ಯುವಕನ ಸ್ಕ್ರ್ಯಾಚ್ ಜೀನ್ಸ್  ಪ್ಯಾಂಟ್ ಹೊಲಿದು ವಿಕೃತಿ: ನೊಂದ ಯುವಕನಿಂದ ಸಾವಿಗೆ ಶರಣಾಗಲು ಯತ್ನ - Mahanayaka
4:37 PM Thursday 26 - December 2024

ಯುವಕನ ಸ್ಕ್ರ್ಯಾಚ್ ಜೀನ್ಸ್  ಪ್ಯಾಂಟ್ ಹೊಲಿದು ವಿಕೃತಿ: ನೊಂದ ಯುವಕನಿಂದ ಸಾವಿಗೆ ಶರಣಾಗಲು ಯತ್ನ

belthangady
22/11/2024

ಬೆಳ್ತಂಗಡಿ:  ಯುವಕನೊಬ್ಬ ಆಧುನಿಕ ಶೈಲಿಯ ಪ್ಯಾಂಟ್ ಧರಿಸಿ ಮಾರುಕಟ್ಟೆಗೆ ಬಂದಿದ್ದು, ಆ ಯುವಕನನ್ನು ಹಿಡಿದು ಕೆಲವರು ಕೈಗಳನ್ನು ಹಿಂದಕ್ಕೆ ಲಾಕ್ ಮಾಡಿ ಹಿಡಿದುಕೊಂಡು, ಪ್ಯಾಂಟ್ ನ್ನು ಗೋಣಿ ಚೀಲದ ಸೂಜಿಯಿಂದ ಹೊಲಿದು ಅದರ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಇದರಿಂದ ತೀವ್ರವಾಗಿ ಅವಮಾನಕ್ಕೊಳಗಾದ ಯುವಕ ಸಾವಿಗೆ ಶರಣಾಗಲು ಯತ್ನಿಸಿದ ಘಟನೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಪಣಕಜೆ ನಿವಾಸಿಯಾಗಿರುವ ಶಾಹಿಲ್(21) ನೊಂದ ಯುವಕನಾಗಿದ್ದಾನೆ, ಇದೀಗ ಸಾವಿಗೆ ಶರಣಾಗಲು ಯತ್ನಿಸಿದ ಪರಿಣಾಮ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಯುವಕರ ಅನೈತಿಕ ಪೊಲೀಸ್ ಗಿರಿಗೆ ಇದೀಗ ಯುವಕನೊಬ್ಬನ ಜೀವವೇ ಅಪಾಯದಲ್ಲಿದೆ.

ಗುರುವಾರ ಮಧ್ಯಾಹ್ನ ಶಾಹಿಲ್ ಬೆಳ್ತಂಗಡಿ ನಗರದಲ್ಲಿರುವ ಸಂತೆಕಟ್ಟೆ ಮಾರುಕಟ್ಟೆಗೆ ಬಂದಿದ್ದ, ಈ ವೇಳೆ  ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪುತ್ರಬೈಲು ನಿವಾಸಿ ಶಬೀರ್, ಅನೀಶ್ ಪಣಕಜೆ, ಲಾಯಿಲ ಗ್ರಾಮದ ಆದರ್ಶ ನಗರ ನಿವಾಸಿ ಸಲೀಂ ಎಂಬವರು ಸೇರಿ ಸಾರ್ವಜನಿಕ ಸ್ಥಳದಲ್ಲೇ ಯುವಕನ್ನು ಹಿಡಿದು ಎರಡು ಕೈಗಳನ್ನು ಹಿಂದಕ್ಕೆ ತಿರುಗಿಸಿ ಬಲವಂತವಾಗಿ ಹಿಡಿದುಕೊಂಡು, ಆತನ ನವೀನ ಮಾದರಿಯ ಪ್ಯಾಂಟ್ ನನ್ನು ಗೋಣಿ ಹೊಲಿಯುವ ಸೂಜಿಯಿಂದ ಹೊಲಿದು ವಿಡಿಯೋ ಮಾಡಿಕೊಂಡಿದ್ದಾರೆ. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡಿದ್ದರಿಂದ ಅವಮಾನಕ್ಕೊಳಗಾದ ಯುವಕ ಗುರುವಾರ ಸಂಜೆ ವಿಷ ಪದಾರ್ಥ ಸೇವನೆ ಮಾಡಿ ಸಾವಿಗೆ ಶರಣಾಗಲು ಯತ್ನಿಸಿದ್ದಾನೆ.  ಆತನನ್ನು ತಕ್ಷಣವೇ ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ