್ಲಿ ಲಿಫ್ಟ್‌ ಪಡೆದುಕೊಂಡು ಸಂತೆಕಟ್ಟೆಗೆ ಆಗಮಿಸಿದ್ದಾನೆ. ಸಂತೆಕಟ್ಟೆಯಿಂದ ಕರಾವಳಿ ಬೈಪಾಸ್‌ ಗೆ ರಿಕ್ಷಾದಲ್ಲಿ ಬಂದಿದ್ದಾನೆ. ಕರಾವಳಿ ಬೈಪಾಸ್‌ ನಿಂದ ಬೈಕ್‌ ಏರಿ ಕಿನ್ನಿಮುಲ್ಕಿಗೆ ಹೋದ ಪ್ರವೀಣ್‌ , ಸ್ವಲ್ಪ ಮುಂದೆ ಹೋಗಿ ಬಸ್‌ ಏರಿದ್ದಾನೆ.  ಬಳಿಕ ಹೆಜಮಾಡಿ ಟೋಲ್ ಗೇಟ್ ಸಮೀಪ ನಿಲ್ಲಿಸಿದ ತನ್ನ ಕಾರಿನ ಬಳಿ ಬಸ್‌ ನಿಂದ ಇಳಿದು ಕಾರಿನಲ್ಲಿ ತನ್ನ  ಮನೆಗೆ ತೆರಳಿದ್ದಾನೆ. ಮನೆಗೆ ತೆರಳಿದ ಬಳಿಕ ರಕ್ತದ ಕಲೆಗಳನ್ನು ತೊಳೆದಿದ್ದಾನೆ. ಬಳಿಕ ಒಂದಷ್ಟು ಸಮಯ ಮನೆಯಲ್ಲಿ ಕಳೆದು, ಕೊಲೆ ಮಾಡುವ ವೇಳೆ ಕೈಬೆರಳಿಗೆ ಆಗಿದ್ದ ಗಾಯಕ್ಕೆ ಚಿಕಿತ್ಸೆ ಪಡೆಯಲು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತೆರಳಿದ್ದನು.

ಚಿಕಿತ್ಸೆ ಪಡೆದು ಬಂದ ನಂತರವೂ ಆತ ಏನೂ ನಡೆದೇ ಇಲ್ಲ ಎಂಬಂತಿದ್ದ. ಬಳಿಕ ಮನೆಯಿಂದ ತನ್ನ ಹೆಂಡ್ತಿ ಮತ್ತು ಮಕ್ಕಳನ್ನು ಕಾರಿನಲ್ಲಿ ಹೊರಗೆ ವಿಹಾರಕ್ಕೆ ಕರೆದುಕೊಂಡು ಹೋಗುತ್ತಾನೆ. ಹೊರಗಡೆ ಸುತ್ತಾಡಿ ಸಂಜೆ 6ಗಂಟೆ ಸುಮಾರಿಗೆ ಮತ್ತೆ ಮನೆಗೆ ಬರುತ್ತಾನೆ.  ನಾಲ್ಕು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಿ 8 ಗಂಟೆಯವರೆಗೂ ಆರೋಪಿ ಯಾವುದೇ ಪಶ್ಚಾತಾಪವೇ ಇಲ್ಲದೇ ತನ್ನ ಕುಟುಂಬದೊಂದಿಗೆ ಆರೋಪಿ ಸಂತಸದಿಂದಿದ್ದ.

ಮರುದಿನ ಕಾರಿನಲ್ಲಿ ಬೆಳಗಾವಿಗೆ ಹಬ್ಬದ ಪ್ರಯುಕ್ತ ಎರಡು ದಿನ ರಜೆ ಇದೆ ಎಂದು ಹೇಳಿ ನ.13ರಂದು ತನ್ನ ಇಬ್ಬರು ಮಕ್ಕಳು ಮತ್ತು ಪತ್ನಿಯನ್ನು ಬೆಳಗಾವಿಯ ಕುಡುಚಿಗೆ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ತನ್ನ ಸಂಬಂಧಿಕ ತೋಟಗಾರಿಕೆ ಇಲಾಖೆಯ ನಿವೃತ್ತ ಅಧಿಕಾರಿ ಮನೆಯಲ್ಲಿ ದೀಪಾವಳಿ ಆಚರಿಸಿದ್ದನು.

ಉಡುಪಿಯಲ್ಲಿ ನಾಲ್ವರ ಕೊಲೆ ನಡೆದಿರುವ ವಿಚಾರವನ್ನು ಪೊಲೀಸ್‌ ಇಲಾಖೆ ಸವಾಲಾಗಿ ಸ್ವೀಕರಿಸಿ, ಆರೋಪಿಯ ಹೆಡೆಮುರಿಕಟ್ಟಲು ತನಿಖೆ ನಡೆಸಿತ್ತು.  ಪ್ರವೀಣ್ ಅರುಣ್ ಚೌಗುಲೆ ಯೇ ಆರೋಪಿ ಎನ್ನುವುದು ಪೊಲೀಸರಿಗೆ ಸ್ಪಷ್ಟವಾಗಿತ್ತು.  ಅದೇ ಸಮಯಕ್ಕೆ ಸ್ವಿಚ್‌ ಆಫ್‌ ಆಗಿದ್ದ ತನ್ನ ಮೊಬೈಲ್‌ ನ್ನು ಆರೋಪಿ ಸ್ವಿಚ್‌ ಆನ್‌ ಮಾಡಿದ್ದಾನೆ. ಈ ವೇಳೆ ಪೊಲೀಸರಿಗೆ ಆರೋಪಿ ಎಲ್ಲಿದ್ದಾನೆ ಎನ್ನುವ ಸುಳಿವು ದೊರಕಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ರಕ್ತ ಸಿಕ್ತಬಟ್ಟೆಯಲ್ಲೇ ಮರಳಿದರೂ ಯಾರೂ ಕಂಡುಹಿಡಿಯಲಿಲ್ಲ:

ನಾಲ್ವರನ್ನು  ಭೀಕರವಾಗಿ ಚೂರಿಯಿಂದ ಇರಿದು ಹತ್ಯೆ ಮಾಡಿದ ಬಳಿಕ ಆರೋಪಿ ಪ್ರವೀಣ್‌ ತನ್ನ ಬಟ್ಟೆಯನ್ನು ಬದಲಿಸಲೇ ಇಲ್ಲವಂತೆ.  ನಾಲ್ವರನ್ನು ಹತ್ಯೆ ಮಾಡಿದ್ದರೂ ಆತನ ಬಟ್ಟೆಗೆ ಅಲ್ಪ ಸ್ವಲ್ಪ ರಕ್ತದ ಕಲೆಗಳು ಅಂಟಿದ್ದವು.  ಕೊಲೆಯ ನಂತರ ಆತ ರಿಕ್ಷಾ ಬೈಕ್‌ ಗಳಲ್ಲಿ ತೆರಳುವಾಗ ಕೈಯಲ್ಲಿದ್ದ ಬ್ಯಾಗ್‌ ನ್ನು ಅಡ್ಡ ಹಿಡಿದುಕೊಂಡು ಯಾರಿಗೂ ಕಾಣದಂತೆ ಮರೆ ಮಾಡಿಕೊಂಡು ತೆರಳಿದ್ದ ಎಂದು ತಿಳಿದು ಬಂದಿದೆ.

ಕ್ರಿಮಿನಲ್‌ ಗಳೂ ನೂರು ಉಪಾಯಗಳನ್ನು ಮಾಡಿದರೂ ಪೊಲೀಸರು ತಮ್ಮ ತನಿಖೆಯ ಮೂಲಕ ಅವರನ್ನು ಕಂಡು ಹಿಡಿದೇ ಬಿಟ್ಟರು. ಸದ್ಯ ಆರೋಪಿಯನ್ನು ಎಲ್ಲಾ ರೀತಿಯ ಸ್ಥಳ ಮಹಜರು ನಡೆಸಲಾಗಿದೆ. ಬೆಳಗಾವಿ, ಮಹಾರಾಷ್ಟ್ರಕ್ಕೂ ಕರೆದುಕೊಂಡು ಹೋಗಿ ತನಿಖೆ ನಡೆಸುವ ಸಾಧ್ಯತೆಗಳಿವೆ. ಆರೋಪಿ ಕೃತ್ಯಕ್ಕೆ ಬಳಸಿರುವ ಆಯುಧ ಪ್ರಮುಖ ಸಾಕ್ಷಿಯಾಗಿರುವ ಕಾರಣ ಪೊಲೀಸರು ಆಯುಧಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.  ಹೆಜಮಾಡಿಯಿಂದ ಮುಂದೆ ಕಾರಿನಲ್ಲಿ ಹೋಗುವಾಗ ಸೇತುವೆಯಿಂದ ಕೆಳಗೆ ಎಸದಿದ್ದಾನೆ ಎಂದು ವಿಚಾರಣೆ ವೇಳೆ ಬಹಿರಂಗ ಪಡಿಸಿದ್ದ ನಂತರ ಆತ ಅದನ್ನು ಮನೆ ಸಮೀಪವೇ ವಿಲೇವಾರಿ ಮಾಡಿದ್ದಾನೆ ಎಂದೂ ಹೇಳಿದ್ದಾನೆ. ಪೊಲೀಸರು ಆಯುಧಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ