ದಲಿತರಿಗೇಕೆ ದೇವಾಲಯಗಳ ಅವಶ್ಯಕತೆ ?
- ದಮ್ಮಪ್ರಿಯ ಬೆಂಗಳೂರು
ಇತ್ತೀಚೆಗೆ ಮಾಗಡಿ ತಾಲ್ಲೂಕಿನ ಹೇಮಾಪುರ ಗ್ರಾಮದಲ್ಲಿ ನಡೆದ ಅಮಾನವೀಯ ಘಟನೆ ದೇಶದ ಭವಿಷ್ಯ ಯಾವ ಕಡೆಗೆ ಚಲಿಸುತ್ತಿದೆ ಎಂದು ಎಲ್ಲರೂ ಅರಿಯಬೇಕಾಗಿದೆ. ಸಮಾನತೆಯ ಸಾರವನ್ನು ಬೋಧಿಸುವ ಸಾಮಾನ್ಯ ಶಿಕ್ಷಕ, ದೇವರ ಮೆರವಣಿಗೆಯ ಸಂದರ್ಭದಲ್ಲಿ ಆರತಿ ತಟ್ಟೆ ಮುಟ್ಟಿದ ಎನ್ನುವ ಕಾರಣಕ್ಕೆ ಅವನನ್ನು ತೇಜೋವಧೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದರೆ ಜಾತಿ ವ್ಯವಸ್ಥೆ ಇನ್ನು ಎಷ್ಟು ಕಠೋರವಾಗಿದೆ ಎನ್ನುವುದನ್ನು ಅರಿಯಬೇಕಿದೆ, ಹಾಗಾದರೆ ಎಲ್ಲಿದೆ ಮಾನವೀಯ ಸಂಬಂಧಗಳು, ಯಾವುದು ಜ್ಯಾತ್ಯಾತೀತ ಸಮಾಜ, ಯಾವುದು ನಿರ್ವಿಕಾರದ ದೇವರ ದರ್ಶನ, ಎಲ್ಲಿದೆ ಸಮಾನತೆಯ ಬದುಕು, ಎಲ್ಲಿದೆ ನಮ್ಮ ಧಾರ್ಮಿಕ ಮೌಲ್ಯಗಳ ಸಂಬಂಧ, ಯಾವುದು ವಸುದೈವ ಕುಟುಂಬಕಂ, ಎಲ್ಲಿದ್ದಾರೆ “ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು” ಒಂದು ಎಂದು ಗಂಟೆಗಟ್ಟಲೆ ಭಾಷಣ ಮಾಡುವ ಅಂದ ದೇಶಭಕ್ತರು, ಕೇವಲ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕ್ರೈಸ್ತರನ್ನು ಈ ದೇಶದಿಂದ ಓಡಿಸಬೇಕು, ಮುಸಲ್ಮಾನರು ಮತಾಂಧತೆಯನ್ನು ಮಾಡುತ್ತಿದ್ದಾರೆ, ಧರ್ಮಕ್ಕೆ ಅಪಮಾನವಾಗುತ್ತಿದೆ, ಧರ್ಮಕ್ಕೆ ಅಭಧ್ರತೆ ಉಂಟಾಗಿದೆ ಎಂದೆಲ್ಲಾ ಬೊಬ್ಬೆ ಹೊಡೆಯುವ ಮೂಡ ಅಂದರೆ, ಇದಕ್ಕೆ ನಿಮ್ಮ ಉತ್ತರವೇನು ?
ಬುದ್ಧ, ಬಸವ, ಅಂಬೇಡ್ಕರ್ ರವರು ಬದುಕಿದ್ದ ಈ ಮಣ್ಣಿನಲ್ಲಿ ಇಂತಹ ಕ್ರೂರ ಕೃತ್ಯಗಳು ಘಟಿಸುತ್ತಿರುವುದು ಬಹಳ ದೊಡ್ಡ ಆಘಾತವನ್ನು ನೀಡುವ ವಿಚಾರವಾಗಿದೆ. ಕೆಲವು ಪೀತಮನಸುಗಳು ಅಲ್ಲಲ್ಲಿ ಮಾತನಾಡುತ್ತಿರುತ್ತವೆ. ದಲಿತರಿಗೆ ಯಾಕೆ ವಿಶೇಷ ಮೀಸಲಾತಿ ನೀಡಬೇಕು. ಶೋಷಣೆ ಎನ್ನುವುದು ಮೊದಲು ನಡೆಯುತ್ತಿತ್ತು. ಈಗ ಎಲ್ಲ ದಲಿತರು ಬಲಿತರಾಗಿದ್ದಾರೆ. ಎಲ್ಲಿಯೂ ಅಂತಹ ಶೋಷಣೆಗಳು ಅಪಮಾನಗಳು ನಡೆಯುತ್ತಿಲ್ಲ ಎಂದು ವಾದಿಸುವ ಜಾತಿವಾದಿಗಳು ಇದಕ್ಕೆ ಉತ್ತರ ನೀಡಬೇಕಾಗಿದೆ.ಈ ದೇಶದಲ್ಲಿ ಜಾತಿ ವ್ಯವಸ್ಥೆ ಇನ್ನು ಜೀವಂತವಾಗಿದೆ. ಅದು ಈ ದೇಶದಲ್ಲಿರುವ ಮೇಲುವರ್ಗದ ಪಟ್ಟಭದ್ರಹಿತಾಶಕ್ತಿ ಹೊಂದಿರುವ ಕೊಳಕು ಮನಸ್ಸುಗಳಿಂದ ಮಾತ್ರ ಎಂದರೆ ತಪ್ಪಾಗಲಾರದು. ಯಾವ ದಲಿತನು ತನ್ನ ಹೆಸರುಗಳ ಮುಂದೆ ತಮ್ಮ ಜಾತಿಯ ನಾಮಫಲಕವನ್ನು ಹಾಕಿಕೊಂಡು ತನ್ನ ಜಾತಿಯನ್ನು ಬ್ರಾಂಡ್ ಗಳಾಗಿ ಗುರುತಿಸಿಕೊಂಡು ಬದುಕುತ್ತಿಲ್ಲಾ. ಬದುಕುತ್ತಿರುವವರೆಲ್ಲಾ ತಮ್ಮ ಹೆಸರುಗಳ ಮುಂದೆ ಜಾತಿ ಸೇರಿಸಿಕೊಂಡು ಜಾತಿಯ ವ್ಯವಸ್ಥೆಯನ್ನು ಯಥಾವತ್ತಾಗಿ ಕಾಪಾಡಿಕೊಂಡು ಬಂದಿರುವುದರಿಂದಲೇ ಈ ದೇಶದಲ್ಲಿ ಇಂದಿಗೂ ಇಂತಹ ಹೀನ ಕೃತ್ಯಗಳಿಗೆ ಅವಕಾಶಗಳು ಸಿಕ್ಕಂತಾಗಿವೆ. ಇದರಿಂದ ಶೋಷಿತ ಜನಾಂಗ ಮತ್ತಷ್ಟು ಕ್ರೌರ್ಯತೆಯನ್ನು ಅನುಭವಿಸುವಂತಹ ವಾತಾವರಣ ನಿರ್ಮಾಣವಾಗಿದೆ.
ಜಾತಿಯ ಕ್ರೌರ್ಯತೆಯು ಈ ದೇಹಕ್ಕೆ ಅಂಟಿರುವ ಬಹುದೊಡ್ಡ ಶಾಪವಾಗಿದೆ. ಇಂತಹ ಜಾತಿಯ ಆಚರಣೆ ಮತ್ತು ಹೀನ ಕೃತ್ಯಗಳಿಗೆ ಕುಮ್ಮಕ್ಕು ನೀಡುವ ಯಾವುದೇ ವರ್ಗದ ಜನಾಂಗವಾದರೂ ಇದು ಮಾನವ ವಿರೋಧಿ, ಜೀವ ವಿರೋಧಿ ಬದುಕು ಎಂದರೆ ತಪ್ಪಾಗಲಾರದು. ನಾವು ಸಾಕುತ್ತಿರುವ ನಾಯಿಗಳಿಗೂ ನಮ್ಮ ಮನೆಯೊಳಗೇ ಪ್ರವೇಶ ಇರಿತ್ತದೆ. ಆದರೆ ಮನುಷ್ಯ ಮನುಷ್ಯರ ಜೊತೆ ಬದುಕಲು ಯಾಕೆ ಈ ರೀತಿಯ ತಾರತಮ್ಯ, ಯಾರು ಈ ಕೃತ್ಯವನ್ನು ಎಸಗಿದರೋ ಅಂತಹವರಿಗೆ ಕಠಿಣ ಶಿಕ್ಷೆಯಾಗಲೇಬೇಕು. ಅಂತಹ ಶಿಕ್ಷೆ ಇಡೀ ಮಾನವ ಕುಲಕ್ಕೆ ಸಾಕ್ಷಿಯಾಗಬೇಕು. ಪುರೋಹಿತಶಾಹಿ ವರ್ಗಕ್ಕೆ ಇದರ ಅರಿವಾಗಬೇಕು. ಶತಶತಮಾನಗಳಿಂದಲೂ ಇಡೀ ದೇಶದಲ್ಲಿ ಜಾತಿಯ ಅಶಾಂತಿಗೆ ಕಾರಣ ಕರ್ತರೆ ಇವರು, ಅನಿಷ್ಟ ಜಾತಿ ಪದ್ದತಿಯ ಬೇರು ದೇಶದ ಮನುಧರ್ಮ ಶಾಸ್ತ್ರದಲ್ಲಿದೆ, ಮನುಧರ್ಮ ಶಾಸ್ತ್ರದ ಬೇರು ಪುರೋಹಿತಶಾಹಿಯ ಆಚರಣೆಯಲ್ಲಿದೆ, ಪುರೋಹಿತಶಾಹಿಯ ಬೇರು ಈ ದೇಶದ ರಾಜಕೀಯ ವ್ಯವಸ್ಥೆಯಲ್ಲಿದೆ. ಯಾವ ನೀಚ ಈ ಕೆಲಸ ಮಾಡಿದರು ಇವರಿಗೆ ಶಿಕ್ಷೆಯೆನ್ನುವುದು ಮರೀಚಿಕೆಯಾಗಿಬಿಟ್ಟಿದೆ. ಇದಲ್ಲದೆ ಈ ದೇಶದ ಜನಸಂಖ್ಯೆ ಬಹಳ ಮುಗ್ಧರು ಮತ್ತು ಅಮಾಯಕರಂತಿರುವುದು ಇವರಿಗೆ ಬಹುದೊಡ್ಡ ಬಂಡವಾಳವಾಗಿಬಿಟ್ಟಿದೆ. ದೇವರು, ಧರ್ಮ, ಪೂಜೆ, ಹೋಮ, ಹವನ, ವಾಸ್ತು ಹೀಗೆ ಹಲವಾರು ಮೂಡ ಮತ್ತು ಅವೈಜ್ಞಾನಿಕ ಆಚರಣೆಗಳಿಂದ ತುಂಬಿರುವುದು ಈ ದೇಶಕ್ಕಂಟಿರುವ ಬಹುದೊಡ್ಡ ಶಾಪವಾಗಿಬಿಟ್ಟಿದೆ. ಇದನ್ನು ಆಚರಿಸುವವರಿಗೆ ಆರ್ಥಿಕ ನಷ್ಟವಾದರೆ , ಪುರೋಹಿತಶಾಹಿಗೆ ಜಾತಿಯ ಶ್ರೇಷ್ಠತೆಯ ಜೊತೆಗೆ ಆರ್ಥಿಕ ಅಭಿವೃದ್ಧಿಯ ಮಾರ್ಗವಾಗಿದೆ. ಹಾಗಾಗಿ ವರ್ಗವನ್ನು ಆರ್ಥಿಕ ಸಾಧಿತವನ್ನು ಕಾಣುವ ಒಂದು ಅನುತ್ಪಾದಾಗ ವರ್ಗವೆಂದರು ತಪ್ಪಾಗಲಾರದು.
ಶೋಷಿತ ವರ್ಗವು ಶತ ಶತಮಾನಗಳ ಕಾಲ ಶೋಷಣೆಯ ನೋವುಂಡು ಬದುಕಿನ ಕರಾಳತೆಯನ್ನು ಕಾಣುವಾಗ, ಶೋಷಣೆಯಿಂದ ಬಿಡುಗಡೆಯನ್ನು ಪಡೆಯುವ ಸಂದರ್ಭದಲ್ಲಿ ಅವರುಗಳಿಗೆ ಸಿಗಬೇಕಾದ ಸವಲತ್ತುಗಳನ್ನು ವಿರೋಧಿಸುವ ಜಾತಿವಾದಿ ಮನಸುಗಳಿಗೆ ನಿಜವಾಗಿಯೂ ನಾಚಿಕೆಯಾಗಬೇಕು. ಇಂದಿನ ಆಧುನಿಕ ಯುಗದಲ್ಲಿಯೂ ಒಬ್ಬ ದಲಿತ ವಿದ್ಯಾವಂತ ಶಿಕ್ಷಕನಿಗೆ ದೇವರ ಮೆರವಣಿಗೆಯಲ್ಲಿ ಆರತಿ ತಟ್ಟೆ ಮುಟ್ಟಬಾರದಿತ್ತು ಎನ್ನುವ ನೆಪಮಾತ್ರಕ್ಕೆ ತೇಜೋವಧೆ ಮಾಡಿ, ಕೊಲೆ ಬೆದರಿಕೆ ಹಾಕುವ ಸಮಾಜದೊಳಗೆ ನಾವು ಬದುಕುತ್ತಿದ್ದೇವೆ ಎಂದರೆ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ನಾಚಿಕೆಯಾಗಬೇಕು. ಇವತ್ತಿಗೂ ಜಾತಿ ವ್ಯವಸ್ಥೆಯೆಂಬುದು ಎಷ್ಟು ಕಠೋರವಾಗಿದೆ ಎಂದು ಪ್ರಜ್ಞಾವಂತರು ಅರಿಯಬೇಕಿದೆ. ಈ ಘಟನೆ, ಒಬ್ಬ ದಲಿತ ಶಿಕ್ಷಕನಿಗೆ ಮಾಡಿಯುವ ಅಪಮಾನ ಎನ್ನುವುದಕ್ಕಿಂತ ಧರ್ಮದ ಶ್ರೇಷ್ಠತೆಯ ಬಗ್ಗೆ ಮಾತನಾಡಿದ ಸ್ವಾಮಿ ವಿವೇಕಾನಂದರಿಗೆ ಮಾಡಿರುವ ಅಪಮಾನ ಎನ್ನಬಹುದು. ಸ್ವಾಮಿ ವಿವೇಕಾನಂದರು ಹೇಳಿರುವ ಹಾಗೆ teacher will be pillar of the Nation , Director of the Nation ಎಂದಿದ್ದಾರೆ. ಅವರ ಅಪಾರವಾದ ನಂಬಿಕೆಗೆ ಈ ಮಡಿವಂತಿಕೆಯ ಸಮಾಜ ಮಸಿಬಳಿಯುತ್ತಿದೆ. ಇದು ಜಾತಿಗಂಟಿರುವ ರೋಗ ಎನ್ನುವುದಕ್ಕಿಂತ ದೇಶಕ್ಕೆ ಅಂಟಿರುವ ಒಂದು ಜಾಡ್ಯ ಎನ್ನಬಹುದು.
ಒಬ್ಬ ಶಿಕ್ಷಕ ಆಧುನಿಕ ಶಿಕ್ಷಣ ವ್ಯವಸ್ಥೆಯೊಳಗೆ ಯಾವ ಜಾತಿಯನ್ನು ನೋಡದೆ, ತಾರತಮ್ಯ ಮಾಡದೆ ಬೋಧನೆಗೆ ಮುಂದಾಗುತ್ತಾನೆ ಎನ್ನುವುದು ಎಲ್ಲಾ ಪೋಷಕರ ಗಾಢವಾದ ನಂಬಿಕೆ. ಅಂತಹ ತಾರತಮ್ಯದ ಶಿಕ್ಷಣ ನೀತಿಯೆಂಬುದು ಸನಾತನಿಗಳಲ್ಲಿ , ಸನಾತನ ಶಿಕ್ಷಣ ವ್ಯವಸ್ಥೆಯೊಳಗೆ ಇತ್ತು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಈಗ ಬದಲಾದ ಯುಗದಲ್ಲೂ ಇಂತಹ ವ್ಯವಸ್ಥೆಗೆ ಅವಕಾಶ ನೀಡಿರುವ ಒಬ್ಬ ಜಾತಿವಾದಿಗೆ ಇನ್ನು ಶಿಕ್ಷೆ ವಿಧಿಸಲು ನಮ್ಮ ಸರ್ಕಾರಕ್ಕೆ ತಾಕತ್ತಿಲ್ಲಾ ಎನ್ನುವುದಾದರೆ, ಈ ಅಳುವ ಸರ್ಕಾರಗಳು ಯಾರ ಕೈಗೊಂಬೆಯಾಗಿವೆ ? ಯಾರ ಪರವಾಗಿ ಕಾರ್ಯ ನಿರ್ವಹಿಸುತ್ತಿವೆ ಎನ್ನುವುದು ಶೋಷಿತ ಸಮುದಾಯಕ್ಕೆ ದೊಡ್ಡ ಪ್ರಶ್ನೆಯಾಗಿದೆ. ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಹೇಳುವ ಹಾಗೆ ದೇವರಿಲ್ಲ ದೇವರಿಲ್ಲ ದೇವರು ಇಲ್ಲವೇ ಇಲ್ಲ, ದೇವರನ್ನು ಸೃಷ್ಠಿಸಿದವನು ಮೂರ್ಖ, ನಂಬುವವನು ಅಯ್ಯೋಗ್ಯ, ಪೂಜಿಸುವವನು ಮುಟ್ಟಾಳ, ಎಂದಿದ್ದಾರೆ. ಇದನ್ನು ಈ ದಲಿತ ಸಮುದಾಯವು ಅರ್ಥಮಾಡಿಕೊಳ್ಳಬೇಕಿದೆ. ಅದಕ್ಕಾಗಿ ಬಾಬಾಸಾಹೇಬ್ ಡಾ. ಅಂಬೇಡ್ಕರ್ ರವರು ನೀವು ದೇವರ ದೇಗುಲಕ್ಕೆ ಕೊಡುವ ಕಾಣಿಕೆಯನ್ನು ನಿಮ್ಮ ಮಕ್ಕಳ ಶಿಕ್ಷಣಕ್ಕೆ ಕೊಡಿ ಎಂದಿದ್ದಾರೆ. ಎಲ್ಲಿವರೆವಿಗೂ ಈ ದೇಶದ ಜನರು ಗುಡಿ ಗುಂಡಾರಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವುದನ್ನು ಬಿಟ್ಟು ಅಧ್ಯಯನದಲ್ಲಿ ತೊಡಗಿಸಿಕೊಳ್ಳುತ್ತಾರೋ ಅಲ್ಲಿಯವರೆವಿಗೂ ಈ ದೇಶಕ್ಕೆ ಮುಕ್ತಿ ಸಿಗಲಾರದು ಎನ್ನುವ ಮಹಾ ಜ್ಞಾನಿಗಳ ಮಾತು ಇಂದಿಗೂ ಮಾತಾಗಿಯೇ ಉಳಿದುಬಿಟ್ಟಿದೆ.
ಅಷ್ಟಕ್ಕೂ ಈ ದಲಿತರಿಗೆ ಯಾಕೆ ಇಷ್ಟೊಂದು ಪಾಪಪ್ರಜ್ಞೆಯ ಮನೋಭಾವ, ದೇವಾಲಯಕ್ಕೆ ಹೋಗುವ, ನಮ್ಮ ಬೀದಿಗಳಿಗೆ ದೇವರ ಮೆರವಣಿಗೆ ಬರಲೇ ಬೇಕು ಎನ್ನುವ ಚಪಲ, ನಮ್ಮ ಆದಾಯದಲ್ಲಿ ಯಾಕೆ ದೇವಾಲಯಕ್ಕೆ ಪಾಲು ಕೊಡಬೇಕು ಎಂದೆಲ್ಲಾ ಯಾಕೆ ಯೋಚನೆ ಬರುತ್ತಿಲ್ಲಾ. ದಲಿತರು ಮೊದಲು ದೇವಾಲಯಗಳಿಗೆ ತೆರಳುವುದನ್ನು ನಿಲ್ಲಿಸಬೇಕು, ಯಾವ ಮಡಿವಂತಿಕೆ ದಲಿತರಿಗೆ, ದೇವಾಲಯಗಳ ಪ್ರವೇಶವನ್ನು ನಿರಾಕರಿಸಲಾಗಿದೆಯೋ ಆ ದೇವಾಲಯಗಳಿಗೆ ದಲಿತರು ಕೂಡ ಯಾಕೆ ಹೋಗಬೇಕು, ದೇವಾಲಯಗಳು ದಲಿತರ ಅಭಿವೃದ್ಧಿಯ ಜ್ಞಾನದ ಸಂಕೇತಗಳಲ್ಲ!, ಹೆಚ್ಚಾಗಿ ಆರ್ಥಿಕವಾಗಿ ದಲಿತರಿಗೆ ಯಾವ ರೀತಿಯ ಪ್ರಯೋಜನವೂ ಇಲ್ಲವೆಂದಮೇಲೆ ಯಾಕೆ ಬೇಕು ದಲಿತರಿಗೆ ದೇವಾಲಯಗಳು. ಕುವೆಂಪು ಹೇಳಿದ್ದು ಇದನ್ನೇ, ಪಾಠ ಮಾಡುವ ವಿಜ್ಞಾನದ ಶಿಕ್ಷಕ ವಿಜ್ಞಾದದ ಬಗ್ಗೆ ಪಾಠ ಮಾಡುವುದನ್ನು ಬಿಟ್ಟು ಮಗಳಿಗೆ ಮದುವೆ ಮಾಡಲು ಶಾಸ್ತ್ರ ಕೇಳಿದರೆ, ಇನ್ನು ವಿಜ್ಞಾನಕ್ಕೆ ಎಲ್ಲಿಯ ಆದ್ಯತೆ ಸಿಗಬೇಕು ಎಂದಿದ್ದರು. ಇದನ್ನು ಇವತ್ತಿನ ಎಲ್ಲಾ ಶಿಕ್ಷಕರು ಅರಿಯಬೇಕಾಗಿದೆ. ವಿಜ್ಞಾನವೆಂದರೆ ಕೇವಲ ಪುಸ್ತಕದ ಪಾಠವಲ್ಲ ಬದಲಾಗಿ ಹೊಸ ಹುಟ್ಟು, ಸಂಶೋಧನೆ, ಆವಿಷ್ಕಾರ, ಬದಲಾವಣೆ ಎಂದು ಅರಿತು ಮುಂದಕ್ಕೆ ಬೇಕಾದ ಭವಿಷ್ಯವನ್ನು ಕಟ್ಟಿಕೊಡಬೇಕಾದದ್ದು ಶಿಕ್ಷಕರ ಕರ್ತವ್ಯವಾಗಬೇಕೇ ಹೊರತು, ದೇವಾಲಯಕ್ಕೆ ನಮ್ಮನ್ನು ಬಿಟ್ಟಿಲ್ಲ, ಆರತಿ ತಟ್ಟೆ ಮುಟ್ಟಲು ಬಿಟ್ಟಿಲ್ಲ ಎಂದು ಕೂರುವುದಲ್ಲ. ಅಂಬೇಡ್ಕರ್ ಕಳಾರಾಮ್ ದೇವಾಲಯ ಪ್ರವೇಶ ಮಾಡಿದ್ದು ನಮ್ಮನ್ನು ಒಳಗಡೆ ಬಿಡುತ್ತಿಲ್ಲ ಎಂದಲ್ಲ, ಈ ದೇಶದಲ್ಲಿ ಪುರೋಹಿತಶಾಹಿಗಳ ಕಪಿಮುಷ್ಠಿಯಲ್ಲಿರುವ ದೇವಾಲಯಗಳು ಸಹ ಸಾರ್ವಜನಿಕ ಸ್ಥಳಗಳಾಗಬೇಕು ಎಂದರೆ ಹೊರತು, ದೇವರನ್ನು ನಂಬಿ, ಪೂಜೆ ಮಾಡಿ, ಯಜ್ಞ ಯಾಗಗಳಲ್ಲಿ ತೊಡಗಿಸಿಕೊಳ್ಳಿ, ಅದರಿಂದ ನಮಗೆ ಅಭಿವೃದ್ಧಿ ಸಾಧ್ಯ ಎಂದು ಎಲ್ಲಿಯೂ ಹೇಳಲಿಲ್ಲ. ಆದರೆ ನಾವು ದೇವಾಲಯಗಳನ್ನು ಕೇವಲ ಪೂಜೆ, ಹೋಮ, ಅರ್ಚನೆ, ಎಲ್ಲದಕ್ಕೂ ನಮ್ಮ ಸಂಪಾದನೆಯನ್ನು ಅವರಿಗೆ ಕೊಟ್ಟು ಬರುತ್ತಿದ್ದೆವೆ. ಇನ್ನು ಮುಂದೆ ಈ ದೇಶದ ಎಲ್ಲಾ ದಲಿತ ಶೋಷಿತ ಸಮುದಾಯಗಳು ದೇವಾಲಯಗಳಿಗೆ ಹೋಗುವುದನ್ನು ನಿರಾಕರಿಸಬೇಕು ಎನ್ನುವುದು ಬಹಳ ಗಂಭೀರವಾದ ವಿಚಾರವಾಗಿದೆ.
ಈ ದೇಶದ ಜಾತಿ ವ್ಯವಸ್ಥೆ ಎಂಬುದು ಧರ್ಮದ ತಳಹದಿಯ ಮೇಲೆ ನಿಂತಿದೆ, ಧರ್ಮವು ಮನುಧರ್ಮ ಶಾಸ್ತ್ರದ ಪೋಷಕರಂತಿದ್ದು ಈ ದೇಶವನ್ನು ಬಾಧಿಸುತ್ತಿದೆ. ರಾಜಕೀಯ ಅಧಿಕಾರವು ಶೇ 97 ರಷ್ಟು ಪುರೋಹಿತಶಾಹಿಯ ಕಪಿಮುಷ್ಠಿಯಲ್ಲಿದ್ದು ಅದಕ್ಕೆ ನೀರೆರೆಯುತ್ತಿದೆ. ಆ ಕಾರಣಕ್ಕಾಗಿಯೇ ಇಂತಹ ವ್ಯವಸ್ಥೆಯಿಂದ ಶೋಷಿತ ಜನಾಂಗವನ್ನು ವಿಮೋಚನೆಗೊಳಿಸಲು 6 ನೇ ಶತಮಾನದಲ್ಲಿ ಬುದ್ಧ ಬಂದರು. ವಿಜ್ಞಾನದ ಹಾದಿಯಲ್ಲಿ ನಡೆಯಲು ಹುಣ್ಣಿಮೆಯ ದಿನದಂದೇ ತನ್ನ ಶಿಷ್ಯರಿಗೆ ದಮ್ಮ ಸಾರವನ್ನು ಬೋಧಿಸಿದರು. ಅದು ಇವತ್ತಿಗೆ ಗುರು ಪೂರ್ಣಿಮೆಯಾಯಿತು. ನಂತರ 12 ನೇ ಶತಮಾನದಲ್ಲಿ ಬಸವಣ್ಣನವರು ಬಂದರು ಜಾತಿಯ ಕಠೋರತೆಯ ವಿರುದ್ಧ ಸಿಡಿದೆದ್ದು ನಿಂತರು. ಪುರಾಣವೆಂಬುದು ಪುಂಡರ ಗೋಷ್ಠಿ, ಕೈಲಾಸವೆಂಬುದು ಹಾಳು ಬೆಟ್ಟ, ಅಲ್ಲಿರುವ ಶಿವನು ದಟ್ಟ, ಅಲ್ಲಿರುವ ಗಣಂಗಳು ಮೈಗಳ್ಳರು , ಬೇಡೆನೆಗೆ ಕೈಲಾಸ, ಮಾಡುವುದು ಕಾಯಕ, ಕಾಯಕ ದೀಕ್ಷೆಯನ್ನು ನೀಡು ನಾಡ ಹಂದರಕ್ಕೆ ಹಬ್ಬಿಸುವೆ, ಕಾಯಕವೇ ಕೈಲಾಸ ಎಂದರು. 18 ನೇ ಶತಮಾನದಲ್ಲಿ ಶೋಷಿತರ ವಿಮೋಚನೆಯ ಒಂದು ಕ್ರಾಂತಿಯೇ ನಡೆದುಹೋಯಿತು. ಶಿಕ್ಷಣದಲ್ಲಿ ಕ್ರಾಂತಿ ನಡೆಯಿತು. ಮಹಾತ್ಮಾ ಜ್ಯೋತಿ ಬಾ ಫುಲೆ, ಸಾವಿತ್ರಿ ಬಾಯಿ ಫುಲೆ, ಶಾಹು ಮಹರಾಜ್, ನಾರಾಯಣಗುರು, ತಂದೆ ಪೆರಿಯಾರ್, ನಾಲ್ವಡಿ ಕೃಷ್ಣರಾಜ ಒಡೆಯರ್, ಮತ್ತು ಡಾ ಅಂಬೇಡ್ಕರ್ ರಂತಹ ಮಹಾನ್ ಜ್ಞಾನಿಗಳು ಹುಟ್ಟಿ ಮೂಢನಂಬಿಕೆಯಿಂದ ಶೋಷಿತರು ಹೊರಗಡೆಗೆ ಬಂದು ತನ್ನ ವಿಮೋಚನೆಗಾಗಿ ದುಡಿಯಲು ದಾರಿ ತೋರಿಸಿಕೊಟ್ಟರು. ಸಮಾನತೆಯ ಸಮಾಜದ ಕನಸನ್ನು ಕಾಣಲು ಬಯಸಿದರು. ಆದರೆ ಇಂತಹ ಘಟನೆಗಳು ಇಂದಿಗೂ ನಮ್ಮ ಸಮಾಜವನ್ನು ಬಾಧಿಸುತ್ತಿವೆ ಎಂದರೆ,ಅಂತಹ ಮಡಿವಂತಿಕೆಯ ಮನಸುಗಳ ನಮ್ಮ ಸಮಾಜಕ್ಕೆ ಕ್ಯಾನ್ಸರ್ ಗಳಾಗಿವೆ. ಇವುಗಳನ್ನು ಬುಡಸಮೇತ ಕಿತ್ತೊಗೆಯಬೇಕಾದರೆ, ಪೊಲಿಟಿಕಲ್ ಪವರ್ ಈಸ್ ದ ಮಾಸ್ಟರ್ ಕೀ ಎನ್ನುವುದನ್ನು ಶೋಷಿತ ಸಮುದಾಯದ ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw