ಕ್ರೌರ್ಯ: ಯುವಕನನ್ನು ಹಲ್ಲೆ ಮಾಡಿ ಕೊಂದ ಗೋರಕ್ಷಕ ಗೂಂಡಾಗಳು

ಗೋ ಹತ್ಯೆ ಆರೋಪದಲ್ಲಿ 37 ವರ್ಷದ ಶಾಹಿದೀನ್ ಖುರೇಶಿ ಎಂಬವರ ಮೇಲೆ ಗೋರಕ್ಷಕ ಗೂಂಡಾಗಳು ಥಳಿಸಿ ಹತ್ಯೆ ನಡೆಸಿರುವ ಘಟನೆ ಮೊರಾದಾಬಾದ್ ನಲ್ಲಿ ನಡೆದಿರುವುದು ನಿಮಗೆ ಗೊತ್ತಿರಬಹುದು. ಇದೀಗ ಪೊಲೀಸರು ಈ ಕುರೇಶಿಯ ಸ್ನೇಹಿತನನ್ನೇ ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಅಚ್ಚರಿಯೇನೆಂದರೆ ಈ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಯಾವುದೇ ಆರೋಪಿಯನ್ನೂ ಬಂಧಿಸಿಲ್ಲ.
ಈ ಖುರೇಶಿ ಮತ್ತು ಆತನ ಸ್ನೇಹಿತ ಮೊಹಮ್ಮದ್ ಅದ್ನಾನ್ ಎಂಬವರು ಎತ್ತನ್ನು ಕೊಂದಿದ್ದಾರೆ ಎಂದು ಈ ಗೋರಕ್ಷಕ ಗೂಂಡಾಗಳು ಆರೋಪಿಸಿದ್ದರು. ಇವರ ದಾಳಿಯಲ್ಲಿ ಕುರೇಶಿ ಗಂಭೀರ ಗಾಯಗೊಂಡು ಆ ಬಳಿಕ ಮೃತಪಟ್ಟಿದ್ದಾರೆ.. ಅದ್ನಾನ್ ಗುಂಪಿನಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದರು.
ಇದೇ ವೇಳೆ ನಾವು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿ ಕೊಂಡು ಖುರೇಶಿ ಮತ್ತು ಮೊಹಮ್ಮದ್ ಅದ್ನಾನ್ ವಿರುದ್ಧ ಗೋಹತ್ಯೆ ಆರೋಪದ ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿದ್ದೇವೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಮೋಹಿತ್ ಚೌದರಿ ಮಾಧ್ಯಮದೊಂದಿಗೆ ಹೇಳಿದ್ದಾರೆ.
ಹಾಗೆಯೇ ಕುರೇಶಿ ಅವರ ಸಹೋದರ ನೀಡಿದ ದೂರಿನಂತೆ ಹತ್ಯೆ ಆರೋಪದ ಅಡಿಯಲ್ಲಿ ಮತ್ತೊಂದು ಎಫ್ ಐ ಆರ್ ದಾಖಲಿಸಿದ್ದೇವೆ ಎಂದು ಕೂಡ ಅವರು ಹೇಳಿದ್ದಾರೆ. ಆದರೆ ಹತ್ಯೆ ಕುರಿತಂತೆ ಎಫ್ಐಆರ್ ದಾಖಲಾಗಿದ್ದರೂ ಈವರೆಗೂ ಯಾರನ್ನು ಬಂಧಿಸಿಲ್ಲ. ಕುರೇಶಿ ಮೇಲೆ ದಾಳಿ ಮಾಡಿರುವ ಗುಂಪು ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಾ ಹಲ್ಲೆ ನಡೆಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರೂ ಆರೋಪಿಗಳನ್ನು ಬಂಧಿಸದೇ ಇರುವುದಕ್ಕೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗಿದೆ..
ಇದೇ ವೇಳೆ ಈ ಹತ್ಯೆಯನ್ನು ಲಿಂಚಿಂಗ್ ಎಂದು ಕರೆಯಲು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಸಿಂಗ್ ನಿರಾಕರಿಸಿದ್ದಾರೆ. ಜಾತಿ ಧರ್ಮ ಅಥವಾ ನಂಬಿಕೆಯ ಆಧಾರದ ಮೇಲೆ ಯಾರನ್ನಾದರೂ ಕೊಲ್ಲುವುದು ಲಿಂಚಿಂಗ್ ನ ವ್ಯಾಖ್ಯಾನವಾಗಿದೆ. ಆದರೆ ಇಲ್ಲಿ ಹತ್ಯೆ ಮಾಡಿದ ಗುಂಪಿಗೆ ಖುರೇಶಿಯ ಧರ್ಮ ಯಾವುದು ಎಂದು ತಿಳಿದಿರಲಿಲ್ಲ. ಆದ್ದರಿಂದ ಇದನ್ನು ಗುಂಪು ಹತ್ಯೆ ಎಂದು ಕರೆಯಲಾಗದು ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj