ಮರಕಸಿ ಮಾಡುತ್ತಿದ್ದ ವೇಳೆ ಆಯಾ ತಪ್ಪಿ ಬಿದ್ದು ಕಾರ್ಮಿಕ ಸಾವು
ಕೊಟ್ಟಿಗೆಹಾರ: ಕಾಫಿತೋಟದಲ್ಲಿ ಮರಕಸಿ ಮಾಡುವಾಗಿ ಆಯಾ ತಪ್ಪಿ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ನಡೆದಿದೆ. ಮೂಡಿಗೆರೆ ತಾಲ್ಲೂಕು ಬಾಳೂರು ಹೋಬಳಿ ವಾಟೇಖಾನ್ ಎಂಬಲ್ಲಿ ಘಟನೆ ನಡೆದಿದೆ.
ಬಾಳೂರು ಹೋಬಳಿ ಕಾಂಗ್ರೆಸ್ ಅಧ್ಯಕ್ಷ, ವಕೀಲರಾದ ಶ್ರೀನಾಥ್ ಅವರ ಕಾಫಿ ತೋಟದಲ್ಲಿ ಮರಕಸಿ ಮಾಡುವಾಗ ಈ ದುರ್ಘಟನೆ ಸಂಭವಿಸಿದೆ.
ಮೃತರನ್ನು ತಮಿಳುನಾಡು ಮೂಲದ ಕಾರ್ಮಿಕ ಮುತ್ತು ಮಣಿ (28 ವರ್ಷ) ಎಂದು ಗುರುತಿಸಲಾಗಿದೆ. ಸುಮಾರು 25 ಅಡಿ ಎತ್ತರದ ಮರದಿಂದ ಆಯಾತಪ್ಪಿ ಬಿದ್ದಿದ್ದು, ಕುತ್ತಿಗೆ ಭಾಗಕ್ಕೆ ತೀವ್ರ ಪೆಟ್ಟಾಗಿದೆ.
ಗಾಯಳುವನ್ನು ತೋಟದ ಮಾಲೀಕರು ತಕ್ಷಣ ಬಣಕಲ್ ಆರೀಫ್ ಅವರ ಅಂಬುಲೆನ್ಸ್ ಮೂಲಕ ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆಗೆ ಸಾಗಿಸಿದ್ದಾರೆ. ತೀವ್ರವಾಗಿ ಪೆಟ್ಟುತಾಗಿದ ಪರಿಣಾಮ ಕಾರ್ಮಿಕ ಆಸ್ಪತ್ರೆಗೆ ತಲುಪಿದ ಕೆಲ ಕ್ಷಣಗಳಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಮಿಕ ಮುತ್ತುಮಣಿ ಸಾವಿಗೆ ತೋಟದ ಮಾಲೀಕರು ತೀವ್ರ ಶೋಕ ವ್ಯಕ್ತಪಡಿಸಿದ್ದು, ಮೃತ ಶರೀರವನ್ನು ಸಂಬಂಧಿಕರೊಂದಿಗೆ ತಮಿಳುನಾಡಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ. ತೋಟದ ಮಾಲೀಕರು ತಮ್ಮ ತೋಟಕ್ಕೆ ಕಾರ್ಮಿಕ ವಿಮೆ ಮಾಡಿಸಿದ್ದು, ಮೃತರ ಕುಟುಂಬಕ್ಕೆ ಸೂಕ್ತ ವಿಮಾ ಪರಿಹಾರ ದೊರಕಿಸಿಕೊಡುವ ಭರವಸೆ ವ್ಯಕ್ತಪಡಿಸಿದ್ದಾರೆ.
ಕಾಫಿತೋಟದಲ್ಲಿ ಅವಘಡಗಳು ಸಂಭವಿಸಿ ಕಾರ್ಮಿಕರು ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದು, ತಮಿಳುನಾಡು ಮತ್ತು ಅಸ್ಸಾಂ ಮೂಲದ ಕೆಲವು ಮೇಸ್ತ್ರಿಗಳು ಪರಿಣತಿಯಿಲ್ಲದ ಕಾರ್ಮಿಕರನ್ನು ಮರಹತ್ತಿಸುವ ದುಸ್ಸಾಹಸಕ್ಕೆ ಮುಂದಾಗುತ್ತಿದ್ದಾರೆ.
ತೋಟದ ಮಾಲೀಕರು ಇಂತಹ ಅಪಾಯಕಾರಿ ಕೆಲಸಗಳನ್ನು ಮಾಡಿಸುವಾಗ ಕಾರ್ಮಿಕ ವಿಮೆ ಮಾಡಿಸುವುದು ಅತ್ಯಗತ್ಯವಾಗಿದೆ. ಇಲ್ಲವಾದರೆ ಇಂತಹ ಅವಘಡಗಳು ಸಂಭವಿಸಿದಾಗ ಕಾರ್ಮಿಕ ಕುಟುಂಬಗಳು ಬೀದಿಗೆ ಬರುವ ಪರಿಸ್ಥಿತಿ ಮತ್ತು ತೋಟದ ಮಾಲೀಕರು ಪಶ್ಚಾತ್ತಾಪ ಪಡುವ ಸನ್ನಿವೇಶ ಎದುರಾಗುತ್ತದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw