ಬೈಕ್ ಸರ್ವೀಸ್ ಗೆ ಬಂದಿದ್ದ ಯುವಕನಿಗೆ ಚೂಪಾದ ಆಯುಧದಿಂದ ಇರಿದ ಮಾಲಿಕ: ಯುವಕ ಸಾವು

06/02/2024
ಕೊಡಗು: ಬೈಕ್ ಸರ್ವೀಸ್ ಗೆ ಬಂದಿದ್ದ ಯುವಕನ ಮೇಲೆ ಶೋರೂಮ್ ಮಾಲಿಕ ಚೂಪಾದ ಆಯುಧದಿಂದ ಇರಿದ ಪರಿಣಾಮ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಸಾವನ್ನಪ್ಪಿದ ಘಟನೆ ಕುಶಾಲನಗರದ ಮೈಸೂರು ರಸ್ತೆಯ ಕೊಡಗನ ಮೋಟರ್ಸ್ ಬಳಿ ನಡೆದಿದೆ.
ಮಡಿಕೇರಿಯ ಗಣಪತಿ ಬೀದಿ ನಿವಾಸಿ ವೆಲ್ಡರ್ ಸಾಜಿದ್(22) ಮೃತಪಟ್ಟ ಯುವಕನಾಗಿದ್ದಾನೆ. ಶೋರೂಮ್ ಮಾಲಿಕ ಶ್ರೀನಿಧಿ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ.
ಸಾಜಿದ್ ಬೈಕ್ ಸರ್ವಿಸ್ ಗೆ ಬಂದಿದ್ದ. ಈ ವೇಳೆ ಸಾಜಿದ್ ಹಾಗೂ ಶೋರೂಮ್ ಮಾಲಿಕನ ನಡುವೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿದಾಗ ಮಾಲಿಕ ಚೂಪಾದ ಆಯುಧದಿಂದ ಯುವಕನ ಎದೆಗೆ ಇರಿದಿದ್ದ. ಪರಿಣಾಮವಾಗಿ ಸಾಜಿದ್ ಗಂಭೀರವಾಗಿ ಗಾಯಗೊಂಡಿದ್ದ.
ಗಾಯಾಳು ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಯುವಕ ಸಾವಿಗೀಡಾಗಿದ್ದಾನೆ.