ಕಾಪು: ಪತಿ ಮೈಮೇಲೆ ಮೆಣಸಿನ ಹುಡಿ ಮಿಶ್ರಿತ ಬಿಸಿ ನೀರು ಎರಚಿದ ಪತ್ನಿ!
ಕಾಪು: ಕ್ಷುಲ್ಲಕ ಕಾರಣಕ್ಕಾಗಿ ಪತ್ನಿ ತನ್ನ ಪತಿಯ ಮೈಮೇಲೆ ಮೆಣಸಿನ ಹುಡಿ ಮಿಶ್ರಿತ ಬಿಸಿ ನೀರನ್ನು ಎರಚಿ ಗಂಭೀರವಾಗಿ ಗಾಯಗೊಳಿಸಿರುವ ಅಮಾನವೀಯ ಘಟನೆ ಸೆ.17ರಂದು ಸಂಜೆ ಕಟಪಾಡಿ ಸಮೀಪದ ಮಣಿಪುರ ಗ್ರಾಮದ ಗುಜ್ಜಿ ಎಂಬಲ್ಲಿ ನಡೆದಿದೆ.
ಮುಖ, ದೇಹ, ಎಡಗೈ, ಎದೆ, ಬೆನ್ನು ಬಲಕೈ ಸುಟ್ಟು ಹೋಗಿ ಗಂಭೀರವಾಗಿ ಗಾಯಗೊಂಡಿರುವ ಇನ್ನಾ ಮಡ್ಮಣ್ ನಿವಾಸಿ ಮುಹಮ್ಮದ್ ಆಸೀಫ್(22) ಎಂಬವರು ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು 11 ತಿಂಗಳ ಹಿಂದೆ ಮಣಿಪುರ ಗ್ರಾಮದ ಗುಜ್ಜಿ ನಿವಾಸಿ ಹುಸೈನ್ ಎಂಬವರ ಮಗಳು ಅಫ್ರೀನ್ ಎಂಬಾಕೆಯನ್ನು ಮದುವೆಯಾಗಿದ್ದು, ಮದುವೆ ಯಾದ ಬಳಿಕ ಅಫ್ರೀನ್ ಒಂದೂವರೆ ತಿಂಗಳು ಆಸೀಫ್ ಅವರ ಮನೆಯಲ್ಲಿದ್ದು, ಬಳಿಕ ಗಂಡನ ಮನೆಯಲ್ಲಿ ಇರಲು ಇಷ್ಟವಿಲ್ಲವೆಂದು ತನ್ನ ತವರು ಮನೆಗೆ ಬಂದಿ ನೆಲೆಸಿದ್ದಳು. ಅದೇ ರೀತಿ ಆಸೀಫ್ ಕೂಡ ಆಕೆಯೊಂದಿಗೆ ಸುಮಾರು 9 ತಿಂಗಳಿನಿಂದ ಹೆಂಡತಿ ಮನೆಯಲ್ಲಿಯೇ ವಾಸವಾಗಿದ್ದರು. ಅಫ್ರೀನ್‌ಗೆ ಆಸೀಫ್ ಬೇರೆ ಹುಡುಗಿಯೊಂದಿಗೆ ಸಂಬಂಧ ಹೊಂದಿರುವುದಾಗಿ ಅನುಮಾನ ವಿದ್ದು, ಈ ಬಗ್ಗೆ ಅವರೊಂದಿಗೆ ಜಗಳವಾಡುತ್ತಿದ್ದಳು ಎಂದು ದೂರಲಾಗಿದೆ.
ಸೆ.16ರಂದು ಮಧ್ಯಾಹ್ನ ಅಫ್ರೀನ್, ಆಸೀಫ್ ಅವರ ಮೊಬೈಲ್ ನೋಡುತ್ತಿದ್ದು, ಈ ವೇಳೆ ಆಸೀಫ್‌ಗೆ ಹೊರಗಡೆ ಹೋಗಲು ಇದ್ದ ಕಾರಣ ಹೆಂಡತಿಯ ಕೈಲಿದ್ದ ಮೊಬೈಲ್ ಎಳೆದುಕೊಂಡಿದ್ದರು. ಆ ಸಂದರ್ಭ ಆಫ್ರೀನ್, ಪತಿ ಜೊತೆ ಜಗಳ ಮಾಡಿ ಕಚ್ಚಿದ್ದಳು. ಸೆ.17ರಂದು ಸಂಜೆ ಆಸೀಫ್ ಬಾತ್ ರೂಮ್ನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಅಫ್ರೀನ್ ಹೊರಗಿನಿಂದ ಬಾಗಿಲು ಬಡಿದಿದ್ದು, ಆಸೀಫ್ ಬಾಗಿಲನ್ನು ತೆರೆದಾಗ ಅಫ್ರೀನ್ ತನ್ನ ಕೈಯಲ್ಲಿ ಹಿಡಿದು ಕೊಂಡಿದ್ದ ಸ್ಟೀಲಿನ ಪಾತ್ರೆಯಲ್ಲಿದ್ದ ಮೆಣಸಿನ ಹುಡಿ ಮಿಶ್ರಿತ ಬಿಸಿ ನೀರನ್ನು ಆಸೀಫ್ ಮೈ ಮೇಲೆ ಎರಚಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದರ ಪರಿಣಾಮ ಆಸೀಫ್ ಅವರ ದೇಹ ಹಲವು ಭಾಗಗಳು ಸುಟ್ಟು ಹೋಗಿದ್ದು, ಆಸೀಫ್‌ನನ್ನು ಆಸ್ಪತ್ರೆಗೆ ಹೋಗದಂತೆ ಅಫ್ರೀನ್, ಅತ್ತೆ ಮೈಮುನಾ, ಮಾವ ಹುಸೈನ್ ಹಾಗೂ ನೆರೆಮನೆಯ ಲತೀಫ್ ರವರು ಸೇರಿ ಮನೆಯ ರೂಮಿನಲ್ಲಿಯೇ ಕೂಡಿ ಹಾಕಿದ್ದಾರೆನ್ನಲಾಗಿದೆ. ಅಲ್ಲದೆ ಅಫ್ರೀನ್, ಆಸೀಫ್ರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾಳೆ. ಸೆ.18ರಂದು ಮಧ್ಯಾಹ್ನ ಉಳ್ಳಾಲದ ನಿವಾಸಿ ಜಮಾತ್ ಎಂಬಾತ ಆಸೀಫ್ಗೆ ಕರೆ ಮಾಡಿ ದೂರು ಕೊಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಬಳಿಕ ಆಸೀಫ್ ಅವರನ್ನು ಅವರ ಸಂಬಂಧಿಸಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.