ಯುವತಿ ಯೂಟರ್ನ್ ಬಗ್ಗೆ ವಕೀಲರು ಏನು ಹೇಳಿದರು ಗೊತ್ತಾ?
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಯೂಟರ್ನ್ ಹೇಳಿಕೆ ನೀಡಿದ್ದಾಳೆ ಎಂಬ ವಿಚಾರವಾಗಿ ಪ್ರಸಾರವಾಗಿರುವ ಸುದ್ದಿ ಆಧಾರ ರಹಿತವಾಗಿದೆ ಎಂದು ಯುವತಿ ಪರ ವಕೀಲರು ಸ್ಪಷ್ಟಪಡಿಸಿದ್ದಾರೆ.
ಯುವತಿ ಪರ ವಕೀಲ ಮುಕುಂದ ರಾಜ್ ಹಾಗೂ ಜಗದೀಶ್ ಮತ್ತು ಮಂಜುನಾಥ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಯುವತಿ ಇಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ. ತಾನು ಈ ಹಿಂದೆ ನೀಡಿದ್ದ ಮ್ಯಾಜಿಸ್ಟ್ರೇಟ್ ಎದುರು ನೀಡಿದ್ದ ಎಲ್ಲ ಹೇಳಿಕೆಗಳಿಗೂ ಆಕೆ ಬದ್ಧಳಾಗಿದ್ದಾಳೆ ಎಂದು ಸ್ಪಷ್ಟಪಡಿಸಿದ್ದಾರೆ.
ಇಂದು ಸಂತ್ರಸ್ತ ಯುವತಿ ಎಸ್ ಐಟಿ ಎದುರು ಹಾಜರಾಗಿ ವಾಟ್ಸಾಪ್ ಚಾಟಿಂಗ್ ನೀಡಬೇಕಿತ್ತು ಹೀಗಾಗಿ ಆಡುಗೋಡಿ ಎಸ್ ಐಟಿ ಕಚೇರಿಗೆ ಆಕೆ ತೆರಳಿದ್ದಳು. ಈ ಸಂದರ್ಭದಲ್ಲಿ ಆಕೆ ಉಲ್ಟಾ ಹೊಡೆದಿದ್ದಾಳೆ ಎಂದು ವರದಿಯಾಗಿತ್ತು. ಆದರೆ ಇಂತಹ ಯಾವುದೇ ಹೇಳಿಕೆಯನ್ನು ಯುವತಿ ನೀಡಿಲ್ಲ ಎಂದು ಯುವತಿ ಪರ ವಕೀಲರು ಇದೀಗ ಸ್ಪಷ್ಟಪಡಿಸಿದ್ದಾರೆ.
ಪ್ರಕರಣದ ಹಾದಿ ತಪ್ಪಿಸಲು ಎಸ್ ಐಟಿ ಅಧಿಕಾರಿಗಳು ಇಂತಹದ್ದೆಲ್ಲ ಮಾಹಿತಿಗಳನ್ನು ಸೋರಿಕೆ ಮಾಡುತ್ತಿದ್ದಾರೆ ಎಂದು ವಕೀಲರು ಆರೋಪಿಸಿದ್ದು, ಇಂತಹ ಸುದ್ದಿಗಳಿಗೆ ಮಹತ್ವ ನೀಡಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ.