ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದಿದ್ದೀರಿ: ಕರ್ನಾಟಕದ ಜನತೆಗೆ ಧನ್ಯವಾದ ಹೇಳಿದ ರಾಹುಲ್ ಗಾಂಧಿ
ನೀವೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಬಹುಮತ ನೀಡಿದ್ದೀರಿ. ಕಳೆದ ಐದು ವರ್ಷಗಳಲ್ಲಿ ಎದುರಾದ ಸಮಸ್ಯೆಗಳನ್ನು ನಾವು ಕಂಡಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಇಷ್ಟು ದೊಡ್ಡ ಗೆಲುವು ಸಿಕ್ಕಿದೆ ಎಂದು ಮಾಧ್ಯಮಗಳಲ್ಲಿ ವಿಶ್ಲೇಷಣೆ ನೋಡಿದ್ದೀರಿ. ಅನೇಕರು ಅನೇಕ ಬಗೆಯ ವಿಶ್ಲೇಷಣೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಈ ಗೆಲವು ಸಿಗಲು ಕಾರಣ ಎಂದರೆ ಕಾಂಗ್ರೆಸ್ ಪಕ್ಷ ರಾಜ್ಯದ ಬಡವರು, ರೈತರು, ಕಾರ್ಮಿಕರು, ಶೋಷಿತರು, ದಲಿತರ ಬೆನ್ನಿಗೆ ನಿಂತಿರುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಬಳಿ ಸತ್ಯ ಹಾಗೂ ಬಡ ಜನರಿದ್ದರು. ಬಿಜೆಪಿ ಬಳಿ ಹಣ, ಅಧಿಕಾರ, ಪೊಲೀಸ್ ಅಧಿಕಾರಿಗಳು ಎಲ್ಲವೂ ಇತ್ತು. ಅವರ ಈ ಎಲ್ಲಾ ಶಕ್ತಿಗಳನ್ನು ಕರ್ನಾಟಕದ ಜನ ಮಣಿಸಿದ್ದಾರೆ. ಜನ ಅವರ ಭ್ರಷ್ಟಾಚಾರ, ದ್ವೇಷವನ್ನು ಮಣಿಸಿದ್ದೀರಾ. ಈ ಚುನಾವಣೆಯಲ್ಲಿ ರಾಜ್ಯದ ಜನ ದ್ವೇಷವನ್ನು ಹೊಡೆದೋಡಿಸಿ ಪ್ರೀತಿ ಸಾಮರಸ್ಯಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ದ್ವೇಷದ ಮಾರುಕಟ್ಟೆಯಲ್ಲಿ ಕರ್ನಾಟಕದ ಜನ ಪ್ರೀತಿ ಸಾಮರಸ್ಯದ ಅಂಗಡಿ ತೆರೆದಿದ್ದಾರೆ. ಕಳೆದ ಐದು ವರ್ಷಗಳಿಂದ ನೀವು ಭ್ರಷ್ಟಾಚಾರ ನೋಡಿದ್ದೀರಿ ಎಂದರು.
ನಾವು ನಿಮಗೆ ಐದು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದೆವು. ಗೃಹಲಕ್ಷ್ಮೀ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹಧನ, ಗೃಹಜ್ಯೋತಿ ಮೂಲಕ ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಉಚಿತ, ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 10 ಕೆ.ಜಿ. ಅಕ್ಕಿ ಪ್ರತಿ ತಿಂಗಳು ಉಚಿತ, ಯುವನಿಧಿ ಮೂಲಕ ಪದವೀಧರ ನಿರುದ್ಯೋಗ ಯುವಕರಿಗೆ ಪ್ರತಿ ತಿಂಗಳು 3 ಸಾವಿರ, ಡಿಪ್ಲೋಮಾ ಪದವೀಧರರಿಗೆ 1,500 ರೂ. ನಿರುದ್ಯೋಗ ಭತ್ಯೆ. ನಂತರ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಸಂಚಾರ ವ್ಯವಸ್ಥೆ. ನಾವು ಸುಳ್ಳು ಆಶ್ವಾಸನೆ ನೀಡುವುದಿಲ್ಲ. ಕೊಟ್ಟ ಮಾತನ್ನು ನಾವು ಉಳಿಸಿಕೊಳ್ಳುತ್ತೇವೆ. ನುಡಿದಂತೆ ನಡೆಯುತ್ತೇವೆ. ಮುಂದಿನ ಕೆಲವೇ ಗಂಟೆಗಳಲ್ಲಿ ರಾಜ್ಯದ ನೂತನ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಈ ಐದೂ ಗ್ಯಾರಂಟಿ ಯೋಜನೆಗಳು ಕಾನೂನು ರೂಪಪಡೆದು ಜಾರಿಗೆ ಬರಲಿದೆ. ನಾವು ಹೇಳಿದ್ದನ್ನು ಮಾಡಿ ತೋರಿಸುತ್ತೇವೆ. ಸರ್ಕಾರದ ಆದ್ಯತೆ ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಯುವಕರ ಹಿತ ಕಾಪಾಡಿ ಅವರ ಭವಿಷ್ಯ ಭದ್ರಗೊಳಿಸುವುದಾಗಿದೆ.
ನಾವು ರಾಜ್ಯದಲ್ಲಿ ಭ್ರಷ್ಟಾಚಾರಮುಕ್ತ ಸರ್ಕಾರ ನೀಡುತ್ತೇವೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರೀತಿ ಹಾಗೂ ಶಕ್ತಿ ನೀಡಿರುವ ರಾಜ್ಯದ ಎಲ್ಲಾ ಜನರಿಗೆ ಧನ್ಯವಾದ ತಿಳಿಸುತ್ತೇನೆ. ಈ ಸರ್ಕಾರ ರಾಜ್ಯದ ಜನರ ಸರ್ಕಾರ, ನಿಮ್ಮ ಸರ್ಕಾರ. ಈ ಸರ್ಕಾರ ಮನಪೂರ್ವಕವಾಗಿ ನಿಮಗಾಗಿ ದುಡಿಯಲಿದ್ದಾರೆ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw