ಲಾಕ್ ಡೌನ್: ಯಡಿಯೂರಪ್ಪ ಸರ್ಕಾರದಿಂದ ಜನರಿಗೆ ಏನಿದೆ ಪ್ರಯೋಜನ?

yediyurappa
08/05/2021

ಬೆಂಗಳೂರು: ಕೊರೊನಾ ನಿಯಂತ್ರಣಕ್ಕಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಈ ಪೈಕಿ ಕರ್ನಾಟಕವೂ ಒಂದಾಗಿದೆ. ಆದರೆ, ಇತರ ರಾಜ್ಯಗಳ ಮುಖ್ಯಮಂತ್ರಿಗಳು ನೀಡಿರುವ ಕೊಡುಗೆಯನ್ನು ಸಿಎಂ ಯಡಿಯೂರಪ್ಪ ನೀಡುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿದ್ಯುತ್ ಬಿಲ್, ನೀರಿನ ಬಿಲ್, ಸಾಲ ವಸೂಲಿ ಮಾಡಬಾರದು ಎಂದು ಆದೇಶ ನೀಡಿದ್ದಾರೆ. ಆಂದ್ರಪ್ರದೇಶ ಸಿಂಎ ಜಗನ್ ಮೋಹನ್, ರಾಜ್ಯದಲ್ಲಿ ಕೊರೊನಾ ಸೋಂಕಿತರಿಗೆ ಎಲ್ಲ ಆಸ್ಪತ್ರೆಗಳಲ್ಲಿಯೂ ಉಚಿತ ಚಿಕಿತ್ಸೆ ಘೋಷಿಸಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟ್ಯಾಲಿನ್, ಕೊವಿಡ್ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಕುಟುಂಬಗಳಿಗೂ 4,000 ರೂ ಸಹಾಯಧನ ನೀಡಲು ಮುಂದಾಗಿದ್ದಾರಲ್ಲದೇ, ಮಹಿಳೆಯರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣವನ್ನು ಘೋಷಿಸಿದ್ದಾರೆ. ಆದರೆ ಕರ್ನಾಟಕ ಸಿಎಂ, ಲಾಕ್ ಡೌನ್ ಘೋಷಣೆಗೂ ಮೊದಲು “ಅಣ್ಣಮ್ಮ ದೇವಿಯ ಆಶೀರ್ವಾದದಿಂದ ಕೊರೊನಾ ಕಡಿಮೆಯಾಗುತ್ತದೆ” ಎಂದು ಪೂಜೆ ಸಲ್ಲಿಸಿದ್ದಾರೆ. ರಾಜ್ಯಕ್ಕೆ ನೀವು ಸಿಎಂ ಆಗಿ ಆದ ಪ್ರಯೋಜನವಾದರೂ ಏನು ಎಂದು ಜನ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ.

ದುಡಿಯುವ ಕೈಗಳಿಗೆ ಉದ್ಯೋಗವಿಲ್ಲ, ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ತಮ್ಮ ಕೆಲಸ ಬಿಟ್ಟು, ಊರಿಗೆ ಬಂದು ಸಣ್ಣಪುಟ್ಟ ಅಂಗಡಿಗಳನ್ನು ತೆರೆದು, ಇನ್ನೇನು ವ್ಯಾಪಾರದಲ್ಲಿ ಯಶಸ್ವಿಯಾಗುತ್ತೇವೆ ಎನ್ನುವ ಮಟ್ಟಕ್ಕೆ ಬೆಳೆದ ವೇಳೆ ಕೊರೊನಾ 2ನೇ ಅಲೆ ಬಂದಿದೆ. ಸರ್ಕಾರ ಜನರಿಗೆ ಉಚಿತ ಆರೋಗ್ಯ ಸೇವೆ ನೀಡುವುದು ಬಿಟ್ಟು, ಕಠಿಣ ಕ್ರಮ, ಕಟ್ಟುನಿಟ್ಟಿನ ಕ್ರಮ, ಲಾಕ್ ಡೌನ್ ಮಾದರಿಯ ಕ್ರಮ, ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ, ಒಂದೊಂದು ಜಿಲ್ಲೆಗೆ ಒಂದೊಂದು ಕಾನೂನು, ಬೆಡ್ ಬ್ಲಾಕಿಂಗ್ ದಂಧೆ, ಕೋಮುವಾದ ಮೊದಲಾದ ಡ್ರಾಮಾಗಳಲ್ಲಿ ತೊಡಗಿದೆ. ಇದಕ್ಕೋಸ್ಕರ ಯಡಿಯೂರಪ್ಪನವರು ಇಷ್ಟು ಕಷ್ಟಪಟ್ಟು ಮುಖ್ಯಮಂತ್ರಿಗಳಾದರೇ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಗಳು ಕೇಳಿ ಬಂದಿದೆ.

ಕೊರೊನಾ ಮೊದಲ ಅಲೆ ಬಂದಾಗ ಕೇಂದ್ರ ಸರ್ಕಾರ ಮಾಡಿದ ತಪ್ಪನ್ನು ಇದೀಗ ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳು ಮಾಡುತ್ತಿವೆ. ರಾಜ್ಯ ಸರ್ಕಾರಗಳು ಕೊರೊನಾ ಲಸಿಕೆ ವಿತರಣೆಯ ವೇಗ ಹೆಚ್ಚಿಸಬೇಕು. ಕೊರೊನಾ ಲಸಿಕೆಗಾಗಿ ಕೇಂದ್ರ ಸರ್ಕಾರ ಮೇಲೆ ಒತ್ತಡ ಹಾಕುವ ಕೆಲಸವಾಗಬೇಕು. ಆಕ್ಸಿಜನ್ ಪೂರೈಕೆಗೂ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರಗಳು ಒತ್ತಡ ಹೇರಬೇಕು. ಇನ್ನು ಬೆಡ್ ಗಳಿಲ್ಲ ಎನ್ನುವ ಸಮಸ್ಯೆಗೆ ಮುಚ್ಚಲ್ಪಟ್ಟಿರುವ ಸರ್ಕಾರಿ ಶಾಲೆಗಳು, ಸರ್ಕಾರಿ ಕಚೇರಿಗಳಲ್ಲಿ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಿ, ಅಲ್ಲಿ  ವೈದ್ಯರು ಆರೋಗ್ಯ ಸಿಬ್ಬಂದಿಯನ್ನು ನೇಮಿಸಬೇಕು. ಇದರಿಂದಾಗಿ ಖಾಸಗಿ ಆಸ್ಪತ್ರೆಗಳು ಸಾರ್ವಜನಿಕರನ್ನು ದೋಚುವುದನ್ನು ಸಾಕಷ್ಟು ಸಂಖ್ಯೆಯಲ್ಲಿ ಕಡಿಮೆ ಮಾಡಬಹುದು. ಸರ್ಕಾರ ಇಂತಹ ಕ್ರಮಗಳ ಬಗ್ಗೆ ಯೋಚಿಸುತ್ತಲೇ ಇಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಬೆಡ್ ಪಡೆದು ದುಡ್ಡು ಮಾಡುವುದರತ್ತವೇ ಸರ್ಕಾರ ಗಮನ ನೀಡಿದರೆ, ರಾಜ್ಯದ ಜನರ ಪರಿಸ್ಥಿತಿ ಏನು? ಕೊವಿಡ್ ಕೇಂದ್ರಗಳ, ಆಸ್ಪತ್ರೆಗಳ ಸಂಖ್ಯೆ ಹೆಚ್ಚಿಸಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿಗಳು ಸರ್ಕಾರದ ಮುಂದಿಲ್ಲ. ಆದರೆ ಸರ್ಕಾರ ಉದ್ದೇಶ ಪೂರ್ವಕವಾಗಿ ಈ ಕೆಲಸಗಳನ್ನು ಮಾಡುತ್ತಿಲ್ಲ ಎನ್ನುವ ಅನುಮಾನಗಳು  ಬಿಜೆಪಿ ಶಾಸಕನ ಬೆಡ್ ಬ್ಲಾಕಿಂಗ್ ದಂಧೆ  ಬಯಲಾದ ಬೆನ್ನಲ್ಲೇ ಹುಟ್ಟಿಕೊಂಡಿದೆ.

ರಾಜ್ಯದಲ್ಲಿ ಬಾರ್ ಗಳನ್ನು ಮುಚ್ಚಲಾಗಿಲ್ಲ, ಆದರೆ ಕೂಲಿ ಕಾರ್ಮಿಕರು ಅಥವಾ ಕಟ್ಟಡ ಕಾರ್ಮಿಕರು ಕೆಲಸ ಮಾಡಲು ಅವಕಾಶ ನೀಡಿಲ್ಲ. ಕೆಲಸ ಮಾಡುವ ಸ್ಥಳದಲ್ಲಿಯೇ ಉಳಿದು ಕೊಂಡು ಕೆಲಸ ಮಾಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಈ ಕಾರ್ಮಿಕರಿಗೂ ಸಣ್ಣ ಮಕ್ಕಳಿರುತ್ತಾರೆ, ವಯಸ್ಸಾದ ತಂದೆ-ತಾಯಿಗಳಿರುತ್ತಾರೆ, ಸರ್ಕಾರ ತಜ್ಞರು ಹೇಳುವ ಮಾತಿಗೆ ತಲೆಯಾಡಿಸಿ ಕ್ರಮಕೈಗೊಳ್ಳುವುದಲ್ಲ, ತಜ್ಷರು ನೀಡಿದ ಸಲಹೆಗಳನ್ನು ವಿಮರ್ಶೆ ನಡೆಸಬೇಕು. ಸರ್ಕಾರ ಕೂಲಿ ಕಾರ್ಮಿಕರಿಗೆ ಲಾಕ್ ಡೌನ್ ಅವಧಿಯಲ್ಲಿ ಕುಟುಂಬ ನಿರ್ವಹಣೆಗೆ ಸರ್ಕಾರ ಪ್ರತಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ 10 ಸಾವಿರ ರೂಪಾಯಿಗಳನ್ನು ನೀಡಬೇಕು. ಇಲ್ಲವಾದರೆ, ಕಾರ್ಮಿಕರಿಗೆ  ಕೆಲಸ ಮಾಡಲು ಅವಕಾಶ ನೀಡಬೇಕು. ಅವರು ಕೆಲಸಕ್ಕೆ ಹೋಗಲು ಬರಲು ಆಟೋಗಳಲ್ಲಿ ಸಂಚರಿಸಲು ಸರ್ಕಾರ ಅನುಮತಿ ನೀಡಬೇಕು. ಯಾರನ್ನೂ ಹಸಿವಿನಿಂದ ಸಾಯಿಸುವಂತಹ ಮಾರ್ಗ ಸೂಚಿ ನಿಯಮಗಳನ್ನು ಸರ್ಕಾರ ಜಾರಿಗೆ ತರಬಾರದು ಎನ್ನುವ ಒತ್ತಾಯಗಳು ಸಾರ್ವಜನಿಕರಿಂದ ಕೇಳಿ ಬಂದಿದೆ.

ಕೇಂದ್ರದಲ್ಲಿಯೂ ಬಿಜೆಪಿ ಸರ್ಕಾರ ಇದೆ. ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ಇದೆ. ಆದರೆ ಯಡಿಯೂರಪ್ಪ ಸರ್ಕಾರ ಕೇವಲ ಅಕ್ಕಿ ನೀಡಿ ಜನರನ್ನು ಸಂತೈಸಿಸಲು ಪ್ರಯತ್ನಿಸಿದೆ. ಕೇವಲ ಅಕ್ಕಿಯಿಂದ ಬದುಕು ಸಾಗಿಸಲು ಸಾಧ್ಯವಿಲ್ಲ. ಕೊವಿಡ್ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೆ, ಅಕ್ಕಿಯನ್ನು ಕೊಂಡು ಹೋಗಿ ಆಸ್ಪತ್ರೆಯ ಬಿಲ್ ಪಾವತಿಸಲು ಸಾಧ್ಯವೇ? ದುಡಿಯುವ ವರ್ಗವನ್ನು ಮನೆಯಲ್ಲಿ ಕೂರಿಸಿ, ಅವರಿಗೆ ಕನಿಷ್ಠ ಪರಿಹಾರವನ್ನೂ ನೀಡದೇ, ಸಂಕಷ್ಟಕ್ಕೆ ದೂಡುವಂತಿದೆ, ರಾಜ್ಯ ಸರ್ಕಾರದ ಕ್ರಮ. ಲಾಕ್ ಡೌನ್ ಘೋಷಿಸಿದರೆ, ಜನರ ಸಮಸ್ಯೆಗಳ ಜವಾಬ್ದಾರಿಯನ್ನು ಸರ್ಕಾರ ವಹಿಸಲೇ ಬೇಕು. ಈ ಹಿಂದೆ ಮೂರು ತಿಂಗಳು ಲಾಕ್ ಡೌನ್ ಮಾಡಲಾಗಿದ್ದರೂ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದಿಲ್ಲ. ಆದರೆ ಸರ್ಕಾರ ಮತ್ತೆ ಮತ್ತೆ ಲಾಕ್ ಡೌನ್ ಮೊರೆ ಹೋಗುತ್ತಿದೆ. ಲಾಕ್ ಡೌನ್ ಸರ್ಕಾರದ ಸ್ವಾತಂತ್ರ್ಯ ಇರಬಹುದು. ಆದರೆ ದುಡಿಯುವ ಕೈಗಳನ್ನು ನಿರ್ಬಂಧಿಸಿ ಮನೆಯಲ್ಲಿ ಕೂರಿಸುವುದು ಸರಿಯಲ್ಲ. ಒಂದು ವೇಳೆ ಅದು ಅನಿವಾರ್ಯವೇ ಆದರೆ, ಅವರಿಗೆ ಸೂಕ್ತ ಪರಿಹಾರವನ್ನು ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎನ್ನುವ ಮಾತುಗಳು ಸದ್ಯ ಕೇಳಿ ಬಂದಿದೆ.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇದ್ದ ವೇಳೆ, ಕ್ಷೇತ್ರ ಅಭಿವೃದ್ಧಿಗೆ, ರಾಜ್ಯದ ಅಭಿವೃದ್ಧಿಗಾಗಿ ರಾಜೀನಾಮೆ ನೀಡುತ್ತೇವೆ ಎಂದು ಹೇಳಿ ಶಾಸಕರು ರಾಜೀನಾಮೆ ನೀಡಿರುವುದು, ಯಡಿಯೂರಪ್ಪನವರು ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿಕೆ ನೀಡುರುವುದು. ಇವೆಲ್ಲವನ್ನು ಗಮನಿಸಿದರೆ, ಕರ್ನಾಟಕ ಎಲ್ಲೋ ಸಿಂಗಾಪುರದಂತೆ ಆಗುತ್ತದೆ ಎಂದು ಜನರು ಭ್ರಮಿಸಿ ಹೋಗಿದ್ದರು. ಆದರೆ, ಕೊರೊನಾ ಸಂದರ್ಭದಲ್ಲಿ ಸರ್ಕಾರ ಕೇವಲ ಲಾಕ್ ಡೌನ್ ಬಿಟ್ಟರೆ ಬೇರಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ, ಚಾಮರಾಜನಗರದಲ್ಲಿ ನಡೆದ ದುರಂತ ಇಡೀ ರಾಜ್ಯದ ಜನರ ಎದೆಯನ್ನು ಝಲ್ ಎನಿಸಿತ್ತು. ಜನರು ಸರ್ಕಾರವನ್ನು ಗಮನಿಸುತ್ತಲೇ ಇದ್ದಾರೆ. ಈಗಾಗಲೇ ಹಲವು ಬಾರಿ ಬಿಜೆಪಿ ಸರ್ಕಾರ ಜನರ ನಂಬಿಕೆಗಳನ್ನು ಕಳೆದುಕೊಂಡಿದೆ. ಆದರೆ, ಪಕ್ಷದೊಂದಿಗಿನ ಜನರ ಸಂಬಂಧ ಅವರ ಆಕ್ರೋಶದ ಕಟ್ಟೆಯನ್ನು ತಡೆದಿದೆ. ಆದರೆ, ಪಕ್ಷವು, ನಾವು ಏನು ಮಾಡಿದರೂ ಜನ ನಮ್ಮ ಕೈ ಹಿಡಿಯುತ್ತಾರೆ ಎನ್ನುವ ಭ್ರಮೆಯಲ್ಲಿದ್ದಾರೆ. ಸರ್ಕಾರ ಈ ಭ್ರಮೆಯನ್ನು ಬಿಟ್ಟು ಬಿಡುವುದು ಉತ್ತಮ. ಕೆಲವೇ ದಿನಗಳ ಹಿಂದೆ ನಡೆದ ನಗರ ಸಭೆ ಚುನಾವಣೆಯ ಫಲಿತಾಂಶವನ್ನು ನೋಡಿಯಾದರೂ ಸಿಎಂ ಯಡಿಯೂರಪ್ಪನವರು ಇನ್ನಾದರೂ ರಾಜ್ಯದ ಜನತೆ ಕೊರೊನಾ ಸಂಕಟಕ್ಕೆ ಸಾಂತ್ವನವಾಗಿ ನಿಲ್ಲಿ. ಜನರು ಕೊರೊನಾದ ಸಂದರ್ಭದಲ್ಲಿ ಕೈಯಲ್ಲಿ ನಯಪೈಸೆ ಇಲ್ಲದೇ, ಸರಿಯಾದ ಚಿಕಿತ್ಸೆ ಸಿಗದೇ ಸಾಯುವ ಮೊದಲು ಎಚ್ಚೆತ್ತುಕೊಂಡು ಅವರಿಗಾಗಿ ಯೋಜನೆ ಕೈಗೆತ್ತಿಕೊಳ್ಳಿ ಎಂಬ ಒತ್ತಾಯಗಳು ಕೂಡ ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ

Exit mobile version