ಮಹಿಳೆಯರು ಮರೆಯಲಾಗದ ಮಹನೀಯರು ಬಾಬಾಸಾಹೇಬ್ ಡಾ.ಅಂಬೇಡ್ಕರ್ ರವರು  - Mahanayaka
1:28 AM Thursday 12 - December 2024

ಮಹಿಳೆಯರು ಮರೆಯಲಾಗದ ಮಹನೀಯರು ಬಾಬಾಸಾಹೇಬ್ ಡಾ.ಅಂಬೇಡ್ಕರ್ ರವರು 

ambedkar
10/02/2023

  • ಧಮ್ಮಪ್ರಿಯಾ, ಬೆಂಗಳೂರು    

ಆತ್ಮೀಯರೇ  ಅದೊಂದು ದಿನ (24-03-2021) ಬೆಳಿಗ್ಗೆ 9 ಗಂಟೆಗೆ ನಾನು  ಕೆಲಸಕ್ಕೆಂದು  ಬೈಕಿನಲ್ಲಿ ಹೊರಟೆ.  ನನ್ನ ಮನೆಯಿಂದ ನಾನು  ಹೊರಡಬೇಕಾದರೆ  ಹೊಸಕೋಟೆ ಯಿಂದ ಸೂಲಿಬೆಲೆ ರಸ್ತೆಯಲ್ಲಿ  ಹಸಿಗಾಳ ಎಂಬ ಗ್ರಾಮದ ಸರ್ಕಾರಿ ಶಾಲೆಯ  ಪುಟ್ಟ ಹೆಣ್ಣುಮಕ್ಕಳ ಗುಂಪೊಂದು ಶಾಲೆಯಿಂದ ಸುಮಾರು 2-3 ಕಿಲೋಮೀಟರ್ ದೂರದ ರಸ್ತೆ ಬದಿಯಲ್ಲಿ ನಿಂತು ಬರುವ ಎಲ್ಲಾ ಬೈಕ್ ಗಳನ್ನು  ಅಡ್ಡಹಾಕುತ್ತಿದ್ದರು. ಶಾಲಾ ಮಕ್ಕಳು ಸುಮಾರು 4-5 ನೇ ತರಗತಿಯ ಪುಟಾಣಿಗಳಿರಬೇಕು. ನಾನೊಮ್ಮೆ ಬೈಕ್ ನಿಲ್ಲಿಸಿದೆ. 5 ಮಕ್ಕಳುಗಳು  ನೀನು ಹೋಗು, ನೀನು ಹೋಗು ಎಂದು ಅವರವರಲ್ಲೇ ಹೇಳತೊಡಗಿದರು. ನನಗೆ ಬಹಳ  ಅಚ್ಚರಿಯಾಯಿತು.  ಬೈಕ್ ನಿಲ್ಲಿಸಿ ಇಳಿದೆ.  ಯಾರಾದರೂ ಬನ್ನಿ ಎಂದಾಗ ಒಂದು ಹುಡುಗಿ ಬರಲು ಸಿದ್ದವಾಯಿತು.  ನಾನು ಒಮ್ಮೆ ಯೋಚಿಸಿ, ಇವರಲ್ಲಿರುವ ಒಗ್ಗಟ್ಟು, ಬೇಧ ಭಾವವಿಲ್ಲದ ಮನಸ್ಸು, ನನಗೆ ತುಂಬಾನೇ ಇಷ್ಟವಾಯಿತು.

ಇವರಲ್ಲಿರುವ  ಖುಷಿಯನ್ನು ಮುರಿಯಬಾರದು ಎಂದು ಯೋಚಿಸಿ ಒಮ್ಮೆ ಅಲ್ಲೇ ನಿಂತು ಒಂದು ಕಾರ್ ಅಡ್ಡಗಟ್ಟಿದೆ. ಪಾಪ ಕಾರಿನವನು ನಿಲ್ಲಿಸಿದ. ಈ ಮಕ್ಕಳನ್ನು ಶಾಲೆ ಹತ್ತಿರಾ ಬಿಡಿ ಎಂದು ಕೇಳಿಕೊಂಡೆ. ಕಾರಿನವರು  ಒಪ್ಪಿದರೂ ಸಹ  ಪುಟಾಣಿ ಮಕ್ಕಳು ಕಾರಿನಲ್ಲಿ ಹೋಗಲು  ಒಪ್ಪಲಿಲ್ಲ. ಬೇಡ ಅಂಕಲ್, ಕಾರ್ ಅಂದರೆ  ನಮಗೆ ಭಯ ಎಂದರು.  ನಾನು ಮಕ್ಕಳಿಗೆ ಮನವರಿಕೆ ಮಾಡುವಲ್ಲಿ ಹರಸಾಹಸ ಪಡಬೇಕಾಯಿತು.  ಪುಟಾಣಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಬೇಕಾಯಿತು. ಕಾರಿನವರು  ನಿಮ್ಮವರೇನಾ ? ನೀವು ಯಾರು ? ಪರವಾಗಿಲ್ಲ ನೀವು ಹೊರಡಿ ನಾವು ಬೇರೆ ಗಾಡಿಯಲ್ಲಿ ಹೋಗುತ್ತೇವೆ ಎಂದರು. ನನಗೆ ಅಚ್ಚರಿಯಾಯಿತು.

ಈ ವ್ಯವಸ್ಥೆ ಹೇಗಿದೆಯೆಂದರೆ “ಹೆಣ್ಣು ಮಕ್ಕಳು ಇನ್ನೂ ಭಯದಲ್ಲೇ ಬದುಕುವ ವಾತಾವರಣ ಈ ದೇಶದೊಳಗೆ ಇದೆಯಲ್ಲಾ”  ಇದಕ್ಕೆ  ಮುಕ್ತಿ ಯಾವಾಗ ಎನಿಸಿತು. ನಾನು ಅವರ ಮುಂದೆ ನಿಂತು ನೀವು ಕಾರನ್ನು ಹತ್ತಿ ನಿಮ್ಮ ಜವಾಬ್ದಾರಿ ನನ್ನದು ಎಂದು ಹೇಳಿದಾಗ ಎಲ್ಲರು ಮುಖ ಮುಖ ನೋಡುತ್ತಲೇ ಹತ್ತಿದರು. ಕಾರಿನ  ಮುಂದೆ ನಾನು ನಿದಾನವಾಗಿ ಬೈಕಿನಲ್ಲಿ ಹೊರಟೆ. ಕಾರು ನನ್ನ ಹಿಂದೆ ನಿಧಾನವಾಗಿ ಬಂದು ಶಾಲೆಯನ್ನು ತಲುಪಿತು. ಶಾಲೆ ಬಂದ ತಕ್ಷಣ ಎಲ್ಲ ಮಕ್ಕಳು  ಖುಷಿಖುಷಿಯಾಗಿ ಇಳಿದು ಓಡಿಹೋದರು. ಪಾಪ ಮಕ್ಕಳಿಗೆ ನಮಗೊಂದು ಥ್ಯಾಂಕ್ಸ್ ಹೇಳುವ ಸಮಯವಿರಲ್ಲಿಲ್ಲ ಎನಿಸಿತು. ದೈಹಿಕ ಶಿಕ್ಷಕರ ಭಯವಿರಬೇಕು ಎಂದು ನಾನು ಸುಮ್ಮನಾದೆ. ಕೊನೆಗೆ  ಕಾರಿನ ಚಾಲಕನಿಗೆ ನಾನೇ ಧನ್ಯವಾದಗಳನ್ನು ತಿಳಿಸಿದೆ.

ಸ್ನೇಹಿತರೆ ಸಮಾಜ ಸುಧಾರಕ “ಮಹಾತ್ಮಾ ಜ್ಯೋತಿ ಬಾ ಫುಲೆ  ಹೇಳಿದ ಮಾತು ಇಂದಿಗೂ ಸತ್ಯವಾಗಿದ್ದು  ಪ್ರಸ್ತುತವೆನಿಸಿದೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಮಾತು ಅಕ್ಷರಸಹ ಸತ್ಯವಾಗಿದೆ. ಹೆಣ್ಣು ಕಲಿತರೆ ಕೇವಲ ಮನೆಯನ್ನಲ್ಲದೆ ಇಡೀ ಸಮಾಜವನ್ನೇ  ನಿಭಾಯಿಸಬಲ್ಲಳು ಎನ್ನಬಹುದು. ಯಾವುದೋ ಕಾಣದ ಅಗೋಚರ ಶಕ್ತಿ ನಮಗೆ ವಿದ್ಯೆ ಕೊಡುವುದು ಎನ್ನುವ ಬದಲು  ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ  ಮಾತೆ ಸಾವಿತ್ರಿ ಬಾಯಿ ಫುಲೆಯವರನ್ನು ನಮ್ಮ ಹೆಣ್ಣುಮಕ್ಕಳು  ಸದಾ ಸ್ಮರಿಸಬೇಕಾಗಿದೆ.

ಬಾಬಾಸಾಹೇಬರು ಹೇಳಿದಂತೆ    “ಎಂದು ನಮ್ಮ ಹೆಣ್ಣುಮಗಳು   ಗುಡಿಗುಂಡಾರಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಬದಲು ಗ್ರಂಥಾಲಯಗಳಲ್ಲಿ ಕುಳಿತು ಅಧ್ಯಯನ ಮಾಡುತ್ತಾಳೋ ಅಂದು ಈ ದೇಶದ ಹೆಣ್ಣು ಮಗಳು ಸ್ವತಂತ್ರಳಾಗಿ ಬದುಕುತ್ತಾಳೆ” ಎಂದಿರುವುದು ಅಕ್ಷರಸಹ ಸತ್ಯವಾದ ಮಾತಾಗಿದೆ.  ಮುಂದುವರೆದು ಹೇಳುವುದಾರೆ “ಈ ದೇಶದ ಹೆಣ್ಣುಮಕ್ಕಳಿಗೆ ಯಾವ ದೇವರಿಂದ ನ್ಯಾಯ ಸಿಗಲಿಲ್ಲ, ಯಾವ ಧರ್ಮದ ತಳಹದಿಯ ಮೇಲೆ ನ್ಯಾಯ ಸಿಗಲಿಲ್ಲ, ಯಾವ ಯಾನಮಾನ್ಯ ವ್ಯವಸ್ಥೆಯಿಂದ ನ್ಯಾಯ ಸಿಗಲಿಲ್ಲ, ಈ ದೇಶದ ಹೆಣ್ಣುಮಕ್ಕಳಿಗೆ ನ್ಯಾಯ ಸಿಕ್ಕಿದ್ದು ಬಾಬಾಸಾಹೇಬರು ಕೊಟ್ಟ ಸಂವಿಧಾನದಿಂದ ಮಾತ್ರ”  ಎನ್ನುವುದನ್ನು ಅರಿಯಬೇಕಿದೆ.

ಈ ದೇಶದ ಪ್ರತಿಯೊಬ್ಬ ಹೆಣ್ಣುಮಗಳು ಬಾಬಾಸಾಹೇಬ್ ಡಾ. ಅಂಬೇಡ್ಕರ್ ರವರನ್ನು  ಸ್ಮರಿಸಬೇಕಾಗಿದೆ. ಈ ದೇಶದಲ್ಲಿ ಸಂವಿಧಾನದ ಪ್ರತಿಫಲವಾಗಿ  ಹೆಣ್ಣು ಒಂದು ವ್ಯಕ್ತಿಯಾಗಿರದೆ  ಅದೊಂದು ಸಮಾಜದ ಶಕ್ತಿಯಾಗಿ ಹೊರಹೊಮ್ಮಿರುವುದು ಮಹಿಳೆಯ ವಿಮೋಚನೆಯ ಸಂಕೇತವಾಗಿದೆ.

ಇದಲ್ಲದೆ ಭಾರತ  ಸ್ವಾತಂತ್ರ್ಯವಾದ ನಂತರ ತನ್ನ ದೇಶಕ್ಕೆ ತಕ್ಕಂತೆ ಸಮಾನತೆಯ ಸಂವಿಧಾನವನ್ನು  ಜಾರಿಮಾಡಲಾಯಿತು. ಇದರಿಂದ ಶೋಷಣೆಗೊಳಗಾದ ಜನರಿಗೆ ವಿಮೋಚನೆಯ ಹಾದಿ  ಕಂಡಂತಾಯಿತು. ಅಲ್ಲಿವರೆವಿಗೂ ಈ ದೇಶದ ಹೆಣ್ಣುಮಕ್ಕಳನ್ನು  ವಿದ್ಯೆಯಿಂದ, ಉದ್ಯೋಗದಿಂದ, ಆಸ್ತಿಯ ಸಮಾನತೆಯಿಂದ, ಅಧಿಕಾರದ ಸಮಾನತೆಯಿಂದ ದೂರವಿಡಲಾಗಿತ್ತು.  ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿಯಾಗಿದ್ದ ಬಾಬಾಸಾಹೇಬರು ಹೆಣ್ಣುಮಕ್ಕಳ ಹಕ್ಕುಗಳಿಗಾಗಿ “ಹಿಂದೂ ಕೋಡ್ ಬಿಲ್ಲನ್ನು” ಜಾರಿಮಾಡುವಂತೆ ಸರ್ಕಾರವನ್ನು ಒತ್ತಾಯಿಸುತ್ತಾರೆ. ಅದನ್ನು ಜಾರಿಮಾಡಲು  ನಿರಾಕರಿಸಿದ ಸಂದರ್ಭದಲ್ಲಿ ತನ್ನ ಮಂತ್ರಿ ಪದವಿಗೆ ರಾಜಿನಾಮೆಯನ್ನು ನೀಡುತ್ತಾರೆ. ಇದಕ್ಕೆ ಮಣಿದ ಅಂದಿನ ಸರ್ಕಾರ ಮಹಿಳೆಗೂ ಸಮಾನ ಅವಕಾಶ ನೀಡಬೇಕೆಂದು ಘೋಷಿಸುತ್ತದೆ. ಇದನ್ನು ಇಂದಿನ ಭಾರತೀಯ ಮಹಿಳೆಯರು ಯಾರೂ ಮರೆಯುವಂತಿಲ್ಲಾ.

ಇದರ ಜೊತೆಜೊತೆಗೆ ಇಂದಿನ ಉದ್ಯೋಗಸ್ಥ ಮಹಿಳೆಯರು ಗರ್ಭವತಿಯರಾದಾಗ ಮಕ್ಕಳನ್ನು ಹಡೆದು ಪಾಲನೆ ಪೋಷಣೆ  ಮಾಡಲು ಸುಮಾರು 6 ತಿಂಗಳ ವೇತನ ಸಹಿತ ರಜೆ ನೀಡಬೇಕೆಂದು ಜಾರಿ ಮಾಡುತ್ತಾರೆ. ದೇಶದಲ್ಲಿ ಜಡ್ಡು ಹಿಡಿದಿದ್ದ ಬಾಲ್ಯ ವಿವಾಹ ಪದ್ದತಿಯಿಂದ ಬೇಸತ್ತಿದ್ದ ಮಹಿಳೆಯರಿಗೆ  ವಿವಾಹವಾಗಲು 18 ವರ್ಷಗಳು  ಕಡ್ಡಾಯವಾಗಿ ಪೂರೈಸಿರಬೇಕು ಎಂದು ಕಾನೂನು ಜಾರಿ ಮಾಡಲಾಯಿತು.  ತಂದೆಯ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಎಷ್ಟು ಹಕ್ಕಿದೆಯೋ ಹೆಣ್ಣು ಮಗಳಿಗೂ ಅಷ್ಟೇ ಹಕ್ಕಿದೆ ಎಂದು ಕಾನೂನನ್ನು ಜಾರಿ ಮಾಡಲಾಯಿತು.ಮಹಿಳೆಯರ ವಿದ್ಯಾಭ್ಯಾಸಕ್ಕೆ ಕುಂದು ಕೊರತೆಯಾಗದಂತೆ ವಿಶೇಷ ವಿದ್ಯಾರ್ಥಿ ನಿಲಯಗಳನ್ನು ಒಳಗೊಂಡ ಪ್ರತ್ಯೇಕ ಶಿಕ್ಷಣ ಸಂಸ್ಥೆಗಳನ್ನು  ತೆರೆಯಬೇಕು ಎಂದು ಕಾನೂನನ್ನು ಜಾರಿ ಮಾಡಲಾಯಿತು.  ಅಷ್ಟೇ ಏಕೆ ಕೇವಲ ಅಡುಗೆ ಮನೆಗೆ ಸೀಮಿತಗೊಂಡಿದ್ದ ಮಹಿಳೆ ಈ ದೇಶದ ಪ್ರಧಾನಿ ಪಟ್ಟವನ್ನೇರಲು ಸಾದ್ಯವಾದದ್ದೇ ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ. ಅದನ್ನು ಸಂವಿಧಾನದಲ್ಲಿ ಅಳವಡಿಸಿ ಸಮಾನತೆಯನ್ನು ತಂದು ಕೊಟ್ಟವರೇ ಬಾಬಾಸಾಹೇಬರು.  ಇದು ಈ ದೇಶದಲ್ಲಿನ ಮಹಿಳೆಯರ ಬಗ್ಗೆ ಬಾಬಾಸಾಹೇಬ್ ಡಾ ಅಂಬೇಡ್ಕರ್ ರವರಿಗಿದ್ದ ಅಪಾರ ಗೌರವ ಎಂದರೆ ತಪ್ಪಾಗಲಾರದು.  ಇದನ್ನು ಯಾವ ವರ್ಗದ, ಜಾತಿಯ, ಧರ್ಮದ, ಮಹಿಳೆಯರು ಬಾಬಾಸಾಹೇಬರನ್ನು ಮರೆಯುವಂತೆಯೇ ಇಲ್ಲ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ