ಪಡಿತರ ಅಂಗಡಿಗಳಲ್ಲಿ ಪ್ರಧಾನಿಯವರ ಫ್ಲೆಕ್ಸ್ ಹಾಕಲು ಆದೇಶ: ಕೇಂದ್ರದ ಸೂಚನೆಯನ್ನು ತಿರಸ್ಕರಿಸಿದ ಕೇರಳ ಸಿಎಂ - Mahanayaka
9:58 PM Thursday 19 - September 2024

ಪಡಿತರ ಅಂಗಡಿಗಳಲ್ಲಿ ಪ್ರಧಾನಿಯವರ ಫ್ಲೆಕ್ಸ್ ಹಾಕಲು ಆದೇಶ: ಕೇಂದ್ರದ ಸೂಚನೆಯನ್ನು ತಿರಸ್ಕರಿಸಿದ ಕೇರಳ ಸಿಎಂ

13/02/2024

ಪಡಿತರ ಅಂಗಡಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಟೌಟ್ ಇರುವ ಸೆಲ್ಫಿ ಪಾಯಿಂಟ್‌ಗಳನ್ನು, ಫ್ಲೆಕ್ಸ್‌ಗಳನ್ನು ಮತ್ತು ಬೋರ್ಡ್ ಗಳನ್ನು ಆಳವಡಿಸುವಂತೆ ಕೇಂದ್ರ ಸರ್ಕಾರ ನಿರ್ದೇಶನವನ್ನು ನೀಡಿದ್ದು, ಇದನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಿರಸ್ಕರಿಸಿದ್ದಾರೆ. 10,000 ಪಡಿತರ ಅಂಗಡಿಗಳಲ್ಲಿ ಮೋದಿ ಇರುವ ಫ್ಲೆಕ್ಸ್ ಬೋರ್ಡ್ ಗಳನ್ನು ಅಳವಡಿಸಿ ವರದಿ ಸಲ್ಲಿಸುವಂತೆ ಭಾರತೀಯ ಆಹಾರ ನಿಗಮ (ಎಫ್‌ಸಿಐ) ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಕೇಂದ್ರ ಸರ್ಕಾರ ಸೂಚಿಸಿದೆ.

ಈ ಕುರಿತು ರಾಜ್ಯ ವಿಧಾನಸಭೆಯಲ್ಲಿ ಮಾಹಿತಿ ನೀಡಿದ ಕೇರಳ ಸಿಎಂ ಪಿಣರಾಯ್ ವಿಜಯನ್, ಇದು ಖಂಡಿತವಾಗಿಯೂ ಲೋಕಸಭೆ ಚುನಾವಣೆಯ ಪ್ರಚಾರದ ಭಾಗವಾಗಿದೆ. ಇದು ಸರಿಯಲ್ಲ ಮತ್ತು ಇದನ್ನು ಕೇರಳದಲ್ಲಿ ಜಾರಿಗೆ ತರುವುದು ಕಷ್ಟ ಎಂದು ನಾವು ಕೇಂದ್ರಕ್ಕೆ ತಿಳಿಸುತ್ತೇವೆ. ಇದನ್ನು ಚುನಾವಣಾ ಆಯೋಗದ ಗಮನಕ್ಕೆ ತರಬಹುದೇ ಎಂದು ನಾವು ಪರಿಶೀಲಿಸುತ್ತೇವೆ ಎಂದು ಹೇಳಿದ್ದಾರೆ.

ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು ಪಡಿತರ ಅಂಗಡಿಗಳು ಕೇರಳದಲ್ಲಿ ಬಹಳ ಹಿಂದಿನಿಂದಲೂ ಅಸ್ತಿತ್ವದಲ್ಲಿವೆ. ಆದರೆ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಈಗ ಈ ನಿರ್ದೇಶನವನ್ನು ನೀಡಿದೆ, ಖಂಡಿತವಾಗಿಯೂ ಇದನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುವ ಉದ್ದೇಶದಿಂದ ನೀಡಿರುವುದಾಗಿದೆ. ನಾವು ಈ ನಿರ್ದೇಶನವನ್ನು ಜಾರಿಗೊಳಿಸುವುದಿಲ್ಲ ಎಂದು ಪಿಣರಾಯ್ ವಿಜಯನ್ ಹೇಳಿದ್ದಾರೆ.


Provided by

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕೇಂದ್ರ ಸರ್ಕಾರದ ಪ್ರಚಾರದ ಭಾಗದಲ್ಲಿ ‘ಸೆಲ್ಫಿ ಪಾಯಿಂಟ್‌ಗಳು’ ದೊಡ್ಡ ಭಾಗವಾಗಿದೆ. ಅವುಗಳನ್ನು ಸಾರ್ವಜನಿಕ ಸ್ಥಳಗಳು, ರೈಲು ನಿಲ್ದಾಣಗಳು, ಶಿಕ್ಷಣ ಸಂಸ್ಥೆಗಳು ಇತ್ಯಾದಿಗಳಲ್ಲಿ ಇರಿಸುವಂತೆ ಈ ಮೊದಲು ನಿರ್ದೇಶನವನ್ನು ನೀಡಲಾಗಿತ್ತು.

ಇವೆಲ್ಲವನ್ನೂ ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಲಾಗುತ್ತಿದೆ. ಇತ್ತೀಚೆಗೆ ವಿಶ್ವವಿದ್ಯಾನಿಲಯಗಳಲ್ಲಿ ಮೋದಿ ಸೆಲ್ಫಿ ಪಾಯಿಂಟ್‌ಗಳ ನಿರ್ಮಾಣಕ್ಕೆ ಆದೇಶ ಕೊಟ್ಟಿರುವುದು ವಿವಾದಕ್ಕೆ ಕಾರಣವಾಗಿತ್ತು. ಆ ಬಳಿಕ ರೈಲ್ವೇ ನಿಲ್ದಾಣಗಳಲ್ಲಿ ಸಾರ್ವಜನಿಕರ ವೆಚ್ಚದಲ್ಲಿ ಮೋದಿಯ ಪೋಟೋ ಇರುವಂತೆ ಸೆಲ್ಫಿ ಪಾಯಿಂಟ್‌ಗಳನ್ನು ನಿರ್ಮಿಸಲಾಗಿದೆ ಎನ್ನವುದು ಆರ್‌ಟಿಐ ಮಾಹಿತಿಯಿಂದ ಬಯಲಾಗಿತ್ತು. ಪ್ರತಿಪಕ್ಷಗಳು ಟೀಕಿಸಿದ್ದವು.

ಇತ್ತೀಚಿನ ಸುದ್ದಿ