ಡಿಜಿಟಲ್ ಉಪವಾಸ ಯಾರಿಗೆ, ಎಷ್ಟು ಲಾಭ?
- ಧಮ್ಮಪ್ರಿಯಾ, ಬೆಂಗಳೂರು
ಕಳೆದ ಸಂಚಿಕೆಯಲ್ಲಿ “4 ಜಿ ಯಿಂದ 5ಗೆ ಜಿಗಿದ ಚುನಾವಣೆಯ ತಂತ್ರಗಾರಿಕೆ” ಎಂದು ಲೇಖನ ಬರೆಯಲಾಗಿತ್ತು. ಆದರೆ ಇತ್ತೀಚೆಗೆ ಅಳುವ ಸರ್ಕಾರಗಳು ತೆಗೆದುಕೊಂಡಿರುವ ಡಿಜಿಟಲ್ ಉಪವಾಸ ನಿರ್ಧಾರ ಬಹಳ ಸ್ವಾಗತಾರ್ಹವಾಗಿದೆ. ಜನರು ಸಂಪೂರ್ಣವಾಗಿ ಮೊಬೈಲ್ ನಲ್ಲೇ ಮುಳುಗಿ ಹೋಗಿದ್ದು, ಮಾನವೀಯ ಮೌಲ್ಯಗಳು ಸಿನಿಮಾದಲ್ಲಿ ನಡೆಯುತ್ತಿರುವ ಶೈಲಿಗೆ ಮಾರುಹೋಗಿವೆ. ಬಂಧುಮಿತ್ರರೊಡನೆ ಕುಳಿತು ಕುಶಲೋಪರಿ ವಿಚಾರಿಸುವುದು ಅಪರೂಪವಾಗಿವೆ. ಇಂದಿನ ವಿದ್ಯಾರ್ಥಿಗಳು ಮಕ್ಕಳು ತಮ್ಮ ಬಿಡುವಿನ ಸಮಯವನ್ನೆಲ್ಲಾ ಮೊಬೈಲ್ ನಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಅಪ್ಪಮಕ್ಕಳ, ಅಮ್ಮ ಮಕ್ಕಳ ನಡುವಿನ ಬಾಂಧವ್ಯಗಳು ಕೇವಲ ಕೃತಕವಾಗಿ ಕಾಣುವಷ್ಟರ ಮಟ್ಟಿಗೆ ಬದಲಾಗಿವೆ.
ಭಾರತೀಯ ಸಂಸ್ಕೃತಿ, ಪರಂಪರೆಯ ಆಚರಣೆಗಳು, ಜಾನಪದ ಕಲೆಗಳು, ನೃತ್ಯಗಳು, ಗೀಗಿ, ಜೋಗಿ, ಸೋಬಾನೆ ಪದಗಳು ಈಗಾಗಲೇ ಜನಪದರಿಂದ ಕಣ್ಮರೆಯಾಗಿ ಜಾನಪದ ಕಲೆಗಳು ಇಂದು ವೇದಿಕೆಗೆ ಸೀಮಿತಗೊಂಡಿವೆ. ಈ ಜಾನಪದ ಕಲೆಗಳು ಕೆಲವೇ ಜನರ ಕಪಿ ಮುಷ್ಠಿಗೆ ಸಿಲುಕಿ ಅವರ ಜೀವನದ ಬಂಡವಾಳಗಳಾಗಿವೆ. ಇಂತಹ ಆಚರಣೆಗಳು ಮಾಯವಾಗಲು ಮೂಲ ಕಾರಣವೇ ಆಧುನಿಕ ತಂತ್ರಜ್ಞಾನ ಬಳಕೆ, TV ಅನ್ನುವ ಮಾಯಾಪೆಟ್ಟಿಗೆ, ಹಾಗೂ ಆಧುನಿಕ ಭಾರತದ ಪ್ರತಿಯೊಬ್ಬ ನಾಗರಿಕ ಪ್ರಜೆಯ ಮೂಲಭೂತ ಸಾಧನವಾಗಿರುವ ಮೊಬೈಲ್ ಬಳಕೆ.
ಜನರ ಬದುಕು ಐಲು ಐಲು ಕೈಲಿದ್ದರೆ ಮೊಬೈಲ್ ಎನ್ನುವಂತಾಗಿದೆ. ಅದೆಷ್ಟೋ ವಾಹನ ಸವಾರರು ಇದರಿಂದ ತಮ್ಮ ಜೀವವನ್ನೇ ಕಳೆದುಕೊಂಡು ಲೆಕ್ಕಕ್ಕೆ ಸಿಕ್ಕದಂತಾಗಿವೆ. ಆದರೂ ಮೊಬೈಲ್ ಇಲ್ಲದೆ ಅರ್ಧ ಗಂಟೆ ಬದುಕುವುದು ಕಷ್ಟಸಾಧ್ಯ ಎನ್ನುವಷ್ಟರ ಮಟ್ಟಿಗೆ ಇಂದಿನ ಜನ ಮೊಬೈಲ್ ಅನ್ನು ತನ್ನ ದೇಹದ ಒಂದು ಅಂಗವನ್ನಾಗಿ ಅಳವಡಿಸಿಕೊಂಡಿದ್ದಾರೆ.
ಬಂಧುಗಳೇ. ಮೊಬೈಲ್ ಬಂದ ನಂತರ ಭಾರತೀಯರಲ್ಲಿ ಅಂತರ್ಜಾಲದ ಬಳಕೆಯಿಂದ ಸುಲಭ ವ್ಯವಹಾರ ನಡೆಯುತ್ತಿವೆ ಎನ್ನುವುದರಲ್ಲಿ ಎರಡು ಮಾತಿಲ್ಲಾ. ಅದಕ್ಕಾಗಿ ಎಲ್ಲರಿಗೂ ಮೊಬೈಲ್ ಬೇಕಾಗಿದೆ. ಪ್ರತೀ 5 ವರ್ಷಕ್ಕೊಮ್ಮೆ ನಡೆಯುವ ಚುನಾವಣೆಗಳನ್ನು ಎದುರಿಸಲು ಹೊರಟ ಪಕ್ಷಗಳು ಸಹ ಚುನಾವಣೆಗೂ ಮೊದಲೇ ಮೊಬೈಲ್ network ಗಳ ಬಡ್ತಿ ಹಾಗೂ ಎಲ್ಲಾ ಚಾನಲ್ಲುಗಳ ರಿಚಾರ್ಜ್ ಗಳು ದಿಢೀರನೆ ಚರ್ಚೆಗೆ ಬಂದು ತಟ್ಟನೆ ತನ್ನ ಸೇವಾ ವೆಚ್ಚವನ್ನು ದುಬಾರಿಗೊಳಿಸಿಬಿಡುತ್ತವೆ.
ಹಾಗಾದರೆ ಇದರ ಹಿಂದಿರುವ ಮರ್ಮವೇನು ಎನ್ನುವುದೆ ದೊಡ್ಡ ಯಕ್ಷ ಪ್ರಶ್ನೆಯಾಗಿದೆ. ಜನರಿಂದ, ಜನರಿಗಾಗಿ, ಜನರಿಗೋಸ್ಕರ ರಚಿತವಾಗುವ ಸರ್ಕಾರಕ್ಕೆ ಚುನಾವಣೆಗಳನ್ನು ಎದುರಿಸಲು ಬೇಕಾಗುವ ಖರ್ಚು ವೆಚ್ಚಗಳನ್ನು ಜನರಿಂದಲೇ ಜನರಿಗರಿವಿಲ್ಲದೆ ವಸೂಲಿಮಾಡುವ ಒಂದು ಹುನ್ನಾರ ಎನ್ನುವುದು ಪ್ರಜ್ಞಾವಂತ ಜನರ ಅಭಿಪ್ರಾಯವಾಗಿದೆ. ಹಾಗೆಯೇ ಇತ್ತೀಚೆಗೆ ಅಳುವ ಸರ್ಕಾರಗಳು ಡಿಜಿಟಲ್ ಉಪವಾಸ ಎಂಬ ಹೇಳಿಕೆಯನ್ನು ನೀಡಿರುವುದು ಬಹಳ ಒಳ್ಳೆಯದೇ ಆದರೂ ಅದರ ಹಿಂದಿರುವ ಉದ್ದೇಶವೇ ಬೇರೆಯಾಗಿದೆ ಎನ್ನುವುದನ್ನು ಜನಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕಿದೆ. ವಾರದಲ್ಲಿ ಒಂದು ದಿನ ಡಿಜಿಟಲ್ ಉಪವಾಸ ಯಾಕೆ ಬೇಕಿದೆ ?ಎನ್ನುವುದಕ್ಕೆ ಮನೆಮಂದಿಯೆಲ್ಲಾ, ನೆಂಟರಿಷ್ಟರೆಲ್ಲಾ, ಬಂಧುಬಳಗವೆಲ್ಲಾ ಅನ್ನೋನ್ಯವಾಗಿರಬೇಕಾಗಿದೆ. ಅದಕ್ಕಾಗಿ ಡಿಜಿಟಲ್ ಉಪವಾಸ ಬಹಳ ಮುಖ್ಯ ಎಂದರೆ ಅದು ಬಹಳ ಸ್ವಾಗತಾರ್ಹ.
ಇದು ರಾಜಕೀಯ ವ್ಯವಸ್ಥೆಗೆ ಬಂಡವಾಳವಾಗಿ ಹೇಗೆ ಮಾರ್ಪಟ್ಟಿದೆ ಎನ್ನುವುದನ್ನು ನಾವು ಅರಿಯಬೇಕು ಒಂದು ತಿಂಗಳಿಗೆ ರಿಚಾರ್ಜ್ ಎಂದು ಮಾಡಿಸುತ್ತೇವೆ.ಅದರಲ್ಲಿ ಕೇವಲ 28 ದಿನವಷ್ಟೇ ಬಳಕೆಯಾಗುತ್ತದೆ. ಅದರಲ್ಲಿ 2 ದಿನ ಕಡಿತವಾಗುತ್ತದೆ. ಈಗ ವಾರಕ್ಕೆ ಒಂದು ದಿನ ಉಪವಾಸ ಎಂದರೆ ತಿಂಗಳಿಗೆ 4 ದಿನ ಎಂದು ಪರಿಗಣಿಸಲಾಗಿದೆ. ಪ್ರತಿಯೊಬ್ಬರು ಬಳಸುವ 2GB/3GB ಮಟ್ಟ ಕಂಪೆನಿಯವರಿಗೆ ಕೋಟಿಗಟ್ಟಲೆ ಉಳಿತಾಯವಾಗುತ್ತದೆ. ಇದರ ಉಳಿತಾಯದ ಮಟ್ಟ ಇಡೀ ದೇಶದಾದ್ಯಂತ ಇನ್ನೆಷ್ಟಿರಬಹುದು ಎಂದು ನೀವೇ ಯೋಚಿಸಿ. ಇದರ ಸಂಪೂರ್ಣ ಲಾಭದಲ್ಲಿ ಸರ್ಕಾರದ ಲಾಭವೆಷ್ಟು ? ಅದರ ಪಾಲೆಷ್ಟು ಎಂದು ಚಿಂತಿಸಬೇಕಾಗಿದೆ.
“ದೇಶದಲ್ಲಿ ಊಟವಿಲ್ಲದೆ, ಪೌಷ್ಟಿಕ ಆಹಾರವಿಲ್ಲದೆ, ಅದೆಷ್ಟೋ ಮಕ್ಕಳು ಉಪವಾಸದಿಂದ ಪ್ರತಿನಿತ್ಯ ಸಾಯುತ್ತಿರುವಾಗ ನಾವು ಈಗಾಗಲೇ ಡಿಜಿಟಲ್ ಉಪವಾಸಕ್ಕೆ ಕೈ ಹಾಕಿದ್ದೇವೆ ಎಂದರೆ ಹ್ಯಾಟ್ಸ್ ಆಫ್ ಇಂಡಿಯಾ”. ಆಯಿತು ಉಪವಾಸ ಮಾಡೋಣ ಅದರಿಂದ ಸಾರ್ವಜನಿಕರಿಗೆ ಎಷ್ಟು ಲಾಭ ಒಮ್ಮೆ ಹೇಳಲಾದೀತೇ ? ಹಾಗೆ ಎಲ್ಲರೂ ಉಪವಾಸ ಮಾಡಲೇಬೇಕು ಅನ್ನುವುದಾದರೆ ಸಾಮಾನ್ಯ ಜನರಿಗೆ ಕರೆ ಕೊಡುವ ಬದಲು ಮೊಬೈಲ್ ಕಂಪನಿಗಳಿಗೆ ಹೇಳಬಹುದಿತ್ತಲ್ಲವೇ ? ಪ್ರತಿ ತಿಂಗಳಿಗೆ 4 ದಿನ ಉಪವಾಸ ಘೋಷಣೆ ಮಾಡಿದ ಮೇಲೆ ಆ 4 ದಿನ ನಮ್ಮ ಅವಧಿ ವಿಸ್ತರಿಸಿ ಕಂಪನಿ ಮುಂದುವರೆಸಲು ತಯಾರಿದೆಯೇ ಅದನ್ನು ತಿಳಿಸಬಹುದಲ್ಲವೇ ?
ಇದು ಸಾಮಾನ್ಯ ಜನರಿಗೆ ಒಂದು ರೀತಿಯ ಪರೋಕ್ಷ ಬರೆಯಲ್ಲವೇ ಹಾಗೂ ಹೊರೆಯೂ ಅಲ್ಲವೇ ? ಅಳುವ ಕಂಪನಿಗಳು / ಸರ್ಕಾರಗಳು ಮೊಬೈಲ್ ವಿಚಾರವಾಗಿ ತೆಗೆದುಕೊಳ್ಳುವ ಖಡಕ್ ನಿರ್ಧಾರಗಳು ಈ ದೇಶದ ಬಡಜನರ ಬಡತನ ನಿವಾರಣೆಗೆ, ರೈತರ ಬೆಳೆಗಳಿಗೆ ಬೆಂಬಲಿತ ಬೆಲೆಗಳ ಹೆಚ್ಚಳಕ್ಕೆ, ಮಹಿಳೆಯರ ಮೇಲಿನ ನಿರಂತರ ದೌರ್ಜನ್ಯದ ತಡೆಗೆ, ನಿಮ್ನವರ್ಗಳ ಮೇಲಿನ ದೌರ್ಜನ್ಯಗಳ ತಡೆಹಿಡಿಯಲು ಏಕೆ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲಾ ಎನ್ನುವುದನ್ನು ಇಂದಿನ ಪ್ರಜ್ಞಾವಂತರು ಅರ್ಥಮಾಡಿಕೊಳ್ಳಬೇಕಾಗಿದೆ.
“ಜಾಗೃತರಾಗಿ ಚಿಂತಿಸಿ ಒಂದಾಗಿ”
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw