ಉಡುಪಿಯ ಜನತೆಯ ಕಿವಿಗೆ ಹೂವಿಟ್ಟಿತೇ ಅದಾನಿಯ ಕಂಪೆನಿ | ಕೆಲಸಕ್ಕಾಗಿ ಕಾದು ಯುವಕರು ಸುಸ್ತು
ಉಡುಪಿ: ದೇಶದ ಪ್ರತಿಷ್ಠಿತ ಉದ್ಯಮಿ ಅದಾನಿ ಅವರ ಯುಪಿಸಿಎಲ್ ಕಂಪೆನಿ ಉಡುಪಿಯ ಜನರ ಕಿವಿಗೆ ಹೂವಿಟ್ಟಿದೆ. ಈ ಮೂಲಕ ಉದ್ಯೋಗದ ಆಸೆಯಿಂದ ಕಾಯುತ್ತಿದ್ದ ಯುವಕರು ಇದೀಗ ನಿರಾಶರಾಗಿ ಆಕಾಶ ನೋಡುವಂತಾಗಿದೆ.
ಈ ಕಂಪೆನಿ ನಿರ್ಮಾಣದ ಸಂದರ್ಭದಲ್ಲಿ ಶೈಕ್ಷಣಿಕ ಅರ್ಹತೆಯ ಯೋಗ್ಯವಾದ ಉದ್ಯೋಗದ ಭರವಸೆ ನೀಡಿದ್ದ ಕಂಪೆನಿ ಭೂಸ್ವಾಧೀನ ಮಾಡಿಕೊಂಡಿತ್ತು. ಕಂಪೆನಿಯ ಭರವಸೆಯನ್ನು ನಂಬಿ ಕೃಷಿ ಭೂಮಿಯನ್ನು ಮಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಬಡವರ ವಿದ್ಯಾವಂತ ಮಕ್ಕಳಿಗೆ ಐದು ವರ್ಷವಾದರೂ ಯಾವುದೇ ಉದ್ಯೋಗ ಇನ್ನೂ ಸಿಕ್ಕಿಲ್ಲ ಎಂದು ಆರೋಪಿಸಲಾಗಿದೆ.
ಭೂಸ್ವಾಧೀನ ಮಾಡಿಕೊಂಡು 2 ವರ್ಷಗಳಲ್ಲಿಉದ್ಯೋಗ ನೀಡುವುದಾಗಿ ಕಂಪೆನಿ ಹೇಳಿತ್ತು. ಇದೀಗ ಐದು ವರ್ಷಗಳಾದರೂ ಕಂಪೆನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಈ ಮೂಲಕ ಸ್ಥಳೀಯರ ಭೂ ಸ್ವಾಧೀನ ಪಡಿಸಿಕೊಂಡು ಕಂಪೆನಿ ಕೊಟ್ಟ ಮಾತಿಗೆ ತಪ್ಪಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಅದಾನಿ ಅವರ ಯುಪಿಸಿಎಲ್ ಕಂಪೆನಿ ಮೊದಲನೆಯ ಹಂತದಲ್ಲಿ ಇನ್ನೂರು ಮೆಗಾವ್ಯಾಟ್ ವಿದ್ಯುತ್ ಸ್ಥಾವರ ಉತ್ಪಾದನೆ ಮಾಡುತ್ತಿದೆ. ಎರಡನೇ ಹಂತದಲ್ಲಿ 1,600 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಕೆಐಎಎಡಿಬಿ ಮೂಲಕ ಹೆಚ್ಚುವರಿ ಭೂಮಿ ಸ್ವಾಧೀನ ಪಡಿಸಿಕೊಂಡಿತ್ತು. ಈ ವೇಳೆ ಸಂತ್ರಸ್ತ ಕುಟುಂಬಸ್ಥರಿಗೆ ಉದ್ಯೋಗದ ಭರವಸೆಯನ್ನು ನೀಡಿತ್ತು. ಆದರೆ 5 ವರ್ಷಗಳು ಕಳೆದರೂ ಎರಡನೇ ಹಂತದ ಯೋಜನೆಗೆ ಚಾಲನೆ ನೀಡಲಾಗಿಲ್ಲ, ಹೀಗಾಗಿ ಉದ್ಯೋಗ ನೀಡಲು ಇನ್ನೂ ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.
ಕಂಪೆನಿಯು ಭೂಸ್ವಾಧೀನ ಪಡಿಸಿಕೊಂಡ ಬಳಿಕ ಭೂಪರಿಹಾರವನ್ನು ನೀಡಿದೆ. ಆದರೆ, ಕೃಷಿ ಮೂಲ ಕುಟುಂಬದಿಂದ ಬಂದಿರುವ ವಿದ್ಯಾವಂತ ಯುವಕರಿಗೆ ಅವರ ವಿದ್ಯಾರ್ಹತೆಗೆ ತಕ್ಕ ಕೆಲಸ ನೀಡುತ್ತೇನೆ ಎಂದು ಹೇಳಿದ್ದ ಮಾತಿಗೆ ಕಂಪೆನಿ ತಪ್ಪುತ್ತಿದೆ. ಉದ್ಯೋಗಾಕಾಂಕ್ಷೆಯಿಂದ ಕಾಯುತ್ತಿರುವ ಯುವಕರಿಗೆ ಯಾವುದೇ ಉತ್ತರವನ್ನು ನೀಡದೇ ಕಂಪೆನಿಯು ಮೌನವಾಗಿದೆ.