ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರು ಯಾಕೆ ಬೇಕು? ಆಂಧ್ರ ಸಿಎಂಗೆ ಉವೈಸಿ ಪ್ರಶ್ನೆ
![](https://www.mahanayaka.in/wp-content/uploads/2025/02/3dacb12714736a602a88bbc28d54797ba22e74366416276be37e8634d04562d0.0.jpg)
ತಿರುಮಲ ತಿರುಪತಿ ದೇವಸ್ಥಾನದಲ್ಲಿ ಹಿಂದೂಯೇತರ ನೌಕರರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಕೇಂದ್ರ ವಕ್ಫ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರರನ್ನು ಸೇರಿಸುವುದನ್ನು ಕಡ್ಡಾಯಗೊಳಿಸುವ ಬಿಜೆಪಿಯ ವಕ್ಫ್ ತಿದ್ದುಪಡಿ ಮಸೂದೆಯನ್ನು ಯಾಕೆ ಬೆಂಬಲಿಸುತ್ತಿದ್ದಾರೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಉವೈಸಿ ಪ್ರಶ್ನಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಅಸದುದ್ದೀನ್ ಉವೈಸಿ, ತಿರುಮಲ ತಿರುಪತಿ ದೇವಸ್ಥಾನ ಹಿಂದೂಗಳಿಗೆ ಮಾತ್ರ ಉದ್ಯೋಗ ಎಂದು ವಾದಿಸುತ್ತಿದೆ. ವಕ್ಫ್ ಮಸೂದೆ ಮುಸ್ಲಿಂ ಧಾರ್ಮಿಕ ಸಂಸ್ಥೆಗಳಲ್ಲಿ ಕನಿಷ್ಠ ಇಬ್ಬರು ಮುಸ್ಲಿಮೇತರರಿರುವುದನ್ನು ಕಡ್ಡಾಯಗೊಳಿಸುತ್ತದೆ. ಹಿಂದೂಗಳು ಮಾತ್ರ ಹಿಂದೂ ದತ್ತಿಗಳನ್ನು ನಿರ್ವಹಿಸಬೇಕು ಮತ್ತು ಹಿಂದೂಗಳು ಮಾತ್ರ ಉದ್ಯೋಗಿಗಳಾಗಿರಬೇಕು ಎಂದಾದರೆ ಮುಸ್ಲಿಂ ವಕ್ಫ್ ಗಳ ವಿರುದ್ಧ ಈ ತಾರತಮ್ಯ ಏಕೆ? ಎಂದು ಉವೈಸಿ ಪ್ರಶ್ನಿಸಿದ್ದಾರೆ.
ಹಿಂದೂಯೇತರರು ಆಯುಕ್ತರು, ಸಹಾಯಕ ಆಯುಕ್ತರು, ಇನ್ಸ್ ಪೆಕ್ಟರ್, ಟ್ರಸ್ಟಿ ಅಥವಾ ಕಾರ್ಯನಿರ್ವಾಹಕ ಅಧಿಕಾರಿಯಂತಹ ಹುದ್ದೆಗಳನ್ನು ಹೊಂದುವುದನ್ನು ನಿರ್ಬಂಧಿಸುವ ಆಂಧ್ರಪ್ರದೇಶ ಹಿಂದೂ ದತ್ತಿ ಕಾಯ್ದೆಯನ್ನು ಅವರು ಉಲ್ಲೇಖಿಸಿದ್ದಾರೆ.
ʼತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಸಂಪ್ರದಾಯಗಳನ್ನು ಅನುಸರಿಸದ ಅಥವಾ ಹಿಂದೂಯೇತರ 18 ಉದ್ಯೋಗಿಗಳನ್ನು ಗುರುತಿಸಿವೆ ಎಂದು ವರದಿಯಾಗಿದೆ. ಟಿಟಿಡಿ ಹಿಂದೂ ಸಂಸ್ಥೆಯಾಗಿರುವುದರಿಂದ ಹಿಂದೂಯೇತರರನ್ನು ಅದರಲ್ಲಿ ನೇಮಿಸಿಕೊಳ್ಳಬಾರದು ಎಂದು ವಾದಿಸುತ್ತದೆ. ನಮಗೆ ಅದಕ್ಕೆ ಯಾವುದೇ ಆಕ್ಷೇಪವಿಲ್ಲ. ಆದರೆ ವಕ್ಫ್ ಮಸೂದೆಯನ್ನು ತೆಲುಗು ದೇಶಂ ಪಕ್ಷ ಯಾಕೆ ಬೆಂಬಲಿಸಿದೆ ಎಂಬುದನ್ನು ವಿವರಿಸಬೇಕು. ಮಸೂದೆಯು ಕೇಂದ್ರ ವಕ್ಫ್ ಮಂಡಳಿ ಮತ್ತು ರಾಜ್ಯ ವಕ್ಫ್ ಮಂಡಳಿಯಲ್ಲಿ ಕನಿಷ್ಠ ಇಬ್ಬರು ಮುಸ್ಲಿಮೇತರರನ್ನು ಕಡ್ಡಾಯಗೊಳಿಸುತ್ತದೆ. ಮಂಡಳಿಯಲ್ಲಿ ಬಹುಪಾಲು ಮುಸ್ಲಿಮರನ್ನು ಹೊಂದಿರಬೇಕೆಂಬ ಅಂಶವನ್ನು ಕೂಡ ಮಸೂದೆ ತೆಗೆದು ಹಾಕುತ್ತದೆʼ ಎಂದು ಉವೈಸಿ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj