ಯುವತಿಯ ಸಾವಿನ ಹಿಂದೆ ಗಾಂಜಾ ಗ್ಯಾಂಗ್? | ಮಾಡೆಲಿಂಗ್ ನಲ್ಲಿ ಮಿಂಚಬೇಕು ಎಂದು ಹೊರಟವಳ ದುರಂತ ಅಂತ್ಯ!
ಉಳ್ಳಾಲ: ಮಾಡೆಲಿಂಗ್ ಹವ್ಯಾಸ ಹೊಂದಿದ್ದ ಯುವತಿಯೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ತನ್ನ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ಅನುಮಾನದ ಮೇರೆಗೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
17 ವರ್ಷ ವಯಸ್ಸಿನ ಪ್ರೇಕ್ಷಾ ಕಾಲೇಜು ವಿದ್ಯಾರ್ಥಿನಿಯಾಗಿದ್ದು, ಮಾಡೆಲ್ ಆಗಲು ಈಕೆ ಸಿದ್ಧತೆ ನಡೆಸುತ್ತಿದ್ದಳು. ಬೆಂಗಳೂರಿಗೆ ತೆರಳಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಳು. ಆಕೆ ಸಾವಿನ ದಿನ ಕೂಡ ಬ್ಯೂಟಿ ಪಾರ್ಲರ್ ಗೆ ತೆರಳಿದ್ದಳು. ಆ ಬಳಿಕ ಮನೆಗೆ ಬಂದಿದ್ದು, ಈ ವೇಳೆ ಆರೋಪಿಗಳು ಮನೆಗೆ ಬಂದಿದ್ದರು ಎಂದು ಹೇಳಲಾಗಿದೆ. ಮನೆಗೆ ಬಂದ ಆರೋಪಿಗಳ ಪೈಕಿ ಮುಂಡೋಳಿ ನಿವಾಸಿ ಯತೀನ್ ರಾಜ್ ಎಂಬಾತ ಪ್ರೇಕ್ಷಾಳನ್ನು ಪ್ರೀತಿಸುತ್ತಿದ್ದ ಎಂದು ತಿಳಿದು ಬಂದಿದೆ.
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಪಲ ಆಶ್ರಯ ಕಾಲನಿಯಲ್ಲಿ ಈ ಘಟನೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಂಡೋಳಿ ನಿವಾಸಿ ಯತೀನ್ ರಾಜ್, ಆಶ್ರಯಕಾಲನಿ ನಿವಾಸಿ ಸೌರಭ್ ಮತ್ತು ಸುಹಾನ್ ಪೈಕಿ ಯತೀನ್ ರಾಜ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂವರು ಕೂಡ ಗಾಂಜಾ ವ್ಯಸನಿಗಳ ತಂಡದಲ್ಲಿದ್ದಾರೆ ಎಂದು ಸದ್ಯ ಸಾರ್ವಜನಿಕವಾಗಿ ಚರ್ಚೆಯಲ್ಲಿರುವ ವಿಚಾರವಾಗಿದೆ.
ಮೃತ ಪ್ರೇಕ್ಷಾ ಡ್ಯಾನ್ಸ್, ಮಾಡೆಲಿಂಗ್, ಫೋಟೋ ಶೂಟ್ ಗಳಲ್ಲಿ ಭಾಗಿಯಾಗಿದ್ದರು. ಮಾಡೆಲಿಂಗ್ ನಲ್ಲಿ ಹೆಸರು ಮಾಡಬೇಕು ಎನ್ನುವ ಕಾರಣಕ್ಕೆ ಅವರು ಬೆಂಗಳೂರಿಗೆ ಹೋಗಲು ಸಿದ್ಧತೆ ನಡೆಸುತ್ತಿದ್ದರು. ಆದರೆ ಅಂದು ಮಧ್ಯಾಹ್ನ ಪ್ರೇಕ್ಷಾಳ ತಾಯಿ ಅಂಗನವಾಡಿಯಿಂದ ಮನೆಗೆ ಊಟಕ್ಕೆ ಬಂದಿದ್ದು, ಈ ವೇಳೆ ಮನೆಯ ಮುಂದಿನ ಬಾಗಿಲು ಮುಚ್ಚಿದ್ದು, ಹಿಂದಿನ ಬಾಗಿಲು ತೆರೆದಿತ್ತು. ಮನೆಯ ಒಳಗೆ ಬಂದು ನೋಡಿದಾಗ ಪ್ರೇಕ್ಷಾಳ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಯತೀನ್ ರಾಜ್ ಪ್ರೇಕ್ಷಾಳನ್ನು ಪ್ರೀತಿಸುತ್ತಿದ್ದ ಎಂದು ಹೇಳಲಾಗಿದೆ. ಆದರೆ ಅದು ವನ್ ಸೈಡ್ ಲವ್ ಆಗಿತ್ತು. ಪ್ರೇಕ್ಷಾ ಮಾಡೆಲಿಂಗ್ ಮಾಡುತ್ತಿರುವುದು ಯತೀನ್ ಗೆ ಇಷ್ಟ ಇರಲಿಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳ ಕೂಡ ನಡೆದಿತ್ತು ಎಂದು ಹೇಳಲಾಗಿದೆ.
ಬೆಂಗಳೂರಿಗೆ ತೆರಳಬೇಕು ಎಂದು ಸಕಲ ಸಿದ್ಧತೆಯನ್ನೂ ಮಾಡಿಕೊಂಡಿದ್ದ ಪ್ರೇಕ್ಷಾ ಆತ್ಮಹತ್ಯೆ ಮಾಡಿಕೊಳ್ಳಲು ಹೇಗೆ ಸಾಧ್ಯ ಎಂದು ಸ್ಥಳೀಯರು ಕೂಡ ಪ್ರಶ್ನಿಸುತ್ತಿದ್ದಾರೆ. ಈ ನಡುವೆ ಆರೋಪಿಗಳು ಮನೆಗೆ ಬಂದಿರುವುದು ಇನ್ನಷ್ಟು ಅನುಮಾನಗಳಿಗೆ ಕಾರಣವಾಗಿದೆ. ಪೊಲೀಸ್ ತನಿಖೆಯಿಂದ ಸತ್ಯ ಬಯಲಾಗಬೇಕಿದೆ.