ಯಾವ ಒಬಿಸಿ ಸಮುದಾಯದಿಂದ ಕಿತ್ತು ಮುಸ್ಲಿಮರಿಗೆ ಮೀಸಲಾತಿ ಕೊಡುತ್ತೀರಿ: ಕಾಂಗ್ರೆಸ್ಸಿಗೆ ತೇಜಸ್ವಿಸೂರ್ಯ ಪ್ರಶ್ನೆ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಬಿಜೆಪಿ ಸರಕಾರವು ಕೆಲದಿನಗಳ ಹಿಂದೆ ಮೀಸಲಾತಿ ವಿಚಾರದಲ್ಲಿ ದೀರ್ಘಕಾಲದ ಬೇಡಿಕೆ ಈಡೇರಿಸುವ ಹಾಗೂ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯವನ್ನು ಮತ್ತಷ್ಟು ಆಳಕ್ಕೆ ಒಯ್ಯುವ ಐತಿಹಾಸಿಕ ಪ್ರಯತ್ನ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿಸೂರ್ಯ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಿರ್ಧಾರದಿಂದ ಇಲ್ಲಿನವರೆಗೆ ಯಾವ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಕ್ಕಿರಲಿಲ್ಲವೋ ಅವರಿಗೆ ನ್ಯಾಯ ಒದಗಿಸಲು ಸಾಧ್ಯವಾಗಿದೆ. ಒಳ ಮೀಸಲಾತಿ ಘೋಷಣೆ ವಿರೋಧಿಸುವ ಕಾಂಗ್ರೆಸ್ ಧೋರಣೆ ಎಲ್ಲರಲ್ಲಿ ಆಶ್ಚರ್ಯ ತಂದಿದೆ. ಅದು ಅಸಹ್ಯ ತರಿಸುವಂತಿದೆ ಎಂದು ಆಕ್ಷೇಪಿಸಿದರು.
ಅಲ್ಪಸಂಖ್ಯಾತರಿಗೆ ಇದ್ದ, ಮುಸ್ಲಿಂ ಸಮುದಾಯಕ್ಕೆ ಸಂವಿಧಾನಬಾಹಿರವಾಗಿ ಕೊಡುತ್ತಿದ್ದ ಶೇ 4 ಮೀಸಲಾತಿಯನ್ನು ರದ್ದುಪಡಿಸಿ ಲಿಂಗಾಯತ, ಒಕ್ಕಲಿಗರಿಗೆ ನೀಡಿದ್ದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರು. ಮತ್ತೆ ಅಧಿಕಾರಕ್ಕೆ ಬಂದರೆ ಮತ್ತೆ ಶೇ 4 ಮೀಸಲಾತಿಯನ್ನು ಮುಸ್ಲಿಮರಿಗೆ ಕೊಡುವುದಾಗಿ ಕಾಂಗ್ರೆಸ್ ನಾಯಕರು ಹೇಳುತ್ತಿರುವುದು ಅಚ್ಚರಿ ತರುವಂತಿದೆ ಎಂದು ತಿಳಿಸಿದರು.
ಶೇ 13ರಷ್ಟು ಮುಸ್ಲಿಂ ಸಮುದಾಯ ರಾಜ್ಯದಲ್ಲಿದೆ. ಅದಕ್ಕೆ ಅನುಗುÀಣವಾಗಿ ಅವರಿಗೆ ಮೀಸಲಾತಿ ಕೊಡುವುದಾಗಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರು ಹೇಳುತ್ತಿದ್ದಾರೆ. ಇದು ರಾಜ್ಯದ ಹಿಂದುಳಿದ ಸಮುದಾಯಗಳಿಗೆ ಮಾಡುತ್ತಿರುವ ಅತ್ಯಂತ ಘೋರ ಅನ್ಯಾಯ. ಇದನ್ನು ರಾಜ್ಯದ ಜನತೆ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಎಚ್ಚರಿಸಿದರು. ಕಾಂಗ್ರೆಸ್ ಪಾರ್ಟಿ 1954ರಿಂದ ಇತಿಹಾಸದುದ್ದಕ್ಕೂ ನಿರಂತರವಾಗಿ ಒಬಿಸಿ ಸಮುದಾಯಗಳ ವಿರುದ್ಧ ಪಿತೂರಿ ಮಾಡುತ್ತಲೇ ಬಂದಿದೆ ಎಂದು ಆರೋಪಿಸಿದರು.
1954 ಕಾಕಾ ಕಾಲೇಲ್ಕರ್ ಸಮಿತಿ ರಚಿಸಿ ಒಬಿಸಿ ಸಮುದಾಯಗಳ ಹಿತರಕ್ಷಿಸಲು ಒಬಿಸಿ ಆಯೋಗ ರಚಿಸಲು ತಿಳಿಸಿತ್ತು. ಆ ಆಯೋಗಕ್ಕೆ ಸಾಂವಿಧಾನಿಕ ದರ್ಜೆ ಕೊಡಲು ಬೇಡಿಕೆ ಇಡಲಾಗಿತ್ತು. ಅಲ್ಲಿಂದ 2018ರವರೆಗೆ ಕಾಂಗ್ರೆಸ್, ಕಾಂಗ್ರೆಸ್‍ನ ಹಲವು ಬಣ್ಣದ ಸರಕಾರಗಳು ಬಂದರೂ ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ದರ್ಜೆ ಕೊಟ್ಟಿರಲಿಲ್ಲ. 2018ರಲ್ಲಿ ಮೋದಿಜಿ ಅವರ ಸರಕಾರ ಸಾಂವಿಧಾನಿಕ ಮಾನ್ಯತೆ ನೀಡಿ ಮಹತ್ವದ ಐತಿಹಾಸಿಕ ನಿರ್ಧಾರ ಮಾಡಿತ್ತು. ಆಗ ಲೋಕಸಭೆಯಲ್ಲಿ ಕಾನೂನನ್ನು ಮಂಡಿಸಿದಾಗ ಕಾಂಗ್ರೆಸ್ ಪಕ್ಷವೂ ಅದನ್ನು ವಿರೋಧಿಸಿತ್ತು ಎಂದು ನೆನಪಿಸಿದರು.
ಕಾಂಗ್ರೆಸ್ ಪಕ್ಷವು ಹಿಂದುಳಿದ ಸಮುದಾಯದ ಸಾಂವಿಧಾನಿಕ ಹಕ್ಕುಗಳ ನಿರಾಕರಣೆ ಮಾಡುತ್ತಿದೆ. ಅಲ್ಲದೆ ಈ ಸಮುದಾಯದ ಹಕ್ಕು, ಮೀಸಲಾತಿಯನ್ನು ಕಿತ್ತುಕೊಂಡು ಮುಸ್ಲಿಮರಿಗೆ ನೀಡಿ ತುಷ್ಟೀಕರಣ ಮಾಡುತ್ತಿದೆ ಎಂದು ಟೀಕಿಸಿದರು.
ಆಂಧ್ರದಲ್ಲಿ 2005ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಕೇವಲ ಧರ್ಮದ ಆಧಾರದಲ್ಲಿ ಮುಸ್ಲಿಮರಿಗೆ ಶೇ 4 ಮೀಸಲಾತಿಯನ್ನು ಒಬಿಸಿ ಸಮುದಾಯದ ಬಾಸ್ಕೆಟ್‍ನಿಂದ ಕಿತ್ತು ಕೊಟ್ಟಿದೆ. ಅವರ ಸಾಮಾಜಿಕ ಹಿಂದುಳಿದಿರುವಿಕೆ, ವಿದ್ಯೆಯಲ್ಲಿನ ಹಿಂದುಳಿದಿರುವಿಕೆ ಇದಕ್ಕೆ ಆಧಾರವಾಗಿರಲಿಲ್ಲ. ಅಲ್ಲಿನ ಹೈಕೋರ್ಟ್, ಸುಪ್ರೀಂ ಕೋರ್ಟ್ ಅದನ್ನು ರದ್ದು ಮಾಡಲು ಸೂಚಿಸಿತ್ತು. ಆದರೂ ಮತ್ತೆ 2010ರಲ್ಲಿ ಶೇ 4 ಮೀಸಲಾತಿಯನ್ನು ಕೊಡಲಾಗಿದೆ ಎಂದು ವಿವರಿಸಿದರು.
ಒಬಿಸಿ ಸಮುದಾಯ, ಹಿಂದೂಗಳ ವಿರುದ್ಧ ಕಾಂಗ್ರೆಸ್ ಪಕ್ಷಕ್ಕೆ ಸಿಟ್ಟು ಯಾಕೆ? ಒಬಿಸಿ ಸಮುದಾಯ, ಹಿಂದೂಗಳ ವಿರುದ್ಧ ಕಾಂಗ್ರೆಸ್ ಪಕ್ಷಕ್ಕೆ ಕೋಪ, ಸಿಟ್ಟು ಯಾಕೆ? ಅವರ ಕಡೆಗಣನೆ ಏಕೆ? ಎಂದು ಜನತೆ ಪ್ರಶ್ನಿಸುತ್ತಿದ್ದಾರೆ ಎಂದು ತೇಜಸ್ವಿಸೂರ್ಯ ಕೇಳಿದರು.
ಮಂಡಲ್ ಕಮಿಷನ್ ವರದಿಯನ್ನೂ ಸಂಸತ್ತಿನಲ್ಲಿ ರಾಜೀವ್ ಗಾಂಧಿ ಅವರು ಅಧಿಕೃತವಾಗಿ ವಿರೋಧಿಸಿದ್ದರು. ಹಿಂದುಳಿದ ಸಮುದಾಯಗಳ ಮೇಲೆ ಯಾಕಿಷ್ಟು ದ್ವೇಷ ಎಂಬ ಪ್ರಶ್ನೆಗೆ ಇದು ಇನ್ನಷ್ಟು ಪುಷ್ಟಿ ಕೊಡುವಂತಿದೆ. ವಿಪಿ ಸಿಂಗ್ ಸರಕಾರವು ಮಂಡಲ್ ಆಯೋಗದ ಶೇ 27 ಮೀಸಲಾತಿ ಜಾರಿಗೆ ಮುಂದಾದಾಗ ಇದನ್ನು ಬಿಜೆಪಿ ಬಾಹ್ಯ ಬೆಂಬಲ ಕೊಟ್ಟಿತ್ತು. ಆ ಮೂಲಕ ಅದರ ಜಾರಿಗೆ ಸಹಕರಿಸಿದೆ ಎಂದು ತಿಳಿಸಿದರು.
ವೈದ್ಯಕೀಯ ಪದವಿ, ಸ್ನಾತಕೋತ್ತರ ಪದವಿ ಶಿಕ್ಷಣದಲ್ಲಿ ಒಬಿಸಿ ಸಮುದಾಯಕ್ಕೆ ಶೇ 27 ರಷ್ಟು ಮೀಸಲಾತಿ ಬೇಡಿಕೆ ಇದ್ದರೂ ಅದನ್ನು ಮಾಡಿರಲಿಲ್ಲ. 2004ರಿಂದ 2014ರವರೆಗೆ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಈ ಮನವಿಯನ್ನು ಯಾಕೆ ಪುರಸ್ಕಾರ ಮಾಡಿರಲಿಲ್ಲ ಎಂದು ಕೇಳಿದರು. ದಶಕಗಳ ಬೇಡಿಕೆಯಾದ ಇದನ್ನೂ ಕೂಡ ಮೋದಿಜಿ ಸರಕಾರ ಈಡೇರಿಸಿ ಹಿಂದುಳಿದ ಸಮಾಜಕ್ಕೆ ನ್ಯಾಯ ದೊರಕಿಸಿ ಕೊಟ್ಟಿದೆ ಎಂದು ವಿಶ್ಲೇಷಿಸಿದರು.
2012-13ನೇ ಅವಧಿಯಲ್ಲಿ ಯುಪಿಎ ಸರಕಾರವು ಶೇ 4.5 ಮೀಸಲಾತಿಯನ್ನು ಮುಸ್ಲಿಮರಿಗೆ ಕೊಡಲು ಯುಪಿಎ ಸರಕಾರ ಮುಂದಾಗಿತ್ತು. ಇದನ್ನು ಒಬಿಸಿ ಸಮುದಾಯದಿಂದ ಕಿತ್ತುಕೊಳ್ಳುವ ಇರಾದೆ ಕಾಂಗ್ರೆಸ್‍ನದಾಗಿತ್ತು. ಒಬಿಸಿ, ಹಿಂದುಳಿದವರ ಬಗ್ಗೆ ಕಾಂಗ್ರೆಸ್‍ಗೆ ಇಷ್ಟೊಂದು ದ್ವೇಷ ಯಾಕೆ ಎಂದು ಆ ಸಮುದಾಯದವರು ಪ್ರಶ್ನಿಸುತ್ತಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್‍ಗೆ ಘೋರ ವಿರೋಧ, ಆಕ್ರೋಶ ಏಕೆ? ಎಂದು ಕರ್ನಾಟಕದಲ್ಲಿ ದೇಶದೆಲ್ಲೆಡೆ ಪ್ರಶ್ನೆ ಎದ್ದಿದೆ ಎಂದು ವಿವರಿಸಿದರು.
ಒಬಿಸಿ ಸಮುದಾಯ ಮತ್ತು ಆ ಸಮುದಾಯದ ನಾಯಕರ ವಿರೋಧ ಮಾಡುವ ಐತಿಹಾಸಿಕ ಮಾನಸಿಕತೆ ಕಾಂಗ್ರೆಸ್‍ನದು. ಈ ಸಮುದಾಯಗಳ ನಾಯಕರಾದ ರಾಂಮನೋಹರ್ ಲೋಹಿಯಾ, ಬಿಹಾರದ ಕರ್ಪೂರಿ ಠಾಕೂರ್, ಜಯಪ್ರಕಾಶ್ ನಾರಾಯಣ್- ಇವರೆಲ್ಲರೂ ಕಾಂಗ್ರೆಸ್ ರಾಜಕೀಯವನ್ನು ವಿರೋಧಿಸಿದ್ದರು ಎಂದು ನೆನಪಿಸಿದರು.
ಸೀತಾರಾಮ ಕೇಸರಿ, ದೇವರಾಜ ಅರಸು ಅವರಿಗೆ ಕಾಂಗ್ರೆಸ್‍ನವರಿಂದ ಅನ್ಯಾಯ ಹಿಂದುಳಿದ ಸಮುದಾಯದ ಎಲ್ಲರಿಗೂ ಘೋರ ಅನ್ಯಾಯ ಮಾಡಿದ್ದು ಕಾಂಗ್ರೆಸ್ ಪಕ್ಷ, ಗಾಂಧಿ ಪರಿವಾರ. ಸೋನಿಯಾ ಗಾಂಧಿ ಅವರನ್ನು ಕಾಂಗ್ರೆಸ್ ಪಾರ್ಟಿ ಅಧ್ಯಕ್ಷರನ್ನಾಗಿ ಮಾಡುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿಂದಿನ ಅಧ್ಯಕ್ಷ, ಹಿಂದುಳಿದ ಸಮುದಾಯದ ದೊಡ್ಡ ನಾಯಕ ಸೀತಾರಾಮ ಕೇಸರಿ ಅವರನ್ನು ಅವಮಾನಿಸಿ, ಸ್ನಾನದ ಕೊಠಡಿಯಲ್ಲಿ ಬಂಧಿಸಿಟ್ಟದ್ದು ಇದೇ ಪಕ್ಷ. ಯಾಕೆ ಈ ಒಂದು ದ್ವೇಷ? ಎಂದು ತೇಜಸ್ವಿ ಸೂರ್ಯ ಪ್ರಶ್ನೆಯನ್ನು ಮುಂದಿಟ್ಟರು.
ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯದ ಪ್ರತಿಪಾದಕರಾದ ದೇವರಾಜ ಅರಸು ಅವರಿಗೆ ಕಾಂಗ್ರೆಸ್ ಪಕ್ಷ ಮಾಡಿದ ಅಪಮಾನವನ್ನೂ ರಾಜ್ಯದ ಜನರು ನೆನಪಿಟ್ಟುಕೊಂಡಿದ್ದಾರೆ. ಕಳೆದ ಎಷ್ಟೋ ದಶಕಗಳಿಂದ ಕರ್ನಾಟಕದಲ್ಲಿ ಎಸ್‍ಸಿ, ಎಸ್‍ಟಿ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೊಡಬೇಕೆಂಬ ಬೇಡಿಕೆ ಇತ್ತು. ಆರು ವರ್ಷ ಅಧಿಕಾರದಲ್ಲಿ ಇದನ್ನು ಕಾಂಗ್ರೆಸ್ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ಒಳಮೀಸಲಾತಿಯನ್ನು ಯಾಕೆ ನೀಡಿಲ್ಲ? ನಾವು ಅದನ್ನು ಮಾಡಿದ್ದೇವೆ. ತಾವು ಅಧಿಕಾರಕ್ಕೆ ಬಂದರೆ ಕಾನೂನನ್ನು ಬದಲಾಯಿಸುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ಯಾವ ಸಮುದಾಯದಿಂದ ಇದನ್ನು ಕಿತ್ತು ಮುಸ್ಲಿಮರಿಗೆ ಕೊಡುತ್ತೀರೆಂದು ಸ್ಪಷ್ಟಪಡಿಸಿ ಎಂದು ಕೇಳಿದರು. ಮುಸ್ಲಿಮರಿಗೆ ಶೇ 13 ಮೀಸಲಾತಿಯನ್ನು ಸಿದ್ದರಾಮಯ್ಯನವರು ಯಾವ ಸಮುದಾಯಗಳಿಂದ ಕಿತ್ತು ಕೊಡಲಿದ್ದಾರೆ ಎಂದು ಕೇಳಿದರು.
ರಾಜ್ಯದಲ್ಲಿ ಸಂವಿಧಾನ, ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದ್ದ ಮೀಸಲಾತಿ ಜಾರಿಯಲ್ಲಿತ್ತು. ಬೊಮ್ಮಾಯಿಯವರ ಸರಕಾರ ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಿದೆ. ಇದರಿಂದ ಕಾಂಗ್ರೆಸ್ ಪಕ್ಷದ ಮತಬ್ಯಾಂಕಿಗೆ ಏಟು ಬಿದ್ದಿದೆ ಎಂದು ತಿಳಿಸಿದರು.
ಕಾಂಗ್ರೆಸ್‍ನ ಅಹಿಂದ ರಾಜಕಾರಣದಲ್ಲಿ ಅ ಮಾತ್ರ ಉಳಿದಿದೆ. ಕಾಂಗ್ರೆಸ್‍ನ ಅಹಿಂದದಲ್ಲಿ ಹಿಂದ ಈಗ ಇಲ್ಲ ಎಂದು ತಿಳಿಸಿದರು. ಜನರು ಈ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಪಾಠ ಕಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷದವರು ಸಮರ್ಥ ಅಧ್ಯಯನ, ಹಿಂದುಳಿದ ವರ್ಗದ ಆಯೋಗದ ವರದಿ ಇಲ್ಲದೆ ಮತಬ್ಯಾಂಕ್ ರಾಜಕಾರಣಕ್ಕಾಗಿ ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದರು. ಅದನ್ನು ಕಾಂಗ್ರೆಸ್ಸಿನವರು ಹೇಗೆ ಕೊಟ್ಟರು ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮೇಯರ್ ಮತ್ತು ಜಿಲ್ಲಾ ವಕ್ತಾರ ಎಸ್. ಹರೀಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw