ಸೋಮೇಶ್ವರದಲ್ಲಿ ಸಮುದ್ರಕ್ಕೆ ಬಿದ್ದು ಬಿಕಾಂ ವಿದ್ಯಾರ್ಥಿನಿ ಸಾವು: ನಿನ್ನೆಯಷ್ಟೇ ಹುಟ್ಟು ಹಬ್ಬ ಆಚರಿಸಿದ್ದ ಯುವತಿ!
ಮಂಗಳೂರು: ಸೋಮೇಶ್ವರ ರುದ್ರಪಾದೆಯಲ್ಲಿ ಕಾಲೇಜು ವಿದ್ಯಾರ್ಥಿನಿಯೋರ್ವಳು ಆಯತಪ್ಪಿ ಸಮುದ್ರಕ್ಕೆ ಜಾರಿ ಸಾವನ್ನಪ್ಪಿದ ಘಟನೆ ನಡೆದಿದ್ದು, ನಿನ್ನೆಯಷ್ಟೇ ಹುಟ್ಟು ಹಬ್ಬ ಆಚರಿಸಿದ್ದ ವಿದ್ಯಾರ್ಥಿನಿ ಇಂದು ದಾರುಣವಾಗಿ ಸಾವನ್ನಪ್ಪಿದ್ದಾಳೆ.
ಮಂಗಳೂರಿನಲ್ಲಿ ಬಿಕಾಂ ಕಲಿಯುತ್ತಿದ್ದ ಮೂಲತಃ ಬಾಗಲಕೋಟೆ ಜಿಲ್ಲೆಯ, ಬಾದಾಮಿ ತಾಲೂಕು ತೆಗ್ಗಿ ಗ್ರಾಮದ ನಿವಾಸಿ ಕಾವೇರಿ (20), ಮೃತ ವಿದ್ಯಾರ್ಥಿನಿಯಾಗಿದ್ದಾಳೆ.
ತನ್ನ ಬಾಲ್ಯ ಸ್ನೇಹಿತೆಯೊಂದಿಗೆ ಸೋಮೇಶ್ವರ ದೇವಸ್ಥಾನಕ್ಕೆ ತೆರಳಿ, ನಂತರ ಸಮುದ್ರ ತೀರಕ್ಕೆ ವಿಹಾರಕ್ಕೆ ಬಂದಿದ್ದರು. ಸ್ನೇಹಿತೆಯರಿಬ್ಬರು ಸಮುದ್ರ ತೀರದ ರುದ್ರ ಪಾದೆಯಲ್ಲಿ ವಿಹರಿಸುತ್ತಿದ್ದ ವೇಳೆ ಕಾವೇರಿ ಆಯ ತಪ್ಪಿ ಜಾರಿ ಸಮುದ್ರಕ್ಕೆ ಬಿದ್ದಿದ್ದು, ಕೂಡಲೇ ಸ್ಥಳದಲ್ಲಿದ್ದ ಕರಾವಳಿ ಕಾವಲು ಪಡೆಯ ಈಜು ರಕ್ಷಕರು ಆಕೆಯನ್ನು ರಕ್ಷಿಸಲು ಯತ್ನಿಸಿದ್ದಾರೆ.
ಸಿಬ್ಬಂದಿ ಮೋಹನ್ ಚಂದ್ರ, ಸ್ಥಳೀಯ ಮೀನುಗಾರರಾದ ಯೋಗೀಶ್, ಪ್ರವೀಣ್, ಸೋಮೇಶ್ವರ ದೇವಸ್ಥಾನದ ಸಿಬ್ಬಂದಿ ವಿನಾಯಕ್ ಮತ್ತು ಸ್ಥಳೀಯರು ಕಾರ್ಯಾಚರಣೆ ನಡೆಸಿ, ಸಮುದ್ರದಲ್ಲಿ ಈಜಾಡಿ ಕಾವೇರಿಯನ್ನು ದಡಕ್ಕೆ ಎಳೆದು ತಂದರೂ ಅಷ್ಟರಲ್ಲೇ ಕಾವೇರಿ ಮೃತಪಟ್ಟಿದ್ದಳು
ಕಾವೇರಿ ಪೋಷಕರು ಕೂಲಿ ಕೆಲಸಗಾರರಾಗಿದ್ದಾರೆ. ತಮ್ಮ ಏಕೈಕ ಮಗಳನ್ನು ಮಂಗಳೂರು ನಗರದ ಕಾಲೇಜಿನಲ್ಲಿ ಬಿಕಾಂ ಓದಿಸುತ್ತಿದ್ದರು. ಪ್ರತಿಭಾನ್ವಿತೆಯಾಗಿದ್ದ ಕಾವೇರಿ ಬಿಕಾಂ ವ್ಯಾಸಂಗದ ಜೊತೆಗೆ ಸಿಎ ಕೂಡ ಅಧ್ಯಯನ ನಡೆಸುತ್ತಿದ್ದರು. ಉಳ್ಳಾಲ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw