ಮಹಿಳೆಯ ಮೂಗುತ್ತಿಯಿಂದಾಗಿ ಸಿಕ್ಕಿಬಿದ್ದ ಕೊಲೆಗಾರರು!

ನವದೆಹಲಿ: ಮಹಿಳೆಯ ಮೂಗುತ್ತಿ ಆಕೆಯ ಕೊಲೆ ಪ್ರಕರಣವನ್ನು ಭೇದಿಸಲು ಸಹಾಯ ಮಾಡಿರುವ ಘಟನೆ ದೆಹಲಿಯ ನಜಾಫ್ ಗಢದಲ್ಲಿ ನಡೆದಿದ್ದು, ಸದ್ಯ ಪತಿ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಸೀಮಾ ಸಿಂಗ್ (47) ಹತ್ಯೆಗೀಡಾದ ಮಹಿಳೆಯಾಗಿದ್ದಾರೆ. ಇವರ ಮೃತದೇಹ ನಜಾಫ್ ಗಢ ಚರಂಡಿಯೊಂದರಲ್ಲಿ ಪತ್ತೆಯಾದ ನಂತರ ಪೊಲೀಸರು ತನಿಖೆ ಕೈಗೊಂಡಿದ್ದರು. ಮಹಿಳೆಯ ಮೃತದೇಹದ ಮೂಗಿನಲ್ಲಿದ್ದ ಮೂಗುತ್ತಿಯನ್ನು ಪರಿಶೀಲಿಸಿದ ಪೊಲೀಸರು ಹಾಲ್ ಮಾರ್ಕ್ ತಯಾರಕರ ಬಳಿಗೆ ತೆರಳಿದಾಗ ಮಹಿಳೆಯ ವಿಳಾಸ ಪತ್ತೆಯಾಗಿದೆ. ಇದೇ ಸಂದರ್ಭದಲ್ಲಿ ಪೊಲೀಸರು ಮಹಿಳೆಯ ರೇಖಾ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ್ದರು. ಇದನ್ನು ನೋಡಿ ಮಹಿಳೆಯ ಸಂಬಂಧಿಕರೊಬ್ಬರು ಗುರುತುಪತ್ತೆ ಮಾಡಿದ್ದಾರೆ. ಇದು ಮಹಿಳೆಯ ಕೊಲೆಗಾರರನ್ನು ಪತ್ತೆ ಹಚ್ಚಲು ಸಹಕಾರಿಯಾಗಿತ್ತು.
ಸೀಮಾ ಸಿಂಗ್ ಅವರ ಪತಿ ಅನಿಲ್ ಕುಮಾರ್ ಪ್ರಾಪರ್ಟಿ ಡೀಲರ್ ಆಗಿದ್ದ. ಪತ್ನಿಯಿದ್ದರೂ ಗುರುಗ್ರಾಮ್ ನಲ್ಲಿ ಬೇರೊಂದು ಮಹಿಳೆಯೊಂದಿಗೆ ಈತ ವಾಸಿಸುತ್ತಿದ್ದ. ಈ ದಂಪತಿಯ ನಡುವೆ ವೈವಾಹಿಕ ಮತ್ತು ವೈಯಕ್ತಿಕ ಹಾಗೂ ನಿರಂತರ ಕೌಟುಂಬಿಕ ವಿವಾದಗಳಿದ್ದವು. ಈ ಹಿನ್ನೆಲೆಯಲ್ಲಿ ಪತಿ ಅನಿಲ್ ಕುಮಾರ್, ಸೀಮಾ ಸಿಂಗ್ ಅವರನ್ನು ಕೇಬಲ್ ವೈರ್ ನಿಂದ ಕತ್ತು ಹಿಸುಕಿ ಬರ್ಬರವಾಗಿ ಹತ್ಯೆ ಮಾಡಿ, ಬೆಡ್ ಶೀಟ್ ನಲ್ಲಿ ಸುತ್ತಿ ಭಾರವಾರ ಕಲ್ಲನ್ನು ಕಟ್ಟಿ, ಚರಂಡಿಗೆಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅನಿಲ್ ಕುಮಾರ್ ನ ಕೃತ್ಯಕ್ಕೆ ಮನೆ ಕೆಲಸಗಾರ ಶಿವಶಂಕರ್ ಕೂಡ ಸಹಕಾರ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಾವ್ಲಾ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಎಫ್ ಐಆರ್ ದಾಖಲಾದ ಬೆನ್ನಲ್ಲೇ ಆರೋಪಿಗಳನ್ನು ಬಂಧಿಸಲು ಹಲವು ತಂಡಗಳನ್ನು ರಚಿಸಿ ಶೋಧ ನಡೆಸಲಾಯಿತು. ಅಂತಿಮವಾಗಿ ಪೊಲೀಸರು ಆರೋಪಿಗಳನ್ನು ಬಂಧಿಸಿದರು.
ಮಾರ್ಚ್ 11 ರಂದು ದ್ವಾರಕಾದ ಸೆಕ್ಟರ್ 10 ರಲ್ಲಿರುವ ತಮ್ಮ ನಿವಾಸದಲ್ಲಿ ಸೀಮಾ ಅವರನ್ನು ಕತ್ತು ಹಿಸುಕಿ ಕೊಂದಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇನ್ನೂ ಅನಿಲ್ ಕುಮಾರ್ ಜೊತೆಗೆ ವಾಸಿಸುತ್ತಿದ್ದ ಮಹಿಳೆಗೂ ಈ ಕೊಲೆಗೂ ಸಂಬಂಧವಿದೆಯೇ ಎಂಬ ಬಗ್ಗೆಯೂ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: