ಯಾರು ಹಿತವರು ಈ ಮೂವರೊಳಗೆ?
- ಧಮ್ಮ ಪ್ರಿಯಾ, ಬೆಂಗಳೂರು
ಇತ್ತೀಚಿಗೆ ಕಾಂಗ್ರೇಸ್ ಪಕ್ಷವು ದಲಿತರ ಓಟನ್ನು ಕಬಳಿಸಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲು ಪಕ್ಷದ ನಾಯಕತ್ವವನ್ನೇ ಬದಲಾಯಿಸಿತು, BJPಯೂ ಸಹ ದಲಿತರ ಓಟಿಗಾಗಿ ಅವರಿಗೆ ದೊರೆಯುವ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಿತು. JDS ಪಕ್ಷವು ಗೆದ್ದಮೇಲೆ ಸಮಾಜದ ಬಗ್ಗೆ ಕಳಕಳಿ ಇದ್ದ ಬುದ್ಧ ಬಸವ ಅಂಬೇಡ್ಕರ್ ಆಗಬೇಡಿ, ಸಮಾಜದಲ್ಲಿನ ತಮ್ಮ ಜಾತಿ ಜನಾಂಗದ ಉದ್ಧಾರದ ಕಡೆಗೆ ಗಮನಹರಿಸಿ ಎಂದು ಸ್ವಾಮೀಜಿಯವರಿಂದ ಆಶೀರ್ವಚನ ಪಡೆಯಿತು. ಏನಿದು ಈ ಪಕ್ಷಗಳ ದಲಿತರ ಓಟಿನ ಕಬಳಿಕೆಯ ದೊಂಬರಾಟ? ಕಳೆದ 8-10 ವರ್ಷಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಇವರಿಗೆ ಕಾಣಲಿಲ್ಲವಾ? ಅವರಿಗೆ ಸಿಗಬೇಕಾದ ಸವಲತ್ತುಗಳ ಕೊರತೆ ಬಗ್ಗೆ ಇವರಿಗೆ ಅರಿವಿರಲಿಲ್ಲವಾ? ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳು ಇವರಿಗೆ ಮೋಜಿನಂತಿದ್ದವಾ? ವಿದ್ಯಾರ್ಥಿಗಳ ದಾರುಣ ಕೊಲೆಗಳು ಇವರ ಅರಿವಿಗೆ ಬಂದಿರಲೇಯಿಲ್ಲವಾ? ದಲಿತರ ಸಮಸ್ಯೆಗಳನ್ನು ಬಗೆಹರಿಸಿ ಅವರ ಸವಲತ್ತುಗಳನ್ನು ಜಾರಿ ಮಾಡಿ ಎಂದು ನಡೆದ ಹೋರಾಟಗಳು ಚಳುವಳಿಗಳು ಇವರ ಕಣ್ಣಿಗೆ ಕಾಣಲೇ ಇಲ್ಲವಾ?
ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಎಲ್ಲಾ ದೊಂಬರಾಟಗಳು ನಡೆಯುವುದರ ಜೊತೆಜೊತೆಯಲ್ಲಿಯೇ ಸವಲತ್ತುಗಳ ಘೋಷಣೆ, ದಲಿತ ನಾಯಕರಿಗೆ ಸ್ಥಾನಮಾನಗಳು, ದಲಿತರ ಮನೆಯಲ್ಲಿ ಊಟ, ಹೆಣ್ಣುಮಕ್ಕಳ ಹಾಸ್ಟೆಲ್ ಗಳಿಗೆ ಭೇಟಿ ಮತ್ತು ತಕ್ಷಣವೇ ಭದ್ರತೆ ಒದಗಿಸುವ ತೀರ್ಮಾನಗಳು. ಕೊಳಚೆ ಕೇರಿಗಳಾಗಿ ನಾರುತ್ತಿದ್ದ ಕೇರಿಗಳಿಗೆ ಸೀಮೆಂಟ್ ರಸ್ತೆಗಳು, ಬೀದಿದೀಪಗಳ ರಿಪೇರಿ ಎಲ್ಲವೂ ನಡೆಯುತ್ತಿವೆ. ಇವರಿಗೆ ದಲಿತರ ಮೇಲಿನ ಈಗಿನ ಕಾಳಜಿ ಸಾರ್ವಕಾಲಿಕವಾಗಿ ಯಾಕಿರುವುದಿಲ್ಲಾ ಎನ್ನುವುದೇ ದೊಡ್ಡ ಪ್ರಶ್ನೆಯಾಗಿವೆ. ಇವರ ಮೂಲ ಉದ್ದೇಶವೇ ದಲಿತರ ಓಟನ್ನು ಪಡೆದು ಅಧಿಕಾರಕ್ಕೆ ಬಂದ ತಕ್ಷಣ ತನ್ನಿಚ್ಚೆಯಂತೆ ಕಾನೂನುಗಳನ್ನು ಜಾರಿಮಾಡಿ ದಲಿತರ ಹಕ್ಕುಗಳನ್ನು ಸರ್ವನಾಶ ಮಾಡುವುದೇ ಹೊರತು ಬೇರೆ ಏನೂ ಅಲ್ಲವೆನ್ನಬಹುದು. ಅಧಿಕಾರದ ಮದ ಅವರಿಗೆ, ತಾತ್ಕಾಲಿಕ ಸವಲತ್ತುಗಳು ದಲಿತರಿಗೆ, ಹೇಗಿದೆ ನಮ್ಮ ದೇಶದ ರಾಜಕಾರಣ?
ಮಾನ್ಯ ಅರವಿಂದ್ ಕೇಜ್ರೀವಾಲ್ ಹೇಳುವ ಹಾಗೆ ಕಾಂಗ್ರೇಸ್ ಪಕ್ಷವು BJP ಯ ಪತ್ನಿಯಂತೆ. ಇವರಿಬ್ಬರು ಪತಿ ಪತ್ನಿಯರು, ಇವರು ಒಂದೇ ಮನೆಯಲ್ಲಿ ವಾಸವಿರುತ್ತಾರೆ ಅದುವೇ ರಾಜಕೀಯ ಅಧಿಕಾರವೆಂಬ ಅರಮನೆ. ಇವರ ಮೂಲ ಉದ್ದೇಶವೇ ಸಂವಿಧಾನದ ಮೂಲ ಆಶಯಗಳಿಗೆ ಕೊಳ್ಳಿಯಿಟ್ಟು, ದಲಿತ, ಹಿಂದುಳಿದ, ಶೋಷಿತರನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಸಮಾನತೆಯನ್ನು ಸಾಧಿಸದಂತೆ ಕಾಪಾಡಿಕೊಳ್ಳುವುದಾಗಿದೆ. ಹಾಗಾದರೆ ಮುಂದಿನ ಚುನಾವಣೆಯಲ್ಲಿ ಯಾರು ಹಿತವರು ಈ ಮೂವರೊಳಗೆ ಎಂದು ಯೋಚಿಸಬೇಕಾದ ಅನಿವಾರ್ಯತೆ ಈ ದೇಶದ ಮೂಲನಿವಾಸಿಗಳಿಗಿದೆ.
ಇಂದಿನ ಅಖಂಡ ಭಾರತದ ರಾಜಕೀಯ ರಂಗದಲ್ಲಿ ನಡೆಯುತ್ತಿರುವ ಮಹತ್ತರವಾದ ಬದಲಾವಣೆಗಳನ್ನು ಗಮನಿಸಿದರೆ ಬಾಬಾಸಾಹೇಬರು ಹೇಳಿರುವ ಮಾತು ಸತ್ಯವೆನಿಸುತ್ತದೆ. ಇತಿಹಾಸವನ್ನು ಅರಿಯದವರು ಇತಿಹಾಸವನ್ನು ಸೃಷ್ಠಿಸಲಾರರು ಎನ್ನುವ ಮಾತುಗಳಲ್ಲಿ ಬಹಳ ಗಂಭೀರತೆ ಇದೇ. ನಾವು ಇಂದು ವಿದ್ಯಾಭ್ಯಾಸಕ್ಕಾಗಿ ಅಧ್ಯಯನ ನಡೆಸುತ್ತಿರುವ ಇತಿಹಾಸದ ಪುಟಗಳು ಕೇವಲ ಒಂದು ವರ್ಗದ, ಒಂದು ಧರ್ಮದ, ಒಂದು ಪರಂಪರೆಯ, ವೈಭವೀಕರಣವಾಗಿದ್ದು, ಇದು ಕೇವಲ ಮಹಿಳೆಯರು ಮತ್ತು ಮಕ್ಕಳನ್ನು ರಂಜಿಸುವ ಇತಿಹಾಸದ ಪುಟಗಳಾಗಿವೆ ಎನ್ನುವುದರಲ್ಲಿ ಅನುಮಾನವೇ ಇಲ್ಲವಾಗಿದೆ. ಈ ದೇಶದಲ್ಲಿ ಮೊದಲಿನಿಂದಲೂ ವಿದ್ಯಾವಂತ ಯುವಪೀಳಿಗೆಗೆ ಬೋದಿಸಿಕೊಂಡು ಬಂದಿರುವ ವಿಚಾರಗಳೆಂದರೆ “ಭಾರತ ಬಡಜನರಿಂದ ಕೂಡಿದ ಶ್ರೀಮಂತ ರಾಷ್ಟ್ರ”, “ಅತಿಯಾದ ಜನಸಂಖ್ಯೆಯೇ ಬಡತನಕ್ಕೆ ಮೂಲ ಕಾರಣ” ಎಂತೆಲ್ಲಾ ನಂಬಿಸಿ ಅವುಗಳನ್ನೇ ಪಠ್ಯಪುಸ್ತಕದಲ್ಲಿ ಸೇರಿಸಿ ಬೋಧಿಸಲಾಗಿದೆ. ಬಡತನಕ್ಕೆ ಕಾರಣ ಸಂಪತ್ತಿನ ಅಸಮಾನ ಹಂಚಿಕೆ , ವಿದ್ಯೆಯಿಂದ ವಂಚಿತರಾದ ಹಲವಾರು ವರ್ಗಗಳ ಮೇಲೆ ಶತಮಾನಗಳಿಂದ ನಡೆಸಿದ ಶೋಷಣೆ, ಅಧಿಕಾರದಲ್ಲಿ ಅಸಮಾನತೆ, ಧಾರ್ಮಿಕ ಆಚರಣೆಯ ನೆಪದಲ್ಲಿ ಶೋಷಣೆ, ಮೂಢನಂಬಿಕೆ, ಅವೈಜ್ಞಾನಿಕ ಆಚರಣೆಗಳ ಹೆಸರಲ್ಲಿ ಶೋಷಣೆ, ಮಾನಸಿಕ ಗುಲಾಮಗಿರಿತನ ಇವೆಲ್ಲವುಗಳು ಬಡತನಕ್ಕೆ ಮೂಲ ಕಾರಣಗಳು ಎಂದು ಯಾವ ಇತಿಹಾಸ ತಜ್ಞರು, ವಿಜ್ಞಾನದ ಶಿಕ್ಷಕರು, ಆರ್ಥಿಕ ತಜ್ಞರು ಬೋಧನೆ ಮಾಡಿಲ್ಲಾ. ಇಂದಿನ ಪಠ್ಯ ಪುಸ್ತಕದಲ್ಲಿರುವ ವಿಚಾರಗಳೇ ನಿಜವಾದ ಸತ್ಯಗಳೆಂದು ಬೋಧಿಸುತ್ತಿರುವುದು ಬಹು ದೊಡ್ಡ ದುರಂತವಾಗಿದೆ. ಕುವೆಂಪು ಹೇಳಿದ ಹಾಗೆ ವಿಜ್ಞಾನದ ಶಿಕ್ಷಕರ ಜವಾಬ್ದಾರಿ ಹೊಸ ಹೊಸ ಆವಿಷ್ಕಾರಗಳನ್ನು ಮಕ್ಕಳಲ್ಲಿ ಕಲಿಸುವುದೇ ಹೊರತು ಶಾಲೆಯಲ್ಲಿ ಶಾಸ್ತ್ರಪುರಾಣಗಳನ್ನು ನಂಬಿಸುವುದಲ್ಲಾ ಎಂದಿದ್ದಾರೆ.
ಅಸಮಾನತೆಯಿಂದ, ಶೋಷಣೆಯಿಂದ, ಅಮಾನವೀಯತೆಯಿಂದ ಕೂಡಿದ್ದ ಈ ಅಖಂಡ ಭಾರತವು ಮನುಧರ್ಮ ಶಾಸ್ತ್ರದಡಿಯಲ್ಲಿ ಕೊಳೆತು ನಾರುತ್ತಿತ್ತು. ಇಂತಹ ವ್ಯವಸ್ಥೆಯೊಳಗೆ 6ನೇ ಶತಮಾನದಲ್ಲಿ ಭಗವಾನ್ ಬುದ್ಧರ, 12 ನೇ ಶತಮಾನದಲ್ಲಿ ಬಸವಣ್ಣನವರ ಆಗಮನವಾಯಿತು. 18-19 ನೇ ಶತಮಾನದಲ್ಲಿ ಬಾಬಾಸಾಹೇಬ್ ಡಾ. ಅಂಬೇಡ್ಕರ್ ರವರ ಹಾಗೂ ಮಹಾತ್ಮಾ ಗಾಂಧೀಜಿ ಯವರ ಆಗಮನವಾಯಿತು. ಭರತ ಖಂಡದಲ್ಲಿ ಗಾಂಧಿ ಮತ್ತು ಅಂಬೇಡ್ಕರರ ಯುಗ ಪ್ರಾರಂಭವಾಗುತ್ತಿದ್ದಂತೆ ನವ ಭಾರತ ನಿರ್ಮಾಣದ ಹಾದಿ ಪ್ರಾರಂಭವಾಯಿತು ಎನ್ನಬಹುದು, ಗಾಂಧೀಜಿಯವರು ಕಾಂಗ್ರೇಸ್ ಮುಂಚೂಣಿ ನಾಯಕರಾಗಿ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಂಡರೆ, ಡಾ ಅಂಬೇಡ್ಕರ್ ರವರು ಅಸಮಾನತೆಯಿಂದ ಕೂಡಿದ, ಶೋಷಣೆಗೆ ಒಳಗಾಗಿ ಶತಶತಮಾನಗಳಿಂದಲೂ ಊರಿನ ಹೊರಗೆ ವಾಸವಾಗಿದ್ದ ಜನಾಂಗದ, ಹಾಗೂ ಯಾವುದೇ ಹಕ್ಕುಗಳಿಲ್ಲದೆ ಕೇವಲ ಅಡುಗೆ ಕೋಣೆಗೆ ಸೀಮಿತವಾಗಿದ್ದ ಹಾಗೂ ಮಕ್ಕಳನ್ನು ಹೆರುವ ಯಂತ್ರವಾಗಿದ್ದ ಮಹಿಳೆಯರ ಪರವಾಗಿ, ಅವರ ಏಳಿಗೆಗೆ ಪಣತೊಟ್ಟು ನಿಂತರು.
ಇಂದಿನ ಮೀಸಲಾತಿ ನಾಯಕರು ತಮ್ಮಗಳ ಹಿತರಕ್ಷಣೆಗೋ ಅಥವಾ ತಕ್ಷಣದ ರಾಜಕಾರಣಕ್ಕೋ ಭಾರತೀಯ (ಬ್ರಾಹ್ಮಣ) ಜನತಾ ಪಾರ್ಟಿಯನ್ನು (ಬಿಜೆಪಿ) ಸೇರುತ್ತಿರುವುದು ಬಹಳ ನೋವಿನ ಸಂಗತಿಯಾಗಿದೆ, BJP ಸೇರುತ್ತಿರುವ ನಾಯಕರುಗಳ ಕುಂಟು ನೆಪಗಳು ಏನೆಂದರೆ “ಬಾಬಾಸಾಹೇಬರೇ ಹೇಳಿದ್ದಾರೆ ದಲಿತರು ಕಾಂಗ್ರೇಸ್ ಬಿಟ್ಟು ಹೊರಬರಬೇಕು ಅದೊಂದು ಉರಿಯುತ್ತಿರುವ ಮನೆ, ಅದನ್ನು ಹೊಕ್ಕಿರಾದರೆ ಸುಟ್ಟು ಬೂದಿಯಾಗುತ್ತೀರಿ, ಕಾಂಗ್ರೇಸ್ ದಲಿತರ ವಿರೋಧಿ ಪಕ್ಷ ಎಂದು ಸಮರ್ಥನೆ ನೀಡುತ್ತಿದ್ದಾರೆ. ನಿಜ ಅಂದು ಅಧಿಕಾರದಲ್ಲಿದ್ದ ಬಲಿಷ್ಠವಾದ ಮತ್ತು ಬಹಳ ಜನಪ್ರಿಯವಾದದ್ದು ಕಾಂಗ್ರೇಸ್ ಪಕ್ಷವಾಗಿದ್ದರಿಂದ ಅದನ್ನೇ ಗುರಿಯಾಗಿಟ್ಟುಕೊಂಡು ಹೇಳಿದ್ದಾರೆ. ಅದನ್ನು ಇಂದಿನ ವಿದ್ಯಾವಂತ ದಲಿತರು ಮರೆಯುವಂತಿಲ್ಲಾ, ಹಾಗೆಂದ ಮಾತ್ರಕ್ಕೆ ನಾವು ಕಾಂಗ್ರೇಸ್ ಪಕ್ಷವನ್ನು ಅಪ್ಪಿಕೊಳ್ಳಬೇಕು ಎನ್ನುವಂತೆಯೂ ಇಲ್ಲಾ.
ಬಾಬಾಸಾಹೇಬರು ಹೇಳಿರುವ ಹಾಗೆ ಭಾರತ ದೇಶದಲ್ಲಿರುವ ಕಾಂಗ್ರೇಸ್ ಮತ್ತು ಬಿಜೆಪಿ ಎರಡೂ ಬಲಾಢ್ಯವುಳ್ಳ ಪಕ್ಷಗಳು ಬ್ರಾಹ್ಮಣರ ಮೇವುಗಾಡುಗಳೇ, ಕಾಂಗ್ರೇಸ್ ಹುಲ್ಲೊಳಗಿನ ಹಾವಾದರೆ, ಬಿಜೆಪಿ ಹುಲ್ಲಿನ ಮೇಲಿನ ಹಾವುಗಳು, ಇವೆರಡೂ ದಲಿತರ/ ಶೋಷಿತರ ಪಾಲಿನ ಕಂಟಕಗಳೇ ಎಂದಿದ್ದಾರೆ. ಬಾಬಾಸಾಹೇಬರು ಬದುಕಿದ್ದಂತಹ ಸಂದರ್ಭದಲ್ಲಿ ದಲಿತರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಾ, 1932 ರಲ್ಲಿ ನಡೆದ ದುಂಡು ಮೇಜಿನ ಸಮ್ಮೇಳನದಲ್ಲಿ ಶೋಷಿತರ ಪರವಾಗಿ ಭಾಗವಹಿಸಿ ದಲಿತರಿಗೆ ಓಟಿನ ಹಕ್ಕನ್ನು ತಂದುಕೊಟ್ಟರು, ಆದರೆ ದಲಿತರಿಗೆ ವಿದ್ಯೆಯಿಲ್ಲದ ಹಾಗೂ ಊರಿನ ಹೊರಗಿರುವ ಕಾರಣ ಅವರಿಗೆ ಓಟು ಹಾಕುವ ಹಕ್ಕು ಬೇಡವೆಂದು ಮಾತನಾಡಿದ ಕಾಂಗ್ರೇಸ್ ನಾಯಕರು ಗಾಂಧೀಜಿಯವರನ್ನು ದುಂಡುಮೇಜಿನ ಸಭೆಗೆ ಕಳುಹಿಸಿದರು. ಗಾಂಧೀಜಿಯವರು ಅಂಬೇಡ್ಕರ್ ರವರು ಮಂಡಿಸಿದ ವಿಚಾರಗಳ ವಿರುದ್ಧವಾಗಿ ವಾದವನ್ನು ಮಂಡಿಸಿದರು.
ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಈ ದೇಶದಲ್ಲಿ ಎಲ್ಲರೂ ಒಂದಾಗಿದ್ದೇವೆ, ನಮ್ಮ ದೇಶದಲ್ಲಿ ಎಲ್ಲರೂ ಸಮಾನತೆಯಿಂದ ಐಕ್ಯತೆಯಿಂದ ಬದುಕುತ್ತಿದ್ದೇವೆ ಎಂದು ವಾದಿಸಿದರು. ಅಂಬೇಡ್ಕರ್ ಮತ್ತು ಗಾಂಧೀಜಿಯ ಮಾತುಗಳಲ್ಲಿನ ಸತ್ಯತೆಯನ್ನು ತಿಳಿಯಲು ಅಂದಿನ ವೈಸ್ರಾಯ್ ರಾಮ್ ಸೇ ಮ್ಯಾಕ್ ಡೊನಾಲ್ಡ್ ರವರು ಭಾರತಕ್ಕೆ ಒಂದು ಆಯೋಗವನ್ನೇ ಕಳಿಸಿ ವರದಿ ಸಲ್ಲಿಸಲು ತೀರ್ಮಾನಿಸಲಾಯಿತು. ಅದಕ್ಕೆ ಸಾಕ್ಷಿಯಾಗಿ ಬಾಬಾಸಾಹೇಬರು ಕಾಳಾರಾಮ್ ದೇವಾಲಯ ಪ್ರವೇಶ ಮತ್ತು ಚೌಡರ್ ಕೆರೆಯ ನೀರನ್ನು ಮುಟ್ಟುವ ಚಳುವಳಿಯನ್ನು ಮಾಡಬೇಕಾಯಿತು. ಚಳುವಳಿಯಲ್ಲಿ ನಡೆದ ಅಮಾನವೀಯ ಘಟನೆಯನ್ನು ಗಮನಿಸಿದ ಆಯೋಗವು ವರದಿಯನ್ನು ಸಲ್ಲಿಸಿತ್ತು. ದೇಶದಲ್ಲಿ ಮನುಧರ್ಮ ಶಾಸ್ತ್ರವು ಜಾರಿಯಲ್ಲಿದ್ದು ಜಾತಿ ಆಧಾರದ ಮೇಲೆ ದಲಿತರನ್ನು ಅಮಾನವೀಯವಾಗಿ ನಡೆಸಿಕೊಂಡಿಕೊಳ್ಳುತ್ತಿರುವ ಹಾಗೂ ದೇಶದಲ್ಲಿರುವ ಶೋಷಣೆ ಮತ್ತು ಅಸಮಾನತೆಯನ್ನು ಬ್ರೀಟೀಷರಿಗೆ ವರದಿ ಮಾಡಲಾಯಿತು.
ಕಾಂಗ್ರೇಸ್ ಮತ್ತು ಗಾಂಧೀಜಿಯವರಿಗೆ ಸ್ವಾತಂತ್ರ್ಯ ಬೇಕಾಗಿತ್ತೇ ಹೊರತು ಶೋಷಿತರ/ ದಲಿತರ / ಧಾರ್ಮಿಕ ಅಲ್ಪಸಂಖ್ಯಾತರ ವಿಮೋಚನೆಯ ಅಗತ್ಯವಿರಲಿಲ್ಲಾ. ಆದರೆ ಮೂರನೇ ದುಂಡು ಮೇಜಿನ ಸಮ್ಮೇಳನದಲ್ಲಿ ದಲಿತರಿಗೆ ಸಿಕ್ಕ ಮತದಾನದ ಹಕ್ಕು ಹಾಗೂ ಮೀಸಲು ಕ್ಷೇತ್ರಗಳ ಚುನಾಯಿತ ಹಕ್ಕುಗಳನ್ನು ದಿಕ್ಕರಿಸಿ ಅದನ್ನು ಹಿಂಪಡೆಯಲು ಗಾಂಧೀಜಿಯವರು ಪೂನಾದ ಯರವಾಡ ಜೈಲಿನಲ್ಲಿ 21 ದಿನಗಳ ಕಾಲ ಉಪವಾಸ ಕುಳಿತದ್ದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಒಂದು ವೇಳೆ ಅಂದಿನ ಕಾಂಗ್ರೇಸ್ ನಾಯಕರಿಗೆ ದಲಿತರ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ ಬಾಬಾಸಾಹೇಬರು ಎಂದೂ ಕಾಂಗ್ರೇಸ್ ಪಕ್ಷವನ್ನು ತೆಗಳುವ ಅಗತ್ಯವಿರಲಿಲ್ಲಾ. ಸ್ವಾತಂತ್ರ್ಯ ಬಂದ ನಂತರ ಮೊದಲ ಕಾನೂನು ಮಂತ್ರಿಯಾಗಿದ್ದ ಬಾಬಾಸಾಹೇಬರು ಹಿಂದೂ ಕೋಡ್ ಬಿಲ್ ಜಾರಿ ಮಾಡಲು ಒತ್ತಾಯಿಸಿದರು. ಮಹಿಳೆಯರಿಗೆ ಈ ದೇಶದಲ್ಲಿ ಸಿಗಬೇಕಾದ ಸಮಾನತೆಯನ್ನು ಕೇಳಿದಾಗ ಅಧಿಕಾರದಲ್ಲಿದ್ದ ಕಾಂಗ್ರೇಸ್ ಪಕ್ಷವು ನಿರಾಕರಿಸಿದ ಪರಿಣಾಮವಾಗಿ ತನ್ನ ಮಂತ್ರಿ ಪದವಿಗೆ ರಾಜೀನಾಮೆ ನೀಡಬೇಕಾಯಿತು.
ಪೆರಿಯಾರ್ ರವರೂ ಸಹ ಕಾಂಗ್ರೇಸ್ ಪಕ್ಷ ಬ್ರಾಹ್ಮಣರ ಒಂದು ಮೇವುಗಾಡು ಎಂದಿದ್ದಾರೆ. ಈ ಕಾರಣಕ್ಕಾಗಿಯೇ ಕಾಂಗ್ರೇಸ್ ಪಕ್ಷದಲ್ಲಿ ಶೋಷಿತರ ವಿಮೋಚನೆಗೆ ಅವಕಾಶವೇ ಇಲ್ಲವೆಂದು ಅರಿತ ಬಾಬಾಸಾಹೇಬರು ಮೀಸಲು ಕ್ಷೇತ್ರದ ನಾಯಕರು ಮತ್ತು ದಲಿತರು ಕಾಂಗ್ರೇಸ್ ಪಕ್ಷವನ್ನುಸೇರುವ ಅಗತ್ಯವಿಲ್ಲಾ ಎಂದಿದ್ದಾರೆ. ಇಷ್ಟೆಲ್ಲಾ ವಿರೋಧಗಳ ನಡುವೆಯೂ ದಲಿತರು ಶೋಷಿತ ಸಮುದಾಯಗಳು ಧಾರ್ಮಿಕ ಅಲ್ಪಸಂಖ್ಯಾತರು ಮತ್ತೆ ಕಾಂಗ್ರೇಸ್ ಪಕ್ಷವನ್ನು ಅಪ್ಪಿಕೊಳ್ಳುವ ಅನಿವಾರ್ಯತೆ ಈ ದೇಶಕ್ಕೆ ಬಂದೊದಗಿದೆ. ಕೆಲವು ಪ್ರಜ್ಞಾವಂತ ದಲಿತ/ ಶೋಷಿತ ನಾಯಕರು ಇತರೆ ಕಾಂಗ್ರೇಸೇತರ ಪಕ್ಷದವರು ಮಾತನಾಡುವುದು ಕಾಂಗ್ರೇಸ್ ಪಕ್ಷ ನಮಗೆ ಪರ್ಯಾಯವೇ ಅಲ್ಲಾ, ಬಾಬಾಸಾಹೇಬರ ಕನಸ್ಸಿನ ಕೂಸು ಬಹುಜನ ಸಮಾಜ ಪಕ್ಷ ಎನ್ನುತ್ತಾರೆ. ಇದನ್ನು ಕೆಲವರು ಅಲ್ಲಿ ಇಲ್ಲಿ ವಾದ ಮಾಡುವುದನ್ನು ನಾವು ಗಮನಿಸಬಹುದಾಗಿದೆ. ಹಾಗಾದರೆ ಉತ್ತರ ಪ್ರದೇಶದಲ್ಲಿ ಮೂರೂ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ BSP ಇಂದು ನೆಲಕಚ್ಚಲು ಕಾರಣವೇನೆಂಬುದು ಯಾರಿಗೂ ತಿಳಿಯದಾಗಿದೆ, ಮಾಯಾವತಿಯ ರಾಜಕಾರಣವನ್ನು ಗಮನಿಸಿದ ಪ್ರಜ್ಞಾವಂತ ದಲಿತರು/ಬಹುಜನರು ಇನ್ನೇನು ನಮಗೆಲ್ಲಾ ಸಂಪೂರ್ಣ ವಿಮೋಚನೆಯ ಹಾದಿ ದೊರಕಿತು ಎನ್ನುವಷ್ಟರಲ್ಲಿ BSP ಮತ್ತೆ ನೆಲಕಚ್ಚಿತು. ದೇಶದ ಪ್ರಧಾನಿಯಾಗಬಹುದು ಎಂದು ಕನಸ್ಸು ಕಂಡ ಮಾಯಾವತಿಯವರ ಕನಸ್ಸಿಗೆ ತಣ್ಣೀರೆರಚಿದಂತಾಯಿತು. ಕರ್ನಾಟಕದ ಪ್ರಜ್ಞಾವಂತ ಬಹುಜನರಲ್ಲಿ ಕಣ್ಣು ತೆರೆಯುವ ಕ್ಷಣಗಣನೆಗಳು ಪ್ರಾರಂಭವಾಗುತ್ತಿದ್ದಂತೆ BSPಯ ಏಕ ನಾಯಕರನ್ನು BJPಯು ತನ್ನ ತೆಕ್ಕೆಗೆ ಸೇರಿಸಿಕೊಂಡುಬಿಟ್ಟಿತು.
ಹಾಗಾದರೆ ನಮ್ಮ ಪರ್ಯಾಯ ಮತ್ತೆ ಕಾಂಗ್ರೇಸ್ ಪಕ್ಷವೇ? BJPಯೇ? ಅಥವಾ ಇಂದಿನ ಸ್ಥಳೀಯ ಪಕ್ಷವಾಗಿರುವ JDS ಪಕ್ಷವೇ? ಯಾರು ಹಿತವರು ಈ ಮೂವರೊಳಗೆ. ಕಾಂಗ್ರೇಸ್ ತನ್ನ ಅಧಿಕಾರದ ಅವಧಿಯಲ್ಲಿ ದಲಿತರನ್ನು ಶೋಷಿತರನ್ನು ಕಡೆಗಣಿಸಿ ತನ್ನ ಪ್ರತಿಷ್ಠೆಯನ್ನು ಮೆರೆದ ಪಕ್ಷವಾಗಿದ್ದು, ದೇಶದ/ಬಂಡವಾಳಶಾಹಿಗಳ ಹಿತದೃಷ್ಠಿಯಿಂದ ಸ್ವಲ್ಪಮಟ್ಟಿಗೆ ಕೆಲವು ಯೋಜನೆಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಯಿತು. ತನ್ನ ಅಧಿಕಾರದ ಅವಧಿಯಲ್ಲಿ ಹಲವಾರು ಖಾಸಗೀ ಹೊಡೆತನದ ಸಂಸ್ಥೆಗಳೆಲ್ಲವನ್ನು ಸಾರ್ವತ್ರೀಕರಣ/ ರಾಷ್ಟ್ರೀಕರಣಗೊಳಿಸಿ ದೇಶದ ಎಲ್ಲಾ ಜನಾಂಗಗಳಿಗೂ ಅವರ ವಿದ್ಯೆಗೆ ತಕ್ಕಂತೆ ಅಧಿಕಾರದಲ್ಲಿ ಅವಕಾಶಗಳು ಸಿಗಲಿ ಎಂದು ಯೋಚಿಸಿತು. ಪ್ರಧಾನಿಗಳ ಆಡಳಿತಾವಧಿಯಲ್ಲಿ ಯಾರೂ ಎಷ್ಟು ಸಾರ್ವತ್ರೀಕರಣ ಮತ್ತು ಖಾಸಗೀಕರಣ ಮಾಡಿದ್ದಾರೆ ಎಂದು ಒಮ್ಮೆ ಗಮನಿಸಬೇಕಾಗಿದೆ.
ಪ್ರಧಾನಿಗಳ ಹೆಸರು –ಸಾರ್ವತ್ರೀಕರಣ– ಖಾಸಗೀಕರಣದ ಪಟ್ಟಿ
1 ಜವಾರಹಲಾಲ್ ನೆಹರು–33 –No privatisation
2 ಲಾಲ್ ಬಹಾದ್ದೂರ್ ಶಾಸ್ತ್ರಿ –05– No privatisation
3 ಇಂದಿರಾ ಗಾಂಧಿ –66 –No privatisation
4 ಮುರಾರ್ಜಿ ದೇಸಾಯಿ –09– No privatisation
5 ರಾಜೀವ್ ಗಾಂಧಿ– 16– No privatisation
6 ವಿ ಪಿ ಸಿಂಗ್ 02– No –privatisation
7 ಪಿ ವಿ ನರಸಿಂಹ ರಾವ್ –14– No privatisation
8 ಐ ಕೆ ಗುಜರಾಲ್ HD ದೇವೇಗೌಡ –03 –No privatisation
9 ಅಟಲ್ ಬಿಹಾರಿ ವಾಜಪೇಯಿ –17– 07 privatisation
10 ಮನಮೋಹನ್ ಸಿಂಗ್– 23– 03 privatisation
11 ವಿಶ್ವಗುರು ನರೇಂದ್ರ ಮೋದಿ– 00– 23 privatisation
ಇದು ದೇಶದ ದಲಿತ ಹಿಂದುಳಿದ ಅಲ್ಪಸಂಖ್ಯಾತ ಜನರ ಬಗೆಗಿನ ಆಡಳಿತ ಪಕ್ಷಗಳ ಕಾಳಜಿಗಳು, ಉದ್ಯೋಗ ಸೃಷ್ಟಿಯ ಹೊಣೆಗಾರಿಕೆಯನ್ನು ತನ್ನ ಹೆಗಲಮೇಲಿಟ್ಟುಕೊಳ್ಳುವಲ್ಲಿ ತೊಳಲಾಡತೊಡಗಿವೆ. ಇವುಗಳ ಜೊತೆಜೊತೆಯಲ್ಲಿಯೇ ಉಳುವವನೇ ಭೂಮಿಗೆ ಒಡೆಯ, ಜೀತ ಪದ್ಧತಿಯಿಂದ ವಿಮುಕ್ತಿ ಕಾಯಿದೆ, ದಲಿತ ಮಕ್ಕಳ ಶಿಕ್ಷಣಕ್ಕಾಗಿ ಉಚಿತ ಹಾಸ್ಟೆಲ್ ವ್ಯವಸ್ಥೆ, ಇಂದಿರಾ ಆವಾಸ್ ಯೋಜನೆಯಡಿಯಲ್ಲಿ ಸಣ್ಣ ಪುಟ್ಟ ಮನೆಗಳು, ಭಾಗ್ಯಜ್ಯೋತಿ ಯೋಜನೆಯಡಿಯಲ್ಲಿ ಮನೆಗೊಂದು ದೀಪ, ಶಿಕ್ಷಣದ ಅಭಿವೃದ್ದಿಗಾಗಿ ಸ್ಕಾಲರ್ ಶಿಫ್ , ಹೀಗೆ ಎಲ್ಲವನ್ನು ಅಲ್ಪ ಸ್ವಲ್ಪವಾಗಿ ಮಾಡುತ್ತಾ ಬಂದಿವೆ. ಇಷ್ಟೆಲ್ಲಾ ಕೆಲಸಗಳನ್ನು ಮಾಡಿದ್ದರು ಪ್ರಸ್ತುತ ದಿನಗಳಲ್ಲಿ ಕಾಂಗ್ರೇಸ್ ಪಕ್ಷವು ಕೇಂದ್ರ ಸರ್ಕಾರದ ರಚನೆಯಲ್ಲಿ ವೈಫಲ್ಯತೆಯನ್ನು ಕಂಡುಕೊಳ್ಳಲು ಕಾರಣವೇನು ಎಂದು ಯೋಚಿಸಬೇಕಿದೆ.
ಡಾ. ಮನಮೋಹನ್ ಸಿಂಗ್ ನಂತರದ ನಾಯಕರಲ್ಲಿ ಇಡೀ ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಂಡು ಮುನ್ನಡೆಸುವ ನಾಯಕರನ್ನು ಸೃಷ್ಟಿಮಾಡದಿರುವುದೇ ಬಹುಮುಖ್ಯ ಕಾರಣವೇನೋ ಅನಿಸುತ್ತಿದೆ. ಇದರ ಜೊತೆಗೆ ಇತ್ತೀಚಿನ ಬೆಳವಣಿಗೆಗಳಲ್ಲಿ ಬಿಜೆಪಿಯ ಕಡೆಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಒಲವು ತೋರುತ್ತಿರುವ ನಮ್ಮ ಮೂಲ ಕಾಂಗ್ರೇಸ್ ನಾಯಕರ ದ್ವಿಮುಖ ಧೋರಣೆಗಳು ಕಾರಣ ಎನ್ನಬಹುದು. ಅಲ್ಲದೆ ದಲಿತರಲ್ಲಿಯೂ ಕೆಲವು ಬಲಿತರು ತಮಗರಿವಿಲ್ಲದೆಯೇ BJPಯ ತೆಕ್ಕೆಯೊಳಗೆ ಸಿಲುಕಿಕೊಂಡು ತನ್ನ ಅನುಯಾಯಿಗಳ ಓಟ್ ಬ್ಯಾಂಕ್ ಅನ್ನು ಕಬಳಿಸುತ್ತಿರುವುದನ್ನು ತಡವಾಗಿ ಗಮನಿಸಿದ ಗಾಂಧಿ ಮನೆತನವು ಸ್ವಲ್ಪ ಮಟ್ಟಿಗೆ ನಾಯಕತ್ವದ ಬದಲಾವಣೆಯ ರಾಜಕಾರಣ ಮಾಡಲು ಮುಂದಾಗಿದೆ. ದಲಿತರ ಹಿಂದುಳಿದವರ ಅಲ್ಪಸಂಖ್ಯಾತರ ಮತಗಳನ್ನು ಪಡೆಯುವ ಹುನ್ನಾರದಿಂದ ಮಾನ್ಯ ಮಲ್ಲಿಕಾರ್ಜುನ ಖರ್ಗೆಯವರನ್ನು ರಾಷ್ಟ್ರೀಯ ಅಧ್ಯಕ್ಷಸ್ಥಾನಕ್ಕೆ ತಂದಿರುವುದು ಬಹಳ ಆಶ್ಚರ್ಯಕರವಾದ ಸಂಗತಿಯಾಗಿದೆ. ಇದರರ್ಥ ದಲಿತರು, ಶೋಷಿತ ವರ್ಗಗಳು,ಇಂದು ಮುಂದು ಯೋಚಿಸದೆಯೇ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಬೇಕೇ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.
45 ವರ್ಷಗಳ ಸುದೀರ್ಘ ಆಡಳಿತದಲ್ಲಿ ಕಾಂಗ್ರೇಸ್ ಪಕ್ಷವು ಸಾಮಾನ್ಯ ಜನರ ಬದುಕಿಗೆ ಆಸರೆಯಾಗಿತ್ತೇನೋ ಎನ್ನಬಹುದು. ಕಾಂಗ್ರೇಸಿಗರು ತನ್ನ 45 ವರ್ಷಗಳ ಸುಧೀರ್ಘ ರಾಜಕಾರಣದಲ್ಲಿ ಇಡೀ ದೇಶವನ್ನೇ ಲೂಟಿ ಮಾಡಿದ್ದಾರೆ, ಜನಸಾಮಾನ್ಯರ ಅಭಿವೃದ್ಧಿಯ ಬಗ್ಗೆ ಕಾಂಗ್ರೇಸಿಗರಿಗೆ ಸ್ವಲ್ಪವಾದರೂ ಕಾಳಜಿ ಇರಲಿಲ್ಲಾ ಎಂದು ಬೊಬ್ಬೆಯಿಡುವ ಜನರಿಗೆ ಒಂದು ಅರ್ಥವಾಗಬೇಕಿದೆ ಅವರ ಆಡಳಿತದಾವಧಿಯಲ್ಲಿ ಖಾಸಗೀ ಸ್ವಯುತ್ತ ಸಂಸ್ಥೆಗಳನ್ನು ಸಾರ್ವತ್ರೀಕರಣಗೊಳಿಸಿ ಕೋಟ್ಯಂತರ ಜನಮಾನಸದಲ್ಲಿ ಅಚ್ಚಳಿಯದೆ ನಿಲ್ಲುವಂತಹ ಕೆಲಸವನ್ನು ಕೈಗೊಳ್ಳಲಾಗಿದೆ.
ಕಳೆದ 8-10 ವರ್ಷಗಳಿಂದ ನಡೆಯುತ್ತಿರುವ ಸಂಘಿಗಳ ಕೂಸಿನ BJP ರಾಜಕಾರಣದಲ್ಲಿ ಯಾವ ರೀತಿಯ ಅಭಿವೃದ್ಧಿ ಕೆಲಸಗಳನ್ನು ಸಾಮಾನ್ಯ ಜನರಿಗೆ ಮಾಡಲಾಗಿದೆ ಎಂಬುದು ಬಹುದೊಡ್ಡ ಪ್ರಪ್ರಶ್ನೆಯಾಗಿದೆ. BJP ಅಧಿಕಾರಕ್ಕೆ ಬಂದ ತಕ್ಷಣ ಅದು ಮೋದಿಜಿಯವರ ದುರಾದೃಷ್ಟವೋ ಅಥವಾ ಅನಿವಾರ್ಯವಾಗಿ ಎದುರಿಸಲೇಬೇಕಾದ ಸಮಸ್ಯೆಗಳು ತಲೆದೋರಿದವೋ ಒಂದು ಅರ್ಥವಾಗದಾಯಿತು, ದೇಶದ ಶೇಖಡ 60 % ಕ್ಕೂ ಹೆಚ್ಚು ನಿರುದ್ಯೋಗ ಯುವಕ ಯುವತಿಯರು ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವರು ಎಂದು ಭರವಸೆಯ ಕಣ್ಣುಗಳಿಂದ ಕಾಯುತ್ತಲೇ ಇದ್ದಾರೆ, ಆದರೆ ಇದುವರೆವಿಗೂ ಉದ್ಯೋಗಗಳು ಸೃಷ್ಟಿಯಾಗಿಲ್ಲಾ , ಅಂಥವರಿಗೆ ಪಕೋಡ ಮಾರುವ ಭರವಸೆಯನ್ನು ತುಂಬಿದರು, ಕಪ್ಪು ಹಣವನ್ನು ಹೊರ ತಂದು ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು ಆದರೆ ಖಾಸಗೀ ಕಂಪನಿಗಳ ಸಾಲ ಮಾತ್ರ ಮನ್ನವಾಯಿತು, ದಲಿತ ವಿದ್ಯಾರ್ಥಿಗಳಿಗೆಂದು ಮೀಸಲಿರಿಸಿದ್ದ ಹಣವನ್ನು ಬೇರೆ ಯೋಜನೆಗಳಿಗೆ ಬಳಸಿಕೊಳ್ಳಲಾಯಿತು , ದೇಶದಲ್ಲಿನ ಸಾರ್ವಜನಿಕ/ಸರ್ಕಾರಿ ಸಂಸ್ಥೆಗಳನ್ನೆಲ್ಲಾ ಖಾಸಗೀಕರಣ ಮಾಡಲಾಯಿತು.ಉದ್ಯೋಗವನ್ನೇ ನಂಬಿಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ ಯುವಕ ಯುವತಿಯರ ಕಂಗಳಲ್ಲಿ ಉದ್ಯೋಗದ ಭರವಸೆಗಳು ಬತ್ತತೊಡಗಿದವು. ಇದರಿಂದ ಸರ್ಕಾರಿ ಉದ್ಯೋಗವನ್ನೇ ನಂಬಿಕೊಂಡು ಬದುಕುತ್ತಿದ್ದ ಅದೆಷ್ಟೋ ಕುಟುಂಬಗಳು ತಮ್ಮ ಜೀವನ ನಡೆಸಲು ಹರಸಾಹಸ ಪಡುವಂತಾಯಿತು.
BJPಯ ಮೂಲ ಉದ್ದೇಶವೇ ಸರ್ಕಾರಿ ಒಡೆತನದ ಸಂಸ್ಥೆಗಳನ್ನು ಖಾಸಗಿಯವರ ಕೈಗೊಪ್ಪಿಸಿ ದಲಿತ ಶೋಷಿತ ಹಿಂದುಳಿದ ವರ್ಗಗಳ ಸರ್ಕಾರಿ ಉದ್ಯೋಗದ ಸವಲತ್ತುಗಳನ್ನು ಕಡಿತಗೊಳಿಸುವುದಾಗಿದೆ. ಮಾನ್ಯ ಲೋಕಸಭಾ ಸದಸ್ಯರೊಬ್ಬರು ನಾವು ಬಂದಿರುವುದೇ ಸಂವಿಧಾನವನ್ನು ಬದಲಾಯಿಸಲು ಎಂದು ಮಾತನಾಡುತ್ತಾರೆ, ಆದರೆ ಆ ಪುಣ್ಯಾತ್ಮನಿಗೆ ಅರ್ಥವಾಗಬೇಕಿತ್ತು, ಅಷ್ಟು ದೈರ್ಯವಾಗಿ ಮಾತನಾಡುವ ಹಕ್ಕನ್ನು ಕೊಟ್ಟಿದ್ದು ಸಂವಿಧಾನ ಎಂದು, ಪ್ರಧಾನಿ ಮೋದೀಜಿಯವರೇ ಹೇಳುವ ಹಾಗೆ ನಾನು ಟೀ ಮಾರುವ ಹುಡುಗನಾಗಿದ್ದೆ, ಈಗ ದೇಶದ ಪ್ರಧಾನಿಯಾಗಿದ್ದೇನೆ ಎಂದರು. ಅವರಿಗೆ ಪ್ರಧಾನಿಯಾಗುವ ಹಕ್ಕನ್ನು ನೀಡಿದ್ದು ಸಂವಿಧಾನವೇ ಎಂಬುದನ್ನು ಮಾನ್ಯ ಪ್ರಧಾನಿಗಳು ಮರೆತಿದ್ದಾರೆ. ಹಾಗಾಗಿ ಮಾನ್ಯ ಲೋಕಸಭಾ ಸದಸ್ಯರೊಬ್ಬರು ನೀಡಿದ ಹೇಳಿಕೆಯ ಸಂಪೂರ್ಣ ಹೊಣೆಯನ್ನು ಮಾನ್ಯ ಪ್ರಧಾನಮಂತ್ರಿಗಳೇ ಹೊರಬೇಕಾದ ಅನಿವಾರ್ಯತೆ ಬಂದೊದಗಿತು. ಒಂದು ಕಡೆ ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳಿದರೆ, ಉತ್ತರ ಪ್ರದೇಶದಂತಹ ಬಹುದೊಡ್ಡ ರಾಜ್ಯದಲ್ಲಿ ದಲಿತರಿಗಿದ್ದ ಮೀಸಲಾತಿಯನ್ನು ರದ್ದುಮಾಡಿರುವುದು ಬಹಳ ದುರಂತಹ ವಿಚಾರವಾಗಿದೆ.
ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಕರ್ನಾಟಕದಂತಹ ರಾಜ್ಯಗಳಲ್ಲಿ ದಲಿತರಿಗೆ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಲಾಗಿದೆ ಎಂದು ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಇದು ಕೇವಲ ಓಟಿನ ರಾಜಕಾರಣ ಎಂದರೆ ತಪ್ಪಾಗಲಾರದು. ದಲಿತರ ಹೆಣ್ಣುಮಗಳೊಬ್ಬಳ ಅತ್ಯಾಚಾರ ಮಾಡಿದ BJP ಮುಖಂಡರ ಮಕ್ಕಳು ಕೆಲವೇ ಗಂಟೆಗಳಲ್ಲಿ ಜೈಲಿನಿಂದ ಜಾಮೀನು ಪಡೆದು ಹೊರಗಡೆ ಬಂದು ರಾಜರೋಷವಾಗಿ ದೇಶದ ತುಂಬೆಲ್ಲಾ ತಿರುಗಾಡುತ್ತಿದ್ದಾರೆ ಎಂದಾಗಲೇ ದಲಿತ ಶೋಷಿತ ಸಮುದಾಯಕ್ಕೆ ಆಳುವ ಸರ್ಕಾರಗಳು ವರವೋ ಶಾಪವೋ ಎಂದು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕಿತ್ತು. ಆದರೂ BJP ನಾಯಕರನ್ನು ನಾವು ಹೊಗಳಲೇಬೇಕಾಗಿದೆ ಅತೀ ಹೆಚ್ಚು ಶ್ರೀಮಂತರೆಂದು ಪೊಗರಿನಿಂದ ಗುಟುರು ಹಾಕುತ್ತಿದ್ದ, ಉಳ್ಳವರೆಂದು ಮೆರೆಯುತ್ತಿದ್ದ ಅದೆಷ್ಟೋ ಬಂಡವಾಳ ಶಾಹಿಗಳಿಗೆ ಮೋದಿಜೀ ಸಿಂಹಸ್ವಪ್ನವಾಗಿಬಿಟ್ಟರು, ಅವರ ವಿರುದ್ಧ ಮಾತನಾಡಲೇಬಾರದು ಎನ್ನುವಷ್ಟರ ಮಟ್ಟಿಗೆ ಭಯಭೀತರಾಗಿ ಬದುಕುವ ವಾತಾವರಣವನ್ನು ಮೋದೀಜಿ ಸೃಷ್ಟಿಮಾಡಿಬಿಟ್ಟರು. ಅಲ್ಲದೆ ವರ್ಷಾನುಗಟ್ಟಲೆ ಕಷ್ಟ ಪಟ್ಟು ಓದಿ ಪರೀಕ್ಷೆ ಬರೆದು ಪಾಸಾದರೂ ಕೆಲಸ ಸಿಗದೆ ಇರುವ ಈ ಕಾಲದಲ್ಲಿ, ಯಾವ ಪರೀಕ್ಷೆಯನ್ನು ಬರೆಯದೆಯೇ ಕೆಲವು ಜನರನ್ನು ಐಎಎಸ್ ಹುದ್ದೆಗೆ ನೇಮಿಸಿಕೊಂಡದ್ದನ್ನು ಮರೆಯುವಂತಿಲ್ಲಾ.
ರೈತರ ವಿಚಾರದಲ್ಲಿ, ಮುಸಲ್ಮಾನರ ವಿಚಾರವಾಗಿ, ಧಾರ್ಮಿಕ ಅಲ್ಪಸಂಖ್ಯಾತರ ವಿಚಾರವಾಗಿ ತಮ್ಮ ನಿರ್ಧಾರಗಳು ಬಹಳ ಮೆಚ್ಚುವಂತಹುಗಳು, ಅತಿಯಾದ ಜನಸಂಖ್ಯೆ ಹೆಚ್ಚಳವೇ ಬಡತನಕ್ಕೆ ಕಾರಣ ಎನ್ನುವ ಸರ್ಕಾರವು ತನ್ನ ಅಧಿಕಾರದ ಅವಧಿಯಲ್ಲಿ ಜಾತಿವಾರು ಜನಗಣತಿಯಾಗಿಲ್ಲಾ ಎನ್ನುವುದರ ಹಿಂದೆ ಬಹಳಷ್ಟು ಅನುಮಾನಗಳಿವೆ. ಈ ದೇಶದಲ್ಲಿ ಕೇವಲ 3.5%, ಇರುವ ಜನರು ಈ ದೇಶದ ಸಂಪತ್ತುನ್ನು, ಅಧಿಕಾವನ್ನು ಶೇ 97% ರಷ್ಟು ಅನುಭವಿಸುತ್ತಿದ್ದಾರೆ. ಜಾತಿ ಜನಗಣತಿಯಾದರೆ ಇಲ್ಲಿನ ಅಧಿಕಾರಿ ವರ್ಗದವರಿಗೆ ಬಹಳ ಪೆಟ್ಟು ಬಿದ್ದು ನಿಜವಾದ ಬಣ್ಣ ಬಯಲಾಗುತ್ತದೆ ಎಂದು ಇವರಿಗೆ ಭಯ ಆರಂಭವಾಗಿದೆ. ಅದಕ್ಕಾಗಿಯೇ ಮೀಸಲು ಕ್ಷೇತ್ರದ ನಾಯಕರನ್ನು ತಮ್ಮ ಕಪಿಮುಷ್ಠಿಯೊಳಗೆ ಬಂಧಿಸಿ ಇಲ್ಲಿನ ಮೂಲ ನಿವಾಸಿಗರನ್ನು ತಮ್ಮ ವಿಸ್ವಾಸಕ್ಕೆ ತೆಗೆದುಕೊಂಡು ಅವರನ್ನು ಬಳಸಿಕೊಳ್ಳಲು ಪ್ರಯತ್ನಪಡುತ್ತಿದ್ದಾರೆ.
ಇನ್ನು ಪ್ರಾದೇಶಿಕ ಪಕ್ಷವಾದ JDS ಬಗ್ಗೆ ಮಾತನಾಡುವ ಅಗತ್ಯವೇ ಇಲ್ಲವೆನಿಸುತ್ತಿದೆ, ಮಾನ್ಯ ಮಾಜಿ ಪ್ರಧಾನಿಗಳು ಎಂದಿನಂತೆ ಜಾತಿ ರಾಜಕಾರಣ ಮಾಡುವಲ್ಲಿ ಇದುವರೆವಿಗೂ ಸೋಲನ್ನು ಅನುಭವಿಸಲಿಲ್ಲಾ, ತನ್ನ ಜಾತಿ ಜನಾಂಗದ ಅಭಿವೃದ್ದಿಗಾಗಿ ಯಾವರೀತಿಯಾ ನಿರ್ಧಾರ ತೆಗೆದುಕೊಳ್ಳಲು ಸಿದ್ಧವಾಗಿದ್ದಾರೆ. ಅಧಿಕಾರದ ಗದ್ದುಗೆಗಾಗಿ ಯಾರ ಜೊತೆಯಲ್ಲಾದರು ಸೇರಿ ಹೊಂದಾಣಿಕೆ ರಾಜಕಾರಣ ಮಾಡಲು ಸಿದ್ಧರಿದ್ದಾರೆ. ಒಕ್ಕಲಿಗ ಸ್ವಾಮೀಜಿಯನ್ನು ಕುಮಾರಸ್ವಾಮಿಯವರು ಬೇಟಿಮಾಡಿ ಮಾತನಾಡಿದಾಗ ರಾಜಕಾರಣ ಮಾಡಿ ಸಮಾಜದ ಬಗ್ಗೆ ಕಳಕಳಿಯಿರಲಿ ಆದರೆ ಗೆದ್ದಮೇಲೆ ಬುದ್ಧ ಬಸವ ಅಂಬೇಡ್ಕರಂತಾಗಬೇಡಿ ಮೊದಲು ಜಾತಿ ಕೆಲಸವನ್ನು ಮಾಡುವ ಕಡೆ ಗಮನಕೊಡಿ ಎಂದಾಗ ಕುಮಾರಸ್ವಾಮಿ ಮತ್ತು ಅನುಯಾಯಿಗಳ ಕರತಾಡನ ಮುಗಿಲುಮುಟ್ಟಿತ್ತು. ಇದನ್ನು ದಲಿತ ಶೋಷಿತ ಹಿಂದುಳಿದ ವರ್ಗಗಳು ಅರ್ಥಮಾಡಿಕೊಳ್ಳಬೇಕು. JDS ಕೇವಲ ಕುಟುಂಬ ರಾಜಕೀಯ ಹಾಗೂ ಜಾತಿ ರಾಜಕೀಯ ಪಕ್ಷವೆಂದು,
ಈ ಮೂರೂ ಪಕ್ಷಗಳು ಒಂದಲ್ಲಾ ಒಂದು ಕಾರಣದಿಂದ ಆಟ ಆಡುತ್ತಾ ಮೂಗಿಗೆ ತುಪ್ಪ ಸವರಿ ಮುಂದಿನ ಚುನಾವಣೆಗೆ ಓಟನ್ನು ಕಬಳಿಸುವ ಎಲ್ಲಾ ರೀತಿಯಾ ಕಸರತ್ತುಗಳನ್ನು ನಡೆಸುತ್ತಿವೆ.ಈ ದೇಶದಲ್ಲಿರುವ ಶೇ. 65% ಹೆಚ್ಚಾಗಿರುವ ದಲಿತ ಶೋಷಿತ ಹಿಂದುಳಿದ ಧಾರ್ಮಿಕ ಅಲ್ಪಸಂಖ್ಯಾತ ವರ್ಗವು ಮುಂದಿನ ಚುನಾವಣೆಯಲ್ಲಿ ಯಾರೂ ಹಿತವರು ಈ ಮೂವರೊಳಗೆ ಎಂದು ನಿರ್ಧರಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಎಲ್ಲರೂ ಜಾಗೃತರಾಗಿ, ಚಿಂತಿಸಿ, ಒಂದಾಗಿ ಈ ದೇಶವನ್ನಾಳಲು ಮುಂದಾಗಿ ಎಂದು ಜಾಗೃತಿ ಮೂಡಿಸುವ ಅನಿವಾರ್ಯತೆ ಇಂದಿನ ಯುವಪೀಳಿಗೆಯ ಮೇಲಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka