ಯೂಟ್ಯೂಬ್ ನೋಡಿ ಹೆಂಡತಿಯ ಹೆರಿಗೆ ಮಾಡಿಸಿದ ಪತಿ: ತೀವ್ರ ರಕ್ತಸ್ರಾವದಿಂದ ಮಗುವಿಗೆ ಜನ್ಮ ಕೊಟ್ಟು ಮಹಿಳೆ ಸಾವು
ಸೋಶಿಯಲ್ ಮೀಡಿಯಾ ಎಷ್ಟು ಉಪಯೋಗಕಾರಿಯೋ ಅಷ್ಟೇ ಅಪಾಯಕಾರಿ ಕೂಡಾ ಹೌದು. ಅದಕ್ಕೆ ಉದಾಹರಣೆ ಇದು. ತನ್ನ ಗರ್ಭಿಣಿ ಪತ್ನಿಯನ್ನು ತಾನೇ ನಾರ್ಮಲ್ ಡೆಲಿವೆರಿ ಮಾಡುತ್ತೇನೆ ಎಂದು ಯುಟ್ಯೂಬ್ ನೋಡಿ ಹೆರಿಗೆ ಮಾಡಿಸಲು ಹೋದ ಪತಿಯೋರ್ವ ತನ್ನ ಪತ್ನಿಯನ್ನು ಕಳೆದುಕೊಂಡ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ.
27 ವರ್ಷದ ಲೋಕನಾಯಕಿ ಎಂಬ ಮಹಿಳೆಯೇ ಮೃತ ದುರ್ದೈವಿ. ಆಕೆಯ ಮಗು ಕಣ್ಣು ಬಿಡುತ್ತಲೇ ಅಪ್ಪನ ಮೂರ್ಖ ಕೆಲಸಕ್ಕೆ ಹೆತ್ತ ತಾಯಿಯನ್ನೇ ಕಳೆದುಕೊಂಡು ಈಗ ಅನಾಥವಾಗಿದೆ. ಯುಟ್ಯೂಬ್‌ನಲ್ಲಿ ಮನೆಯಲ್ಲೇ ಹೇಗೆ ನಾರ್ಮಲ್ ಡೆಲಿವರಿ ಮಾಡಿಸಬೇಕು ಎಂದು ಕೆಲವು ವಿಡಿಯೋಗಳನ್ನು ನೋಡಿದ್ದ ಆಕೆಯ ಪತಿ ಮಾದೇಶ
ಹೆರಿಗೆ ನೋವು ಆರಂಭವಾದಾಗ ಆಸ್ಪತ್ರೆಗೆ ಕರೆದೊಯ್ಯದೇ ಮನೆಯಲ್ಲಿ ತಾನೇ ಹೆರಿಗೆ ಮಾಡಲು ಯತ್ನಿಸಿದ್ದಾನೆ.
ಮಗು ಸುರಕ್ಷಿತವಾಗಿ ಜನಿಸಿತ್ತಾದರೂ ಹೊಕ್ಕುಳ ಬಳ್ಳಿ ಸರಿಯಾಗಿ ಕತ್ತರಿಸದ ಹಿನ್ನೆಲೆ ತೀವ್ರ ರಕ್ತಸ್ರಾವ ಉಂಟಾಗಿದೆ. ತಕ್ಷಣ ಮಹಿಳೆಯನ್ನ ಆಸ್ಪತ್ರೆಗೆ ಕೊಂಡೊಯ್ಯಲಾದರೂ ಆ ವೇಳೆಗಾಗಲೇ ಮಹಿಳೆ ಸಾವನ್ನಪ್ಪಿದ್ದಾಳೆ.
ಪತಿ ಪತ್ನಿ ಇಬ್ಬರೂ ಪದವಿಧರರಾದರೂ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಸಿದ್ಧರಿರಲಿಲ್ಲ ಎಂದು ಗ್ರಾಮದ ಆರೋಗ್ಯ ಸಿಬ್ಬಂದಿ ತಿಳಿಸಿದ್ದಾರೆ. ಈ ಬಗ್ಗೆ ಪತಿ ಮಾದೇಶ್ ವಿರುದ್ಧ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯೆ ರಾಧಿಕಾ ದೂರು ದಾಖಲಿಸಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.