ರಾಜಸ್ಥಾನದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: ಬೀದಿಯಲ್ಲಿ ಬೆತ್ತಲೆಯಾಗಿ ಗಂಟೆಗಟ್ಟಲೆ ಸಹಾಯ ಕೋರಿದ ಮಹಿಳೆ..!
ರಾಜಸ್ಥಾನದ ಭಿಲ್ವಾರಾ ಎಂಬಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ವಾಕಿಂಗ್ ಹೋಗಿದ್ದಾಗ ಆರೋಪಿಗಳು ತನ್ನನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಹೇಗೋ ಕಾಮುಕರ ಕೈಯಿಂದ ಸ್ಥಳದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ. ಅವಳು ಬೀದಿಗಳಲ್ಲಿ ಸಂಪೂರ್ಣ ನಗ್ನವಾಗಿ ಸಹಾಯವನ್ನು ಕೋರಿದಾಗ, ಅನೇಕರು ಅವಳನ್ನು ಹುಚ್ಚಿ ಎಂದು ಭಾವಿಸಿ ಸಹಾಯ ಮಾಡಲು ನಿರಾಕರಿಸಿದ್ದಾರೆ.
ಅನೇಕ ಗಂಟೆಗಳ ನಂತರ ಕೆಲವು ಗ್ರಾಮಸ್ಥರು ಬಂದು ಅವಳ ದೇಹವನ್ನು ಮುಚ್ಚಲು ಬಟ್ಟೆಗಳನ್ನು ನೀಡಿ ಪೊಲೀಸರಿಗೆ ಮಾಹಿತಿ ನೀಡಿದರು. ಕೃತ್ಯ ನಡೆಸಿದ ಮೂವರು ಆರೋಪಿಗಳಲ್ಲಿ ಓರ್ವನ ಬಗ್ಗೆ ತನಗೆ ತಿಳಿದಿದೆ ಎಂದು ಮಹಿಳೆ ಹೇಳಿದ್ದಾರೆ. ಸಂತ್ರಸ್ತೆಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಛೋಟು (42) ಮತ್ತು ಗಿರ್ಧಾರಿ (30) ಎಂಬುವವರನ್ನು ಬಂಧಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಭಿಲ್ವಾರಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಮಲ್ ಸಿಂಗ್ ನೆಹ್ರಾ ಗಂಗಾಪುರಕ್ಕೆ ಭೇಟಿ ನೀಡಿದರು. ಸ್ಥಳಕ್ಕೆ ವಿಧಿವಿಜ್ಞಾನ ತಂಡವನ್ನು ಸಹ ಕರೆಯಲಾಗಿದೆ.
ಆರೋಪಿಗಳಲ್ಲಿ ಓರ್ವ ಕೃತ್ಯಕ್ಕೆ ಮೊದಲು ಮಹಿಳೆಗೆ ಕರೆ ಮಾಡಿ, ಅವಳನ್ನು ಭೇಟಿಯಾಗುವಂತೆ ಕೇಳಿದ್ದ. ಆದರೆ ಮಹಿಳೆ ನಿರಾಕರಿಸಿದ್ದಳು. ಆಕೆ ಸಂಜೆ 7: 30 ರ ಸುಮಾರಿಗೆ ವಾಕಿಂಗ್ ಮಾಡುತ್ತಿದ್ದಾಗ ಅವಳನ್ನು ಹಿಡಿದು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ತಂಡವು ಸಂತ್ರಸ್ತೆಯ ಮುರಿದ ಬಳೆಗಳು ಮತ್ತು ಅವಳನ್ನು ಅಪಹರಿಸಿದ ಮೋಟಾರ್ ಸೈಕಲ್ ಸೇರಿದಂತೆ ಘಟನಾ ಸ್ಥಳದಿಂದ ಅನೇಕಪುರಾವೆಗಳನ್ನು ಸಂಗ್ರಹಿಸಿದೆ.
ಮಹಿಳೆಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಹಲವಾರು ಜನರು ಶನಿವಾರ ತಡರಾತ್ರಿ ಉಪ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದರು. ಈ ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ.