ಬಿಜೆಪಿ ಶಾಸಕರ ಮೇಲೆ ಯಾಕೆ ಎಫ್‍ ಐಆರ್ ದಾಖಲಿಸಿದ್ದೀರಿ?: ಎನ್.ರವಿಕುಮಾರ್ ಆಕ್ಷೇಪ - Mahanayaka
12:54 AM Tuesday 10 - December 2024

ಬಿಜೆಪಿ ಶಾಸಕರ ಮೇಲೆ ಯಾಕೆ ಎಫ್‍ ಐಆರ್ ದಾಖಲಿಸಿದ್ದೀರಿ?: ಎನ್.ರವಿಕುಮಾರ್ ಆಕ್ಷೇಪ

bjp
25/05/2023

ಬೆಂಗಳೂರು: ‘ಕ್ಯಾಂಪಸ್ ಫ್ರಂಟ್, ಪಿಎಫ್‍ ಐ, ಎಸ್‍ ಡಿಪಿಐ ಕಾರ್ಯಕರ್ತರ ಮೇಲಿದ್ದ ಕೇಸು ರದ್ದು ಮಾಡುವ ನೀವು ನಮ್ಮ ಶಾಸಕರ ಮೇಲೆ ಯಾಕೆ ಎಫ್‍ ಐಆರ್ ದಾಖಲಿಸಿದ್ದೀರಿ? ಎಂಥ ಸರಕಾರ ನಿಮ್ಮದು’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಆಕ್ರೋಶ ಹೊರಹಾಕಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಹರೀಶ್ ಪೂಂಜ, ಮಾಜಿ ಸಚಿವ ಡಾ. ಅಶ್ವತ್ಥನಾರಾಯಣರ ವಿರುದ್ಧ ಎಫ್‍ ಐಆರ್ ಮಾಡಿದ್ದನ್ನು ಆಕ್ಷೇಪಿಸಿದರು.

ಯಾವ ಕಾರಣಕ್ಕೆ ಎಫ್‍ ಐಆರ್ ಮಾಡಿದ್ದೀರಿ ಎಂದು ಮುಖ್ಯಮಂತ್ರಿಗಳನ್ನು ಮತ್ತು ಉಪ ಮುಖ್ಯಮಂತ್ರಿಗಳನ್ನು ಪ್ರಶ್ನಿಸುವುದಾಗಿ ತಿಳಿಸಿದರು.

ನಿಮ್ಮದು ಪಿಎಫ್‍ ಐ ಕಾರ್ಯಕರ್ತರನ್ನು ರಕ್ಷಿಸುವ ಸರಕಾರವೇ? ಕ್ಯಾಂಪಸ್ ಫ್ರಂಟ್, ನಕ್ಸಲೀಯರನ್ನು ರಕ್ಷಿಸುವ ಸರಕಾರವೇ? ಹರೀಶ್ ಪೂಂಜ, ಡಾ.ಅಶ್ವತ್ಥನಾರಾಯಣರವರು ಟಿಪ್ಪು ಸುಲ್ತಾನ್ ಜಯಂತಿ ಮಾಡಬಾರದು ಎಂದು ಹೇಳಿದ್ದು ತಪ್ಪೇ? ನಮ್ಮ ಹಿಂದೂ ಧರ್ಮವನ್ನು ನಾಶ ಮಾಡಿದ, ಸಾವಿರಾರು ದೇವಾಲಯ ಧ್ವಂಸ ಮಾಡಿದ, ಲಕ್ಷಾಂತರ ಜನರನ್ನು ಮತಾಂತರ ಮಾಡಿದ ಟಿಪ್ಪು ಸುಲ್ತಾನ್ ಧೋರಣೆಯನ್ನು ಅವರು ಖಂಡಿಸಿದ್ದು ತಪ್ಪೇ ಎಂದು ಪ್ರಶ್ನೆಗಳನ್ನು ಮುಂದಿಟ್ಟರು.
ಕ್ಯಾಂಪಸ್ ಫ್ರಂಟ್, ಪಿಎಫ್‍ ಐ, ಎಸ್‍ ಡಿಪಿಐ ಕಾರ್ಯಕರ್ತರ ಮೇಲಿದ್ದ ಕೇಸುಗಳನ್ನು ತೆಗೆದುಹಾಕಿದ್ದೀರಿ. ನಮ್ಮ ಶಾಸಕರ ಮೇಲೆ ಎಫ್‍ ಐಆರ್ ಮಾಡಿದ್ದೀರಿ; ಮಂಗಳೂರು ಮತ್ತಿತರ ಕಡೆ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಎಫ್‍ಐಆರ್ ಮಾಡುತ್ತಿಲ್ಲ ಎಂದು ಟೀಕಿಸಿದರು. ನಮ್ಮ ಕಾರ್ಯಕರ್ತರು, ನಮ್ಮ ಶಾಸಕರ ಮೇಲೆಯೇ ಎಫ್‍ಐಆರ್ ಮಾಡುತ್ತೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಧರ್ಮ, ಸಮಾಜ ರಕ್ಷಿಸುವವರ ಮೇಲೆ ಎಫ್‍ಐಆರ್ ಮಾಡುವ ಯಾವ ಸರಕಾರ ನಿಮ್ಮದು ಎಂದು ಮುಖ್ಯಮಂತ್ರಿಗಳನ್ನು ಕೇಳಿದರು. ಬಜರಂಗದಳ, ಆರೆಸ್ಸೆಸ್ ರದ್ದು ಮಾಡುವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಪ್ರಿಯಾಂಕ್ ಖರ್ಗೆ ಅವರಿನ್ನೂ ಮಗು ಇರಬೇಕು. ಆರೆಸ್ಸೆಸ್ ಏನು ಮಾಡುತ್ತಿದೆ ಎಂದು ಅಧ್ಯಯನ ಮಾಡಬೇಕು; ಆರೆಸ್ಸೆಸ್ ಇರುವ ಕಾರಣ ಪ್ರಪಂಚದಲ್ಲಿ ಭಾರತದ ಗೌರವ ಹೆಚ್ಚಾಗಿದೆ. ಇಡೀ ಪ್ರಪಂಚಕ್ಕೆ ಆರೆಸ್ಸೆಸ್ ಕುರಿತು ಗೌರವ ಇದೆ. ನೀವು ಕೂಪ ಮಂಡೂಕರಾಗಿ ಆರೆಸ್ಸೆಸ್ ಕುರಿತು ಅಧ್ಯಯನ ಮಾಡುತ್ತಿದ್ದೀರಿ’ ಎಂದು ಟೀಕಿಸಿದರು.

‘ಆರೆಸ್ಸೆಸ್, ಧರ್ಮ ರಕ್ಷಣೆ ಮಾಡುತ್ತಿದೆ. ಬಡವರು, ಕಷ್ಟದಲ್ಲಿ ಇರುವವರ ಸೇವೆ ಮಾಡುತ್ತಿದೆ. ನೀವು ಪಿಎಫ್‍ಐ, ಕ್ಯಾಂಪಸ್ ಫ್ರಂಟ್, ಭಯೋತ್ಪಾದಕ ಸಂಘಟನೆಯನ್ನು ಬ್ಯಾನ್ ಮಾಡುವುದಿಲ್ಲ; ಧರ್ಮ ರಕ್ಷಿಸುವ ಬಜರಂಗದಳವನ್ನು ನಿಷೇಧಿಸಲು ಮುಂದಾಗಿದ್ದೀರಲ್ಲ ಎಂದು ಪ್ರಶ್ನಿಸಿದರು. ಶಿಸ್ತಿನಿಂದ ಶಾಖೆ ಮಾಡುವ, ದೇಶಭಕ್ತಿಯ ಪಾಠ ಹೇಳುವ, ಕೋಟ್ಯಂತರ ಸಂಖ್ಯೆಯ ಸ್ವಯಂಸೇವಕರನ್ನು ಆರೆಸ್ಸೆಸ್ ಸಂಘಟನೆಯನ್ನು ಬ್ಯಾನ್ ಮಾಡುವುದಾಗಿ ಹೇಳುತ್ತೀರಲ್ಲ? ನಿಮಗೆ ಹುಚ್ಚು ಹಿಡಿದಿದೆ’ ಎಂದು ಆಕ್ರೋಶದಿಂದ ತಿಳಿಸಿದರು.

ಆರೆಸ್ಸೆಸ್ ಸಂಘಟನೆಯನ್ನು ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಬ್ಯಾನ್ ಮಾಡಿದ್ದರು. ಪರಿಣಾಮ ಏನಾಗಿದೆ ಎಂದು ಪ್ರಿಯಾಂಕ್ ಖರ್ಗೆಯವರು ತಮ್ಮ ಹಿರಿಯರಿಂದ ತಿಳಿದುಕೊಳ್ಳಲಿ. ಆಮೇಲೆ ಬ್ಯಾನ್ ಮಾಡಲಿ ಎಂದು ನುಡಿದರು. ರಾಜ್ಯದಲ್ಲಿ ಕೇಸರೀಕರಣ ಏನಾಗಿದೆ ಎಂದು ಮಾಹಿತಿ ಕೊಡಿ ಎಂದು ಅವರು ಆಗ್ರಹಿಸಿದರು.

ಅಮ್ನೆಸ್ಟಿ ಧೋರಣೆ ಖಂಡನೀಯ: ಎಂ.ಜಿ.ಮಹೇಶ್

ಗೋಹತ್ಯೆ ನಿಷೇಧದ ಕಾನೂನನ್ನು ವಾಪಸ್ ಪಡೆಯಬೇಕು; ಕರ್ನಾಟಕದಲ್ಲಿ ಗೋಹತ್ಯೆಗೆ ಅವಕಾಶ ಕೊಡಬೇಕು, ಹಲಾಲ್ ವ್ಯಾಪಾರಕ್ಕೆ ಅವಕಾಶ ಕೊಡಲು ಅಮ್ನೆಸ್ಟಿ ಇಂಟರ್ ನ್ಯಾಶನಲ್ ಟ್ವೀಟ್ ಮೂಲಕ ಒತ್ತಾಯಿಸಿದೆ. ಭಾರತದ ಆಂತರಿಕ ವಿಚಾರಕ್ಕೆ ಕೈಹಾಕಿದ, ಭಾರತ ವಿರೋಧಿ ಅಮ್ನೆಸ್ಟಿಯ ಧೋರಣೆಯನ್ನು ಖಂಡಿಸುವುದಾಗಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಅವರು ತಿಳಿಸಿದರು.

ಅಮ್ನೆಸ್ಟಿ, ಕಾಂಗ್ರೆಸ್ ಜನಾದೇಶದ ಹಿನ್ನೆಲೆಯಲ್ಲಿ ದ್ವೇಷಪೂರ್ವಕ ನಡವಳಿಕೆಯನ್ನು ಮುಂದುವರಿಸುವ ಕೆಲಸ ಮಾಡಿದೆ. ಕರ್ನಾಟಕ, ಭಾರತ ಮತ್ತು ಬಹುಸಂಖ್ಯಾತರ ವಿಚಾರದಲ್ಲಿ ಅಮ್ನೆಸ್ಟಿ ಧೋರಣೆಯನ್ನು ಬಿಜೆಪಿ ಖಂಡಿಸುತ್ತದೆ. ಇದಕ್ಕೆ ಅತ್ಯುಗ್ರವಾದ ಹೋರಾಟ ಮಾಡಲಿದ್ದೇವೆ. ಸರಕಾರಕ್ಕೂ ಎಚ್ಚರಿಕೆ ನೀಡುವುದಾಗಿ ತಿಳಿಸಿದರು.

ಕಾಂಗ್ರೆಸ್ ಪಕ್ಷದವರು ಸಂವಿಧಾನ ಮೀರಿ, ಸ್ವಾಯತ್ತ ರಾಜ್ಯ ಎಂದು ಭಾವಿಸಿದರೆ ಅದು ಮೂರ್ಖತನ. ಬಿಜೆಪಿ ಎಚ್ಚರಿಕೆಯನ್ನು ಕೊಡುತ್ತದೆ; ಇಂಥ ದುಸ್ಸಾಹಸವನ್ನು ಜನರು ಸಹಿಸುವುದಿಲ್ಲ ಎಂದು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ