ಜಮೀರ್ ಬಾಯಿಗೆ ಬೀಗ ಹಾಕಲು ಮುಂದಾದ ಹೈಕಮಾಂಡ್!?: “ನಾನೇ ಸಿಎಂ” ಆರಂಭವಾಗಿದ್ದೆಲ್ಲಿಂದ? - Mahanayaka

ಜಮೀರ್ ಬಾಯಿಗೆ ಬೀಗ ಹಾಕಲು ಮುಂದಾದ ಹೈಕಮಾಂಡ್!?: “ನಾನೇ ಸಿಎಂ” ಆರಂಭವಾಗಿದ್ದೆಲ್ಲಿಂದ?

zameer khan
25/07/2022

ಬೆಂಗಳೂರು: ಮುಂದಿನ ಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ವೇದಿಕೆಯೊಂದರಲ್ಲಿ ಪರೋಕ್ಷವಾಗಿ ತಾವೇ ಮುಂದಿನ ಸಿಎಂ ಅಭ್ಯರ್ಥಿ ಎಂಬಂತೆ ಹೇಳಿಕೆ ನೀಡಿದ ಬಳಿಕ ಜಮೀರ್ ಅಹ್ಮದ್  ಸಿಎಂ ಆಗುವ ಆಸೆ ನನಗೂ ಇದೆ ಎಂದಿದ್ದರು. ಇದೀಗ ಪಕ್ಷದ ಹೈಕಮಾಂಡ್ ಜಮೀರ್ ಬಾಯಿಗೆ ಬೀಗ ಹಾಕಲು ಮುಂದಾಗಿದೆ ಎನ್ನಲಾಗಿದೆ.

ವರದಿಗಳ ಪ್ರಕಾರ, ಜಮೀರ್ ಅಹ್ಮದ್ ಹೇಳಿಕೆಗೆ ರಾಜ್ಯ ಉಸ್ತುವಾರಿ ಸುರ್ಜೆವಾಲ ಎಚ್ಚರಿಕೆ ಪತ್ರ ನೀಡಿದ್ದು, ಪಕ್ಷದ ಶಿಸ್ತು ದಾಟದಂತೆ ಎಚ್ಚರಿಕೆ ನೀಡಲಾಗಿದೆ ಎನ್ನಲಾಗಿದೆ.

ಭವಿಷ್ಯದಲ್ಲಿ ಹೇಳಿಕೆ ನೀಡುವಾಗ ಎಚ್ಚರ ವಹಿಸಬೇಕು ಮತ್ತು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳಿಗೆ ದೃಢವಾಗಿ ಅಂಟಿಕೊಳ್ಳಬೇಕು ಎಂದು ಖಡಕ್ ಎಚ್ಚರಿಕೆ ನೀಡಲಾಗಿದೆ ಎನ್ನಲಾಗಿದೆ.

ಡಿ.ಕೆ.ಶಿವಕುಮಾರ್ ಅವರು, ‘ಬಾಯಿಮುಚ್ಚಿಕೊಂಡು ಕೆಲಸ ಮಾಡಿ’ ಎಂದು ಪರೋಕ್ಷವಾಗಿ  ಜಮೀರ್ ಗೆ ಟಾಂಗ್ ನೀಡಿದ್ದರು ಎನ್ನಲಾಗಿತ್ತು. ಇದಕ್ಕೆ ಸೆಡ್ಡು ಹೊಡೆದಿದ್ದ ಜಮೀರ್, ”ನನಗೆ ವ್ಯಕ್ತಿ ಪೂಜೆಯೂ ಮುಖ್ಯ, ಪಕ್ಷ ಪೂಜೆಯೂ ಮುಖ್ಯ” ಎಂದು ಡಿ.ಕೆ.ಶಿವಕುಮಾರ್ ಗೆ ತಿರುಗೇಟು ನೀಡಿದ್ದರು.

ನಾನೇ ಮುಂದಿನ ಮುಖ್ಯಮಂತ್ರಿ ಎಂಬ ಹೇಳಿಕೆಗೆ ಚಾಲನೆ ಕೊಟ್ಟಿದ್ದೇ ಡಿ.ಕೆ.ಶಿವಕುಮಾರ್. ಇದಾದ ಬಳಿಕ ನಾವು ನಮ್ಮ ಅಭಿಪ್ರಾಯ ಹೇಳಿದ್ದೇವೆ ಎಂದು ಜಮೀರ್ ಹೇಳಿದ್ದರು.

ರಾಜ್ಯದಲ್ಲಿ ಕಾಂಗ್ರೆಸ್ ಮುಂದಿನ ಸಿಎಂ ಅಭ್ಯರ್ಥಿ ಡಿ.ಕೆ.ಶಿವಕುಮಾರ್ ಎಂದು ಪಕ್ಷದಲ್ಲಿ ಹಿಂದಿನಿಂದಲೂ ಬಿಂಬಿಸಲಾಗಿತ್ತು. ಇದು ;ನಾನೇ ಸಿಎಂ; ಎಂಬ ರೇಸ್ ಗೆ ಅಡಿಪಾಯ ಹಾಕಿತ್ತು. ಇದೀಗ ಇದು ಡಿಕೆಶಿ ಬಣಕ್ಕೆ ತಿರುಗುಬಾಣವಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ, ಜಮೀರ್ ಖಾನ್, ಎಂ.ಬಿ.ಪಾಟೀಲ್ ಸೇರಿದಂತೆ ಹಲವು ನಾಯಕರ ಹೆಸರುಗಳು ಸಿಎಂ ರೇಸ್ ನಲ್ಲಿ ಕೇಳಿ ಬಂದಿವೆ. ಈ ನಡುವೆ, ಜಮೀರ್ ಅಹ್ಮದ್ ಖಾನ್ ಮಾತ್ರ ಎಚ್ಚರಿಕೆ ನೀಡಿ ಬಾಯಿ ಮುಚ್ಚಿಸುವ ಕೆಲಸ ನಡೆಯುತ್ತಿದೆ ಎನ್ನುವ ಆಕ್ರೋಶಗಳು ಇದೀಗ ಕೇಳಿ ಬಂದಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ