ಮಂಗಳೂರಿಗೆ ಬೇಡವಾದ ಆನ್‌ ಲೈನ್ ಪೈಲಟ್ ಪ್ರಾಜೆಕ್ಟ್ ಉಡುಪಿಗೇಕೆ ? - Mahanayaka
5:15 PM Wednesday 11 - December 2024

ಮಂಗಳೂರಿಗೆ ಬೇಡವಾದ ಆನ್‌ ಲೈನ್ ಪೈಲಟ್ ಪ್ರಾಜೆಕ್ಟ್ ಉಡುಪಿಗೇಕೆ ?

ramesh kanchan
26/02/2023

ಭೂ ಮಾರಾಟ, ಖರೀದಿ ಇತ್ಯಾದಿ ದಾಖಲೆಗಳ ನೋಂದಣಿಯನ್ನು ಕಡ್ಡಾಯವಾಗಿ ಆನ್‌ ಲೈನ್ ಮೂಲಕ ನಡೆಸುವ ಸರಕಾರದ ಕಾವೇರಿ ವೆಬ್ ಪೋರ್ಟಲ್ ಸೇವೆಯನ್ನು ಮಂಗಳೂರು ತಾಲೂಕು ನೋಂದಾವಣಾ ಕಚೇರಿಯಲ್ಲಿ ಸಾರ್ವಜನಿಕರ ವಿರೋಧದ ಕಾರಣ ರದ್ಧು ಪಡಿಸಿರುವ ಬೆನ್ನಿಗೆ ಆ ಕಡ್ಡಾಯ ಆನ್‌ ಲೈನ್ ಪ್ರಾಜೆಕ್ಟನ್ನು ಉಡುಪಿಯಲ್ಲಿ ಜಾರಿಗೊಳಿಸಲು ದಿಢೀರ್ ಯತ್ನ ನಡೆದಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಆರೋಪಿಸಿದ್ದಾರೆ.

ಮಂಗಳೂರು ತಾಲೂಕು ನೋಂದಣಾಧಿಕಾರಿಗಳ ಕಚೇರಿಯಲ್ಲಿ ಅಂತಹ ಪ್ರಯತ್ನ ನಡೆದಾಗ ಜನಸಾಮಾನ್ಯರೊಂದಿಗೆ ವಕೀಲರು, ದಸ್ತಾವೇಜು ಬರಹಗಾರರು ವಿರೋಧಿಸಿದ್ದರು. ಜನರ ವಿರೋಧಕ್ಕೆ ಸ್ಪಂದಿಸಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಜನಪ್ರತಿನಿಧಿಗಳಾದ ಯು.ಟಿ.ಖಾದರ್, ನಳಿನ್ ಕುಮಾರ್ ಕಟೀಲ್, ವೇದವ್ಯಾಸ್ ಕಾಮತ್, ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್ ಅವರು ಯೋಜನೆಯನ್ನು ಕೈಬಿಡುವಂತೆ ಸರಕಾರದ ಮೇಲೆ ಒತ್ತಡ ಹೇರಿದ್ದರು. ಜನಪ್ರತಿನಿಧಿಗಳ ಒತ್ತಡದ ಕಾರಣ ಮಂಗಳೂರು ತಾಲೂಕು ನೋಂದಣಾಧಿಕಾರಿಗಳ ಕಚೇರಿಯಲ್ಲಿ ಆನ್‌ ಲೈನ್ ಜಾರಿ ಯೋಜನೆಯನ್ನು ರದ್ಧುಪಡಿಸಲಾಯಿತು. ಮಂಗಳೂರಿನಲ್ಲಿ ರದ್ದಾದ ಯೋಜನೆಯನ್ನು ಇದೀಗ ಉಡುಪಿಗೆ ವರ್ಗಾಯಿಸಿದ್ದು ಮಾರ್ಚ್ 1ರಿಂದ ಉಡುಪಿಯ ಹಿರಿಯ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಾವೇರಿ–2 ವೆಬ್ ಪೋರ್ಟಲ್ ಸೇವೆಯನ್ನು ಕಡ್ಡಾಯವಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಂಗಳೂರಿನಲ್ಲಿ ರದ್ದಾದ ಯೋಜನೆಯನ್ನು  ಮಂಗಳೂರಿನ ಜನರು, ಜನಪ್ರತಿನಿಧಿಗಳು, ವಕೀಲರು ಹಾಗೂ ದಸ್ತಾವೇಜು ಬರಹಗಾರರ ವಿರೋಧದ ಕಾರಣ ರದ್ದಾಗಿರುವ ಆನ್‌ ಲೈನ್ ಪ್ರಾಜೆಕ್ಟನ್ನು ಉಡುಪಿಯ ಜನರ ಮೇಲೆ ಹೇರಿರುವುದು ಖಂಡನೀಯ. ಈಗಾಗಲೇ ನಗರಸಭೆ, ತಾಲೂಕು ಕಚೇರಿ, ನಗರಾಭಿವೃದ್ಧಿ ಪ್ರಾಧಿಕಾರ ಮುಂತಾದ ಇಲಾಖೆಗಳಲ್ಲಿ ಸರ್ವರ್ ಸಮಸ್ಯೆಯಿಂದ ಜನರು ರೋಸಿಹೋಗಿದ್ದಾರೆ. ಇದೀಗ ಭೂ ಮಾರಾಟ ಹಾಗೂ ಖರೀದಿಯ ದಾಖಲೆಗಳನ್ನು ಆನ್ಲೈನ್ ಮೂಲಕ ಅಪ್ಲೋಡ್ ಮಾಡುವುದರ ಸಾಧಕ ಭಾದಕವನ್ನು ತಿಳಿಯದೆ ಏಕಾಏಕಿ ಈ ಯೋಜನೆಯನ್ನು ಜಾರಿಗೊಳಿಸಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸುವುದು ಸರಿಯಲ್ಲ ಎಂದು ರಮೇಶ್ ಕಾಂಚನ್ ವಿರೋಧ ವ್ಯಕ್ತಪಡಿಸಿದ್ದಾರೆ.

ಉಡುಪಿಯ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್ ಮತ್ತಿತರ ಜನಪ್ರತಿನಿಧಿಗಳು ತಕ್ಷಣ ಸ್ಪಂದಿಸಿ ಆನ್‌ ಲೈನ್ ಪ್ರಾಜೆಕ್ಟ್ ಜಾರಿಯಾಗದಂತೆ ತಡೆಹಿಡಿಯಲು ಸರಕಾರದ ಮೇಲೆ ಒತ್ತಡ ಹೇರುವಂತೆ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ