ಯಡಿಯೂರಪ್ಪ ಬಿಟ್ಟರೆ, ಬಿಜೆಪಿಯಲ್ಲಿ ಸಮರ್ಥ ನಾಯಕರೇ ಇಲ್ಲ | ಸಿದ್ದರಾಮಯ್ಯ
ಹುಬ್ಬಳ್ಳಿ: ಯಡಿಯೂರಪ್ಪರನ್ನು ಬದಲಿಸಿದರೆ, ಸರ್ಕಾರ ಬೀಳುತ್ತದೆ ಎಂದು ನಾನು ಹೇಳುವುದಿಲ್ಲ, ಆದರೆ ಬದಲಿ ನಾಯಕತ್ವ ಬಿಜೆಪಿಯಲ್ಲಿಲ್ಲ, ಯಡಿಯೂರಪ್ಪ ಬಿಟ್ಟರೆ ಬಿಜೆಪಿಯಲ್ಲಿ ಸಮರ್ಥ ನಾಯಕರೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಬೀದಿ ಕಾಳಗ ನಡೆಯುತ್ತಿದೆ. ಅವರ ಪಕ್ಷದ ಶಾಸಕರೇ ಯಡಿಯೂರಪ್ಪ ವಿರುದ್ಧವಾಗಿ ಮಾತನಾಡಿದ್ದಾರೆ.ನಾಯಕತ್ವ ಬದಲಾವಣೆಯಾದ ತಕ್ಷಣ ಸರ್ಕಾರ ಹೋಗುತ್ತದೆ ಎಂದು ಅಂದುಕೊಳ್ಳುವುದಿಲ್ಲ, ಅಲ್ಲಿ ಸಮರ್ಥ ಬದಲಿ ನಾಯಕರೇ ಇಲ್ಲ ಎಂದು ಹೇಳಿದರು.
ಯಡಿಯೂರಪ್ಪನವರನ್ನು ತೆಗೆದರೆ ಮತ್ತೊಬ್ಬ ಸಮರ್ಥ ನಾಯಕರು ಹೈಕಮಾಂಡ್ ಗೆ ಸಿಗುತ್ತಿಲ್ಲ, ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಬಿಟ್ಟರೆ ಸಮರ್ಥ ನಾಯಕರು ಯಾರೂ ಇಲ್ಲ, ಹೀಗಾಗಿ ಹೈಕಮಾಂಡ್ ಸುಮ್ಮನೆ ಕುಳಿತಿದೆ ಎಂದು ನನ್ನ ಭಾವನೆ ಎಂದು ಅವರು ಅಭಿಪ್ರಾಯಪಟ್ಟರು.
ಇನ್ನೂ ಕೊರೋನಾ ಮೂರನೇ ಅಲೆ ಅಕ್ಟೋಬರ್ -ನವೆಂಬರ್ ನಲ್ಲಿ ಬರುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ, ಅದಕ್ಕೆ ಕೂಡ ಸರ್ಕಾರ ಸಿದ್ದತೆ ಮಾಡಿಕೊಂಡಂತೆ ಕಾಣುತ್ತಿಲ್ಲ. ಸರ್ಕಾರ ಸಮರ್ಪಕವಾಗಿ ಪರಿಸ್ಥಿತಿಯನ್ನು ನಿಭಾಯಿಸುತ್ತಿಲ್ಲ ಎಂದು ಆರೋಪಿಸಿದರು.