ಸುಲಿಗೆಕೋರರ ಕೈಯಲ್ಲಿ ದೇಶದ ರಸ್ತೆಗಳು; ಟೋಲ್ ಗೇಟ್ ಗಳ ಅಕ್ರಮಕ್ಕೆ ಕೊನೆ ಎಲ್ಲಿ?: ಬೋವಿ ಸಮಾಜದ ಜಿಲ್ಲಾಧ್ಯಕ್ಷ ಸಂದೀಪ್ ಕುಮಾರ್, ರೈತ ಮುಖಂಡ ರೇವಣ್ಣ ಆಕ್ರೋಶ
ಬೆಂಗಳೂರಿನಿಂದ ಹಾಸನಕ್ಕೆ ಪ್ರಯಾಣಿಸಲು ಇರುವ ದೂರ 180 ಕಿ.ಮೀ. ಆದ್ರೆ, ಕೇವಲ 180 ಕಿ.ಮೀ. ಅಂತದಲ್ಲಿ ನಾಲ್ಕು ಟೋಲ್ ಗೇಟ್ ಗಳು ಕಾರ್ಯಾಚರಿಸುತ್ತಿದ್ದು, ಸಾರ್ವಜನಿಕರನ್ನು ಹಗಲು ದರೋಡೆ ಮಾಡಲಾಗುತ್ತಿದೆ ಎಂದು ಬೋವಿ ಸಮಾಜದ ಜಿಲ್ಲಾಧ್ಯಕ್ಷ ಸಂದೀಪ್ ಕುಮಾರ್ ಹಾಗೂ ರೈತ ಮುಖಂಡ ರೇವಣ್ಣ ಜಂಟಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಿಂದ ಹಾಸನಕ್ಕೆ ಪ್ರಯಾಣಿಸುವ ವೇಳೆ ನೆಲಮಂಗಲ ಕುಣಿಗಲ್ ರಸ್ತೆ ಟೋಲ್, ಬೆಳ್ಳೂರು ಕ್ರಾಸ್(ಆದಿಚುಂಚನ ಗಿರಿ) ಟೋಲ್, ಹಿರಿಸಾವೆ ಟೋಲ್, ಶಾಂತಿ ಗ್ರಾಮ ಟೋಲ್ ಗಳಲ್ಲಿ ಸಾರ್ವಜನಿಕರು ಹಣ ಪಾವತಿಸಿ ಪ್ರಯಾಣಿಸಬೇಕಾದ ದುಸ್ಥಿತಿ ಇದೆ. ಬೆಳ್ಳೂರು ಕ್ರಾಸ್ (ಆದಿಚುಂಚನಗಿರಿ ) ಟೋಲ್ ನಿಂದ ಹಿರಿಸಾವೆ ಟೋಲ್ ಸಾಗಲು ಕೇವಲ 17km ಇದೆ. ಆದ್ರೆ 17 ಕಿ.ಮೀ. ಅಂತರದಲ್ಲಿ ಟೋಲ್ ಗೇಟ್ ನಿರ್ಮಿಸಿ ಸಾರ್ವಜನಿಕರಿಂದ ಹಣ ವಸೂಲಿ ದಂಧೆ ನಡೆಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
60 ಕಿ.ಮೀ. ಒಳಗಡೆಯ ಟೋಲ್ ಗೇಟ್ ಗಳನ್ನು ತೆರವುಗೊಳಿಸುವ ಬಗ್ಗೆ ಭೂಸಾರಿಗೆ ಸಚಿವ ನಿತಿನ್ ಗಡ್ಕರಿಯವರ ಘೋಷಣೆ ಮಾಡಿದ್ದಾರೆ. ಆದರೆ ಇದು ಕರ್ನಾಟಕದಲ್ಲಿ ಅನ್ವಯವಾಗುವುದಿಲ್ಲವೇ? ಎಂದು ಅವರು ಪ್ರಶ್ನಿಸಿದರು.
ಮನಬಂದಂತೆ ಟೋಲ್ ಗೇಟ್ ಗಳು ಎದ್ದು ನಿಲ್ಲುತ್ತಿದೆ. ಸಾರ್ವಜನಿಕರು ತಮ್ಮ ವಾಹನಗಳಿಗೆ ಹಾಕುವ ಪೆಟ್ರೋಲ್, ಡೀಸೆಲ್ ಗಿಂತಲೂ ಹೆಚ್ಚು ಹಣವನ್ನು ಟೋಲ್ ಗೇಟ್ ಗಳಿಗೆ ನೀಡುವಂತಾಗಿದೆ. ಶಾಂತಿ ಗ್ರಾಮ ಟೋಲ್ ಗೇಟ್ ನಿಂದಾಗಿ ಸಮೀಪದಲ್ಲಿರುವ ಗ್ರಾಮ ನಿವಾಸಿಗಳಿಗೆ ಟೋಲ್ ಗೇಟ್ ನಿಂದಾಗಿ ತೀವ್ರ ತೊಂದರೆಯಾಗುತ್ತಿದೆ. ಸ್ಥಳೀಯ ಮಟ್ಟದ ಮದುವೆ ಸಮಾರಂಭಗಳಿಗೆ ವಾಹನಗಳು ಬರಬೇಕಾದರೂ ಟೋಲ್ ಹಣ ಪಾವತಿಸಿಯೇ ಬರಬೇಕಾದ ಸ್ಥಿತಿ ಸ್ಥಳೀಯರದ್ದಾಗಿದೆ. ಟೋಲ್ ಗೇಟ್ ಬಳಿಯಿಂದ ಪ್ರತಿನಿತ್ಯ ಓಡಾಡುತ್ತಿರುವ ಸಾಮಾನ್ಯ ಜನರಿಗೂ ತೆರಿಗೆ ಹೊರ ಬೀಳುತ್ತಿದೆ. ಈ ಬಗ್ಗೆ ಪ್ರಶ್ನಿಸುವಂತಿಲ್ಲ, ಸಾರ್ವಜನಿಕರು ಟೋಲ್ ಗೇಟ್ ಸಿಬ್ಬಂದಿಗೆ ಹೆದರಿ ಕೊಂಡು ಪ್ರಯಾಣಿಸುವ ದುಸ್ಥಿತಿ ಇದೆ ಎಂದು ದೂರಿದರು.
ನಮ್ಮ ರಾಜ್ಯದ ಜನರಿಗೆ ಸಾರ್ವಜನಿಕರಿಗೆ ಟೋಲ್ ವಿಚಾರವಾಗಿ ಹೆಚ್ಚಿನ ಮಾಹಿತಿ ಇಲ್ಲ, ಇದನ್ನೇ ಬಂಡವಾಳ ಮಾಡಿಕೊಂಡಿರುವ ಟೋಲ್ ಕಂಪೆನಿ ಸರ್ವೀಸ್ ರಸ್ತೆಗಳಿಗೂ ಟೋಲ್ ಸಂಗ್ರಹ ಮಾಡುತ್ತಿರುವಂತಹ ಘಟನೆಗಳು ನಡೆಯುತ್ತಿವೆ. ರಸ್ತೆಗಳು ಕೂಡ ಅಲ್ಲಲ್ಲಿ ಅರ್ಧಂಬರ್ಧ ಕಾಮಗಾರಿ ನಡೆಯುತ್ತಿದ್ದರೂ, ಟೋಲ್ ಸಂಗ್ರಹ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸುವ ಗೋಜಿಗೆ ಜನಪ್ರತಿನಿಧಿಗಳು ಕೂಡ ಮುಂದಾಗುತ್ತಿಲ್ಲ, ಉಡುಪಿಯ ಹೆಜಮಾಡಿ ಟೋಲ್ ಗೇಟ್ ಬಗ್ಗೆ ಅಲ್ಲಿನ ಜನರು ಹೋರಾಟ ನಡೆಸಿ ನ್ಯಾಯ ಪಡೆದುಕೊಂಡರು, ಆದರೆ, ಬೆಂಗಳೂರಿನಿಂದ ಹಾಸನ ವರೆಗೆ ದಿನನಿತ್ಯ ಗಣ್ಯರು, ಹಲವಾರು ಸಂಘಟನೆಗಳ ನಾಯಕರು, ಗ್ರಾಮದ ಮುಖಂಡರು ಟೋಲ್ ನೀಡಿ ಪ್ರಯಾಣಿಸಿದರು, ಇದೊಂದು ಅನ್ಯಾಯ ಎಂದು ಧ್ವನಿ ಎತ್ತದೇ ಇರುವುದು ಅಚ್ಚರಿಯ ವಿಚಾರವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಅಕ್ರಮ ಟೋಲ್ ಗೇಟ್ ಗಳಿವೆ ಎಂದು ರಾಜ್ಯ ಸರ್ಕಾರವೇ ಒಪ್ಪಿಕೊಂಡಿದೆ ಆದರೆ, ಅಕ್ರಮ ಟೋಲ್ ಗೇಟ್ ಗಳನ್ನು ಹಾಗೆಯೇ ಬಿಟ್ಟು ಜನರನ್ನು ಸುಲಿಗೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ಇದರ ಬಗ್ಗೆ ಆಡಳಿತ ಪಕ್ಷದವರು ಬಿಡಿ, ವಿರೋಧ ಪಕ್ಷದ ನಾಯಕರೇ ಮೌನವಾಗುವ ಮೂಲಕ ಸಾರ್ವಜನಿಕರನ್ನು ಸುಲಿಗೆ ಮಾಡಲು ಮೌನ ಸಮ್ಮತಿ ನೀಡಿದ್ದಾರೆಯೇ ಅನ್ನೋ ಅನುಮಾನಗಳು ಕಾಡುತ್ತಿವೆ ಎಂದು ಅವರು ಹೇಳಿದರು.
ರಸ್ತೆಗಳನ್ನು ಸರ್ಕಾರಗಳೇ ಮುಂದೆ ನಿಂತು ಜನರ ತೆರಿಗೆಯ ಹಣದಲ್ಲೇ ನಿರ್ಮಾಣ ಮಾಡಬೇಕು. ಸರ್ಕಾರವೇ ಬೇಕಾದರೆ ಟೋಲ್ ಗೇಟ್ ಮಾಡಿಕೊಳ್ಳಲಿ. ಖಾಸಗಿ ಕಂಪೆನಿಗಳ ಕೈಗೆ ರಸ್ತೆ ನಿರ್ಮಾಣದ ಜವಾಬ್ದಾರಿ ನೀಡಿ ಜನರನ್ನು ಸುಲಿಗೆ ಮಾಡಲು ಅವಕಾಶ ನೀಡಿರುವುದು ಸರಿಯಲ್ಲ, ತಕ್ಷಣವೇ ಜನರನ್ನು ಸುಲಿಗೆ ಮಾಡುತ್ತಿರುವ ಕಂಪೆನಿಗಳನ್ನು ಬ್ಯಾನ್ ಮಾಡಬೇಕು, ಸಾರ್ವಜನಿಕರಿಗೆ ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇನ್ನೂ ಟೋಲ್ ಗೇಟ್ ಗಳಲ್ಲಿ ಸ್ಥಳೀಯರಿಗೆ ಯಾವುದೇ ಉದ್ಯೋಗಾವಕಾಶಗಳನ್ನೂ ನೀಡಲಾಗಿಲ್ಲ, ಟೋಲ್ ಗೇಟ್ ನಿಂದಾಗಿ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಆ್ಯಂಬುಲೆನ್ಸ್ ಗೆ ಕೂಡ ಹೋಗಲು ಸರಿಯಾಗಿ ದಾರಿ ನೀಡದಿರುವುದು ಮೊದಲಾದ ಸಮಸ್ಯೆಗಳ ಬಗ್ಗೆ ಜನರು ಮಾತುಕತೆ ನಡೆಸಲು ತೆರಳಿದಾಗ ಜನರನ್ನು ಗೇಟ್ ನಿಂದ ಹೊರಗೆ ನಿಲ್ಲಿಸಿ ಮಾತನಾಡಿ, ಅವಮಾನ ಮಾಡಿ ಅಹಂಕಾರ ಮೆರೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟೋಲ್ ಗೇಟ್ ವಿರುದ್ಧ ಸರಕಾರ ಸರಿಯಾದ ಕ್ರಮವನ್ನು ಕೈಗೊಳ್ಳಬೇಕು. ಇಲ್ಲವಾದರೆ ಇದೇ ಫೆಬ್ರವರಿ 6ರಂದು ಎಲ್ಲ ಸಂಘಟನೆಗಳು ಜೊತೆಗೂಡಿ, ತೀವ್ರವಾದ ಹೋರಾಟ ನಡೆಸಲು ಈಗಾಗಲೇ ನಿರ್ಧರಿಸಿದ್ದೇವೆ ಎಂದು ಸಂದೀಪ್ ಕುಮಾರ್ ಹಾಗೂ ರೇವಣ್ಣ ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw