ಯಡಿಯೂರಪ್ಪ ನಾಲಿಗೆ ಕಳೆದುಕೊಂಡ ನಾಯಕ | ಎಚ್.ವಿಶ್ವನಾಥ್ ಆಕ್ರೋಶ
ಹುಬ್ಬಳ್ಳಿ: ಯಡಿಯೂರಪ್ಪ ನಾಲಿಗೆ ಕಳೆದುಕೊಂಡ ನಾಯಕ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಹೇಳಿದ್ದು, ಯಡಿಯೂರಪ್ಪನವರು ದೊಡ್ಡವರು, ಅವರಿಗೆ ಅಧಿಕಾರದ ಆಸೆ ಇರಬಹುದು ಆದರೆ, ನನಗೆ ಇರಬಾರದಾ? ಎಂದು ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ದಿಢೀರ್ ಪತ್ರಿಕಾಗೋಷ್ಠಿ ಕರೆದ ಅವರು, ಯಡಿಯೂರಪ್ಪ ಕಾಮಧೇನು ಇದ್ದಂತೆ. ಅವರ ಜೀವ ವಿಜಯೇಂದ್ರನ ಕೈಯಲ್ಲಿ ಇದೆ. ಯಡಿಯೂರಪ್ಪ ಅವರ ಈಗಿನ ಪರಿಸ್ಥಿತಿ ನೋಡಿದರೆ ನಾಲಿಗೆ ಕಳೆದುಕೊಂಡ ನಾಯಕ, ದಾರಿ ತಪ್ಪಿದ ಮಗ’ ಎಂದು ತಲೆಬರಹ ಕೊಡಬಹುದು ಎಂದು ಹೇಳಿದರು.
17ರಂದು ಅಮಿತ್ ಶಾ ಅವರನ್ನು ಭೇಟಿ ಮಾಡಲು ಸಮಯಾವಕಾಶ ಕೋರಿದ್ದೇನೆ. ಆಗ ರಾಜ್ಯದ ಬೆಳವಣಿಗೆಯನ್ನು ಅವರ ಗಮನಕ್ಕೆ ತರುತ್ತೇನೆ, ಜೆಡಿಎಸ್ ಪಕ್ಷ ತೊರೆದು ಬಿಜೆಪಿಗೆ ಬರುವಾಗ ಮುಂಬೈನಲ್ಲಿ ಕೆಲ ದಿನಗಳ ಕಾಲ ಕಳೆದ ದಿನಗಳ ಬಗ್ಗೆ ‘ಬಾಂಬೆ ದಿನಗಳು’ ಪುಸ್ತಕ ಬರೆಯುತ್ತೇನೆ ಎಂದು ಅವರು ಹೇಳಿದರು.
ಸಚಿವ ಸ್ಥಾನ ನೀಡಿ ಎಂದು ನಾನು ಯಾರ ಬಳಿಯೂ ಕೇಳಿಲ್ಲ. ಆದರೆ ಮುಖ್ಯಮಂತ್ರಿ ಜೊತೆಗೆ ನಡೆಸಿದ ಸುದೀರ್ಘ ಚರ್ಚೆಯಲ್ಲಿ ಅವರು ನೀಡಿದ ಭರವಸೆಯನ್ನು ಅವರು ಈಡೇರಿಸಬೇಕಿತ್ತು. ಆದರೆ ಅವರು ಈಡೇರಿಸಿಲ್ಲ. ನನಗೆ ಅವರು ಒಂದು ಮಾತುಕೊಟ್ಟಿದ್ದರು. ಅದನ್ನು ಅವರು ಈಡೇರಿಸಿಲ್ಲ ಎಂದರು.
ಯಡಿಯೂರಪ್ಪನವರು ತಮಗೆ ಯಾವ ಮಾತು ನೀಡಿದ್ದರು ಎಂದು ಪತ್ರಕರ್ತರು ಪ್ರಶ್ನಿಸಿದಾಗ ವಿಶ್ವಾನಾಥ್ ಉತ್ತರಿಸಲಿಲ್ಲ. ಬದಲಾಗಿ ಯಡಿಯೂರಪ್ಪನವರೇ ಅದನ್ನು ಬಹಿರಂಗಪಡಿಸಲಿ ಎಂದು ಅವರು ಹೇಳಿದರು.