‘ಹಿಂದೂ’ ಪದ: ಕ್ಷಮೆ ಕೇಳುವವರು ಯಾರು? - Mahanayaka
5:14 AM Wednesday 11 - December 2024

‘ಹಿಂದೂ’ ಪದ: ಕ್ಷಮೆ ಕೇಳುವವರು ಯಾರು?

sathish jarakiholi
17/11/2022

  • ಧಮ್ಮಪ್ರಿಯಾ  ಬೆಂಗಳೂರು

ಇತ್ತೀಚೆಗೆ ಮಾನ್ಯ ಶಾಸಕರಾದ ಸತೀಶ್ ಜಾರಕಿಹೋಳಿ ನೀಡಿರುವ ಹಿಂದೂ ಪದಕ್ಕೆ ಪರ್ಷಿಯನ್ ಭಾಷೆಯಲ್ಲಿ ಅಶ್ಲೀಲ ಅರ್ಥವಿದೆ ಎಂದಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಹಲವಾರು ದಾಖಲೆಗಳನ್ನು ಒದಗಿಸುವಲ್ಲಿ ಹಾಗೂ ಚರ್ಚೆಗೆ ಕುಳಿತುಕೊಳ್ಳುವಲ್ಲಿ ಮುಂದಾಗಿದ್ದಾರೆ. ಅವರು ಹೇಳಿರುವುದು  ಅಶ್ಲೀಲ ಅರ್ಥವಿದೆ ಎಂದಷ್ಟೇ ಹೊರತು, ಅದನ್ನು ಅವಮಾನಿಸುವ, ಕೋಟ್ಯಾಂತರ ಹಿಂದೂಗಳ ಭಾವನೆಗಳಿಗೆ ದಕ್ಕೆ ತರುವುದಲ್ಲಾ. ಮಾನ್ಯ ಜಾರಕೀಹೊಳಿಯವರೇ ಚರ್ಚೆಗೆ ಅಹ್ವಾನ ನೀಡುತ್ತಿದ್ದಾರೆ ಎಂದಮೇಲೆ ಬೀದಿಯಲ್ಲಿ ನಿಂತು ರಾಜಕೀಯ ಲೇಪನ ಹಚ್ಚಿ ಬೇಳೆಬೇಯಿಸಿಕೊಂಡು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವ ಕಲಸವನ್ನು ಯಾರು ಮಾಡಬಾರದೆಂಬುದು ನಮ್ಮ ಅಭಿಪ್ರಾಯ.  ಹಾಗೇನಾದರೂ ಸಮಾಜದೊಳಗೆ ನಡೆಯುವ ಕೋಮುಗಲಭೆಗಳಿಗೆ ಅವಕಾಶ ನೀಡಿದ್ದೇ ಆದರೆ, ಅದರ ಸಂಪೂರ್ಣ ಹೊಣೆಗಾರಿಕೆ ಹೊರುವವರು ಯಾರು ಎಂಬುದನ್ನು ಜನರೇ ತೀರ್ಮಾನಿಸಬೇಕಾಗುತ್ತದೆ. ಮಾನ್ಯರು ನೀಡಿರುವ ಹೇಳಿಕೆ, ಹಿಂದೂಪರ ಸಂಘಟನೆಗಳ ಪ್ರತಿರೋಧವಷ್ಟೇ ಅವರ ಉದ್ದೇಶವಾಗಬಾರದು. ಹಿಂದೂ ಪದವನ್ನು ಜನರಿಗೆ ಅರ್ಥೈಸುವ ಜನರಿಗೆ ಅದರ ನಿಜವಾದ ಅರ್ಥವನ್ನು ತಿಳಿಸುವ ಪ್ರಯತ್ನವನ್ನು ಮಾಡುವ ಅನಿವಾರ್ಯತೆ ಭಾರತೀಯರೆಲ್ಲರಿಗೂ ಬಂದೊದಗಿದೆ.

ನಾನೊಬ್ಬ ಸಾಮಾನ್ಯ ಓದುಗನಾಗಿ ನನ್ನ ಅಭಿಪ್ರಾಯಗಳನ್ನು ಹೇಳಲು ಇಚ್ಛಿಸುತ್ತೇನೆ, ಒಂದೊಂದು ಪದಗಳಿಗೂ ಅರ್ಥಗಳನ್ನು ಹುಡುಕುತ್ತಾ ಹೋದರೆ ಅವುಗಳ ಅರ್ಥಗಳು ಸಂದರ್ಭಕ್ಕೆ ಅನುಗುಣವಾಗಿ, ಭಾವನೆಗಳಿಗೆ ಅನುಗುಣವಾಗಿ, ಭಾಷೆಯ ಬಳಕೆಯ ಆಧಾರದ ಮೇಲೆ, ಅದನ್ನು ಉಚ್ಚರಿಸುವ ಮತ್ತು ಅದನ್ನು ಅರ್ಥೈಸಿಕೊಳ್ಳುವ, ಹಾಗೂ ಬಳಕೆಯಾದ ಪದಗಳಿಗೆ ಬೇರೊಂದು ಅರ್ಥ ನೀಡುವುದರ  ಆಧಾರದ ಮೇಲೆ  ನಿಂತಿರುತ್ತದೆ  ಎಂದರೆ  ತಪ್ಪಾಗಲಾರದು. ಪ್ರತೀ ಭಾಷೆಯಲ್ಲಿಯೂ ಸಹ ಇಂತಹ ಅದೆಷ್ಟೋ ಪದಗಳನ್ನು ಸಂದರ್ಭಕ್ಕೆ ತಕ್ಕಂತೆ, ವಾಕ್ಯ ಜೋಡಣೆಗೆ ತಕ್ಕಂತೆ ಅರ್ಥೈಸುವುದನ್ನು ಕಾಣಬಹುದಾಗಿದೆ. ಹಾಗೆಯೇ ಪ್ರತೀ ಭಾಷೆಗೂ, ಅದರದೇ ಆದ ಗಂಭೀರತೆ, ಅರ್ಥೈಸುವಿಕೆ, ಇರುವುದು ಸಹಜವಾದದ್ದು, ಆದರೆ ಕೆಲವು ಪದಗಳಿಗೆ ನಾವು ಎಲ್ಲಿಯಾದರೂ ಸರಿ, ಹೇಗಾದರೂ ಸರಿ,ಯಾವ ಸಂದರ್ಭದಲ್ಲಾದರೂ ಸರಿ ಅದರ ಅರ್ಥಗಳು ಬದಲಾಗುವುದಿಲ್ಲಾ  ಇಂತಹ  ಸಾಲುಗಳಲ್ಲಿ  ಹಿಂದೂ ಪದ ಹೊರತೇನಲ್ಲಾ.  ಮಾನ್ಯರು ಕೇವಲ ಅಶ್ಲೀಲ ಅರ್ಥವಿದೆ ಎಂದಿದ್ದಾರೆಯೇ ಹೊರತು ನಿಜವಾದ ಅರ್ಥವನ್ನು ಅವರು ಹೇಳದಿರುವುದು ಎಲ್ಲರಿಗೂ ತಿಳಿದ ವಿಚಾರವೇ.

ಆದರೆ ಮಾನ್ಯರ ಹೇಳಿಕೆಯ ನಂತರ ಅದೆಷ್ಟೋ ಪಂಡಿತರು, ಸಾಹಿತಿಗಳು, ವಿದ್ವಾಂಸರು, ಸಾಮಾಜಿಕ ಜಾಲ ತಾಣಗಳಲ್ಲಿ ಹಲವಾರು ಅರ್ಥಗಳನ್ನು, ಟೀಕೆ ಟಿಪ್ಪಣಿಗಳನ್ನು ಬರೆಯುತ್ತಿರುವುದನ್ನು ನಾವು ಗಮನಿಸುತ್ತಲೇ ಇದ್ದೇವೆ, ಹಾಗೆಯೇ ಮಾನ್ಯ ಶಾಶಕರುಗಳು , ಸಚಿವರುಗಳು, ಮಂತ್ರಿಗಳು ವಿರೋಧ ಪಕ್ಷದ ನಾಯಕರುಗಳು ಎಲ್ಲರೂ ಬಹಳ ಗಂಭೀರವಾಗಿ ಚರ್ಚೆ ಮಾಡುತ್ತಿದ್ದಾರೆ. ಇದು ಸಮಾಜಕ್ಕೆ ಬಹಳ ಒಳ್ಳೆಯ ಹಾಗೂ ಆರೋಗ್ಯಕರವಾದದ್ದೇ.  ಆದರೆ ಇಂತಹ ಚರ್ಚೆಗಳು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ,ಧಾರ್ಮಿಕವಾಗಿ ಯಾರಿಗೂ ಅಪಾಯವನ್ನು ಉಂಟುಮಾಡಬಾರದು. ದೇಶ ಈಗಾಗಲೇ ಕರೋನ ಮಹಾಮಾರಿಯ ದಾಳಿಯಲ್ಲಿ ತತ್ತರಿಸಿಹೋಗಿದೆ,ದೇಶದ ಆರ್ಥಿಕ ಪರಿಸ್ಥಿತಿ ಕುಸಿತಗೊಂಡಿದೆ, ದುಡಿಯುವ ಕೈಗಳಿಗೆ ಉದ್ಯೋಗಗಳು ಇಲ್ಲದಂತಾಗಿವೆ, ಸಮಾಜದಲ್ಲಿನ ಜನರ ನೆಮ್ಮದಿಯನ್ನು ಹಾಳುಮಾಡುವಂತಹ ಪ್ರಚೋದನಕಾರಿಯಾದ ಪರ ವಿರೋಧದ ಭಾಷಣಗಳನ್ನು ಮಾಡಿ ಅದಕ್ಕೆ ರಾಜಕೀಯವೆಂಬ ಲೇಪನವನ್ನು ಹಚ್ಚುವ ಕೆಲಸವನ್ನು  ಮಾಡಬಾರದು ಎನ್ನುವುದೇ ನಮ್ಮ ಅಭಿಪ್ರಾಯ.

ಧರ್ಮ ಎನ್ನುವುದು ಅಮಲನ್ನು ನೀಡುವ ಅಫೀಮಿನಂತೆ ಯಾವುದೇ ಧರ್ಮಕ್ಕೆ ಸ್ವಲ್ಪ ಧಕ್ಕೆಯಾದರು ಸಮಾಜದಲ್ಲಿ ಹಲವಾರು ಕೋಮುಗಲಭೆಗಳಿಗೆ ಸೃಷ್ಠಿಯಾಗುವುದರಲ್ಲಿ ಅನುಮಾನವೇ ಇಲ್ಲಾ. ಇಲ್ಲಿ ಧರ್ಮಕ್ಕೆ ಯಾವುದೇ ಚ್ಯುತಿಯಾಗಿಲ್ಲದಿದ್ದರೂ ಪದದ ಅರ್ಥದಲ್ಲಿ ಅಶ್ಲೀಲತೆ ಇದೇ ಎಂದಿದ್ದಾರೆ. ಅದನ್ನು ಸಮರ್ಥಿಸುವವರು ಚರ್ಚೆಗೆ ಕುಳಿತು ಸಂವಾದ ನಡೆಸಿದರೆ ಸಮಸ್ಯೆ ಬಗೆಹರಿಯುತ್ತದೆ.  ಅದು ಬಿಟ್ಟು ಕ್ಷಮಾಪಣೆ ಕೇಳಲೇ ಬೇಕು, ಹರೆ ಬರೇ ವಿದ್ಯಾಭ್ಯಾಸ ಮಾಡಿದ್ದಾರೆ, ನಿಮ್ಮ ಶಾಲಾ ದಾಖಲಾತಿಯಲ್ಲಿ ಅಶ್ಲೀಲ ಹಿಂದೂ ಎಂದು ಬರೆಯಲಾಗಿದೆಯೇ ? ಎಂತೆಲ್ಲಾ ಕೇಳಲಾಗಿದೆ. ನಿಮ್ಮ ಎಲ್ಲರ ಮಾತುಗಳಿಗೂ ಸಮಾಜದಲ್ಲಿ ಉತ್ತಮವಾದ ಗೌರವವಿದೆ. ಸತೀಶ್ ಜಾರಕಿಹೋಳಿಯವರು ಮಾತನಾಡಿರುವುದು ತಪ್ಪು ಅನ್ನುವುದಾದರೆ ಇದುವರೆವಿಗೂ ಆಗಿರುವ ತಪ್ಪುಗಳಿಗೆ ಕ್ಷಮೆ ಕೇಳುವವರು ಯಾರು?

* ಶತಮಾನಗಳಿಂದ ಊರಿನ ಹೊರಗಡೆ ಇರಿಸಿ, ಹಂದಿ ನಾಯಿಗಳಿಗೂ ಕಡೆಯಾಗಿ ನೋಡಿದ್ದೀರಲ್ಲಾ ಇದಕ್ಕೆ ಕ್ಷಮೆ ಕೇಳುವವರು ಯಾರು?

* ಭಾರತ ದೇಶ ಹಳ್ಳಿಗಳ ನಾಡು, ಪ್ರತೀ ಹಳ್ಳಿಯ್ಲಲೂ ಇರುವ ದಲಿತರಿಗೆ ದೇವಸ್ಥಾನದ ಒಳಗೆ ಪ್ರವೇಶವನ್ನೇ ನೀಡಲಿಲ್ಲಾ ಇದಕ್ಕೆ ಕ್ಷಮೆ ಕೇಳುವವರು ಯಾರು?

* ಸಾವಿರಾರು ವರ್ಷಗಳಿಂದ ದಲಿತರನ್ನು ವಿದ್ಯೆಯಿಂದ ವಂಚಿಸಿದ್ದಕ್ಕೆ ಕ್ಷಮೆ ಕೇಳುವವರು ಯಾರು?

* ಧರ್ಮದ ಹೆಸರಿನಲ್ಲಿ ಹೆಣ್ಣನ್ನು ಕೇವಲ ಅಡುಗೆ ಕೋಣೆಗೆ ಸೀಮಿತಗೊಳಿಸಿ ಮಕ್ಕಳನ್ನು ಹೆರುವ ಯಂತ್ರವಾಗಿರಿಸಿದ್ದಕ್ಕೆ ಕ್ಷಮೆ ಕೇಳುವವರು ಯಾರು?

* ದೇವದಾಸಿ ಗೆಜ್ಜೆ ಪೂಜೆ ಹೆಸರಿನಲ್ಲಿ ದಲಿತ ಹಿಂದುಳಿದ ಹೆಣ್ಣುಮಕ್ಕಳನ್ನೇ ವೇಶ್ಯೆಯರನ್ನಾಗಿ ಮಾಡಿದ್ದಕ್ಕೆ ಕ್ಷಮೆ ಕೇಳುವವರು ಯಾರು?

* ದೇವರ ಕೋಲು ಮುಟ್ಟಿದ್ದಕ್ಕೆ 50 ಸಾವಿರ ದಂಡ ವಿಧಿಸಿ ಶಿಕ್ಷಿಸಿದ್ದಕ್ಕೆ ಕ್ಷಮೆ ಕೇಳುವವರು ಯಾರು?

* ಗಣರಾಜ್ಯೋತ್ಸವದ ದಿನದಂದು ಬಾಬಾಸಾಹೇಬರ ಭಾವಚಿತ್ರ ತೆಗೆಸಿ ದಲಿತರ ಭಾವನೆಗಳಿಗೆ ದಕ್ಕೆ ತಂದಿರುವುದಕ್ಕೆ ಕ್ಷಮೆ ಕೇಳುವವರು ಯಾರು?

* ಚಾತುರ್ವರ್ಣ ವ್ಯವಸ್ಥೆಯನ್ನು ಸೃಷ್ಟಿಸಿ, ದಲಿತರು ಊರ ಹೊರಗಡೆ ಇರಬೇಕು, ಅಲ್ಲದೆ ಕುತ್ತಿಗೆಗೆ ಗಡಿಗೆ ಸೊಂಟಕ್ಕೆ ಪೊರಕೆ ಕಟ್ಟಬೇಕು  ಎಂದು ಹೇಳಿದೆಯಲ್ಲಾ ಇದಕ್ಕೆ ಕ್ಷಮೆ ಕೇಳುವವರು ಯಾರು?

* ದಲಿತರನ್ನು ಹರಿಜನರೆಂದು ಕರೆಯಬಾರದು ಎಂದು ಸಂವಿಧಾನದಲ್ಲಿ ಹೇಳಲಾಗಿದೆ. ಆದರೆ ಇವತ್ತಿಗೂ ಹಳ್ಳಿಗಳಲ್ಲಿ ಮೇಲ್ಜಾತಿ ಜನರು ದಲಿತ ಕೇರಿಗಳನ್ನು, ದಲಿತರನ್ನು  ಹರಿಜನಕೇರಿ  ಹರಿಜನರು ಎಂದೇ  ಕರೆಯುತ್ತಿದ್ದಾರೆ ಇದಕ್ಕೆ ಕ್ಷಮೆ ಕೇಳುವವರು ಯಾರು?

* ಪ್ರತೀ ಹಳ್ಳಿಗಳ ಹೋಟೆಲ್ ಗಳಲ್ಲಿ ಶತಮಾನಗಳ ಕಾಲ ತಟ್ಟೆ ಲೋಟಗಳನ್ನು ಪ್ರತ್ಯೇಕವಾಗಿಟ್ಟು ಹೊರಗಡೆ ಊಟ ಹಾಕುತ್ತಿದ್ದರು, ಕಂಟದ ಚಿಪ್ಪಲ್ಲಿ ನೀರು ಕುಡಿಸುತ್ತಿದ್ದರು. ಇದಕ್ಕೆ ಕ್ಷಮೆ ಕೇಳುವವರು ಯಾರು?

* ಉತ್ತರ ಭಾರತದಲ್ಲಿ ಮೇಲ್ಜಾತಿಯ ಹುಡುಗಿಯನ್ನು ದಲಿತರ ಹುಡುಗ ಪ್ರೀತಿಸಿದ್ದಕ್ಕೆ ಇಡೀ ಮನೆಮಂದಿಗೆಲ್ಲಾ ಮೂತ್ರ ಕುಡಿಸಿದ್ದಾರೆ. ಇಂತಹ ಅಮಾನವೀಯ ಕೃತ್ಯಕ್ಕೆ ಕ್ಷಮೆ ಕೇಳುವವರು ಯಾರು?

* ಜ್ಯೋತಿಷ್ಯ ಮೂಢನಂಬಿಕೆ ಹೆಸರಲ್ಲಿ ಮನುಷ್ಯರನ್ನು ಮಾನಸಿಕ ಗುಲಾಮರನ್ನಾಗಿ ಮಾಡಿದ್ದಕ್ಕೆ ಕ್ಷಮೆ ಕೇಳುವವರು ಯಾರು?

* ಅಪ್ರಾಪ್ತ ವಯಸ್ಸಿನಲ್ಲಿ ಗಂಡ ಸತ್ತರೆ ಹೆಂಡತಿಯನ್ನು ವಿಧವೆಯರನ್ನಾಗಿ ಮಾಡಿ  ಅಗ್ನಿಗೆ ಆಹುತಿಯಾಗಬೇಕು ಎನ್ನುವ ಜೀವ ವಿರೋಧಿ ಕೃತ್ಯವಿತ್ತು. ಇದಕ್ಕೆ  ಕ್ಷಮೆ ಕೇಳುವವರು ಯಾರು?

* ಶೂದ್ರರನ್ನು ಪಾಪಯೊನಿಯಿಂದ ಹುಟ್ಟಿದವರು ಎಂದು ಹೇಳಿದ್ದಕ್ಕೆ ಕ್ಷಮೆ ಕೇಳುವವರು ಯಾರು?

* ದಲಿತರಿಗೆ ಶತಮಾನಗಳಿಂದ ಅಧಿಕಾರದಲ್ಲಿ, ಆಸ್ತಿಯಲ್ಲಿ, ವಿದ್ಯೆಯಲ್ಲಿ  ಸಮಾನತೆ ನೀಡದೆ ಶೋಷಣೆ ಮಾಡಿದ್ದಕ್ಕೆ ಕ್ಷಮೆ ಕೇಳುವವರು ಯಾರು?

* ಕೊಳಾಯಿಯಲ್ಲಿ ನೀರು ಕುಡಿಯಲು ಹೋದಾಗ, ಮೈಲಿಗೆಯಾಯಿತೆಂದು ಮರಕ್ಕೆ ಕಟ್ಟಿ ಹೊಡೆದರಲ್ಲಾ ಅದಕ್ಕೆ ಕ್ಷಮೆ ಕೇಳುವವರು ಯಾರು?

* ದೇಶದಲ್ಲಿ ಶಾಂತಿ ಸಹನೆ ಪ್ರೀತಿ ವೈಜ್ಞಾನಿಕ ಸತ್ಯಗಳನ್ನು  ಕಾರಣ-ಪರಿಣಾಮ ತತ್ವದ ಆಧಾರದಡಿಯಲ್ಲಿ ಹುಟ್ಟಿದ ಬೌದ್ಧಧರ್ಮವನ್ನು ಸರ್ವನಾಶ ಮಾಡಿದ್ದಕ್ಕೆ ಕ್ಷಮೆ ಕೇಳುವವರು ಯಾರು?

* ಧರ್ಮ ರಾಜಕಾರಣದ ಹೆಸರಲ್ಲಿ ಹಲವಾರು ಬೌದ್ಧ ಬಿಕ್ಕುಗಳ ತಲೆಗಳನ್ನು ಕಡಿಸಲಾಯಿತು ಇದು ಜೀವ ವಿರೋಧಿ ಕೆಲಸವಲ್ಲವೇ?

ಇದಕ್ಕೆ ಕ್ಷಮೆ ಕೇಳುವವರು ಯಾರು? 

ಮಹರ್ಷಿ ದಯಾನಂದ ಸರಸ್ವತಿಯವರೇ ತಮ್ಮ ಶ್ರೇಷ್ಠ ಧಾರ್ಮಿಕ ಕೃತಿಯಾಗಿರುವ ಸತ್ಯಾರ್ಥ ಪ್ರಕಾಶ ನದಲ್ಲಿ ವೇದ, ಆಗಮನ, ಉಪನಿಷತ್, ಭಾಗವದ್ಗೀತೆ ಎಲ್ಲಿಯೂ ಹಿಂದೂ ಪದದ ಬಳಕೆ ಇಲ್ಲವೆಂದು ಹೇಳಿದ್ದಾರೆ. ಹಿಂದೂ ಪದ ಬಳಕೆಯಾಗಿದ್ದೆ ವಿದೇಶಿ ಆಕ್ರಮಣಕಾರರಾದ ಪರ್ಷಿಯನ್ನರ ಆಗಮನದ ನಂತರ ದೇಶದ ಜನತೆಯನ್ನು ಅಗೌರವದಿಂದ ಕಾಣುವ ದೃಷ್ಠಿಯಿಂದ ಬಳಕೆ ಮಾಡಲಾಗಿದೆ ಎಂದಿದ್ದಾರೆ. ಎಂದು ಭಾರತದಲ್ಲಿ ಜನಗಣತಿ ಪ್ರಾರಂಭವಾಯಿತೋ ಅಲ್ಲಿಯವರೆವಿಗೂ  ಹಿಂದೂ ಪದದ  ಬಳಕೆ ಎಲ್ಲೂ ಇರಲಿಲ್ಲವೆನ್ನುವುದು ಕೆಲವರ ವಾದವಾಗಿದೆ. ಜನಗಣತಿಗೂ ಮುನ್ನ ಈ ದೇಶದಲ್ಲಿ  ಮತಗಳು  ಜಾರಿಯಲ್ಲಿದ್ದವು  ಬೌದ್ಧಮತ, ಸಿಕ್ ಮತ,  ಜೈನಮತ, ಮುಸ್ಲಿಂಮತ ಹೀಗೆ ದೇಶದಲ್ಲಿದ್ದ ಹಲವಾರು ಮತಗಳನ್ನು ಆಧಾರವಾಗಿಟ್ಟುಕೊಂಡು ಜನಗಣತಿ ಮಾಡುವಂತಹ ಸಂದರ್ಭದಲ್ಲಿ  ಆಚರಣೆಗಳು  ಪೂಜೆ ಪುನಸ್ಕಾರಗಳುಗಳ ಆಧಾರದಡಿಯಲ್ಲಿ  ಹಿಂದೂ ಮತವನ್ನು ಪರಿಗಣನೆಗೆ ತೆಗೆದುಕೊಂಡು ಬಳಕೆ ಮಾಡಲಾಗಿದೆ ಎನ್ನವುದು  ಹಲವಾರು ವಿದ್ವಾಂಸರುಗಳ   ವಾದಗಳಾಗಿವೆ.

ಹಿಂದೂ ಪದಕ್ಕೆ ಒಳ್ಳೆಯ ಅರ್ಥವನ್ನು ಹಲವಾರು ವಿದ್ವಾಂಸರುಗಳು ತಮ್ಮ ಗ್ರಂಥಗಳಲ್ಲಿ ಹೇಳಲಾಗಿದೆಯೆಂದರೆ ಚರ್ಚೆಗೆ ಕರೆದರೆ ಬಹಳ ಒಳ್ಳೆಯದು. ಮಾನ್ಯ  ಸಚಿವರು ನಿಮ್ಮ ಶಾಲಾ ದಾಖಲಾತಿಯಲ್ಲಿ ಅಶ್ಲೀಲ ಹಿಂದೂ  ಎಂದು  ಬರೆಸಿದ್ದೀರಾ ? ಎಂದು ಕೇಳುವ ಪ್ರಶ್ನೆಗೆ ಅರ್ಥವೇ ಇಲ್ಲವೆನ್ನಬಹುದು, ನಾವು ಶಾಲೆಗೆ ಕಲಿಯಲು ಸೇರುವುದೇ  ಕೇವಲ 6 ವರ್ಷದ ಮಗುವಾಗಿದ್ದಾಗ ,  ಅಂದು ಮಗುವನ್ನು ಕೇಳಿ ಯಾರೂ  ಧರ್ಮದ, ಜಾತಿಯ ಬಗ್ಗೆ  ಬರೆದಿಲ್ಲಾ, ಅದರಲ್ಲೂ ದಲಿತರಿಗೆ ಅಂಗನವಾಡಿಯಲ್ಲಿ ,ಶಾಲೆಯಲ್ಲಿ  ಕಲಿಯಲು  ಮುಕ್ತ ಪ್ರವೇಶವೇ ಇಲ್ಲಾದಿರುವಾಗ ಇನ್ನು ಧರ್ಮದ ಬಗ್ಗೆ ವಿಚಾರಿಸುವ ಕೆಲಸ ಯಾರು ಮಾಡಲಿಲ್ಲಾ. ಕೇವಲ ಒತ್ತಾಯಪೂರ್ವಕವಾಗಿ ಧರ್ಮವನ್ನು ಹೇರಲಾಗಿದೆ ಎನ್ನುವುದು ದಲಿತರ ಶೋಷಿತರ ಬೌದ್ಧರ ಧಾರ್ಮಿಕ ಅಲ್ಪಸಂಖ್ಯಾರ ಅಭಿಪ್ರಾಯವಾಗಿದೆ.

ಕುವೆಂಪು ರವರು ಹೇಳಿರುವಂತೆ ಮಗು ಹುಟ್ಟುತ್ತಾ ವಿಶ್ವ ಮಾನವ, ಬೆಳೆಯುತ್ತಾ ನಾವು ಅದನ್ನು ಅಲ್ಪಮಾನವನನ್ನಾಗಿ ಮಾಡುತ್ತೇವೆ. ಮತ್ತೆ ವಿಶ್ವ ಮಾನವನಾಗಬೇಕಾದರೆ ಉತ್ತಮ ಜ್ಞಾನಾರ್ಜನೆ ಮುಖ್ಯ ಎಂದಿದ್ದಾರೆ.  ಈ ದಿಕ್ಕಿನಲ್ಲಿ ನಾವು ಶಾಲಾ ದಾಖಲಾತಿಯನ್ನು ಪ್ರಶ್ನಿಸಬೇಕೇ ಹೊರತು ಹುಟ್ಟಿದ ಮಗುವಿಗೂ ಧರ್ಮವೇ ಕಗ್ಗಂಟಾಗಬಾರದು. ಬಾಬಾಸಾಹೇಬ್.ಡಾ.ಅಂಬೇಡ್ಕರ್ ರವರು ಸಹ   ಹಿಂದೂ ಧರ್ಮವನ್ನು ತೊರೆದು ಬೌದ್ಧಧಮ್ಮಕ್ಕೆ ಸೇರುವಾಗ ನಾನು ಹಿಂದೂವಾಗಿ ಹುಟ್ಟಿದ್ದೇನೆ ಆದರೆ ನಾನು ಹಿಂದೂವಾಗಿ ಸಾಯಲಾರೆ.  ನನ್ನ ಮೂಲ ಧರ್ಮವಾದ ಬೌದ್ಧ ಧಮ್ಮಕ್ಕೆ ಸೇರುತ್ತೇನೆ ಎಂದು ಲಕ್ಷಾಂತರ ಅನುಯಾಯಿಗಳ ಜೊತೆಗೆ ಸೇರಿದ್ದಾರೆ. ಪ್ರತೀ ವರ್ಷ ದೇಶದ ಒಂದಲ್ಲಾ ಒಂದು ಪ್ರದೇಶದಲ್ಲಿ ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ, ಕ್ರಿಶ್ಚಿಯನ್,ಇತರೆ ಧರ್ಮಗಳಿಗೆ ಮತಾಂತರಗೊಳ್ಳಲು ಕಾರಣವೇ ಈ ದೇಶದಲ್ಲಿ ಧರ್ಮದ ಹೆಸರಲ್ಲಿ ನಡೆಯುತ್ತಿರುವ ಶೋಷಣೆಳಿಗೆ ಇನ್ನೂ ಕಡಿವಾಣ ಬೀಳದಿರುವುದು. ಹಲವಾರು ಅವಕಾಶಗಳಿಂದ ವಂಚಿತರಾಗಿರುವುದು, ಲಿಂಗ ತಾರತಮ್ಯ, ಹೆಣ್ಣನ್ನು ಪಾಪಯೋನಿ ಎಂದು ಕರೆದದ್ದು, ಚಾತುರ್ವರ್ಣ ಸೃಷ್ಠಿಯ ಆಧಾರದ ಮೇಲೆ ಇವತ್ತಿಗೂ ಹಳ್ಳಿಗಳಲ್ಲಿ ದಲಿತರನ್ನು ನಡೆಸಿಕ್ಕೊಳ್ಳುತ್ತಿರುವುದು ಇವೆಲ್ಲವನ್ನೂ ಕಾಣುತ್ತಿದ್ದೇವೆ.

ದೇಶದಲ್ಲಿ ಜನಸಾಮಾನ್ಯರ ಬದುಕು ಹೇಗೆ ವಿವಿಧ ರೂಪಗಳಾಗಿ, ಬೇರೆ ಬೇರೆ ನೆಲೆಗಟ್ಟಿನ ಆಧಾರದ ಮೇಲೆ ಬದಲಾಗುತ್ತಿವೆಯೋ ಹಾಗೆಯೇ ಅವರ ಜೀವನ ಶೈಲಿಯೂ ಧಾರ್ಮಿಕ ಆಚರಣೆಗಳು ಅನುಸರಣೆಗಳು ಬದಲಾವಣೆಯಾಗುವುದರಲ್ಲಿ ಯಾವ ತಪ್ಪು ಇಲ್ಲಾ.ಧಾರ್ಮಿಕ ಆಚರಣೆ ಅವರವರ ಧರ್ಮದ ಜನತೆಗೆ ಬಿಟ್ಟಿದ್ದು ಎಂದು ಸಂವಿಧಾನದಲ್ಲಿಯೇ ಅಳವಡಿಸಲಾಗಿದೆ.  ಸಂವಿಧಾನಕ್ಕೆ ಗೌರವ ಸಲ್ಲಿಸುವ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಅದನ್ನು ಪಾಲಿಸಬೇಕಾಗಿದೆ.

ಇತ್ತೀಚಿನ ಸುದ್ದಿ