ಯತ್ನಾಳ್ ಉಚ್ಛಾಟನೆ? | ಬಿಜೆಪಿ ನಾಯಕರು ಕೈಗೊಳ್ಳಲಿರುವ ಕ್ರಮ ಏನು?
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ನಿರಂತರ ಹೇಳಿಕೆ ನೀಡಿ, ಬಿಜೆಪಿಯನ್ನು ಮುಜುಗರಕ್ಕೆ ಸಿಲುಕಿಸುತ್ತಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲು ಬಿಜೆಪಿ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ಯಡಿಯೂರಪ್ಪ ಅವರ ವಿರುದ್ಧ ಯಾರೂ ಹೇಳಿಕೆ ನೀಡದಂತೆ ಪ್ರಕಟಣೆ ಹೊರಡಿಸಿದ್ದರು. ಆದರೆ, ಅದರ ಬಳಿಕವೂ ಯತ್ನಾಳ್ ಯಡಿಯೂರಪ್ಪ ಅವರ ವಿರುದ್ಧ ಹೇಳಿಕೆ ನೀಡಿದ್ದಾರೆ.
ಯತ್ನಾಳ್ ಅವರ ಮಾತಿನಿಂದಾಗಿ, ರಾಜ್ಯ ಬಿಜೆಪಿ ಮಾತ್ರವಲ್ಲದೇ ಹೈಕಮಾಂಡ್ ಗೂ ಮುಜುಗರ ಉಂಟಾಗಿದೆ. ಯಡಿಯೂರಪ್ಪ ಮೇಲಿನ ಕೋಪಕ್ಕೆ ಪಕ್ಷದ ವರಿಷ್ಠರು ರಾಜ್ಯವನ್ನು ಕಡೆಗಣಿಸಿದ್ದಾರೆ ಎನ್ನುವ ಅರ್ಥವು ಯತ್ನಾಳ್ ಹೇಳಿಕೆಯಿಂದ ಮೂಡಿದೆ. ಇದು ಪಕ್ಷಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದೆ ಎಂದು ಹೇಳಲಾಗಿದೆ.
ಇನ್ನೂ ಯತ್ನಾಳ್ ವಿರುದ್ಧ ಶಿಸ್ತಿನ ಕ್ರಮ ಜರಗಿಸಲು ಪಕ್ಷದ ನಾಯಕರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸಿಎಂ ಯಡಿಯೂರಪ್ಪ ಅವರ ಜೊತೆಗೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.