“ಆಗಸ್ಟ್ 13 ರಿಂದ15ರವರೆಗೆ ಎಲ್ಲರ ಮನೆಗಳ ಮೇಲೆ ರಾಷ್ಟ್ರ ಧ್ವಜಾರೋಹಣ” - Mahanayaka
3:23 AM Wednesday 11 - December 2024

“ಆಗಸ್ಟ್ 13 ರಿಂದ15ರವರೆಗೆ ಎಲ್ಲರ ಮನೆಗಳ ಮೇಲೆ ರಾಷ್ಟ್ರ ಧ್ವಜಾರೋಹಣ”

rashtradhwaja
26/07/2022

ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಆಗಸ್ಟ್ 13 ರಿಂದ 15 ರವರೆಗೆ ಹಮ್ಮಿಕೊಂಡಿರುವ “ಹರ್ ಘರ್ ತಿರಂಗಾ” ಕಾರ್ಯಕ್ರಮದಡಿ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸಿ, ರಾಷ್ಟ್ರಪ್ರೇಮ ಅಭಿವ್ಯಕ್ತಿಗೊಳಿಸಲು ಅನುಕೂಲವಾಗುವಂತೆ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಗ್ರಾಮೀಣ ಭಾಗದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಪೂರಕವಾದ ಕ್ರಮಗಳನ್ನು ಕೈಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸಂಬಂಧಿಸಿದವರಿಗೆ ನಿರ್ದೇಶನ ನೀಡಿದ್ದಾರೆ.

ಅವರು ಮಂಗಳವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿಯ ಕೆಸ್ವಾನ್ ವಿಡಿಯೋ ಸಂವಾದದ ಕೊಠಡಿಯಲ್ಲಿ ವಿವಿಧ ವಿಷಯಗಳ ಕುರಿತು ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆಗಸ್ಟ್ 13 ರಿಂದ 15ರ ವರೆಗೆ ಜಿಲ್ಲೆಯಲ್ಲಿರುವ ಎಲ್ಲಾ ಮನೆಗಳ ಮೇಲೂ ರಾಷ್ಟ್ರಧ್ವಜ ಹಾರಿಸಲು ಅನುಕೂಲವಾಗುವಂತೆ ಧ್ವಜಗಳನ್ನು ಸರಬರಾಜು ಮಾಡಬೇಕಿದ್ದು, ಈ ದಿಸೆಯಲ್ಲಿ ಅಗತ್ಯ ಕ್ರಮವಹಿಸಲಾಗಿದೆ, ಮುಖ್ಯವಾಗಿ ಎನ್.ಆರ್.ಎಲ್.ಎಂ. ಮೂಲಕ ಸ್ವಸಹಾಯ ಸಂಘಗಳ ಸದಸ್ಯರಿಗೆ ಧ್ವಜ ಸಿದ್ಧಪಡಿಸಿ ನೀಡುವ ಆದೇಶ ನೀಡಲಾಗಿದೆ, ಅದರಂತೆ ಅವರು ಧ್ವಜ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ, ಕನ್ನಡ ಮತ್ತು ಸಂಸ್ಕ್ಋತಿ ಇಲಾಖೆ ಮೂಲಕವೂ ಧ್ವಜಗಳ ಸರಬರಾಜಾಗುತ್ತಿದ್ದು, ಅವುಗಳನ್ನು ವಿತರಿಸಲು ಅನುಕೂಲವಾಗುವಂತೆ ತಾಲೂಕು ಮಟ್ಟದಲ್ಲಿ ತಹಶೀಲ್ದಾರರು ಸಭೆ ನಡೆಸುವಂತೆ ತಿಳಿಸಿದರು.

ಆಗಸ್ಟ್ 13 ರಿಂದ 15ರ ವರೆಗೆ ಸರ್ಕಾರದ ಎಲ್ಲಾ ಕಚೇರಿಗಳು, ಸರ್ಕಾರೇತರ ಕಚೇರಿಗಳು, ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಕಡ್ಡಾಯವಾಗಿ ರಾಷ್ಟ್ರಧ್ವಜ ಹಾರಾಡಬೇಕು, ಅದೇ ರೀತಿ ರೈಲು ನಿಲ್ದಾಣಗಳು, ವಿಮಾನ ನಿಲ್ದಾಣ, ವಿದ್ಯಾರ್ಥಿ ನಿಲಯಗಳು, ವಾಣಿಜ್ಯ ಸಂಕಿರ್ಣಗಳು ಸೇರಿದಂತೆ ಎಲ್ಲೆಡೆ ಧ್ವಜ ಆರೋಹಣವಾಗಬೇಕು,  ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೂ ಇದು ತಿಳಿಯಬೇಕು, ಪ್ರಭಾತ್ ಪೇರಿಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.

ವಿಪರೀತ ಮಳೆ ಅಥವಾ ಪ್ರವಾಹದಿಂದ ಹಾನಿಗೀಡಾದ ಮನೆಗಳ ಪಟ್ಟಿಯನ್ನು ಇದೇ ಜುಲೈ 31ರೊಳಗೆ ಜಿಲ್ಲೆಯ ಎಲ್ಲಾ ತಹಶೀಲ್ದಾರರು ಹಾಗೂ ತಾಲೂಕು ಪಂಚಾಯಿತಿಗಳ ಕಾರ್ಯನಿರ್ವಹಣಾಧಿಕಾರಿಗಳು ಕಡ್ಡಾಯವಾಗಿ ದಾಖಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ ಅವರು, ಡೀಮ್ಡ್ ಅರಣ್ಯ ವ್ಯಾಪ್ತಿಯಿಂದ ಕಂದಾಯ ಇಲಾಖೆಗೆ ವಾಪಸ್ ಆಗುವ ಭೂಮಿಯನ್ನು ತಾಲೂಕು ಮಟ್ಟದಲ್ಲಿ ತಹಸಿಲ್ದಾರರು ಹಾಗೂ ಅರಣ್ಯ ಅಧಿಕಾರಿಗಳು ಪರಸ್ಪರ ಚರ್ಚಿಸಿ, ಯಾವ ಯಾವ ಸರ್ವೆ ನಂಬರುಗಳು ಡಿಮ್ಡ್ ಅರಣ್ಯದಿಂದ ಕಂದಾಯ ಇಲಾಖೆಯ ಸುಪರ್ದಿಗೆ ಒಳಪಡುತ್ತದೆ ಎಂಬುದನ್ನು ಕೂಲಂಕುಷವಾಗಿ ಪರಿಶೀಲಿಸಬೇಕು, ನಂತರ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಬೇಕು, ಈ ವೇಳೆ ಅನಧಿಕೃತ ನಿವೇಶನ ಹೊಂದಿದವರಿಗೆ ಹಕ್ಕು ಪತ್ರ ನೀಡಿದ್ದಲ್ಲೀ ಸಂಬಂಧಿಸಿದ ಅಧಿಕಾರಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು ಹಕ್ಕುಪತ್ರ ನೀಡುವುದಕ್ಕೂ ಮೊದಲು ಅರ್ಹ ಫಲಾನುಭವಿಗಳ ಮನೆಗೆ ತಹಶೀಲ್ದಾರರು ಕಡ್ಡಾಯವಾಗಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲೇಬೇಕು ಹಾಗೂ ಅದನ್ನು ನಿಯಮಾನುಸಾರ ಕಡತದಲ್ಲಿ ದಾಖಲಿಸಬೇಕು ಎಂದು ಸೂಚಿಸಿದರು.

ಮತದಾರರ ಗುರುತಿನ ಚೀಟಿಯನ್ನು ಆಧಾರ್ ಕಾರ್ಡಿಗೆ ನೋಂದಣಿ ಮಾಡುವ ಅಭಿಯಾನ ಆಗಸ್ಟ್ 1ರಿಂದ ಮುಂದಿನ ವರ್ಷದ ಮಾರ್ಚ್ 23ರ ವರೆಗೆ ಜಿಲ್ಲೆಯಾದ್ಯಂತ ನಡೆಯಲಿದೆ. ಅದಕ್ಕೆ ಅನುಕೂಲವಾಗುವಂತೆ ನಮೂನೆ 6ಬಿ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಜಿಲ್ಲೆಯ ಎಲ್ಲಾ ಅರ್ಹ ಮತದಾರರು ತಮ್ಮ ಎಪಿಕ್ ಕಾರ್ಡಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವಂತೆ ಜಿಲ್ಲಾಧಿಕಾರಿಯವರು ಕೋರಿದರು.

ಮಂಗಳೂರಿನಲ್ಲಿರುವ ಕೈಗಾರಿಕೆಗಳಲ್ಲಿ ಆಗಾಗ್ಯೆ ಅಣಕು ಕಾರ್ಯಾಚರಣೆಗಳನ್ನು ನಡೆಸಬೇಕು, ಮುಖ್ಯವಾಗಿ ಕಾರ್ಖಾನೆಗಳ ಸಮೀಪದ ಗ್ರಾಮಗಳಲ್ಲೇ ಅವಘಡಗಳು ಸಂಭವಿಸುವ ವೇಳೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕ ಕ್ರಮಗಳ ಬಗ್ಗೆ ಸ್ಥಳೀಯ ಗ್ರಾಮ ಗ್ರಾಮಸ್ಥರಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಕೈಗಾರಿಕೆಗಳು ಹೆಚ್ಚಿರುವ ಮಂಗಳೂರಿನಲ್ಲಿ ಅಣಕು ಕಾರ್ಯಾಚರಣೆ ನಡೆಸಲು ನವದೆಹಲಿಯಿಂದ ಹಿರಿಯ ಅಧಿಕಾರಿಗಳು ಬರಲಿದ್ದು ಅಗತ್ಯ ಕ್ರಮಗಳನ್ನು ವಹಿಸುವಂತೆ ಸಂಬಂಧಿಸಿದೆ ಅಧಿಕಾರಿಗಳಿಗೆ ಸೂಚಿಸಿದರು.

ಎಂಆರ್‍ಪಿಎಲ್‍ನಿಂದ ಬಾಳ, ಪೆರ್ಮುದೆ ಸೇರಿದಂತೆ ಅಲ್ಲಿನ ಸಮೀಪದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅವಗಡಗಳು ಸಂಭವಿಸುವ ಸಂದರ್ಭದಲ್ಲಿ ಅಥವಾ ಅನಿಲ ಸೋರಿಕೆಯಾದಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಾಗೃತಿಗಾಗಿ ಪ್ರತಿಯೊಂದು ಮನೆಗಳಿಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಮುದ್ರಿಸಿದ ಸ್ಟಿಕ್ಕರ್‍ಗಳನ್ನು ನೀಡಬೇಕು, ಅನಿಲ ಸೋರಿಕೆಯಾಗಿ ವಾಸನೆ ಬಂದರೆ ಏನು ಮಾಡಬೇಕು ಎಂಬ ಬಗ್ಗೆ ಅಲ್ಲಿನ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಹಾಗೂ ಅಧಿಕಾರಿಗಳನ್ನೊಳಗೊಂಡಂತೆ ಮಾಹಿತಿ ನೀಡಬೇಕೆಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಹಾಯಕ ಆಯುಕ್ತ ಮದನ್ ಮೋಹನ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ಕಾರ್ಖಾನೆಗಳು ಹಾಗೂ ಬಾಯ್ಲರ್‍ನ ಉಪ ನಿರ್ದೇಶಕ  ರಾಜೇಶ್ ಮಿಶ್ರಿಕೋಟೆ, ಕೃಷಿ ಇಲಾಖೆಯ ಉಪ ನಿರ್ದೇಶಕಿ ಭಾರತಮ್ಮ, ಬಾಳ ಗ್ರಾಮ ಪಂಚಾಯತ್ ಅಧ್ಯಕ್ಷರು, ಪಂಚಾಯತ ಅಭಿವೃದ್ಧಿ ಅಧಿಕಾರಿ, ಎಂ.ಆರ್.ಪಿ.ಎಲ್ ನ ಅಧಿಕಾರಿಗಳು ಸೇರಿದಂತೆ ಸಂಬಂಧಿಸಿದವರು ಭಾಗವಹಿಸಿದ್ದರು.

ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಸಂಬಂಧಿಸಿದವರು ವಿಡಿಯೋ ಕಾನ್ಪರೆನ್ಸ್ ಮೂಲಕ ಭಾಗವಹಿಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ