ಖಾಸಗಿ ಬಸ್ ಮೇಲೆ ದಾಳಿ ನಡೆಸಿ ಯುವಕ-ಯುವತಿಯ ಕೊಲೆಗೆ ಯತ್ನ | ನಾಲ್ವರು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ ಆರೋಪಿಗಳ ಬಂಧನ
ಮಂಗಳೂರು: ಮಂಗಳೂರಿನಿಂದ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಹೊರಟಿದ್ದ ಬೇರೆ ಬೇರೆ ಧರ್ಮದ ಯುವಕ ಯುವತಿಯ ಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘಪರಿವಾರದ ಕಾರ್ಯಕರ್ತರು ಎನ್ನಲಾಗಿರುವ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಉದ್ಯೋಗದ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ 24 ವರ್ಷ ವಯಸ್ಸಿನ ಅಸ್ವಿದ್ ಅನ್ವರ್ ಮೊಹಮ್ಮದ್ ಹಾಗೂ ಆತನ ಸ್ನೇಹಿತೆ ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಮಂಗಳೂರಿನ ಪಂಪ್ ವೆಲ್ ನಲ್ಲಿ ಕೋಮು ಪ್ರೇರಿತ ಗುಂಪೊಂದು ಅವರ ಮೇಲೆ ದಾಳಿ ನಡೆಸಿ, ಯುವಕನಿಗೆ ಹಲ್ಲೆ ನಡೆಸಿ ಚೂರಿಯಿಂದ ಇರಿಯಲಾಗಿದೆ ಎಂದು ಹೇಳಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಅತ್ತಾವರ ಬಾಬುಗುಡ್ಡೆಯ ಬಾಲಚಂದ್ರ ಯಾನೆ ಬಾಲು(28), ಬಂದರ್ ಕಂದುಕದ ಧನುಷ್ ಭಂಡಾರಿ ಯಾನೆ ಕಂದಕ್ ಧನು ಯಾನೆ ಬಾಲು(25) ಶಕ್ತಿನಗರದ ಜಯಪ್ರಕಾಶ್(27), ಉರ್ವ ಮಾರಿಗುಡಿ ಕ್ರಾಸ್ ರಸ್ತೆಯ ಅನಿಲ್ ಕುಮಾರ್(38) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಆರೋಪಿಗಳ ವಿರುದ್ಧ ವಿವಿಧ ಠಾಣೆಗಳಲ್ಲಿ ಈ ಹಿಂದೆಯೂ ಪ್ರಕರಣ ದಾಖಲಾಗಿತ್ತು ಎಂದು ಹೇಳಲಾಗಿದೆ. ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ ಆರೋಪಿಗಳನ್ನು ರಾಜಕೀಯ ಪಕ್ಷವೊಂದು ಕೋಮು ಘರ್ಷಣೆ ನಡೆಸಲು ಬಳಸಿಕೊಳ್ಳುತ್ತಿದೆ ಎನ್ನುವ ಆರೋಪಗಳು ಕೂಡ ಇದೀಗ ಕೇಳಿ ಬಂದಿದೆ.
ಹಲ್ಲೆಗೊಳಗಾದ ಯುವಕ ಅಸ್ವಿದ್ ಅನ್ವರ್ ಹಾಗೂ ಯುವತಿ ಕ್ಲಾಸ್ ಮೇಟ್ ಆಗಿದ್ದರು. ಅಸ್ವಿದ್ ಗಲ್ಫ್ ನಲ್ಲಿ ಹುಟ್ಟಿ, ಅಲ್ಲಿಯೇ ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿದ್ದರು. ಅವರ ತಂದೆ ತಾಯಿ ಕೂಡ ಗಲ್ಫ್ ನಲ್ಲಿಯೇ ಇದ್ದಾರೆ. ಮಂಗಳೂರಿನ ಕಾಲೇಜಿನಲ್ಲಿ ಡಿಗ್ರಿ ಮುಗಿಸಿದ್ದ ಅಸ್ವಿದ್ ಕೆಲಸ ಹುಡುಕುತ್ತಿದ್ದರು. ಅಸ್ವಿದ್ ಕ್ಲಾಸ್ ಮೇಟ್ ಗಳೂ ಕೂಡ ಕೆಲಸ ಹುಡುಕುತ್ತಿದ್ದು, ಈ ನಡುವೆ ಸಂದರ್ಶನಕ್ಕೆ ಕರೆ ಬಂದಿದ್ದು, ಬೆಂಗಳೂರು ಪರಿಚಯ ಇಲ್ಲದ ಕಾರಣ ಯುವತಿ ಅಸ್ವಿದ್ ಬರಲು ಹೇಳಿದ್ದಳು ಎಂದು ಹೇಳಲಾಗಿದೆ. ಆದರೆ, ಬೆಂಗಳೂರಿಗೆ ತೆರಳುವ ಮಧ್ಯೆ ಯುವಕ-ಯುವತಿಗೆ ಥಳಿಸಲಾಗಿದೆ. ಇದರಿಂದಾಗಿ ಉದ್ಯೋಗದ ನಿರೀಕ್ಷೆಯಲ್ಲಿ ತೆರಳಿದ್ದ ಯುವತಿ ತನ್ನ ಭವಿಷ್ಯವನ್ನೇ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದಾಳೆ.