ಯುವತಿಯನ್ನು ಪ್ಲ್ಯಾಟ್ ನಲ್ಲಿ ಬಂಧಿಸಿ ತಿಂಗಳು ಗಟ್ಟಲೆ ಅತ್ಯಾಚಾರ | ದೇಹ ತುಂಬಾ ಸುಟ್ಟು ಕ್ರೂರ ಹಿಂಸೆ
ಕೊಚ್ಚಿ: ಯುವತಿಯನ್ನು ಫ್ಲ್ಯಾಟ್ ನಲ್ಲಿ ಬಂಧಿಸಿ, ತಿಂಗಳುಗಟ್ಟಲೆ ಕ್ರೂರವಾಗಿ ಅತ್ಯಾಚಾರ ನಡೆಸಿದ ಘಟನೆಯೊಂದು ಕೇರಳದಲ್ಲಿ ನಡೆದಿದ್ದು, ಕೇರಳ ಕಣ್ಣೂರು ಮೂಲದ ಮಹಿಳೆಯ ಮೇಲೆ ಈ ಕೃತ್ಯ ನಡೆದಿದೆ.
ಎರ್ನಾಕುಲಂನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸಂತ್ರಸ್ತ ಯುವತಿಗೆ ಮಾರ್ಟಿನ್ ಜೋಸೆಫ್ ಎಂಬಾತನ ಪರಿಚಯವಾಗಿದೆ. ಪರಿಚಯ ಗೆಳೆತನವಾಗಿ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದ ಇವರಿಬ್ಬರೂ ಕೊಚ್ಚಿಯಲ್ಲಿದ್ದ ಪ್ಲ್ಯಾಟ್ ನಲ್ಲಿ ಜೊತೆಯಾಗಿ ತಂಗಿದ್ದರು.
ಈ ನಡುವೆ ಮಾರ್ಟಿನ್ ಜೋಸೆಫ್ , ಸಂತ್ರಸ್ತ ಯುವತಿಯ ಬಳಿಯಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದು, ಆದರೆ, ಆಕೆ ಹಣ ನೀಡಲು ತಯಾರಿರಲಿಲ್ಲ. ಜೋಸೆಫ್ ನ ನಿಜ ರೂಪ ತಿಳಿಯುತ್ತಿದ್ದಂತೆಯೇ ಆಕೆ ತನ್ನ ಊರಾದ ಕಣ್ಣೂರಿಗೆ ಮರಳಿದ್ದಾಳೆ.
ಇದರ ಬೆನ್ನಲ್ಲೇ ಜೋಸೆಫ್, ಯುವತಿಯ ನಗ್ನ ಚಿತ್ರಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಸಿ ಮತ್ತೆ ಆಕೆಯನ್ನು ಫ್ಲ್ಯಾಟ್ ಗೆ ಕರೆಸಿದ್ದಾನೆ. ಬಳಿಕ ಆಕೆಯ ದೇಹಕ್ಕೆ ಸುಟ್ಟು ತೀವ್ರವಾದ ಗಾಯಗಳನ್ನುಂಟು ಮಾಡಿ ಕ್ರೂರವಾಗಿ ಹಿಂಸಿಸಿ ಅತ್ಯಾಚಾರ ನಡೆಸಿದ್ದಾನೆ.
ಈತನ ಚಿತ್ರಹಿಂಸೆಯನ್ನು ಸಹಿಸಲಾಗದ ಯುವತಿ ಮಾರ್ಚ್ ತಿಂಗಳಿನಲ್ಲಿ, ಜೋಸೆಫ್ ಫ್ಲ್ಯಾಟ್ ನಲ್ಲಿ ಇಲ್ಲದ ಸಮಯ ನೋಡಿಕೊಂಡು ಸ್ಥಳದಿಂದ ತಪ್ಪಿಸಿಕೊಂಡು ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಮೂಲಕ ಈ ಭಯಾನಕ ಘಟನೆ ಬೆಳಕಿಗೆ ಬಂದಿದೆ.
ಆರೋಪಿ ಮಾರ್ಟಿನ್ ಜೋಸೆಫ್, ಈ ಘಟನೆಯ ಬಳಿಕ ತಲೆಮರೆಸಿಕೊಂಡಿದ್ದಾನೆ. ಹೈಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನಿಗೂ ಅರ್ಜಿ ಹಾಕಿದ್ದಾನೆ. ಇನ್ನೊಂದೆಡೆಯಲ್ಲಿ ಈತನ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಜೋಸೆಫ್ ಅಪರಾಧಿ ಹಿನ್ನೆಲೆಯುಳ್ಳ ವ್ಯಕ್ತಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.