ಸಿಕ್ರಂ ಸಂಸ್ಥೆಯ ವತಿಯಿಂದ ಯುವರಾಜ ಕಾಲೇಜಿನಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ - Mahanayaka

ಸಿಕ್ರಂ ಸಂಸ್ಥೆಯ ವತಿಯಿಂದ ಯುವರಾಜ ಕಾಲೇಜಿನಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ

manavahakku
03/12/2023

ದಕ್ಷಿಣ ಭಾರತದ ಮಾನವ ಹಕ್ಕುಗಳ ಶಿಕ್ಷಣ ಮತ್ತು ಸಂರಕ್ಷಣಾ ಘಟಕ ಹಾಗೂ ಯುವರಾಜ ಕಾಲೇಜು, ಮೈಸೂರು ವಿಶ್ವವಿದ್ಯಾನಿಲಯ ಮೈಸೂರಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದಲ್ಲಿ  ವಿಶ್ವ ಮಾನವ ಹಕ್ಕುಗಳ ದಿನಾಚರಣೆಯನ್ನು ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜಿನ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ಗಿಡಕ್ಕೆ ನೀರೆಯುವ ಮೂಲಕ ಉದ್ಘಾಟಿಸಿದರು.

ವಿಶ್ವಮಾನವ ಹಕ್ಕುಗಳ 2023 ರ ಡಿಸೆಂಬರ್ ಎರಡನೇ ತಾರೀಕಿನ ಮುಖ್ಯ ವಿಷಯ “ದಲಿತರು, ಆದಿವಾಸಿಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗಾಗಿ ಯುವಕರು” ಎಂಬ ವಿಷಯದ ಕುರಿತು ರಾಜ್ಯಶಾಸ್ತ್ರ ಉಪನ್ಯಾಸಕರಾದ ಡಾ.ರವಿಚಂದ್ರ ರವರು ಮಾತನಾಡುತ್ತಾ, ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದಲಿತರು ಆದಿವಾಸಿಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಿ ಸಮಾಜದಲ್ಲಿ ಶಾಂತಿಯನ್ನು ಕಾಪಾಡಲು ಯುವಜನರು ಪ್ರಮುಖ ಪಾತ್ರ ನಿರ್ವಹಿಸಬೇಕು,  ದಲಿತರು, ಆದಿವಾಸಿಗರು ಹಾಗೂ ಅಲ್ಪಸಂಖ್ಯಾತರ ರಕ್ಷಣೆಗಾಗಿ ವಿವಿಧ ಆಯೋಗಗಳನ್ನು ರಚಿಸಲಾಗಿದೆ, ಎಲ್ಲಾ ಸಮುದಾಯದ ಜನರ ಹಕ್ಕುಗಳನ್ನು ರಕ್ಷಿಸುವುದು  ಆಯಾ ಆಯೋಗಗಳ ಪ್ರಮುಖ ಹೊಣೆಗಾರಿಕೆ ಎಂದು ಅಭಿಪ್ರಾಯಪಟ್ಟರು. ಭಾರತದ ಸಂವಿಧಾನದಲ್ಲಿ ನಮಗೆ ನೀಡಲಾಗಿರುವ ಎಲ್ಲಾ ಹಕ್ಕುಗಳು ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿ ಬೇಕಾಗಿದೆ. ಹಕ್ಕು ಉಲ್ಲಂಘನೆಯಾದ ಸಂದರ್ಭದಲ್ಲಿ ಸರ್ವರಿಗೂ  ಸಂವಿಧಾನ ಹಾಗೂ ಕಾನೂನಿನ ಮೂಲಕ ಪರಿಹಾರ ಪಡೆಯಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.


Provided by

ಸಿಕ್ರಂ ಸಂಸ್ಥೆಯ ಮೈಸೂರು ಜಿಲ್ಲಾ ಘಟಕದ ಸಂಯೋಜಕರಾದ ಡಾ.ದೇವರಾಜು.ಎಸ್.ಎಸ್ ರವರು ಮಾತನಾಡುತ್ತಾ,  ಸಿಕ್ರಂ ಸಂಸ್ಥೆಯು 1995 ರಿಂದ ದಕ್ಷಿಣ ಭಾರತದಾದ್ಯಂತ ಮಾನವ ಹಕ್ಕುಗಳನ್ನು ಮನೆಮಾತಾಗಿಸುವಲ್ಲಿ ಹಾಗೂ ಮಾನವೀಯ ಮತ್ತು ನ್ಯಾಯಯುಕ್ತ ಸಮಾಜ ನಿರ್ಮಾಣದ  ಹೊಣೆಗಾರಿಕೆಯೊಂದಿಗೆ ಮಾನವ ಹಕ್ಕುಗಳನ್ನು ಸಂರಕ್ಷಿಸಿ ಸಂವರ್ಧನೆ ಮಾಡುವಲ್ಲಿ ನಿರ್ವಹಿಸುತ್ತಿರುವ ಪಾತ್ರ ಮತ್ತು ನೀಡುತ್ತಿರುವ ಕೊಡುಗೆಯನ್ನು ತಿಳಿಸಿದರು. ಮೊದಲ ಮತ್ತು ಎರಡನೇ ಜಾಗತಿಕ ಮಹಾಯುದ್ಧಗಳಿಂದಾಗಿ ಆದ ಅಪಾರ ಸಾವು ನೋವು ಮತ್ತು ನಷ್ಟದ ಪರಿಣಾಮವಾಗಿ ವಿಶ್ವಸಂಸ್ಥೆಯ ಸ್ಥಾಪನೆಯೊಂದಿಗೆ ಜಾಗತಿಕ ಮಟ್ಟದಲ್ಲಿ ಮಾನವ ಹಕ್ಕುಗಳನ್ನು ಗೌರವಿಸಬೇಕು ಹಾಗೂ ರಕ್ಷಿಸಬೇಕೆನ್ನುವ ಉದ್ದೇಶದಿಂದ

10 ಡಿಸೆಂಬರ್ 1948 ಮಾನವ ಹಕ್ಕುಗಳ ಸಾರ್ವತ್ರಿಕ ವಿಶ್ವ ಘೋಷಣೆಯನ್ನು ಮಾಡಲಾಗಿದೆ. ಭಾರತದಲ್ಲಿರುವ ಬಹುಸಂಖ್ಯಾತ ದಲಿತರ ಮೇಲೆ ದಬ್ಬಾಳಿಕೆ, ದೌರ್ಜನ್ಯ ಹಾಗೂ ಇನ್ನಿತರ ಹಕ್ಕು ಉಲ್ಲಂಘನೆಗಳು ಹವ್ಯಾತವಾಗಿ ನಡೆಯುತ್ತಲೇ ಇವೆ. ಆದಿವಾಸಿ ಸಮುದಾಯವು ವಾಸಿಸುತ್ತಿರುವ ಸ್ಥಳಗಳನ್ನು ಸ್ಥಳೀಯರು ಹಾಗೂ ಅರಣ್ಯ ಇಲಾಖೆ ವಶಪಡಿಸಿಕೊಂಡು ಅವರನ್ನು ಮೂಲ ಸ್ಥಳದಿಂದ  ಒಕ್ಕಲಿಬ್ಬಿಸುವಂತಹ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿದೆ. ಇದರಿಂದಾಗಿ ಅರಣ್ಯ ವಾಸಿಗಳು ತಮ್ಮ ಸಂವಿಧಾನಬದ್ಧ ಹಕ್ಕುಗಳನ್ನು ಅನುಭವಿಸಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗುತ್ತಿದೆ.

ಅಲ್ಲದೆ ಧಾರ್ಮಿಕ ಅಲ್ಪಸಂಖ್ಯಾತರ  ಸಂಸ್ಕೃತಿ, ಆಚಾರ ಮತ್ತು ವಿಚಾರ, ಸಾಂಪ್ರದಾಯಗಳ ಮೇಲೆ ಇತರರು ಅನಗತ್ಯವಾಗಿ ತಮ್ಮ ವಿಚಾರವನ್ನು ಏರಿಕೆ ಮಾಡುವ ಮೂಲಕ ಅಲ್ಪಸಂಖ್ಯಾತ ಸಮುದಾಯಗಳಲ್ಲಿನ ಸಾಮಾಜಿಕ ಸ್ವಾಸ್ಥ್ಯ ಕದಾಡುವಂತಹ ಘಟನೆಗಳು ನಡೆಯುತ್ತಲೇ ಇವೆ. ಮಾನವ ಹಕ್ಕುಗಳನ್ನು ಸಂರಕ್ಷಿಸುವ ಸಲುವಾಗಿ ಭಾರತದಲ್ಲಿ ಸ್ವತಂತ್ರ ಪೂರ್ವದಿಂದಲೂ ಅನೇಕ ಕಾಯ್ದೆ ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ಅದರಂತೆ  ಭಾರತದಲ್ಲಿ1993 ರಲ್ಲಿ ರಾಷ್ಟ್ರೀಯ ಹಾಗೂ ರಾಜ್ಯಮಟ್ಟದಲ್ಲಿ ವಿವಿಧ ಸಮುದಾಯಗಳ ಹಕ್ಕು ರಕ್ಷಣೆಗೆ ಸಂವಿಧಾನಬದ್ಧವಾಗಿ ವಿವಿಧ ಆಯೋಗಗಳನ್ನು ರಚಿಸಲಾಗಿದೆ. ಸಂವಿಧಾನಬದ್ಧ ಸಂಸ್ಥೆಗಳು ಮಾನವ ಹಕ್ಕುಗಳನ್ನು ಕಾಪಾಡುವಲ್ಲಿ ವಿಫಲವಾದ ಸಂದರ್ಭದಲ್ಲಿ  ಯುವ ಸಮುದಾಯ ಜಾಗೃತರಾಗಿ ಎಲ್ಲಾ ಸಮುದಾಯಗಳು ಅವರವರ ಹಕ್ಕುಗಳನ್ನು ಸರಿಯಾಗಿ ಅನುಭವಿಸಲು ಅಗತ್ಯವಿರುವ ವಾತಾವರಣ ನಿರ್ಮಿಸುವಲ್ಲಿ ಯುವಜನರು ಪ್ರಧಾನ ಪಾತ್ರ ನಿರ್ವಹಿಸಬೇಕಿದೆ ಎಂದರು.

ಯುವರಾಜ ಕಾಲೇಜಿನ ಎನ್ಎಸ್ಎಸ್ ಘಟಕದ ಸಂಯೋಜಕರಾದ ಡಾ. ಗಿರೀಶ್ ಚಂದ್ರ ರವರು ಮಾತನಾಡುತ್ತಾ ಮಾನವ ಹಕ್ಕುಗಳೆಂದರೆ ನಾನು ಎಷ್ಟು ಸ್ವತಂತ್ರವಾಗಿ ಈ ಭೂಮಿಯಲ್ಲಿ ಓಡಾಡಬಲ್ಲೆ ಎಂಬುವುದರ ಸೂಚಕವಾಗಿದೆ. ನಮ್ಮ ಹಕ್ಕುಗಳನ್ನು ಅರಿತುಕೊಂಡು ಮತ್ತೊಬ್ಬರ ಹಕ್ಕುಗಳನ್ನು ಗೌರವಿಸಿದರೊಂದಿಗೆ ಹಕ್ಕುಗಳಿಗೆ ಪ್ರಧಾನ ಸ್ಥಾನ ನೀಡೋಣ ನೀಡೋಣ ಎಂದು ತಿಳಿಸಿದರು.

ಮಹಾರಾಜ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಯೋಗೇಶ್ ರವರು ಮಾತನಾಡುತ್ತಾ ಇಂದು ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚು ನಡೆಯುತ್ತಿದೆ, ಇದಕ್ಕೆ ಉದಾರಣೆ ಇಸ್ರೇಲ್ ಹಾಗೂ ಪ್ಯಾಲಸ್ಟೇನ್, ರಷ್ಯಾ ಹಾಗೂ ಉಕ್ರೇನ್ , ಹಾಗೂ ಭಾರತದ ಉತ್ತರ ಪ್ರದೇಶ, ಮಣಿಪುರ ಹಾಗೂ ಇನ್ನಿತರ ರಾಜ್ಯಗಳಲ್ಲಿ ನಡೆಯುತ್ತಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ಮೈಸೂರಿನ ಜೆಎಸ್ಎಸ್ ಕಾನೂನು ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಜೆಎಸ್ಎಸ್ ಕಾನೂನು ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಹರ್ಷಿತಾ ರವರು ಮಾತನಾಡುತ್ತಾ, ಮಾನವ ಹಕ್ಕುಗಳು ಎಂದರೆ  ನೈಸರ್ಗಿಕವಾಗಿ ದೊರೆತು ಮಾನವನಲ್ಲಿ ಅಂತರ್ಗತವಾಗಿರುವ ಹಕ್ಕುಗಳಾಗಿವೆ. ಚಾರ್ಟರ್ ನ ಮೊದಲನೇ ವಿಧಿ ತಿಳಿಸುವಂತೆ ಪ್ರತಿಯೊಬ್ಬರೂ ಹುಟ್ಟಿನಿಂದ ಸಮಾನರು ಮತ್ತು ಸಮಾನ ಹಕ್ಕುಗಳನ್ನು ಹೊಂದಿದ್ದಾರೆ ಆದುದರಿಂದ ಹಕ್ಕುಗಳನ್ನು ಸಮರ್ಪಕವಾಗಿ ಅಳವಡಿಸಿಕೊಂಡು ಜಾರಿಗೊಳಿಸಿ, ಉಳಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಯುವರಾಜ ಕಾಲೇಜಿನ ಎನ್ಎಸ್ಎಸ್ ಘಟಕ 2 ಸಂಯೋಜಕ ಡಾ.ಅನಿಲ್, ಪರಿಸರ ಅಧ್ಯಯನ ವಿಭಾಗದ ಉಪನ್ಯಾಸಕರಾದ ಡಾ.ಮಂಜುಳಾ, ರಾಜ್ಯಶಾಸ್ತ್ರ ಉಪನ್ಯಾಸಕರುಗಳಾದ ಡಾ.ಶ್ವೇತಾ, ಡಾ.ಶಾರದ, ಡಾ.ಲೋಕೇಶ್ ಹಾಗೂ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿಗಳು ಹಾಗೂ ಇತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ