ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವಕ-ಯುವತಿ ಮೇಲೆ ಬಜರಂಗದಳ ದಾಳಿ!
ಮಂಗಳೂರು: ಮುಂದಿನ ವಿಧಾನಸಭಾ ಚುನಾವಣೆ ರಾಜ್ಯದಲ್ಲಿ ಸಮೀಪಿಸುತ್ತಿದ್ದಂತೆಯೇ ಬಿಜೆಪಿ ಪರ ಸಂಘಟನೆಗಳು ಎದ್ದು ನಿಂತಿದ್ದು, ವಿವಿಧ ಪ್ರದೇಶಗಳಲ್ಲಿ ಕಳೆದ ಹಲವು ಸಮಯಗಳಿಂದ ಬೇರೆ ಬೇರೆ ಸಮುದಾಯದ ಜೋಡಿಗಳ ಮೇಲೆ ದಾಳಿ ನಡೆಸಲು ಆರಂಭಿಸಿವೆ. ನಿನ್ನೆ ರಾತ್ರಿಯೂ ಮಂಗಳೂರಿನಲ್ಲಿ ಜೋಡಿಯ ಮೇಲೆ ದಾಳಿ ನಡೆದಿದೆ.
ಬಸ್ಸಿನಲ್ಲಿ ಬೇರೆ ಬೇರೆ ಧರ್ಮದ ಯುವಕ-ಯುವತಿ ಪ್ರಯಾಣಿಸುತ್ತಿದ್ದರು ಎಂದು ಆರೋಪಿಸಿ ಮಂಗಳೂರಿನ ಪಂಪ್ ವೇಲ್ ನಲ್ಲಿ ಬಸ್ ತಡೆದು ಯುವಕನ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಸುಮಾರು 15ಕ್ಕೂ ಅಧಿಕ ಬಜರಂಗದಳದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇಂತಹ ಘಟನೆಗಳು ಕಡಿಮೆಯಾಗಿತ್ತು. ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದೊಳಗೆ ಹಲವು ಗೊಂದಲಗಳು, ಸಿಡಿ ಪ್ರಕರಣಗಳು, ಅಭಿವೃದ್ಧಿಯೇ ಇಲ್ಲದ ಆಡಳಿತ ಈ ಎಲ್ಲ ಅಂಶಗಳು ಸದ್ಯ ವ್ಯಾಪಕವಾಗಿ ಚರ್ಚೆಗೀಡಾಗುತ್ತಿವೆ. ಇದೇ ಸಂದರ್ಭದಲ್ಲಿ ಕರಾವಳಿಯಲ್ಲಿ ಬಿಜೆಪಿ ಪರ ಸಂಘಟನೆಗಳು ಮತ್ತೆ ಭಿನ್ನಕೋಮಿನ ಯುವಕ ಯುವತಿಯರನ್ನು ಹುಡುಕಲು ಆರಂಭಿಸಿವೆ ಎಂದು ಹೇಳಲಾಗಿದೆ. ಬಿಜೆಪಿ ನಾಯಕರು ಇಂತಹ ಘಟನೆಗಳಿಗೆ ಬೆಂಬಲ ನೀಡುತ್ತಿದ್ದು, ಇದರಿಂದಾಗಿ ಆರೋಪಿಗಳು ಯಾವುದೇ ಭಯವಿಲ್ಲದೇ ಜೋಡಿಗಳ ಮೇಲೆ ಹಲ್ಲೆ ನಡೆಸುವಂತಹ ಕಾನೂನು ವಿರೋಧಿ ನಡೆಗಳನ್ನು ತೋರಿಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ.
ಇನ್ನೂ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಇಂತಹ ಗೂಂಡಾಗಿರಿಯ ವಿರುದ್ಧ ಗಂಭೀರವಾಗಿ ಕ್ರಮಕೈಗೊಳ್ಳದಿರುವ ಹಿನ್ನೆಲೆಯಲ್ಲಿ ಆರೋಪಿಗಳು ಯಾವುದೇ ಭಯವಿಲ್ಲದೇ ಮತ್ತೆ ಮತ್ತೆ ಇಂತಹ ಕೃತ್ಯ ನಡೆಸುತ್ತಲೇ ಇದ್ದಾರೆ. ಚುನಾವಣೆ ಮುಗಿಯುವವರೆಗೆ ಇನ್ನೇನು ಅನುಭವಿಸಬೇಕು ಎನ್ನುವ ಭೀತಿಯಲ್ಲಿ ಜನರಿದ್ದಾರೆ.