ಜಾತಿ ಹೆಸರಿನಲ್ಲಿ ಮಾಡುವ ಅವಮಾನಗಳಿಗೆ ಕೊನೆ ಎಂದು? - Mahanayaka
8:34 AM Wednesday 5 - February 2025

ಜಾತಿ ಹೆಸರಿನಲ್ಲಿ ಮಾಡುವ ಅವಮಾನಗಳಿಗೆ ಕೊನೆ ಎಂದು?

cast in india
02/02/2023

  • ಧಮ್ಮಪ್ರಿಯಾ, ಬೆಂಗಳೂರು

ನವ ಭಾರತದ ನವ ತರುಣರಲ್ಲಿ ಒಂದು ಮನವಿ, ನನ್ನ ಸ್ನೇಹಿತನೊಬ್ಬ ಈಗೆ ಮಾತನಾಡುವಾಗ ಬಳಸಿದ ಪದ ಬಳಕೆಯ ರೀತಿ ನನ್ನಲ್ಲಿ ಸ್ವಲ್ಪ ತಳಮಳ ಸೃಷ್ಠಿಸಿತು.  ತಲೆಮಾರಿನಿಂದ ತಲೆಮಾರಿಗೆ ನಮಗರಿವಿಲ್ಲದೆಯೇ ಹೇಗೆ ಕೆಲವು ಆಚಾರಗಳು ಮುಂದುವರೆಯುತ್ತವೆ ಎನ್ನುವುದಕ್ಕೆ ಇದೆ ಒಂದು ಉದಾಹರಣೆ ಎನ್ನಬಹುದು.

ಸ್ನೇಹಿತನೊಡನೆ ಮಾತನಾಡುವಾಗ ನನಗೆ ತಲೆ ಸುತ್ತಿದೆ ಎಲ್ಲಿ ಬಿದ್ದುಹೋಗುತ್ತೀನೋ ಅನ್ನುವ ಭಯವಿದೆ ಎಂದದ್ದೇ ತಡ, ಆತ ಒಂದು ID ಕಾರ್ಡ್ ಜೇಬಲ್ಲಿ ಇಟ್ಟುಕೊಳ್ಳಿ ಎಲ್ಲಾದರೂ ಬಿದ್ದುಹೋದರೆ ನಿಮ್ಮನ್ನು ಎಳೆದು ಹಾಕಲು ಅನುಕೂಲವಾಗುತ್ತದೆ ಎಂದುಬಿಟ್ಟ, ಪಾಪ ಅವನ ಉದ್ದೇಶ ನನಗೆ ಅವಮಾನ ಮಾಡುವುದಲ್ಲಾ, ಆತ  ಮೂಲತಃ ಒಕ್ಕಲಿಗ ಸಮುದಾಯದ ಸ್ನೇಹಿತ. ಈತನಿಗೆ ತನ್ನ ಹಳ್ಳಿಯಲ್ಲಿ ಆತನ ತಾತ,  ಅಪ್ಪ, ಅಜ್ಜಿ, ಹೀಗೆ ಹಿರಿಯ ತಲೆಮಾರುಗಳು ಶೋಷಿತ ಸಮುದಾಯವನ್ನು ಹೇಗೆ ನಡೆಸಿಕೊಂಡಿದ್ದಾರೆ, ಶೋಷಿತರ ಬಗ್ಗೆ ಹೇಗೆಲ್ಲಾ ಮಾತನಾಡಿದ್ದಾರೆ ಎಂಬುದು ಅನುಕರಣೆಯ ರೂಪದಂತೆ  ತನಗರಿವಿಲ್ಲದೆಯೇ ಈತನ ಬಾಯಿಯಲ್ಲಿಯೂ ಬಂದದ್ದು ಬಹಳ ಆಶ್ಚರ್ಯವಾಯಿತು. ನಾನು ಬಿದ್ದಾಗ ಎಳೆದು ಹಾಕೋಕೆ ನಾಯಿಯಲ್ಲಾ , ಬಳಸುವ ಪದಗಳ ಬಗ್ಗೆ ಎಚ್ಚರವಿರಲಿ ಎಂದು ಹೇಳುತ್ತಾ ಹಾಗೆಯೇ ಸುಮ್ಮನಾದೆ.

ಅದೇ ದಿನ ಸಂಜೆ ನನ್ನ ಮತ್ತೊಬ್ಬ ಸ್ನೇಹಿತರ ಮನೆಯ ವರಾಂಡದಲ್ಲಿ ಕುಳಿತು ಹರಟೆ ಹೊಡೆಯುತ್ತಿರಬೇಕಾದರೆ ಅಲ್ಲಿಗೆ ಬಂದ ಒಕ್ಕಲಿಗ ಸಮುದಾಯದ ಗುಂಪೊಂದು ದೇವರ ಉತ್ಸವಕ್ಕೆ  ಚಂದಾ ಕೇಳುತ್ತಿದ್ದರು. ನನ್ನ ಸ್ನೇಹಿತ ಚಂದಾ ಕೊಡಲು ಒಪ್ಪಿಕೊಂಡರು.ಯಾರ ಬಳಿಯೂ ಗದ್ದಲ ಮಾಡಿಕೊಳ್ಳಬೇಡಿ.  ಗಲಾಟೆಗೆ ಅವಕಾಶ ಕೊಡಬೇಡಿ ಎಂದರು. ತಕ್ಷಣವೇ ಊರಿನ ಹಿರಿ ತಲೆಮಾರಿನ ವ್ಯಕ್ತಿ  ಅದೆಲ್ಲದಕ್ಕೆ ಅವಕಾಶವೇ ಇಲ್ಲಾ. ಒಂದು ವೇಳೆ ಇದ್ದರು ಸಣ್ಣ ಪುಟ್ಟವುಗಳಿಗೆಲ್ಲಾ ತಲೆ ಕೆಡಿಸಿಕೊಂಡರೆ ಕೆಲಸವಾಗುವುದಿಲ್ಲಾ ಎಂದು ಹೇಳುತ್ತಾ  “ಊರು ಅಂದ ಮೇಲೆ ಹೊಲಗೇರಿ ಇದ್ದೇ ಇರುತ್ತೆ” ನಾವು ನಮ್ಮ ಕೆಲಸ ಮಾಡಬೇಕು ಅಷ್ಟೇ ಅಂತೇಳಿ ಮಾತು ಮುಗಿಸಿ ಹೊರಟರು.  ಏನಿದು ಇನ್ನು ಈ ರೀತಿಯ ಮಾತುಗಳಿವೆಯಾ ಎಂದು ಚಿಂತಿಸಿದೆ,  ಯಾಕೆ ಕೆಲವು ಜಾತಿಗಳೇ ಬೈಗುಳಗಳ ವಸ್ತುವಾಗಿವೆ. ಹಾಗಾದರೆ ಶ್ರೇಷ್ಠತೆ ಎನ್ನುವುದು ಯಾವ ಜಾತಿಯನ್ನು ಆಯ್ಕೆ ಮಾಡಿಕೊಂಡಿದೆ.  ಎಂದು ಚಿಂತಿಸುತ್ತಾ,  ಯಾವುದು ಶ್ರೇಷ್ಠ, ಮತ್ಯಾವುದು ಕನಿಷ್ಠ,  ಯಾರೂ ಇದಕ್ಕೆ ಕಾರಣೀಭೂತರು ಎಂದೆಲ್ಲಾ ಚಿಂತಿಸತೊಡಗಿದೆ.

“ಊರೆಂದರೆ ಹೊಲೆಗೇರಿ ಇದ್ದೇ ಇರುತ್ತದೆ” ಈ ಸಾಮಾನ್ಯ ನುಡಿಯ ಹಿಂದಿರುವ ಭಾವ ಯಾವುದು ಎನ್ನವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ, ಜೊತೆಗೆ  ಹೊಲಸು ತಿನ್ನುವವನೇ ಹೊಲೆಯ ಎನ್ನುವ ಮಾತುಗಳನ್ನೆಲ್ಲಾ  ಆಧುನಿಕ ಸಂವಿಧಾನಿಕ ಭಾರತದಲ್ಲಿ ಇಂತಹ ನುಡಿಗಳನ್ನು  ಸಾಮಾನ್ಯಕರಿಸಲಾಗಿದೆ.ಇದು  ಯಾವ ಜನಾಂಗದ ಹೀಯಾಳಿಕೆಯಲ್ಲಾ ಎನ್ನುವಷ್ಟರ ಮಟ್ಟಿಗೆ ಮಾತನಾಡಲಾಗುತ್ತಿದೆ. ಇದರ ಹಿಂದಿರುವ ಮರ್ಮ ಏನು  ಎಂಬುದನ್ನು  ವಿಚಾರವೆಂಬ ಓರೆಗಲ್ಲಿಗೆ  ಹಚ್ಚಿ, ತರ್ಕಕ್ಕೆ ಒಳಪಡಿಸಿ ಇಂತಹ ಮಾತುಗಳನ್ನು ಬಳಸಕೇಕಾ ಅಥವಾ  ಕುಲೀನ ಮನಸ್ಥಿತಿಯಿಂದ ಹೊರಗಡೆ ಬರಬೇಕಾ ? ಎಂದು  ತೀರ್ಮಾನಿಸಬೇಕಾಗಿದೆ. ಇಂದು ಆಧುನಿಕ ಸಮಾಜದಲ್ಲಿ  ಬೈಗುಳಗಳು ಸಹ ತಳ ಸಮುದಾಯಗಳನ್ನು ಕೇಂದ್ರೀಕರಿಸಿ ಬೈಯ್ಯಲಾಗುತ್ತಿದೆ.  ಹಾಸ್ಯಗಳನ್ನು ಧಾರ್ಮಿಕ ಅಲ್ಪ ಸಂಖ್ಯಾತರನ್ನು ಮೂದಲಿಸಿ ನಗೆಪಾಟಲಿಗೀಡುಮಾಡಲಾಗುತ್ತಿದೆ.

ಒಂದು ಜಾತಿಯನ್ನು ಅಥವಾ ಸಮುದಾಯಗಳನ್ನು ಹೀನಾಯವಾಗಿ  ಕಾಣಲು ಅದರ  ಹಿಂದಿರುವ ಸಾಂಸ್ಕೃತಿಕ, ವೈದಿಕ ಪರಂಪರೆಯ ಪಟ್ಟಭದ್ರಹಿತಾಶಕ್ತಿಗಳು  ಯಾವುವು  ಎನ್ನುವುದನ್ನು ಸಾಮಾನ್ಯ ಜನರಿಗೆ ತಿಳಿಸಬೇಕಾದ ಅನಿವಾರ್ಯತೆ  ನಮಗಿದೆ. ಆಧುನಿಕ ಭಾರತದ  ನಿಮ್ನವರ್ಗಗಳು  ಜಾತಿಯ ಹೀನತೆಯ ಸಂಕೋಲೆಯಲ್ಲಿ ಸಿಲುಕಿ ಇಂದಿಗೂ ನಲುಗುತ್ತಿರುವ ಎಷ್ಟೋ ಜನಾಂಗವನ್ನು ನಮ್ಮ ಸಮಾಜದೊಳಗೆ ನೋಡುತ್ತಿದ್ದೇವೆ.  ಜಾತಿಯ ಶ್ರೇಷ್ಠತೆ ಎಂಬುದು ಆಧುನಿಕ ಭಾರತದಲ್ಲಿ ಮಡಿವಂತರ  ಬದುಕಿನ ಮೂಲ ಮಂತ್ರವಾಗಿದೆ.  “ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ,ಜಾತಿ ವಿಜಾತಿಯೆನಬೇಡ ದೇವನೊಲಿದತಾನೇ ಜಾತ ಕಾಣ ಸರ್ವಜ್ಞ” ಎನ್ನುವ  ಸರ್ವಜ್ಞನ ಮಾತುಗಳನ್ನು  ಮಡಿವಂತರೆನಿಸಿಕೊಂಡವರಿಗೆ  ಅರ್ಥ ಮಾಡಿಸಬೇಕಿದೆ.

ಜಾತಿಯ ತಾರತಮ್ಯ, ಲಿಂಗ ತಾರತಮ್ಯ, ಕಸುಬುಗಳ ಮೇಲಿನ ತಾರತಮ್ಯ,  ಊಟದ ವ್ಯವಸ್ಥೆಯ ಮೇಲಿನ ಮಡಿವಂತರ ಅವಹೇಳನ, ವೈದಿಕ ಪರಂಪರೆಯ ತಾತ್ಸಾರದ ತಾರತಮ್ಯಗಳು ಜನರನ್ನು ದಿಕ್ಕು ತಪ್ಪಿಸಿವೆ. ಇದರಿಂದ  ಕಂಗಾಲಾದವರಿಗೆ ಬಸವಣ್ಣನ ಶರಣ ಚಳುವಳಿ ಒಂದು ರೀತಿಯಲ್ಲಿ ಶ್ರೇಷ್ಠತೆಯ ಮನೋಭಾವವನ್ನು ತಂದು ಕಟ್ಟಿಕೊಟ್ಟಿದೆ.

ಕೊಲುವವನೇ ಮಾದಿಗ, ಹೊಲಸು ತಿಂಬವನೇ ಹೊಲೆಯ, ಕುಲವೇನೊ ಅವದಿರ ಕುಲವೇನೊ ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ನಮ್ಮ ಕೂಡಲ ಸಂಗಮ ಶರಣರೇ ಕುಲಜರು

ಕೊಲ್ಲುವವರು,  ಹೊಲಸು ತಿನ್ನುವವರು,  ಹೀನ ಕೃತ್ಯವೆಸಗಿದವರು ಇವರೆಲ್ಲಾ  ಹೀನಕುಲದವರು  ಎಂದು ದೂರವಿಟ್ಟು ಸಮಾಜದಲ್ಲಿ  ಮಾನವತೆಯನ್ನೇ ಕೊಂದು ಮರೆಮಾಚಿದ್ದ ಕುಲೀನರಿಗೆ  ಬಸವಣ್ಣನವರ  ವಚನ ಚಳುವಳಿ ದೊಡ್ಡ ಪೆಟ್ಟು ಕೊಟ್ಟಿತು. ಯಾರನ್ನು  ಕುಲ ಹೀನರೆಂದು ಹೇಳಲಾಗಿತ್ತೋ ಅವರನ್ನೆಲ್ಲಾ ಕೂಡಲಸಂಗನ ಶರಣರೆಂದು ಹೇಳುತ್ತಾ  ಅವರೆಲ್ಲರಿಗೂ  ಶ್ರೇಷ್ಠತೆಯನ್ನು ತಂದುಕೊಟ್ಟರು.

ಬಸವಣ್ಣನವರು ನಾನು ಹೊಲೆಯರ ಮಾದಿಗರ ದಾಸಿಯರ ಸಂಗದಿಂದ ಹುಟ್ಟಿದವನೆಂದು ಹೇಳಿಕೊಳ್ಳುತ್ತಾರೆ

ಚೆನ್ನಯ್ಯನ ಮನೆಯ ದಾಸನ ಮಗನು , 

ಕಕ್ಕಯ್ಯನ ಮನೆಯ ದಾಸಿಯ ಮಗಳು 

ಇವರಿಬ್ಬರು ಹೊಲದಲಿ ಬೇರಣಿಗೆ ಹೋಗಿ ಸಂಗವ ಮಾಡಿದರು.ಇವರಿಬ್ಬರಿಗೆ ಹುಟ್ಟಿದ ಮಗ ನಾನು ಕೂಡಲಸಂಗಮದೇವನ ಸಾಕ್ಷಿಯಾಗಿ.

ಪಂಪನ ಆದಿಯಾಗಿ ಮನುಷ್ಯರಲ್ಲಿ ಯಾವ ಶ್ರೇಷ್ಠತೆ ಕನಿಷ್ಠತೆಗಳಿಲ್ಲಾ  “ಮನುಷ್ಯ ಜಾತಿ ತಾನೊಂದೇ ವಲಂ” ಎನ್ನುತ್ತಾ  ಎಲ್ಲರೂ ಸಮಾಜದೊಳಗೆ ಸಮಾನರೇ  ಎಂದು ಸಾರಿದ್ದಾರೆ.ಆದರೆ ಆಧುನಿಕ ಭಾರತಕ್ಕೆ ಬಾಬಾಸಾಹೇಬರು ಕೊಟ್ಟ ಸಂವಿಧಾನ ಸರ್ವರಿಗೂ ಸಮಾನತೆಯನ್ನು ನೀಡಿತು. ಭಾರತದ ಕಾನೂನು ವ್ಯವಸ್ಥೆ ಸಮಾನತೆಯನ್ನು ಕಾಪಾಡಿವ ಮೂಲ ಆಯುಧವಾಗಿದೆ.ಆದರೂ ಹಳೆಯ ತಲೆಮಾರಿನ ಮೇಲ್ಜಾತಿಯ  ಜನರು ಇಂದಿಗೂ  ತಮ್ಮ ಹಳೆಯ ಕಂದಾಚಾರಗಳನ್ನು  ರೂಢಿಗತವಾಗಿಸಿದೊಂಡಿದ್ದು ನಿಮ್ನವರ್ಗಗಳನ್ನು  ಅಸ್ಪೃಶ್ಯರನ್ನು ಧಾರ್ಮಿಕ ಅಲ್ಪಸಂಖ್ಯಾತರನ್ನು  ಹೀಯಾಳಿಸಿ ಬೈಯ್ಯುತ್ತಿರುವ ,  ಹೀನಕೃತ್ಯಗಳ ಸಂದರ್ಭದಲ್ಲಿ  ಜಾತಿಯನ್ನು  ಸೇರಿಸಿ ಮೂದಲಿಸುತ್ತಿರುವುದು ಅಕ್ಷಮ್ಯ ಅಪರಾಧವಿದ್ದಂತೆ.

ಜಾತಿಯನ್ನು, ಧರ್ಮವನ್ನು ಹುಟ್ಟುತ್ತಲೇ ಯಾರೂ  ಅಂಟಿಸಿಕೊಂಡು ಬಂದವರಿಲ್ಲಾ. ಕೆಳಜಾತಿಗಳಲ್ಲಿ ಹುಟ್ಟುವುದೇ ತಪ್ಪು ಎನ್ನುವುದಾದರೆ ಚಾತುರ್ವರ್ಣ ವ್ಯವಸ್ಥೆಯನ್ನು ಸೃಷ್ಠಿ ಮಾಡಿದ್ದೂ ತಪ್ಪಲ್ಲವೇ.?  ಮಾನವೀಯ ಮೌಲ್ಯಗಳನ್ನು ಮರೆತು ಊರಿನಿಂದ ಹೊರಗಡೆ ಇರಿಸಿದ್ದು ತಪ್ಪಲ್ಲವೇ ?, ಸಮಾಜದಲ್ಲಿನ ಅವಕಾಶಗಳಿಂದ  ವಂಚನೆ ಮಾಡಿದ್ದೂ ತಪ್ಪಲ್ಲವೇ.? “ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು” ಎಂದು ಬೊಬ್ಬೆಯಿಡುವವರಿಗೆ ನಿಮ್ನವರ್ಗಗಳಿಗಾದ ಅನ್ಯಾಯ ಏಕೆ ಕಾಣುತ್ತಿಲ್ಲಾ ?.  ಅನ್ಯಧರ್ಮೀಯರು ಮತಾಂಧರಾಗಿದ್ದಾರೆ ಎನ್ನುವ ಹಿಂದೂ ನಾಯಕರಿಗೆ  ಯಾಕೆ ಅಷ್ಟೊಂದು ತಳಮಳ. ಮತಾಂತರ ಆಗಲಿ  ಬಿಡಿ. ಧರ್ಮದ ಹೆಸರಲ್ಲಿ ಸಾವಿರಾರು ವರ್ಷಗಳಿಂದ ಶೋಷಣೆಗೊಳಗಾದ ಜನರಿಗೆ ನಿಮ್ಮ ಧರ್ಮದಲ್ಲಿ ಸಮಾನತೆಯಿಲ್ಲವೆಂದ ಮೇಲೆ ಅಂತಹವರು ಬೇರೆ ಧರ್ಮಕ್ಕೆ ಹೋದರೆ ನಿಮಗಾಗುವ ನೋವಾದರೂ ಏನು ? ಅಲ್ಲದೆ ಧರ್ಮದ ಪ್ರಕಾರ ಅವರು ಹೀನ ಕುಲದಲ್ಲಿ ಹುಟ್ಟಿದವರು ಹೀನ ಜಾತಿಯವರು ದೇವಾಲಯಗಳಿಗೆ ಪ್ರವೇಶವಿಲ್ಲಾ ಎಂದು ಹೇಳುವ ನಿಮ್ಮ ಧರ್ಮವನ್ನು ಬಿಟ್ಟು ಹೋದರೆ ನಿಮ್ಮ ಧರ್ಮದ ಶ್ರೇಷ್ಠತೆಯನ್ನು ಕಾಪಾಡಿಕೊಂಡಂತೆ ಅಲ್ಲವೇ ? ಮತಾಂತರ ಆಗಲಿ ಬಿಡಿ,

ಇದನ್ನೇ ಬಾಬಾಸಾಹೇಬರು  ಮಾಡಿದ್ದು  ಧರ್ಮದ ಮಡಿವಂತಿಕೆಯ ರೋಗದಲ್ಲಿ  ಸಿಲುಕಿದ  ನಿಮ್ನವರ್ಗಗಳು  ಇಲ್ಲಿವರೆವಿಗೂ ಅನುಭವಿಸಿದ್ದು ಸಾಕಾಗಿದೆ.  ಹಾಗಾಗಿ  “ನಾನು ಹಿಂದುವಾಗಿ ಹುಟ್ಟಿದ್ದೇನೆ ಆದರೆ ಹಿಂದುವಾಗಿ ಸಾಯಲಾರೆ ” ಎಂದು ಹೇಳುತ್ತಾ   ಲಕ್ಷಾಂತರ ಅನುಯಾಯಿಗಳೊಡನೆ  ಬೌದ್ಧ ಧರ್ಮ ವನ್ನು ಸ್ವೀಕರಿಸಿದರು. ಇದು  ಭಾರತೀಯ ಹಿಂದೂ ಸನಾತನಿಗಳಿಗೆ ಕೊಟ್ಟ ಬಹು ದೊಡ್ಡ  ಪೆಟ್ಟಾಯಿತು

ಮುಟ್ಟಾದ ಒಲೆಯಲ್ಲಿ ಹುಟ್ಟಿಹುದು ಜಗವೆಲ್ಲಾ ಮುಟ್ಟಬೇಡೆಂದು ದೂರ ಸರಿವ ಆರುವ ತಾ ಹುಟ್ಟಿದಾದರೂ ಎಲ್ಲಿ ಸರ್ವಜ್ಞ*

ಜಾತಿಯಲ್ಲಿ ಹುಟ್ಟಿದ್ದು ಹೀನತೆಯಲ್ಲಾ , ಅದನ್ನು ಯಾರು ಆಚರಿಸುತ್ತಾರೋ ಅವರು ಹೀನರು,  ಕುಲೀನರು, ಕೀಳು ಜಾತಿಯಲ್ಲಿ ಹುಟ್ಟಿದ್ದೇವೆ ಎಂದು ಶೋಷಿತರು ಬದಲಾಗಬೇಕಾದ ಅಗತ್ಯವಿಲ್ಲಾ,  ಶೋಷಣೆ ಮಾಡುವ ಕುಲೀನರು ಮಾನಸಿಕವಾಗಿ ಬದಲಾಗಬೇಕಿದೆ. ಜಾತಿಯಾ ಮಾನಸಿಕ ಸಂಕೋಲೆಗಳಿಂದ ಕುಲೀನರು  ಹೊರಗಡೆ ಬರಬೇಕಾಗಿದೆ. ಶೋಷಿತರು ಎನ್ನುವ ಬದಲು  ಶೋಷಣೆ ಮಾಡುವವರು ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳುವುದು ಸಮಾಜಕ್ಕೆ ಬಹಳ ಆರೋಗ್ಯಕರವಾಗಿದೆ.

ಇಂದಿನ ತಲೆಮಾರಿನ ಯುವಕರು ಜಾತಿಯ ಮಡಿವಂತಿಕೆಯಿಂದ,  ಧರ್ಮದ ಶ್ರೇಷ್ಠತೆಯಿಂದ,  ಆಡಂಭರದ ಆಚರಣೆಗಳಿಂದ,  ಸಂಪತ್ತಿನ ಅಸಮಾನ ಹಂಚಿಕೆಯಿಂದ, ತಮ್ಮ ತಮ್ಮ ಹೆಸರುಗಳ ಮುಂದೆ ತಮ್ಮ ಜಾತಿಯ ಹಣೆಪಟ್ಟಿಯಿಂದ,  ಹೊರಬಂದರೆ ಎಲ್ಲಾ ಜನಾಂಗವು ಸಮಾಜದೊಡನೆ ಸುಖವಾಗಿ ಬದುಕಬಹುದಾಗಿದೆ.  ಇನ್ನು ಎಷ್ಟು ವರ್ಷಗಳ ಕಾಲ  ಸ್ವತಂತ್ರ ಭಾರತದಲ್ಲಿ ಜಾತಿಗಳ ಆಚರಣೆಯಾಗಬೇಕು ?  ಧರ್ಮ ಧರ್ಮಗಳ  ನಡುವೆ  ಘರ್ಷಣೆ ಶೋಷಣೆಯಾಗಬೇಕು ? ದೇವರ ಹೆಸರಲ್ಲಿ  ದೇವಾಲಯ ಪ್ರವೇಶದ ನೆಪದಲ್ಲಿ  ಸಮಾಜದಲ್ಲಿ ಇನ್ನು ಎಷ್ಟು ಕೋಮು ಗಲಭೆಗಳು ನಡೆಯಬೇಕು ? ಭಾರತಕ್ಕೆ ಸ್ವತಂತ್ರ ಬಂದು  75 ವರ್ಷಗಳು  ಕಳೆದರು  ದೇವಾಲಯಗಳಿಗೆ  ಪ್ರವೇಶವಿಲ್ಲಾ. ದಲಿತ ಸಮುದಾಯದ ಹುಡುಗ ಮೆಲ್ ಜಾತಿ ಮನೆಯ ಮುಂದೆ ಬೈಕ್ ನಲ್ಲಿ ಹೋದನೆಂದು  ಶಿಕ್ಷೆ,  ದೇವರ ಕೋಲು ಮುಟ್ಟಿದ್ದಕ್ಕೆ 50 ಸಾವಿರ ದಂಡ,  ದೇಶದ ಕೆಲವು ಉನ್ನತ ಹುದ್ದೆಗಳಲ್ಲಿ  ದಲಿತ ಎನ್ನುವ ಕಾರಣಕ್ಕೆ  ಅವಕಾಶ ನೀಡದೆ ಅವರ ಜ್ಞಾನಕ್ಕೆ ಅಡೆತಡೆಯಾಗಿರುವುದು,  ಜಾತಿಯ ರೋಗವೆಂಬುದು ವೈಜ್ಞಾನಿಕ ಸಂಶೋಧನೆಯ ಬೆಳವಣಿಗೆಗೆ ಬಹುದೊಡ್ಡ  ತೊಡಕಾಗಿರುವುದು.  ಇವೆಲ್ಲವೂ ಜಾತಿಯ ನಡೆಗಳೇ ಹೊರತು. ಯಾವ ವೈಜ್ಞಾನಿಕ ಪದ್ದತಿಗಳಲ್ಲಾ.

ಜಾತಿ ಎಂಬುದು  ದೇಶದ ವಿಜ್ಞಾನದ ಬೆಳವಣಿಗೆಗೆ ಬಹುದೊಡ್ಡ ಅಡ್ಡಗೋಡೆಯಾಗಿದೆ ಎಂದರೆ ತಪ್ಪಾಗಲಾರದು.  ಯುವ ಬಂಧುಗಳೇ  ನೀವು ನಿಮ್ಮ ಜಾತಿಯ ಶ್ರೇಷ್ಠತೆಯ ರೂವಾರಿಗಳಾಗಬೇಡಿ. ಅದೊಂದು ರೋಗಗ್ರಸ್ಥ ವ್ಯವಸ್ಥೆ. ಸಮಾಜದೊಳಗೆ ಮತ್ತೆ ಮತ್ತೆ ಅವುಗಳು ಮರುಕಳಿಸುತ್ತಾ  ಒಂದು ಜಾತಿ ತನ್ನ ಶ್ರೇಷ್ಠತೆಯನ್ನು  ಕಾಪಾಡಿಕೊಳ್ಳಲು  ಮತ್ತೊಂದು ಜಾತಿಯನ್ನು ಹೀನಾಯವಾಗಿ ಕಾಣುವುದು, ಗೇಲಿ ಮಾಡುವುದು, ಶೋಷಣೆಗೆ ಒಳಪಡಿಸುವುದು,  ಸಾಮಾಜಿಕ ರಂಗದಲ್ಲಿ ಬೇರ್ಪಡಿಸುವುದು, ಇವುಗಳು ಸಮಾಜಕ್ಕೆ ಕಂಟಕಗಳೇ ಹೊರತು ಸಮಾಜಮುಖಿ ಚಿಂತನೆಗಳಲ್ಲಾ.

ಜಾಗೃತರಾಗಿ ಚಿಂತಿಸಿ ಒಂದಾಗಿ  

ಮತ ಮನುಜಮತವಾಗಬೇಕು, 

ಪಥ ವಿಶ್ವಪಥವಾಗಬೇಕು

ಮಾನವ ವಿಶ್ವ ಮಾನವನಾಗಬೇಕು

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ